ಉದ್ಯಾನ ಕಬಳಿಕೆ

7

ಉದ್ಯಾನ ಕಬಳಿಕೆ

Published:
Updated:

ಜೆಪಿ ನಗರ 4ನೇ ಹಂತ 16ನೇ ಅಡ್ಡ ರಸ್ತೆ ಬಿಬಿಎಂಪಿ ಉದ್ಯಾನದಲ್ಲಿ 3 ವರ್ಷಗಳಿಂದ ಬೆಳೆದಿರುವ 120ಕ್ಕೂ ಹೆಚ್ಚು ಗಿಡಗಳನ್ನು ಕಳೆದ ತಿಂಗಳು ಒಂದು ದಿನ  ಕೆಲವು ಭೂಕಬಳಿಕೆದಾರರು, ನಾವೇ ಆರಿಸಿ ಕಳಿಸಿದ ಪಾಲಿಕೆಯ ಕೆಲ ಜನಪ್ರತಿನಿಧಿ ಸೇರಿ ಕಡಿದು ಹಾಕಿದರು. ಇದರ ಹಿಂದೆ ಪಾರ್ಕ್ ಮತ್ತು ಅದರಲ್ಲಿನ ಗಿಡಗಳನ್ನು ಧ್ವಂಸ ಮಾಡಿ ಅಲ್ಲಿ ದೇವಸ್ಥಾನ ಕಟ್ಟುವ ಸಂಚಿದೆ.ಇದರ ಬಗ್ಗೆ ಬಿಬಿಎಂಪಿ ತೋಟಗಾರಿಕೆ ಇಲಾಖೆಯವರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಬಗ್ಗೆ ಪೊಲೀಸ್ ಆಯುಕ್ತರು, ಬಿಬಿಎಂಪಿ ಆಯುಕ್ತರು, ತೋಟಗಾರಿಕೆ ಇಲಾಖೆಯವರು ಕಾನೂನು ಕ್ರಮಕೈಗೊಂಡು ಪರಿಸರ ಮತ್ತು ಪಾರ್ಕ್ ಉಳಿಸಿ ಕಾವಲುಗಾರರನ್ನು ನೇಮಿಸಬೇಕು.ಇಲ್ಲದಿದ್ದರೆ ದೇವರ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಪಾರ್ಕ್‌ನ್ನು ಕಬಳಿಸುತ್ತಾರೆ. ಈ ವಿಷಯದಲ್ಲಿ ಜನಪ್ರತಿನಿಧಿಗಳೂ ಶಾಮೀಲಾಗಿರುವ ಕಾರಣ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಬೇಕು. ಗಿಡ ಮರಗಳನ್ನು ಕಿತ್ತು ಹಾಕಿದವರಿಗೆ ಉಗ್ರಶಿಕ್ಷೆ ವಿಧಿಸಬೇಕು.

 -ಸಂಜಯ್ ಸಿ.ಆರ್.ಉದ್ಯಾನ ಹೆಸರು ಬದಲಿಸುವುದು ಬೇಡ

ಜಯನಗರದ 4ನೇ ಟಿ ಬ್ಲಾಕ್ ಉದ್ಯಾನ ಹೆಸರು ಬದಲಾಯಿಸಿರುವುದು ತಿಳಿದು ಬೇಸರವಾಯಿತು. ಅದಕ್ಕೆ ಕಾರಣ ಹೀಗಿದೆ.ಈ ಉದ್ಯಾನ ಸಾಧ್ಯವಾಗಿದ್ದು 4ನೇ `ಟಿ~ ಬ್ಲಾಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಮುಂಚಿನ ಪದಾಧಿಕಾರಿಗಳಾಗಿದ್ದ ಎಸ್. ಆರ್. ರಾವ್, ವೆಂಕಟರಾಂ, ಪದ್ಮನಾಭನ್, ರಾಜೇಶ್ವರಯ್ಯ ಮತ್ತು ಅವರ ನಿಕಟವರ್ತಿಗಳಿಂದ. ಈ ಜಾಗವನ್ನು ಉಳಿಸಿಕೊಳ್ಳಲು ಅವರು ಪಡಬಾರದ ಕಷ್ಟಪಟ್ಟರು.

 

ನಾನೂ ಸಕ್ರಿಯ ಸದಸ್ಯನಾಗಿದ್ದೆ. ನಾಲ್ಕೈದು ವರ್ಷ ಅವರು ಕಷ್ಟಪಟ್ಟಾಗ ದುಡ್ಡಿನ ಸಮಸ್ಯೆ ಬಹಳವಾಗಿತ್ತು. 4 `ಟಿ~ ಬ್ಲಾಕ್ ನಿವಾಸಿಗಳ ಬಳಿ ಕೈಮುಗಿದು ಕೇಳಿ ಹಣ ಸಂಗ್ರಹಿಸಿ ತಮ್ಮ ಕೆಲಸ ಮುಂದುವರಿಸಿದರು. ಹೀಗಿರುವಾಗ ಈಗ ನಟ ವಿಷ್ಣುವರ್ಧನ್ ಅವರ ಹೆಸರು ಈ ಉದ್ಯಾನಕ್ಕೆ ಇಟ್ಟಿರುವುದು ಸಮಂಜಸವಲ್ಲ.ಈ ಮೇಲೆ ಹೇಳಿದ ಗಣ್ಯರಲ್ಲಿ ಪದ್ಮನಾಭನ್ ಒಬ್ಬರನ್ನು ಬಿಟ್ಟು ಮಿಕ್ಕವರೆಲ್ಲರೂ ಬದುಕಿದ್ದಾರೆ. ಅವರಲ್ಲಿ ಎಸ್. ಆರ್. ರಾವ್‌ಗಿಂತ ಮಿಗಿಲಾದ ವ್ಯಕ್ತಿ ಇನ್ನೊಬ್ಬರಿಲ್ಲ. ಅವರು ಜೀವಿತ ಕಾಲದಲ್ಲೇ ಈ ರೀತಿ ಹೆಸರು ಬದಲಾಯಿಸಿರುವುದು ಖಂಡನೀಯ.ಹಿಂದೆ ನಟರೊಬ್ಬರು (ಅವರು ಈಗಿಲ್ಲ) ತಮ್ಮ ಸಾಕುನಾಯಿಗಳ ಆಟಕ್ಕೆ ಈ ಉದ್ಯಾನ ಬಳಸಿಕೊಂಡಿದ್ದರು. ಅದನ್ನು ಖಂಡಿಸಿ ನಾನು ಕಾಗದ ಬರೆದಾಗ, ಆ ಅಭ್ಯಾಸವನ್ನು ಬಿಟ್ಟರು. ಯಾರಾದರೂ ಸಾಕು ಪ್ರಾಣಿಗಳ ಆಟಕ್ಕೋಸ್ಕರ ಉದ್ಯಾನ ಬಳಸಿಯಾರು ಎನ್ನುವ ಭಯ ನಮ್ಮ ಮನಸ್ಸಿನಲ್ಲಿದೆ. ಹಾಗಾಗಬಾರದು ಎಂಬುದು ನನ್ನ ಬಯಕೆ.

 - ಜಿ. ಎಸ್. ನಾರಾಯಣನ್ಮೂರ್ಖ ಚಿಂತನೆ

ರಸ್ತೆಗಳ ಮೇಲೆ ರಾತ್ರಿ ಹೊತ್ತು ಕಾರು ನಿಲುಗಡೆ ಮಾಡಿದರೆ ಮಾಸಿಕ 50 ರೂ. ವಸೂಲು ಮಾಡುವ ಬಗ್ಗೆ ಬಿಬಿಎಂಪಿ ಚಿಂತಿಸುತ್ತಿರುವುದು ಪರಮ ಮೂರ್ಖತನದ ವಿಚಾರ.ದುಂದುವೆಚ್ಚ ಮತ್ತು ಸಂಪನ್ಮೂಲಗಳ ದುರುಪಯೋಗ ಉಳಿಸುವತ್ತ ಚಿಂತನೆ ಮಾಡಿದರೆ ರಸ್ತೆ ಪಾರ್ಕಿಂಗ್ ತೆರಿಗೆಯಂತ ಹುಚ್ಚಾಟಕ್ಕೆ ಕೈಹಾಕುವ ಪ್ರಮೇಯವೇ ಇರುವುದಿಲ್ಲ. ಕಾರು ತೊಳೆದರೆ ರಸ್ತೆ ಗಲೀಜಾಗುತ್ತೆ; ಚೊಕ್ಕಟಗೊಳಿಸಬೇಕಾಗುತ್ತೆ ಎನ್ನುವ ಅವರ ಯೋಚನೆಯೂ ಬುಡವಿಲ್ಲದ್ದು.

 

ಬಹಳಷ್ಟು ಕಾರು ಮಾಲೀಕರು ಪ್ರತಿ ದಿನ ಕಾರನ್ನು ಒದ್ದೆ ಬಟ್ಟೆಯಿಂದ ಒರೆಸಿಕೊಳ್ಳುತ್ತ ಆಗಾಗ್ಗೆ ಕಾರು ತೊಳೆಯುವ ಕೇಂದ್ರಗಳಲ್ಲಿ ಸೇವೆ ಪಡೆಯುತ್ತಾರೆ. ಕೆಲವು ಸಲ ರಸ್ತೆಯಲ್ಲೇ ತೊಳೆದರೂ ರಸ್ತೆ ಮುಂದೆ ಗೃಹಿಣಿಯರು ಅಥವಾ ಮನೆ ಕೆಲಸದವರು ಆ ಗಲೀಜು ನೀರನ್ನು ಚರಂಡಿಗೆ ಬಳಿದು ರಸ್ತೆ ಶುದ್ಧಿ ಮಾಡಿಕೊಳ್ಳುತ್ತಾರೆ (ಇಲ್ಲದಿದ್ದರೆ ಪಕ್ಕದ ಮನೆಯವರು ಬಿಡಬೇಕ್ಲ್ಲಲ!).ಹೀಗಿರುವಾಗ ಇಂಥದ್ದಕ್ಕೆಲ್ಲ ತೆರಿಗೆ ಹಾಕುತ್ತಾ ಹೋದರೆ ಮುಂದೆ ರಸ್ತೆ ಮೇಲೆ ಓಡಾಡುವುದಕ್ಕೂ, ಬಹಳ ಹೊತ್ತು ನಿಂತುಕೊಳ್ಳುವುದಕ್ಕೂ, ಚಿಕ್ಕಪ್ರಮಾಣದಲ್ಲಿ ಗಿಡಗಳ ಕುಂಡ ಇಟ್ಟುಕೊಳ್ಳುವುದಕ್ಕೂ ತೆರಿಗೆ ಹಾಕುತ್ತಲೇ ಹೋಗಬಹುದು. ಇಂತಹ ವಿಚಿತ್ರಗಳಿಗೆ ಬಿಬಿಎಂಪಿ ಕೈಹಾಕದಿರಲಿ.

 - ಗೌರಿಬಿದನೂರು ರಂಗ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry