ಬುಧವಾರ, ಮೇ 12, 2021
17 °C

ಉದ್ಯಾನನಗರಿಯಲ್ಲಿ ಶ್ವಾನಗಳ ಕಸರತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯುವ ಸವಾರ ಬೈಕ್ ನಿಲ್ಲಿಸಿದ ಕೂಡಲೇ ಚಂಗನೆ ಕೆಳಗೆ ಜಿಗಿದ ಶ್ವಾನ ಸುತ್ತಮುತ್ತ ಚುರುಕಿನಿಂದ ಓಡಾಡಿತು. ಮಾಲೀಕ ಬೈಕ್ ಓಡಿಸಲು ಮುಂದಾದಾಗ ಮುದ್ದು ನಾಯಿ ಮುಂದಿನ ಸೀಟಿಗೆ ಹಾರಿ ಕುಳಿತಿತು.ಸರ್ವೋದಯ ಸೇವಾಭಾವಿ ಸಂಸ್ಥಾ ಆಶ್ರಯದಲ್ಲಿ ನಗರದ ಕ್ವೀನ್ಸ್ ರಸ್ತೆಯ ಸರ್ಕಾರಿ ಪಶು ವೈದ್ಯಕೀಯ ಆಸ್ಪತ್ರೆಯ ಆವರಣದಲ್ಲಿ ಭಾನುವಾರ ಸಂಜೆ ಆಯೋಜಿಸಲಾದ ಭಾರತೀಯ ಶ್ವಾನ ಪ್ರದರ್ಶನದ ಝಲಕ್ ಇದು.ಉದ್ಯಾನನಗರಿಯ ದೇಸಿ ಶ್ವಾನಗಳು ಒಂದೆಡೆ ಕಲೆತಿದ್ದವು. ಚಿನ್ನಮ್ಮ, ಜೆನ್ನಿ, ಹನಿ, ಗುಂಡ, ಜೂಲೈ, ಟಾಮಿ, ಬಗಲ್, ಪಿಂಕಿ ಒಂದೇ ಮರದಡಿಯಲ್ಲಿ ಸೇರಿದ್ದರು. ಅಲ್ಲಿ ಅಮಿತ ಪ್ರೀತಿ ಇತ್ತು, ಅಪರಿಚಿತ ಹತ್ತಿರಕ್ಕೆ ಬಂದಾಗ ಎಚ್ಚರಿಕೆಯ ಧ್ವನಿ ಇತ್ತು. ಕಿಲಾಡಿ ನಾಯಿಗಳು ಚುರುಕುತನದಿಂದ ಚಿತ್ತಾಕರ್ಷಿಸಿದವು. ಪ್ರದರ್ಶನದ ವೇಳೆ ಶ್ವಾನಗಳ ನಡುವೆ ಸಣ್ಣ ಮಟ್ಟಿನ ಜಗಳವೂ ಆಯಿತು! ಗಿಡ್ಡ ಕಾಲಿನ, ದೊಡ್ಡ ಹೊಟ್ಟೆಯ, ಭಾರಿ ಗಾತ್ರ ಸೇರಿದಂತೆ ನಾನಾ ಬಗೆಯ ನಾಯಿಗಳ ಕಲರವಕ್ಕೆ ಆಸ್ಪತ್ರೆಯ ಆವರಣ ಸಾಕ್ಷಿಯಾಯಿತು. ಕೆಲವು ನಾಯಿಗಳು ಮಾಲೀಕರ ಹೆಗಲೇರಿ ಬಂದಿದ್ದರೆ, ಮತ್ತೆ ಕೆಲವು ಪ್ರಮದೆಯರ ಕಂಕುಳಲ್ಲಿ ಬೆಚ್ಚಗೆ ಕುಳಿತಿದ್ದವು. ನೀರೆಯರ ಒನಪು ಒಯ್ಯಾರಕ್ಕೆ ತಕ್ಕಂತೆ ಶ್ವಾನಗಳು ರ‌್ಯಾಂಪ್‌ನಲ್ಲಿ ಹೆಜ್ಜೆ ಹಾಕಿದವು.ವೇದಿಕೆಯಲ್ಲಿ ನಾಯಿಗಳ ಇಷ್ಟ-ಕಷ್ಟಗಳ ಪರಿಚಯವೂ ಆಯಿತು. ಚಿನ್ನಮ್ಮನಿಗೆ ತಿರುಪತಿ ಲಾಡು ಇಷ್ಟವಾದರೆ, ಮಣಿಗೆ ಮಾಲೀಕರ ಕಾಲ ಮೇಲೆ ಬೆಚ್ಚಗೆ ಕುಳಿತಿರುವುದು ಇಷ್ಟ. ನಾಯಿಗಳ ಗುಣ ವಿಶೇಷಗಳ ಬಗ್ಗೆ ಮಾಲೀಕರಿಗೆ ಅಕ್ಕಪಕ್ಕದವರಲ್ಲಿ ವರ್ಣಿಸುವ ಕಾತರ. ನಾಯಿಗಳಿಗಂತೂ  ತಿರುಗಾಡುವ ಕಾತರ.ನಾಯಿಗಳನ್ನು ಗೆಳೆಯರನ್ನಾಗಿಸಲು ಯಜಮಾನರು ಮುಂದಾದಾಗ ಬೊಗಳುವ ಮೂಲಕ ಎಚ್ಚರಿಕೆ. ಒಟ್ಟಾರೆ ಅಲ್ಲೊಂದು ಹೊಸ ಲೋಕವೇ ಸೃಷ್ಟಿಯಾಯಿತು. ಅಲ್ಲಿ ಭಾರತೀಯ ನಾಯಿಗಳಿಗೆ ಮಾತ್ರ ಪ್ರವೇಶವಿತ್ತು. ಒಂದು ಕಾಲದಲ್ಲಿ ರಸ್ತೆ ಬದಿಯಲ್ಲಿ ಬಿದ್ದು, ಅಪಘಾತಕ್ಕೀಡಾಗಿ ಸಾವಿನಂಚಿನಲ್ಲಿದ್ದ ಶ್ವಾನಗಳು ಮರುಜೀವ ಪಡೆದು ನವಚೈತನ್ಯದಿಂದ ಅಲ್ಲಿಗೆ ಬಂದಿದ್ದವು. ಪ್ರದರ್ಶನದಲ್ಲಿ 60ಕ್ಕೂ ಅಧಿಕ ಶ್ವಾನಗಳು ಪಾಲ್ಗೊಂಡಿದ್ದವು. ದತ್ತು ಪಡೆದ, ಸಂರಕ್ಷಿಸಲಾದ ನಾಯಿಗಳ ಸಂಖ್ಯೆ ದೊಡ್ಡ ಸಂಖ್ಯೆ ಇತ್ತು. ಇದೇ ವೇಳೆ ಪ್ರಾಣಿಪ್ರಿಯರು 12 ನಾಯಿಗಳನ್ನು ದತ್ತು ಸ್ವೀಕರಿಸಿದರು. `20 ವರ್ಷದಿಂದ ನಾಯಿ ಸಾಕುವ ಹವ್ಯಾಸ ಇದೆ. ಚಿನ್ನಮ್ಮನಿಗೆ ಆರು ವರ್ಷವಾಯಿತು. ಅದು ತೋರಿಸುವ ಪ್ರೀತಿ ಅಪೂರ್ವವಾದುದು. ಮನೆ ಬಂದ ಕೂಡಲೇ ಮೈಮೇಲೆ ಎಗರಿ ಕಚ್ಚಿ ಒಂದು ಸುತ್ತಿನ ಪುಂಡಾಟಿಕೆ ಮಾಡಿದ ಮೇಲೆಯೇ ಆಕೆಗೆ ಸಮಾಧಾನವಾಗುವುದು. ಅವಳಿಗೆ ಮಾತ್ರ ಮನೆಯೊಳಗೆ ಪ್ರವೇಶ. ಒಟ್ಟು ಏಳು ನಾಯಿಗಳನ್ನು ಸಾಕಿದ್ದೇವೆ~ ಎಂದು ಪ್ರದರ್ಶನದಲ್ಲಿ ಪಾಲ್ಗೊಂಡ ಸುಹಾಸ್ ತಿಳಿಸಿದರು.`ಬೀದಿಯಲ್ಲಿ ಸಿಕ್ಕಿದ ನಾಯಿ ಇದು. ಈ ನಾಯಿಯನ್ನು ಅರೆ ಸುಟ್ಟು ರಸ್ತೆ ಬದಿಯಲ್ಲಿ ಎಸೆದಿದ್ದರು. ಒಂದೂವರೆ ವರ್ಷದಿಂದ ಸಾಕುತ್ತಿದ್ದೇವೆ. ಈ ಮನೆಯ ಸದಸ್ಯನೇ ಆಗಿದೆ~ ಎಂದು ಸೌಮ್ಯಾ ಮಾಹಿತಿ ನೀಡಿದರು.

`ಒಂದು ವರ್ಷದ ಹಿಂದೆ ದತ್ತು ಸ್ವೀಕರಿಸಿದ ಶ್ವಾನವಿದು. ಇದರಿಂದ ಯಾವುದೇ ಸಮಸ್ಯೆ ಇಲ್ಲ. ಆತ್ಮೀಯ ಭಾವ ವ್ಯಕ್ತಪಡಿಸುತ್ತದೆ. ತನ್ನ ಪಾಡಿಗೆ ತಾನಿರುತ್ತದೆ. ಅದರಿಂದ ನಮಗೇನು ರಗಳೆ ಇಲ್ಲ~ ಎಂದು ತಮ್ಮ ನಾಯಿಯ ಗುಣವಿಶೇಷಗಳನ್ನು ಭರತ್ ಪರಿಚಯಿಸಿದರು.`ಭಾರತೀಯ ನಾಯಿಗಳನ್ನು ಎಲ್ಲರ ಮನೆಗಳಲ್ಲಿ ಸ್ವಾಗತಿಸುವಂತೆ ಮಾಡುವ ಉದ್ದೇಶದಿಂದ ಕಾರ್ಯಕ್ರಮ ಸಂಘಟಿಸಲಾಯಿತು. ಈ ನಾಯಿಗಳು ದೇಶದ ಎಲ್ಲೆಡೆ ಕಂಡು ಬರುವಂತಹುಗಳು. ಬಾಗಿದ ಬಾಲ ಇವುಗಳ ವಿಶೇಷ~ ಎಂದು ಸಂಘಟಕಿ ಡಾ. ಮಾನ್ಸಿ ತಿಳಿಸಿದರು. 

`ಕೊಲ್ಲಬೇಕು ಎಂಬ ಬೇಡಿಕೆ ಸರಿಯಲ್ಲ~

`ಪ್ರತಿ ಕುಟುಂಬದವರು ಒಂದೊಂದು ಬೀದಿ ನಾಯಿಯನ್ನು ದತ್ತುಸ್ವೀಕಾರ ಮಾಡಬೇಕು~ ಎಂದು ಚಿತ್ರನಟ ಜಗ್ಗೇಶ್ ಮನವಿ ಮಾಡಿದರು.ಭಾರತೀಯ ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಂಡ ಅವರು, `ಮನೆ ಸಮೀಪ ಕಾಣುವ ನಾಯಿಗಳನ್ನು ಬೀದಿನಾಯಿ ಎಂಬಂತೆ ನೋಡದೆ ಅವುಗಳಿಗೆ ಹಾಲು ಹಾಗೂ ಅನ್ನ ಹಾಕಿ. ಮರುದಿನ ಅದೇ ಸಮಯಕ್ಕೆ ಅವು ಹಾಜರಾಗಿ ತಮ್ಮ ಪ್ರೀತಿ ವ್ಯಕ್ತಪಡಿಸುತ್ತವೆ~ ಎಂದರು.`ಬೀದಿ ನಾಯಿಗಳನ್ನು ಕೊಲ್ಲಬೇಕು ಎಂಬ ಬೇಡಿಕೆ ಸರಿಯಲ್ಲ. ಒಂದೆರಡು ನಾಯಿಗಳು ಮನುಷ್ಯರ ಮೇಲೆ ದಾಳಿ ಮಾಡಿದವು ಎಂಬ ಕಾರಣಕ್ಕೆ ಎಲ್ಲ ನಾಯಿಗಳನ್ನು ಗುರಿಯಾಗಿಸಿ ದಾಳಿ ನಡೆಸುವುದು ಸೂಕ್ತ ಕ್ರಮ ಅಲ್ಲ. ಮನುಷ್ಯರಲ್ಲೂ ಕೆಲವರು ಕೆಟ್ಟವರು ಇರುತ್ತಾರೆ. ಹಾಗೆಯೇ ನಾಯಿಗಳಲ್ಲೂ ಕೆಲವು ತೊಂದರೆ ಕೊಡುವ ನಾಯಿಗಳು ಇರುತ್ತವೆ~ ಎಂದರು. 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.