ಮಂಗಳವಾರ, ನವೆಂಬರ್ 12, 2019
28 °C
ಡೇವಿಸ್ ಕಪ್: ಇಂಡೊನೇಷ್ಯಾ ಎದುರು 3-0 ಮುನ್ನಡೆ; ಮಿಂಚು ಹರಿಸಿದ ಪೇಸ್-ಸನಮ್

ಉದ್ಯಾನ ನಗರಿಯಲ್ಲಿ ಭಾರತಕ್ಕೆ ಜಯ

Published:
Updated:
ಉದ್ಯಾನ ನಗರಿಯಲ್ಲಿ ಭಾರತಕ್ಕೆ ಜಯ

ಬೆಂಗಳೂರು:  ಒಂದೆಡೆ ಅನುಭವಿ ಆಟಗಾರ 40 ವರ್ಷ ವಯಸ್ಸಿನ ಲಿಯಾಂಡರ್ ಪೇಸ್, ಇನ್ನೊಂದೆಡೆ ಚೊಚ್ಚಲ ಡಬಲ್ಸ್ ಪಂದ್ಯವಾಡಿದ ಯುವ ಆಟಗಾರ 25 ವರ್ಷ ವಯಸ್ಸಿನ ಸನಮ್ ಸಿಂಗ್. ಇವರಿಬ್ಬರ ಅಮೋಘ ಹಾಗೂ ಮನಮೆಚ್ಚುವಂಥ ಜೊತೆಯಾಟ ಶನಿವಾರ ಸಂಜೆ ಅಭಿಮಾನಿಗಳಿಗೆ ಟೆನಿಸ್ ಆಟದ ರಸದೌತಣ ಬಡಿಸಿತು.ಎಲ್ಲಕ್ಕಿಂತ ಮುಖ್ಯವಾಗಿ ಭಾರತ ವಿಜಯದುಂದುಭಿ ಮೊಳಗಿಸಲು ಕಾರಣವಾಯಿತು. ಉದ್ಯಾನ ನಗರಿಯ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ ಕೋರ್ಟ್‌ನಲ್ಲಿ ನಡೆದ ಇಂಡೊನೇಷ್ಯಾ ಎದುರಿನ ಏಷ್ಯಾ ಓಸೀನಿಯಾ (ಗುಂಪು-1) ಡೇವಿಸ್ ಕಪ್ ಟೆನಿಸ್ ಟೂರ್ನಿಯ ಪ್ಲೇ ಆಫ್ ಪಂದ್ಯದಲ್ಲಿ ಆತಿಥೇಯ ಭಾರತ 3-0ರಲ್ಲಿ ಮುನ್ನಡೆ ಸಾಧಿಸಿತು.ಅಮೂಲ್ಯ ಮುನ್ನಡೆ ಲಭಿಸುತ್ತಿದ್ದಂತೆ ಅಂಗಳಕ್ಕೆ ಜಿಗಿದ ಸಹ ಆಟಗಾರರು ಪೇಸ್ ಹಾಗೂ ಸನಮ್ ಅವರನ್ನು ಎತ್ತಿ ಹಿಡಿದು ಸಂಭ್ರಮಿಸಿದರು. ತ್ರಿವರ್ಣ ಧ್ವಜ ಹಿಡಿದು ಅಂಗಳದ ತುಂಬೆಲ್ಲಾ ಓಡಾಡಿದರು. ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳಿಂದ ಚಪ್ಪಾಳೆಯ ಮೆಚ್ಚುಗೆ ಲಭಿಸಿತು.ಕುತೂಹಲ ಕೆರಳಿಸಿದ್ದ ಡಬಲ್ಸ್ ಪಂದ್ಯದಲ್ಲಿ ಪೇಸ್ ಹಾಗೂ ಸನಮ್ 6-2, 6-1, 6-4ರಲ್ಲಿ  ಡೇವಿಡ್ ಆಂಗ್ ಸುಸಾಂತೊ ಹಾಗೂ ಎಲ್ಬೆರ್ಟ್ ಸೈ ಅವರನ್ನು ಬಗ್ಗುಬಡಿದರು. 81 ನಿಮಿಷ ನಡೆದ ಹಣಾಹಣಿಯಲ್ಲಿ ಭಾರತದ ಜೋಡಿ ಮನಮೆಚ್ಚುವಂಥ ಆಟ ಪ್ರದರ್ಶಿಸಿತು.ಈ ಗೆಲುವಿನಿಂದಾಗಿ ಡೇವಿಸ್ ಕಪ್ ಟೂರ್ನಿಯ ಗುಂಪು ಒಂದರಲ್ಲಿ ಭಾರತದವರ ಸ್ಥಾನ ಗಟ್ಟಿಯಾಯಿತು. ಶುಕ್ರವಾರ ನಡೆದ ಸಿಂಗಲ್ಸ್ ಪಂದ್ಯಗಳಲ್ಲಿ ಸೋಮದೇವ್ ದೇವವರ್ಮನ್ ಹಾಗೂ ಯೂಕಿ ಭಾಂಬ್ರಿ 2-0 ಮುನ್ನಡೆ ದೊರಕಿಸಿಕೊಟ್ಟಿದ್ದರು.ಆದರೆ ಇಂಡೊನೇಷ್ಯಾ ಎರಡನೇ ಸುತ್ತಿನ ಪ್ಲೇ ಆಫ್‌ಗೆ ಹಿಂಬಡ್ತಿ ಪಡೆಯಿತು. ಈ ದೇಶದ ಎದುರಿನ ಹಿಂದಿನ ಐದೂ ಹಣಾಹಣಿಗಳಲ್ಲಿ ಭಾರತ ಗೆಲುವು ಸಾಧಿಸಿತ್ತು. ಆ ಜಯದ ದಾಖಲೆ ಮುಂದುವರಿಯಿತು. ಇದು ಆರನೇ ಗೆಲುವು.ಈ ಪಂದ್ಯದಲ್ಲಿ ಎಲ್ಲರ ಚಿತ್ತ ಹರಿದಿದ್ದು ಪೇಸ್ ಅವರತ್ತ. ಇದು ಅವರ ಪಾಲಿಗೆ 50ನೇ ಡೇವಿಸ್ ಕಪ್ ಟೂರ್ನಿಯಾಗಿತ್ತು. ಆ ಸಂಭ್ರಮವನ್ನು ಗೆಲುವಿನ ಮೂಲಕ ಆಚರಿಸಿಕೊಂಡರು. ಆಡಿದ ಒಟ್ಟು 120 ಪಂದ್ಯಗಳಲ್ಲಿ 88ನೇ ಗೆಲುವು ಇದು. ಲಿಯಾಂಡರ್ ಪಂದ್ಯವಾಗಿದ್ದ ಕಾರಣ ತುಂಬಾ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದ್ದರು. ಸಂಜೆ 5.45ಕ್ಕೆ ಶುರುವಾದ ಈ ಪಂದ್ಯ ಹೊನಲು ಬೆಳಕಿನಲ್ಲಿಯೂ ನಡೆಯಿತು. ಇದೇ ಮೊದಲ ಬಾರಿ ಇಂಥ ವ್ಯವಸ್ಥೆ ಮಾಡಲಾಗಿತ್ತು.23 ವರ್ಷಗಳಿಂದ ಟೆನಿಸ್ ಆಡುತ್ತಿರುವ ಪೇಸ್ ಸಹ ಆಟಗಾರ ಸನಮ್ ಅವರನ್ನು ಹುರಿದುಂಬಿಸುತ್ತಾ ಮಾರ್ಗದರ್ಶನ ನೀಡಿದ ಪರಿ ಅಮೋಘ. 607ನೇ ರ‌್ಯಾಂಕ್ ಹೊಂದಿರುವ ಸನಮ್‌ಗೆ ಡೇವಿಸ್ ಕಪ್‌ನಲ್ಲಿ ಇದು ಚೊಚ್ಚಲ ಡಬಲ್ಸ್ ಪಂದ್ಯ. 13ನೇ ರ‌್ಯಾಂಕ್‌ನ ಪೇಸ್ ಮನಮೋಹಕ ಗ್ಯಾಪ್‌ಗಳ ಮೂಲಕ ಮಿಂಚಿದರು.ಆದರೆ ಚಂಡೀಗಡ ಮೂಲದ ಸನಮ್ ಆಟದ ಶೈಲಿ ಅನುಭವಿ ಆಟಗಾರರನ್ನೂ ಮೀರಿಸುವಂತಿತ್ತು. ಆಕರ್ಷಕ ಏಸ್‌ಗಳನ್ನು ಸಿಡಿಸಿ ಇಂಡೊನೇಷ್ಯಾದ ಅನನುಭವಿ ಆಟಗಾರರ ಮೇಲೆ ಒತ್ತಡ ಹೇರಿದರು.ಪ್ರವಾಸಿ ತಂಡದವರು ಹೆಚ್ಚು ಸ್ವಯಂಕೃತ ತಪ್ಪುಗಳನ್ನು ಎಸಗಿದರು. ಮೊದಲ ಹಾಗೂ ಎರಡನೇ ಸೆಟ್‌ನಲ್ಲಿ ಆತಿಥೇಯ ಆಟಗಾರರಿಗೆ ಕೊಂಚವೂ ಪ್ರತಿರೋಧ ವ್ಯಕ್ತವಾಗಲಿಲ್ಲ. ಮೊದಲ ಸೆಟ್‌ನ ಮೊದಲ ಗೇಮ್‌ನಲ್ಲಿಯೇ ಎದುರಾಳಿಯ ಸರ್ವ್ ಮುರಿದ ಭಾರತ ಐದನೇ ಗೇಮ್‌ನಲ್ಲಿ ಮತ್ತೆ ಆ ಸಾಧನೆಯನ್ನು ಪುನರಾವರ್ತಿಸಿತು. ಎರಡನೇ ಸೆಟ್‌ನಲ್ಲಿ ಒಂದು, ಮೂರು ಹಾಗೂ ಏಳನೇ ಗೇಮ್‌ನಲ್ಲಿ ಸರ್ವ್ ತುಂಡರಿಸಿ ಸುಲಭ ಜಯ ದಾಖಲಿಸಿತು.ಮೂರನೇ ಸೆಟ್ ಆರಂಭದಿಂದಲೇ ಕುತೂಹಲಕ್ಕೆ ಕಾರಣವಾಯಿತು. ಮೊದಲ ಎರಡು ಗೇಮ್‌ಗಳು ಹಲವು ಬಾರಿ ಡ್ಯೂಸ್‌ಗೆ ಕಾರಣವಾದವು. ಎರಡನೇ ಗೇಮ್‌ನಲ್ಲಿ ಸರ್ವ್ ಮುರಿದ ಭಾರತ 2-1ರಲ್ಲಿ ಮುನ್ನಡೆಯಿತು. ಆದರೆ ಮೊದಲ ಬಾರಿ ಏಳನೇ ಗೇಮ್‌ನಲ್ಲಿ ಸರ್ವ್ ತುಂಡರಿಸಿ, ಎಂಟನೇ ಗೇಮ್‌ನಲ್ಲಿ ಸರ್ವಿಸ್ ಪಾಯಿಂಟ್ ಗೆದ್ದ ಡೇವಿಡ್-ಎಲ್ಬೆರ್ಟ್ ಜೋಡಿ 4-4 ಸಮಬಲಕ್ಕೆ ಕಾರಣವಾಯಿತು.ಆದರೆ 10ನೇ ಗೇಮ್‌ನಲ್ಲಿ ಸರ್ವ್ ಬ್ರೇಕ್ ಮಾಡಿದ ಭಾರತ ಸೆಟ್ ಹಾಗೂ ಪಂದ್ಯ ಜಯಿಸಿತು. 1085ನೇ ರ‌್ಯಾಂಕ್ ಹೊಂದಿರುವ ಡೇವಿಡ್ ಹಾಗೂ 842ನೇ ರ‌್ಯಾಂಕ್‌ನ ಎಲ್ಬೆರ್ಟ್ ನಡೆಸಿದ ಪ್ರಯತ್ನ ಸಾಕಾಗಲಿಲ್ಲ.ಭಾನುವಾರ ರಿವರ್ಸ್ ಸಿಂಗಲ್ಸ್ ಪಂದ್ಯಗಳು ಜರುಗಲಿವೆ. ಆದರೆ ಸೋಮದೇವ್ ಆಡುತ್ತಿಲ್ಲ. ಅವರ ಬದಲು ಸನಮ್ ಕಣಕ್ಕಿಳಿಯಲಿದ್ದಾರೆ. ಡಬಲ್ಸ್‌ನಲ್ಲಿ ಅಮೋಘ ಪ್ರದರ್ಶನ ತೋರಿರುವ ಸನಮ್‌ಗೆ ಅತ್ಯುತ್ತಮ ಅವಕಾಶ ಲಭಿಸಿದೆ.

ಭಾನುವಾರ (ರಿವರ್ಸ್ ಸಿಂಗಲ್ಸ್; ಮಧ್ಯಾಹ್ನ 3 ಗಂಟೆಗೆ)

-ಸನಮ್-ರುಂಗ್‌ಕತ್

-ಯೂಕಿ-ವಿಸ್ನು

ಸ್ಥಳ: ಕೆಎಸ್‌ಎಲ್‌ಟಿಎ

ಪ್ರತಿಕ್ರಿಯಿಸಿ (+)