ಉದ್ಯಾನ ನವೀಕರಣ: ಏಪ್ರಿಲ್ ಕೊನೆಯಲ್ಲಿ ಪೂರ್ಣ

7

ಉದ್ಯಾನ ನವೀಕರಣ: ಏಪ್ರಿಲ್ ಕೊನೆಯಲ್ಲಿ ಪೂರ್ಣ

Published:
Updated:

ಹುಬ್ಬಳ್ಳಿ: ಸುಮಾರು ಆರು ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ನಗರದ ಮಹಾತ್ಮ ಗಾಂಧಿ ಉದ್ಯಾನದ ಸೌಂದರೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಎಪ್ರಿಲ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.ಗುರುವಾರ ಉದ್ಯಾನಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ದರ್ಪಣ್ ಜೈನ್ ಈ ವಿಷಯ ತಿಳಿಸಿದರು.ರಾಜ್ಯ ಸರ್ಕಾರದ ನೂರು ಕೋಟಿ ರೂಪಾಯಿ ವಿಶೇಷ ಅನುದಾನದಲ್ಲಿ ಮಹಾತ್ಮ ಗಾಂಧಿ ಉದ್ಯಾನ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ರೈಲು ಹಳಿ, ಕ್ಯಾಂಟೀನ್ ಕಟ್ಟಡ ನಿರ್ಮಾಣ ಹೊರತುಪಡಿಸಿ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಎಪ್ರಿಲ್ 30ರ ಹೊತ್ತಿಗೆ ನವೀಕರಣ ಕಾರ್ಯವೆಲ್ಲ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದರು.ಉದ್ಯಾನದಲ್ಲಿರುವ ಇಂದಿರಾ ಗಾಜಿನ ಮನೆಯನ್ನೂ ನವೀಕರಿಸುವ ಕೆಲಸ ನಡೆಯುತ್ತಿದೆ. ಇದರ ನೆಲಹಾಸು ಅವಳವಡಿಕೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಮತ್ಸ ಸಂಗ್ರಹಾಲಯ ಹಾಗೂ ಸ್ಕೇಟಿಂಗ್ ರಿಂಕ್ ನವೀಕರಣ ಕಾರ್ಯ ಮುಕ್ತಾಯ ಹಂತ ತಲುಪಿದೆ. ಇದರ ಮೇಲಂತಸ್ತಿನ ಕಲಾ ಗ್ಯಾಲರಿಯಲ್ಲಿ, ಹುಬ್ಬಳ್ಳಿಯ ಇತಿಹಾಸ ಸಾರುವ ವಸ್ತು ಸಂಗ್ರಹಾಲಯವನ್ನು ರೂಪಿಸಲಾಗುವುದು ಎಂದು ಅವರು ತಿಳಿಸಿದರು.ಪ್ರವೇಶ ದ್ವಾರದಲ್ಲಿ ಕಲ್ಲಿನ ಕಾರಂಜಿ, ಗಾಜಿನ ಮನೆ ಹಿಂಭಾಗದಲ್ಲಿ ಅಲ್ಟ್ರಾ ಫಾಸ್ಟ್ ಆ್ಯಕ್ಷನ್ ಇರುವ ಸಂಗೀತ ಕಾರಂಜಿ, ಬಯಲು ರಂಗಮಂದಿರ, ಫುಡ್ ಕಾಟೇಜ್ ಏರಿಯಾ, ಬಯಲು ಕಲಾ ಪ್ರದೇಶ, ಅಮ್ಯೂಸ್‌ಮೆಂಟ್ ಪಾರ್ಕ್, ವಾಯುವಿಹಾರ ಮಾರ್ಗ ರೂಪಿಸಲಾಗಿದೆ. ಗ್ರಾಮೀಣ ಜೀವನ ದರ್ಶಿಸುವ ಹಾಗೂ ವಿವಿಧ ಪ್ರಾಣಿಗಳ ಸಿಮೆಂಟ್ ಕಲಾಕೃತಿಗಳನ್ನು ಉದ್ಯಾನದ ಅನೇಕ ಕಡೆಗಳಲ್ಲಿ ರೂಪಿಸಿ ಇಡಲಾಗಿದೆ ಎಂದು ಅವರು ವಿವರಿಸಿದರು.ಅಲ್ಲಲ್ಲಿ ಮಳೆ ನೀರು ಶೇಖರಣೆಗೊಂಡು ಉದ್ಯಾನಕ್ಕೆ ಧಕ್ಕೆಯಾಗದಂತೆ ಸಮಗ್ರ ಒಳಚರಂಡಿ ವ್ಯವಸ್ಥೆ ರೂಪಿಸಲಾಗಿದೆ. ಅಗತ್ಯವಿರುವೆಡೆ ಕಂಪೌಂಡ್ ನಿರ್ಮಿಸಿ ಅವುಗಳ ಮೇಲೆ ವರ್ಣಚಿತ್ರಗಳನ್ನು ಬರೆಸಲಾಗಿದೆ. ಉದ್ಯಾನದೆಲ್ಲೆಡೆ ವಿದ್ಯುದ್ದೀಕರಣ ಕೆಲಸ ಪೂರ್ಣಗೊಂಡಿದೆ ಎಂದರು.ಉದ್ಯಾನ ನಿರ್ವಹಣೆಗೆ ಅನುವಾಗುಂತೆ ಸಾರ್ವಜನಿಕರಿಗೆ ಹೆಚ್ಚಿನ ಹೊರೆಯಾಗದಂತೆ ಪ್ರವೇಶ ಹಾಗೂ ಇತರೆ ಶುಲ್ಕಗಳನ್ನು ನಿಗದಿಪಡಿಸಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ನಿರ್ಮಿತಿ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಚಂದ್ರಶೇಖರ, ಪಾಲಿಕೆಯ ಸೂಪರಿಟೆಂಡೆಂಟ್ ಎಲ್.ಆರ್.ನಾಯಕ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry