ಭಾನುವಾರ, ನವೆಂಬರ್ 17, 2019
27 °C
ಬದಲಾವಣೆ ಬೇಕಾಗಿದೆ

ಉದ್ಯಾನನಗರಿಯಲ್ಲಿ ಮರಗಳಿಗೆ ಎಲ್ಲಿದೆ ಜಾಗ?

Published:
Updated:

ದೇಶದಲ್ಲಿ ನಗರೀಕರಣ ವೇಗವಾಗಿ ಆಗುತ್ತಿದೆ. ಬೆಂಗಳೂರಿನಂತಹ ನಗರಗಳಲ್ಲಿ ಈ ಪ್ರಕ್ರಿಯೆ ಶರವೇಗದಲ್ಲಿ ನಡೆಯುತ್ತಿದೆ. ನಗರದ ನಿರ್ವಹಣೆ ಹಾಗೂ ಅಭಿವೃದ್ಧಿಗೆ ಯೋಜನೆ ರೂಪಿಸಲು ಹತ್ತಾರು ಸರ್ಕಾರಿ ಸಂಸ್ಥೆಗಳು ಇವೆ. ಈ ಸಂಸ್ಥೆಗಳು ಪ್ರತ್ಯೇಕವಾಗಿ ಯೋಜನೆ ರೂಪಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಜೊತೆಗೆ ಕೆಲಸ ಮಾಡುತ್ತಿರುವ ನಾಗರಿಕ ಸಂಘಟನೆಗಳಿಗೆ ಬಹುದೊಡ್ಡ ಸವಾಲು ಎದುರಾಗಿದೆ. ನಗರದ ಪರಿಸರದ ಸಂರಕ್ಷಣೆಯ ಜತೆಗೆ ಪುನರುಜ್ಜೀವನ ಮಾಡಬೇಕಿದೆ.ಕೆರೆಗಳು, ನಗರ ಅರಣ್ಯ, ತೋಟಗಾರಿಕೆ, ಪರಿಸರ ಹಾಗೂ ಮಾಲಿನ್ಯ ಸಮಸ್ಯೆಯನ್ನು ನಿಯಂತ್ರಿಸಲು ಬಿಬಿಎಂಪಿ, ಜಲಮಂಡಳಿ, ಬಿಡಿಎ ದಂತಹ ಸಂಸ್ಥೆಗಳು ಜತೆಗೂಡಿ ಕೆಲಸ ಮಾಡಬೇಕಿದೆ. ಇದು ತುರ್ತು ಅಗತ್ಯ ಕೂಡಾ. ನಗರ ಸಮಸ್ಯೆಗಳನ್ನು ಪರಿಹರಿಸಲು ಹೊಸ ಬಿಬಿಎಂಪಿ ಕೌನ್ಸಿಲ್‌  ಸಮನ್ವಯದ ಸೇತುವೆಯಿಂದ ಕೆಲಸ ಮಾಡಬೇಕಿದೆ. ಬಿಬಿಎಂಪಿಗೆ ಇದು ಒಂದು ಫ್ಯಾಷನ್‌ ಆಗಬೇಕು.10 ವರ್ಷಗಳಲ್ಲಿ ಬೆಂಗಳೂರಿನ ಜೀವ ವೈವಿಧ್ಯ ಹಾಗೂ ಪರಿಸರದ ವ್ಯವಸ್ಥೆಯ ಬಗ್ಗೆ ನಾವು ಆಳವಾದ ಅಧ್ಯಯನ ನಡೆಸಿದ್ದೇವೆ. ಬೀಜಿಂಗ್‌, ಮೆಕ್ಸಿಕೊ ಸೇರಿದಂತೆ ಹಲವು ನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ಉದ್ಯಾನಗಳು ಹಾಗೂ ಬೀದಿಗಳಲ್ಲಿ ಹೆಚ್ಚಿನ ಜೀವ ವೈವಿಧ್ಯಗಳಿವೆ. ಆದರೆ, ನಗರದಲ್ಲಿ ಮರಗಳ ದಟ್ಟಣೆ ಸ್ವಲ್ಪ ಕಡಿಮೆ ಇದೆ. ನಗರದಲ್ಲಿ ಸಾಕಷ್ಟು ಖಾಲಿ ಜಾಗ ಇವೆ.ಇಂತಹ ಪ್ರದೇಶಗಳಲ್ಲಿ ಗಿಡಗಳನ್ನು ನೆಡುವ ಕೆಲಸ ಆಗಬೇಕು. ಸಾಕಷ್ಟು ಸಂಖ್ಯೆಯ ವಿದೇಶಿ ಮರಗಳು ಇವೆ. ನಗರದ ಉದ್ಯಾನಗಳಲ್ಲಿ ಶೇ 80ರಷ್ಟು ವಿದೇಶಿ ಮರಗಳು ಇವೆ. ಕೆಲ ವರ್ಷಗಳಲ್ಲಿ ಇದರಲ್ಲಿ ಸ್ವಲ್ಪ ಬದಲಾವಣೆ ಆಗಿದೆ. ನಗರದ ಕೆಲ ಪ್ರದೇಶಗಳಲ್ಲಿ ಹೊಂಗೆಯಂತಹ ದೇಶಿ ತಳಿಯ ಗಿಡಗಳನ್ನು ನೆಡಲಾಗಿದೆ. ಆದರೂ, ಅಧಿಕ ನೀರು ಬಯಸುವ ನೀಲಗಿರಿ, ಅಕೇಶಿಯಾ, ಸಿಲ್ವರ್‌ ಓಕ್‌ನಂತಹ ವಿದೇಶಿ ಗಿಡಗಳನ್ನು ನೆಡುವ ಪ್ರವೃತ್ತಿ ಎಂದಿನಂತೆ ಮುಂದುವರಿದಿದೆ.ನಗರದ ಮರಗಳು ಹಾಗೂ ಕೆರೆಗಳು ಅಸಂಖ್ಯ ಸಂಖ್ಯೆಯಲ್ಲಿರುವ ಹಕ್ಕಿಗಳು, ಚಿಟ್ಟೆಗಳು, ಮೀನುಗಳು, ಸರಿಸೃಪಗಳು, ಸಸ್ತನಿಗಳು, ಉಭಯಚರಗಳಿಗೆ ಜೀವನಾಡಿಗಳಾಗಿವೆ. ನಗರದ ಕೆಲ ಹಸಿರು ಪ್ರದೇಶಗಳಲ್ಲಿ ಅಳಿವಿನಂಚಿನಲರುವ ಕಾಡು ಪಾಪದಂತಹ ಪ್ರಭೇದಗಳು ಇವೆ. ನಗರದಲ್ಲಿ ಮರಗಳ ಹನನ ವ್ಯಾಪಕ ಪ್ರಮಾಣದಲ್ಲಿ ಆಗುತ್ತಿರುವುದರಿಂದ ಈ ಜೀವವೈವಿಧ್ಯಗಳು ವೇಗವಾಗಿ ಕಣ್ಮರೆಯಾಗುತ್ತಿವೆ. ಪರಿಸರ ಹಾಗೂ ಆರೋಗ್ಯ ಸಂರಕ್ಷಣೆಗೆ ಹಸಿರು ವಲಯ ಪ್ರಮುಖವಾದುದು ಎಂಬುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು.ನಗರದ ರಸ್ತೆಗಳಲ್ಲಿ ಗಿಡಗಳನ್ನು ನೆಡುವ ಸರಳ ಕ್ರಮದ ಮೂಲಕ ನಗರದ ಮಾಲಿನ್ಯ ಪ್ರಮಾಣವನ್ನು ಶೇ 50ರಷ್ಟು ಕಡಿಮೆ ಮಾಡಬಹುದು ಹಾಗೂ ನಗರದ ತಾಪಮಾನವನ್ನು 4–5 ಡಿಗ್ರಿ ಕಡಿಮೆ ಮಾಡಬಹುದು ಎಂಬುದು  ಸಂಶೋಧನೆಯಿಂದ ಬೆಳಕಿಗೆ ಬಂದಿದೆ.  ನಗರದ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡದೆ ಇದ್ದರೆ ಭವಿಷ್ಯ ಭಯಾನಕ ಆಗಲಿದೆ. ನಗರದ ಹೊರವಲಯದಲ್ಲಿ ಗಿಡ ನೆಟ್ಟರೂ ನಗರದ ಜನತೆಗೆ ಹೆಚ್ಚಿನ ಪ್ರಯೋಜನ ಆಗದು. ಗಿಡ ನೆಡುವ ಉಪಕ್ರಮಗಳನ್ನು ಮಾಡದಿದ್ದರೆ ನಾವು   ಶುದ್ಧ ಗಾಳಿ ಸಿಗದೆ ಉಸಿರಾಡಲು ಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಲಿದೆ.ಹೊಸ ಬಿಬಿಎಂಪಿ ಕೌನ್ಸಿಲ್‌, ಪರಿಸರ ಕಾರ್ಯಕರ್ತರು, ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ತಜ್ಞರ ಜತೆ ಸಮಾಲೋಚನೆ ನಡೆಸಿ ಮರ ನೀತಿಯನ್ನು ರೂಪಿಸಬೇಕು. ಹೊಸ ಆಡಳಿತಗಾರರಿಗೆ ಇದು ಮೊದಲ ಆದ್ಯತೆಯಾಗಬೇಕು. ಒಂದೇ ಬಗೆಯ ಗಿಡಗಳನ್ನು ನೆಡುವುದು ಸರಿಯಲ್ಲ. ಗಿಡಗಳಲ್ಲಿ ವೈವಿಧ್ಯ ಇರಬೇಕು.  ವಿವಿಧ ಪ್ರದೇಶಗಳ ಜನರ ಅಗತ್ಯಕ್ಕೆ ತಕ್ಕಂತೆ ಗಿಡಗಳನ್ನು ನೆಡಬೇಕು. ಈ ಎಲ್ಲ ಅಂಶಗಳು ಮರ ನೀತಿಯಲ್ಲಿರಬೇಕು.ಉದಾಹರಣೆಗೆ ನಾನು ಕೆಲಸ ಮಾಡುತ್ತಿರುವ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ  ಸಂಶೋಧನೆ ಪ್ರಕಾರ, ಬೆಂಗಳೂರಿನ ಹಲವು ಕೊಳಚೆ ಪ್ರದೇಶದ ಜನರು ಕಡಿಮೆ ಸ್ಥಳಾವಕಾಶ ಬೇಡುವ ಹಾಗೂ ಪೌಷ್ಟಿಕಾಂಶಗಳನ್ನೊಳಗೊಂಡ ನುಗ್ಗೆ ಗಿಡಗಳನ್ನು ನೆಡಲು ಪ್ರಾಮುಖ್ಯತೆ ನೀಡುತ್ತಾರೆ. ಆದರೆ, ಉದ್ಯಾನದಲ್ಲಿನ ಮರಗಳು ಬೇರೆಯೇ ಉದ್ದೇಶ ಪೂರೈಸುತ್ತವೆ.ಆದ್ದರಿಂದ ಅವುಗಳನ್ನು ದಟ್ಟ ಬಣ್ಣದ ಹೂಗಳುಳ್ಳ, ಹೆಚ್ಚಿನ ಕೀಟಗಳು ಹಾಗೂ ವೈವಿಧ್ಯಮಯ ಹಕ್ಕಿಗಳನ್ನು ಸೆಳೆಯಲು ಅನುಕೂಲವಾಗುವಂತೆ ಬೆಳೆಸಬೇಕು. ವಾಹನ ದಟ್ಟಣೆ ಇರುವ ರಸ್ತೆಗಳ ಬದಿಯಲ್ಲಿ ಅಗಲ ರೆಂಬೆ ಕೊಂಬೆಗಳನ್ನುಳ್ಳ ಮರಗಳನ್ನು ನೆಡುವತ್ತ ಹೆಚ್ಚಿನ ಗಮನ ಹರಿಸಬೇಕು. ಇದರಿಂದ ಪರಿಸರ ಮಾಲಿನ್ಯ ತಡೆಯುವುದರ ಜೊತೆಗೆ, ಬೀದಿ ಬದಿಯ ವ್ಯಾಪಾರಿಗಳು, ಪಾದಚಾರಿಗಳು ಹಾಗೂ ವಾಹನ ಸಂಚಾರಿಗಳಿಗೆ ನೆರಳು ದೊರೆಯುತ್ತದೆ.ನೀರಿನ ಮೂಲಗಳಲ್ಲಿ ಕೆರೆಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಆದರೆ, ಕಾಲುವೆಗಳ ಸ್ಥಿತಿಗತಿಗಳು ಮಾತ್ರ ಇನ್ನೂ ಶೋಚನೀಯವಾಗಿವೆ. ಈ ಕುರಿತು ಸಮೀಕ್ಷೆ ಪೂರ್ಣಗೊಂಡಿದ್ದು, ಇವುಗಳನ್ನು ರಕ್ಷಿಸಲು ಅದಕ್ಕೆ ಬೇಲಿ ಹಾಕುವ ತುರ್ತು ಅಗತ್ಯವಿದೆ. ಇಲ್ಲದಿದ್ದಲ್ಲಿ ಈ ಕೆರೆಗಳು ಶಾಶ್ವತವಾಗಿ ಬತ್ತಿಹೋಗುತ್ತವೆ.ಬಾವಿಗಳು ಹಾಗೂ ಕಲ್ಯಾಣಿಗಳನ್ನು ಕೂಡ ನಿರ್ಲಕ್ಷಿೃಸಲಾಗಿದೆ. ನೂರಾರು ವರ್ಷಗಳ ಹಿಂದೆ ನಗರದಲ್ಲಿದ್ದ ನೂರಾರು ಕಲ್ಯಾಣಿಗಳು ಹಾಗೂ ಬಾವಿಗಳ ಪೈಕಿ ಕೆಲವೇ ಕೆಲವು ಮಾತ್ರ ಉಳಿದಿವೆ. ಇವುಗಳನ್ನು ನೀರು ಸಂಗ್ರಹಿಸುವ ಘಟಕಗಳಾಗಿ ಸುಲಭವಾಗಿ ಪರಿವರ್ತಿಸಿ ಸಾರ್ವಜನಿಕ ಬಳಕೆಗೆ ನೀಡಬಹುದು.ಮುಖ್ಯವಾಗಿ ನದಿಪಾತ್ರದ ಭೂಮಿಗಳು ಕಾಂಪ್ಲೆಕ್ಸ್‌ಗಳಿಂದ ತುಂಬಿಹೋಗುತ್ತಿದೆ. ಉದಾಹರಣೆಗೆ ಸ್ಯಾಂಕಿ ಹಾಗೂ ಬೆಳ್ಳಂದೂರು ಕೆರೆಯ ಅಚ್ಚುಕಟ್ಟು ಪ್ರದೇಶಗಳು. ಇವುಗಳ ರಕ್ಷಣೆಗೆ ಸೂಕ್ತ ಯೋಜನೆ ಜಾರಿಗೊಳಿಸಬೇಕು. ಅಳಿದುಳಿದ ನದಿಪಾತ್ರಗಳಲ್ಲಿ ಕಟ್ಟಡಗಳ ಕಾಮಗಾರಿಯನ್ನು ನಿಷೇಧಿಸಬೇಕು. ಹೀಗೆ ಮಾಡಿದಲ್ಲಿ ಮಾತ್ರ ಮುಂದಿನ ಪೀಳಿಗೆಗೆ ಕೆರೆಗಳನ್ನು ಉಳಿಸಲು ಸಾಧ್ಯ.

(ಲೇಖಕಿ– ಅಜೀಂ ಪ್ರೇಮ್‌ಜಿ ವಿವಿಯ ಪ್ರಾಧ್ಯಾಪಕಿ)

ಪ್ರತಿಕ್ರಿಯಿಸಿ (+)