ಶನಿವಾರ, ಏಪ್ರಿಲ್ 10, 2021
33 °C

ಉದ್ಯಾನ ನಗರಿಯಲ್ಲಿ ಸೈನಾ, ಮೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉದ್ಯಾನ ನಗರಿಯಲ್ಲಿ ಸೈನಾ, ಮೇರಿ

ಬೆಂಗಳೂರು: ಉದ್ಯಾನ ನಗರಿ ಬುಧವಾರ ಎಂದಿನಂತೆ ಟ್ರಾಫಿಕ್ ಜಂಜಾಟದಲ್ಲಿ ಬ್ಯುಸಿಯಾಗಿದ್ದರೆ, ಇತ್ತ ಚಾನ್ಸರಿ ಪೆವಿಲಿಯನ್ ಹೋಟೆಲ್‌ನಲ್ಲಿ ಖುಷಿಯ ಅಲೆ ನಲಿದಾಡುತಿತ್ತು. ಸಾಧಕಿಯರ ಸ್ಫೂರ್ತಿಯುತ ಮಾತುಗಳು ಪ್ರತಿಧ್ವನಿಸುತ್ತಿದ್ದವು.ಏಕೆಂದರೆ ಭಾರತದ ಕ್ರೀಡಾ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆಗೆ ಕಾರಣರಾದ ಇಬ್ಬರು ಮಹಿಳೆಯರ ಉಪಸ್ಥಿತಿ. ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬಾಕ್ಸರ್ ಮೇರಿ ಕೋಮ್ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬಂದಿದ್ದರು. ಈ ಸಾಧನೆಯ ಬಳಿಕ ನಗರಿಗೆ ಅವರ ಮೊದಲ ಭೇಟಿ ಇದು. ಜಾಗತಿಕ ಪೌಷ್ಟಿಕಾಂಶ ಕಂಪೆನಿ `ಹರ್ಬಾಲೈಫ್~ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿತ್ತು.ಸೈನಾ ಹಾಗೂ ಮೇರಿ ಅವರ ಮೊಗದಲ್ಲಿ ಖುಷಿ ಇನ್ನೂ ನಲಿದಾಡುತಿತ್ತು. ಇಷ್ಟು ವರ್ಷಗಳ ಪ್ರಯತ್ನಕ್ಕೆ ಫಲ ಸಿಕ್ಕಿದ ತೃಪ್ತಿ ಎದ್ದು ಕಾಣುತಿತ್ತು. ಪದಕ ಗೆದ್ದ ಖುಷಿಯಿಂದ ಇವರಿಬ್ಬರು  ಇನ್ನೂ ಹೊರಬಂದಿಲ್ಲ. ಅದು ಸಹಜ ಕೂಡ. ಏಕೆಂದರೆ ಅವರ ಶ್ರಮ ಹಾಗೂ ತ್ಯಾಗವೇ ಅಂಥದ್ದು.`ಲಂಡನ್‌ನಲ್ಲಿ ವಿಜಯ ವೇದಿಕೆ ಮೇಲೆ ನಿಲ್ಲುತ್ತಿದ್ದಂತೆ ಭಾವುಕಳಾದೆ. ಆ ಕ್ಷಣದಲ್ಲಿ ನೆನಪಾಗಿದ್ದು 13 ವರ್ಷಗಳ ಕಠಿಣ ಪ್ರಯತ್ನ~ ಎಂದು ಸೈನಾ ನುಡಿದರು. ಅವರ ಮನಸ್ಸೀಗ ಎಷ್ಟೊಂದು ನಿರಾಳವಾಗಿದೆ ಎಂಬುದಕ್ಕೇ ಈ ಮಾತೇ ಸಾಕ್ಷಿ.`ದೇಶದ ಜನತೆಗೆ ಚಿನ್ನದ ಪದಕದ ಭರವಸೆ ನೀಡಿದ್ದೆ. ಆದರೆ ಆ ಸಾಧನೆ ಮಾಡಲು ಸಾಧ್ಯವಾಗಲಿಲ್ಲ~ ಎಂದ ಅವಳಿ ಮಕ್ಕಳ ತಾಯಿ ಮೇರಿಗೆ ಸಮಾಧಾನದ ಮಾತು ಹೇಳಿದ್ದು ಸೈನಾ. `ಇನ್ನೂ ಉತ್ತಮ ಪದಕದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಮೇರಿ, ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದೇ ದೊಡ್ಡ ಸಾಧನೆ. ಈಗ ಗೆದ್ದಿರುವ ಕಂಚಿನ ಪದಕದ ಸಾಧನೆ ಸುಮ್ಮನೇ ಬಂದಿದ್ದಲ್ಲ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದೇ ದೊಡ್ಡ ವಿಷಯ~ ಎಂದು 22 ವರ್ಷ ವಯಸ್ಸಿನ ನೆಹ್ವಾಲ್ ನುಡಿದರು.ಬ್ಯಾಡ್ಮಿಂಟನ್ ತಾರೆ ನೆಹ್ವಾಲ್ ಹೇಳಿದ್ದು...ಕಂಚಿನ ಪದಕ ಜಯಿಸಿದ ಬಗ್ಗೆ: ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದೇ ದೊಡ್ಡ ಸಾಧನೆ. ಹಾಗಾಗಿ ಕಂಚಿನ ಪದಕದ ಸಾಧನೆ ನನಗೆ ಖುಷಿ ನೀಡಿದೆ. ಬ್ಯಾಡ್ಮಿಂಟನ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ವ್ಯಕ್ತಿ ಎಂಬ ಬಗ್ಗೆ ಹೆಮ್ಮೆ ಇದೆ. ಈ ಸಾಧನೆಯ ಹಿಂದೆ ಪೋಷಕರು ಹಾಗೂ ಕೋಚ್‌ಗಳ ಶ್ರಮವಿದೆ. * ಚೀನಾದ ಆಟಗಾರ್ತಿಯರ ಬಗ್ಗೆ: ವಿಶ್ವ ರ‌್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನದಲ್ಲಿ ಚೀನಾದವರೇ 8-9 ಮಂದಿ ಇದ್ದಾರೆ. ಅವರ ಕೋಟೆಯೊಳಗೆ ನುಗ್ಗುವುದು ತುಂಬಾ ಕಷ್ಟ. ಆದರೆ ಮುಂದಿನ ದಿನಗಳಲ್ಲಿ `ಸೈನಾ ವರ್ಸಸ್ ಚೀನಾ~ ನಡುವಿನ ಪೈಪೋಟಿಯಾಗಲಿದೆ.*ಸಚಿನ್ ಕುರಿತು: ಸಚಿನ್ ಕ್ರಿಕೆಟ್ ದೇವರು. ಅವರನ್ನು ಭೇಟಿಯಾಗಬೇಕೆಂಬ ನನ್ನ ಕನಸು ಈಡೇರಿದೆ. ಹೈದರಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಅವರು ನನಗೆ ಕಾರಿನ ಕೀ ಹಸ್ತಾಂತರಿಸಿದರು. `ಇಷ್ಟಕ್ಕೆ ತೃಪ್ತಿಪಡಬೇಡ. ಮತ್ತಷ್ಟು ಸಾಧನೆಯ ಆಸೆ ಹಾಗೂ ಕನಸು ಇರಲಿ~ ಎಂದು ಅವರು ನನಗೆ ಕಿವಿಮಾತು ಹೇಳಿದರು. ಅವರ ಈ ಮಾತುಗಳು ನನ್ನಲ್ಲಿ ಮತ್ತಷ್ಟು ಸ್ಫೂರ್ತಿಗೆ ಕಾರಣವಾಗಿವೆ.* 2016ರ ಒಲಿಂಪಿಕ್ಸ್ ಬಗ್ಗೆ: ನಾನು ಅಭ್ಯಾಸವನ್ನೇ ಶುರು ಮಾಡಿಲ್ಲ. ಆ ಒಲಿಂಪಿಕ್ಸ್‌ಗೂ ಮುನ್ನ ಅನೇಕ ಟೂರ್ನಿಗಳಿವೆ. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಇದೆ. ಆ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯಾಸ ನಡೆಸುತ್ತಿದ್ದೇನೆ. ಗಾಯದಿಂದ ಮುಕ್ತಳಾಗಿರಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.