ಶುಕ್ರವಾರ, ಜೂನ್ 18, 2021
28 °C

ಉದ್ಯಾನ ಜಾಗದಲ್ಲಿ ಕಟ್ಟಡ ಕಾಮಗಾರಿ ಸಲ್ಲದು: ಹೈಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉದ್ಯಾನ ಜಾಗದಲ್ಲಿ ಕಟ್ಟಡ ಕಾಮಗಾರಿ ಸಲ್ಲದು: ಹೈಕೋರ್ಟ್

ಬೆಂಗಳೂರು: ದಕ್ಷಿಣ ತಾಲ್ಲೂಕಿನ ಕುಂದನಹಳ್ಳಿ, ಚಿನ್ನಪ್ಪನಹಳ್ಳಿ ಮತ್ತು ಕುರುಬರಹಳ್ಳಿ ವ್ಯಾಪ್ತಿಯಲ್ಲಿ ರಸ್ತೆ, ಉದ್ಯಾನ, ಆಟದ ಮೈದಾನ ಇತ್ಯಾದಿ ನಾಗರಿಕ ಸೌಲಭ್ಯಗಳಿಗೆ ಮೀಸಲು ಇರಿಸಿರುವ ಜಮೀನಿನಲ್ಲಿ ಯಾವುದೇ ಕಟ್ಟಡ ಕಾಮಗಾರಿ ಮುಂದುವರಿಸದೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಗುರುವಾರ ಆದೇಶಿಸಿದೆ.ಒಂದು ವೇಳೆ ಈ ಆದೇಶವನ್ನು ಉಲ್ಲಂಘನೆ ಮಾಡಿ, ಜಮೀನಿನ ಮಾರಾಟಕ್ಕೆ ಮುಂದಾದರೆ ಅಥವಾ ಇನ್ನಾವುದೇ ಪ್ರಕ್ರಿಯೆ ನಡೆದರೆ ಕಾನೂನಿನ ಅನ್ವಯ ಕ್ರಮ ತೆಗೆದುಕೊಳ್ಳುವಂತೆ ಬಿಡಿಎಗೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಿರ್ದೇಶಿಸಿದೆ.ಸುಮಾರು 132 ಎಕರೆ ಜಮೀನಿನ ವಿವಾದ ಇದಾಗಿದೆ. `ಏರ್‌ಕ್ರಾಫ್ಟ್ ನೌಕರರ ಸಹಕಾರ ಸಂಘ~ ಈ ಜಮೀನಿನ ದುರ್ಬಳಕೆ ಮಾಡಿಕೊಳ್ಳುತ್ತಿರುವುದಾಗಿ ದೂರಿ ಧನರಾಜ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ.`1982ರಲ್ಲಿ ಇಲ್ಲಿ ಲೇಔಟ್ ನಿರ್ಮಾಣದ ಸಲುವಾಗಿ ಬಿಡಿಎ ಜಮೀನನ್ನು ಸಂಘಕ್ಕೆ ಪರಭಾರೆ ಮಾಡಿದೆ. ಆದರೆ ನಾಗರಿಕ ಸೌಲಭ್ಯಗಳಿಗೆ ಮೀಸಲು ಇರಿಸಿರುವ ಜಾಗವನ್ನು ಸಂಘವು ಬಿಡಿಎ ಸುಪರ್ದಿಗೆ ನೀಡಿದೆ. ಇದರ ಹೊರತಾಗಿಯೂ ಬಿಡಿಎ ಸುಪರ್ದಿಯಲ್ಲಿ ಇರುವ ಜಾಗದಲ್ಲಿ ಸಂಘದ ಕೆಲವು ಸದಸ್ಯರು ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಈ ಬಗ್ಗೆ ಬಿಡಿಎ ಅಧಿಕಾರಿಗಳಿಗೆ ತಿಳಿದಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನಾವು ಮನವಿ ಸಲ್ಲಿಸಿದರೂ ಪ್ರಯೋಜನ ಆಗಲಿಲ್ಲ~ ಎಂದು ಅರ್ಜಿದಾರರು ದೂರಿದ್ದಾರೆ.ಜಯಾ ಪ್ರಕರಣ:  ಸಾಕ್ಷ್ಯ ದಾಖಲು

ಅಕ್ರಮ ಆಸ್ತಿ ಗಳಿಕೆ ವಿವಾದದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಜೊತೆ ಸಹ ಆರೋಪಿಯಾಗಿರುವ ಸ್ನೇಹಿತೆ ಶಶಿಕಲಾ ಅವರ ಸಾಕ್ಷ್ಯವನ್ನು ಗುರುವಾರವೂ ವಿಶೇಷ ಕೋರ್ಟ್ ದಾಖಲು ಮಾಡಿಕೊಂಡಿತು. ಗುರುವಾರ, 118 ಪ್ರಶ್ನೆಗಳಿಗೆ ಶಶಿಕಲಾ ಉತ್ತರಿಸಿದರು. ಇಲ್ಲಿಯವರೆಗೆ ಅವರು ನೀಡಿರುವ ಉತ್ತರಗಳ ಸಂಖ್ಯೆ 504.ಜಯಲಲಿತಾ ಅವರ ಒಡೆತನದಲ್ಲಿ ಇರುವ `ಜೆ ಫಾರ್ಮ್~ ಬಂಗಲೆಯ ಹೆಸರಿಗೆ 10.3 ಲಕ್ಷ ರೂಪಾಯಿ ಚೆಕ್ ಪಾವತಿಯಾಗಿರುವ ಬಗ್ಗೆ ಅವರಿಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, `ಬಂಗಲೆಯನ್ನು ಬಾಡಿಗೆಗೆ ನೀಡುವ ಸಂಬಂಧ ಅವರು ಮುಂಗಡ ರೂಪದಲ್ಲಿ ಈ ಹಣ ಪಡೆದುಕೊಂಡಿದ್ದರು~ ಎಂದು ಸಮಜಾಯಿಷಿ ನೀಡಿದರು. ಅದೇ ರೀತಿ ಜಯಾ ಅವರ ಬಳಿ ಸಿಕ್ಕ ನಗದು ಹಣದ ಬಗ್ಗೆ ಉತ್ತರಿಸಿದ ಶಶಿಕಲಾ, ಇದು `ಜಯಾ ಪಬ್ಲಿಕೇಷನ್~ನಿಂದ ಬಂದಿರುವ ಲಾಭದ ಹಣ ಎಂದರು.ಜಯಲಲಿತಾ ಅವರ ಒಡೆತನದ `ಪೋಸ್ ಗಾರ್ಡನ್~ ನಿವಾಸದ ಮೇಲೆ 1996ರಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗಿದ್ದ ಬೆಲೆ ಬಾಳುವ ವಾಚುಗಳಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಶಶಿಕಲಾ, `ಚೆನ್ನೈ ಪೊಲೀಸರು ಆ ಸಂದರ್ಭದಲ್ಲಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ದಾಳಿ ನಡೆಸಿದ್ದಾರೆ~ ಎಂದು ಆರೋಪಿಸಿದರು.ತಮಗೆ ಕಣ್ಣಿನ ಚಿಕಿತ್ಸೆ ನಡೆಯಬೇಕಿರುವ ಹಿನ್ನೆಲೆಯಲ್ಲಿ ಇದೇ 29ಕ್ಕೆ ವಿಚಾರಣೆ ಮುಂದೂಡುವಂತೆ ಮಾಡಿಕೊಂಡ ಅವರ ಕೋರಿಕೆಯನ್ನು ನ್ಯಾಯಾಧೀಶ ಬಿ.ವಿ. ಮಲ್ಲಿಕಾರ್ಜುನ ಮಾನ್ಯ ಮಾಡಿದರು.ಬಿಡಿಎ ಎಂದರೆ....

ಬಿಡಿಎ ಅನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಎನ್ನುವ ಬದಲು ಬ್ರೇವ್ ಡಿನೋಟಿಫಿಕೇಷನ್ ಅಥಾರಿಟಿ (ಧೀರ ಡಿನೋಟಿಫಿಕೇಷನ್ ಪ್ರಾಧಿಕಾರ) ಎನ್ನಬಹುದು ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅಭಿಪ್ರಾಯಪಟ್ಟರು.`ಹಲವು ಪ್ರಕರಣಗಳಲ್ಲಿ ನಾವು ಗಮನಿಸುತ್ತ್ದ್ದಿದೇವೆ. ವಿವಿಧ ಯೋಜನೆಗಳಿಗೆ ಸ್ವಾಧೀನಪಡಿಸಿಕೊಂಡಿರುವ ಜಮೀನುಗಳನ್ನು ಬಿಡಿಎ ಧೈರ್ಯದಿಂದ ಡಿನೋಟಿಫೈ ಮಾಡುತ್ತಲೇ ಬಂದಿದೆ. ಆದುದರಿಂದ ಇದೇ ಹೆಸರು ಸೂಕ್ತ ಎನ್ನಿಸುತ್ತದೆ~ ಎಂದು ಚಟಾಕಿ ಹಾರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.