ಉದ್ಯಾನ ವಾವ್: ಕೆರೆ ವ್ಯಾಕ್

7

ಉದ್ಯಾನ ವಾವ್: ಕೆರೆ ವ್ಯಾಕ್

Published:
Updated:
ಉದ್ಯಾನ ವಾವ್: ಕೆರೆ ವ್ಯಾಕ್

ಬೆಂಗಳೂರು: ಸುಮಾರು 4 ಎಕರೆಗಳಷ್ಟು ವಿಶಾಲ ಉದ್ಯಾನ. ಕಣ್ಣು ಹಾಯಿಸಿದಲ್ಲೆಲ್ಲ ಮರಗಳ ತಂಪು, ಹೂವಿನ ಕಂಪು. ಮಕ್ಕಳ ಮನಸೂರೆಗೊಳ್ಳಲು ಆಟದ ಮೈದಾನ. ವಿವಿಧ ನಮೂನೆಗಳ ಮಣ್ಣು ಹಾಗೂ ಲೋಹದ ಪ್ರಾಣಿ- ಪಕ್ಷಿಗಳ ನಮೂನೆ...`ವಾಯುವಿಹಾರಕ್ಕೆ ಇದಕ್ಕಿಂತ ಸುಂದರ ಜಾಗಬೇಕೆ, ವಾವ್~ ಎನ್ನುವ ಉದ್ಯಾನ ಇರುವುದು ಜಯಮಹಲ್ ಬಳಿ. ಹೆಸರು `ಆನೆ ಪಾರ್ಕ್~. ಬೆಂಗಳೂರಿನಲ್ಲಿಯೂ  ಇಷ್ಟೊಂದು ಗಿಡಮರಗಳಿಂದ ಕಂಗೊಳಿಸುವ ತಂಪಾದ ಉದ್ಯಾನ ಇದೆಯಲ್ಲ ಎಂದು ನಿಟ್ಟುಸಿರು ಬಿಡುತ್ತ, ಒಂದು ಸುತ್ತು ಹಾಕಲು ಹೋದರೆ ಮೂಗಿ ಮುಚ್ಚಿಕೊಳ್ಳಬೇಕಾದ ಪ್ರಸಂಗ!ಕಾರಣ, ಉದ್ಯಾನದ ಒಳಗಡೆ ನಿರ್ವಹಣೆ ಇಲ್ಲದೆ ಕೊಳಚೆಯಿಂದ ದುರ್ನಾತ ಬೀರುವ ಕೆರೆ ಒಂದಿದ್ದು, ಉಲ್ಲಾಸಭರಿತ ಮನಸ್ಸನ್ನು ಹಾಳು ಮಾಡುವಂತಿದೆ. 2-3 ದಿನಗಳಿಂದ ಮಳೆಬೀಳುತ್ತಿರುವ ಕಾರಣ, ಕೆರೆಯ ಕೊಳಚೆ ನೀರಿಗೆ ಮಳೆಯ ನೀರು ಸೇರಿ ದುರ್ನಾತ ಇನ್ನೂ ಹೆಚ್ಚಿ ಸಮೀಪ ಹೋದರೆ `ವ್ಯಾಕ್~ ಎಂದು ಉಳುಗುವ ಪರಿಸ್ಥಿತಿ ಉಂಟಾಗಿದೆ. ಇದರ ಜೊತೆಗೆ ಪ್ಲಾಸ್ಟಿಕ್, ಕಸ- ಕಡ್ಡಿ ಎಲ್ಲವನ್ನೂ ಈ ಕೆರೆ ತನ್ನ ಮಡಿಲಿಗೆ ಸೇರಿಸಿಕೊಂಡಿದೆ. ನಸುಕಿನ ಶುದ್ಧ ಹವೆ ಸೇವಿಸಲು ಹೋದರೆ ಇಲ್ಲಿ ಸಿಗುವುದು ಕಲುಷಿತ ನೀರಿನ ದುರ್ವಾಸನೆ!ಕೊಳಚೆ ನೀರಿನಲ್ಲಿಯೇ ಹತ್ತಾರು ಕೆಂಪು ಕಮಲಗಳು ಅರಳಿ ನಿಂತಿವೆ. ಈ ಕೆರೆ ಬೆಳ್ಳಕ್ಕಿ ಹಾಗೂ ವಿಧವಿಧ ನಮೂನೆಗಳ ಪುಟ್ಟ ಪುಟ್ಟ ಹಕ್ಕಿಗಳ ತಾಣವೂ ಹೌದು. ಆದರೆ ಈ ಕೆಟ್ಟ ವಾಸನೆಭರಿತ ನೀರಿನ ಮಧ್ಯೆ ತಾವರೆಯ ಸೌಂದರ್ಯ, ಪಕ್ಷಿಗಳ ಅಂದ ಗೌಣವಾಗಿ ಕಾಣುತ್ತಿದೆ. ಪ್ಯಾರೀಸ್‌ನಿಂದ ತರಿಸಲಾದ ಬೃಹತ್ ಆನೆ ಮೂರ್ತಿಯಿಂದಾಗಿಯೇ `ಆನೆ ಪಾರ್ಕ್~ ಎಂದು ಹೆಸರು ಬಂದಿದ್ದು, ಆ ಮೂರ್ತಿಗಳ ರಕ್ಷಣೆ ಕೂಡ ಸರಿಯಾಗಿ ನಡೆಯುತ್ತಿಲ್ಲ.ನಿರ್ವಹಣೆಯಿಲ್ಲದ ಕಾರಂಜಿ: 2006ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಂದ ಉದ್ಘಾಟನೆಗೊಂಡಿರುವ ಬಣ್ಣದ ಕಾರಂಜಿ ಮೌನತಾಳಿ ನಿಂತಿದೆ. ಉದ್ಘಾಟನೆಗೊಂಡ 1-2 ವರ್ಷಗಳಲ್ಲಿಯೇ ಮೋಟಾರ್ ಕೆಟ್ಟು ಹೋಗಿದ್ದು, ಮತ್ತೆ ರಿಪೇರಿ ಆಗಲೇ ಇಲ್ಲ ಎನ್ನುತ್ತಾರೆ ಸ್ಥಳೀಯರು.ಸುತ್ತಲೂ ಇರುವ ತಂತಿಯ ಬೇಲಿಗೆ ಹಾಗೂ ಉದ್ಯಾನದ ಒಳಭಾಗದಲ್ಲಿ ಲೋಹದಿಂದ ತಯಾರು ಮಾಡಲಾದ ಪ್ರಾಣಿ ಪಕ್ಷಿಗಳಿಂದ ಅಲಂಕರಣಗೊಳಿಸಲಾಗಿದೆ. ಅದರೆ ದುರದೃಷ್ಟವಶಾತ್ ಇವುಗಳ ನಿರ್ವಹಣೆ ಕೂಡ ಸರಿಯಾಗಿ ನಡೆಯುತ್ತಿಲ್ಲ. ಕೆಲವು ಪ್ರಾಣಿ ಪಕ್ಷಿಗಳ ರುಂಡ ಮತ್ತು ಮುಂಡಗಳು ಬೇರ್ಪಟ್ಟಿವೆ. ಇನ್ನು ಕೆಲವು ತಲೆಕೆಳಗಾಗಿ ಬಿದ್ದು ಹೋಗಿವೆ. ಇನ್ನು ಹಲವು ಪೇಂಟಿಂಗ್ ಕಾಣದೆ ಸವಕಳಾಗಿದೆ.`ಉದ್ಯಾನವನ್ನು ಸುಂದರಗೊಳಿಸಲು ಮಾತ್ರ ನಮಗೆ ಗುತ್ತಿಗೆ ನೀಡಲಾಗಿತ್ತು. ಅದರಂತೆ ಫುಟ್‌ಪಾತ್ ಹಾಗೂ ಲಾನ್‌ಗಳಿಗೆ ಸುಂದರ ರೂಪು ನೀಡಲಾಗಿದೆ. ಆದರೆ ಕೆರೆಯ ಉಸ್ತುವಾರಿ, ಮೂರ್ತಿಗಳ ಪಾಲನೆ ಎಲ್ಲವೂ ಪಾಲಿಕೆಗೆ ಸೇರಿದ್ದು. ಅವುಗಳ ನಿರ್ವಹಣೆ ಆಗಿಲ್ಲ~ ಎಂದು ಗುತ್ತಿಗೆದಾರ ಸೀತಾರಾಮ ನಾಯ್ಕ `ಪ್ರಜಾವಾಣಿ~ಗೆ ತಿಳಿಸಿದರು.ಜಯಮಹಲ್ ಕ್ಷೇತ್ರದ ಪಾಲಿಕೆ ಸದಸ್ಯ ಎಂ.ಕೆ.ಗುಣಶೇಖರನ್ ಅವರನ್ನು ಸಂಪರ್ಕಿಸಿದಾಗ `ಕೆರೆಯ ಹೂಳನ್ನು ಎತ್ತಬೇಕಿದೆ. ಈ ಬಗ್ಗೆ ಶೀಘ್ರದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು~ ಎಂದರು.ಜನರು ಏನೆನ್ನುತ್ತಾರೆ? ಇಲ್ಲಿ ದಿನವೂ ವಾಕಿಂಗ್‌ಗೆ ಬರುವ ವಿಠೋಬರಾವ್ ಜಾದವ್ ಹಾಗೂ ಭಗವಾನ್ ಸಿಂಗ್ ಅವರು  `ಉದ್ಯಾನಕ್ಕೆ ಈಚೆಗಷ್ಟೇ ಹೊಸ ರೂಪು ಕೊಡಲಾಗಿದೆ. ವಾಕಿಂಗ್ ಮಾಡಲು ಇನ್ನೂ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ.ಇಲ್ಲಿ ಬಂದು ಕುಳಿತರೆ ಮನಸ್ಸು `ರಿಲ್ಯಾಕ್ಸ್~ ಆಗುತ್ತದೆ. ಆದರೆ ದುರದೃಷ್ಟವಶಾತ್ ಕೆರೆಯ ನಿರ್ವಹಣೆಯನ್ನು ಮಾಡಲು ಬಿಬಿಎಂಪಿ ತೀವ್ರ ನಿರ್ಲಕ್ಷ್ಯ ಮನೋಭಾವ ತೋರಿದೆ~ ಎನ್ನುತ್ತಾರೆ. ಇದಕ್ಕೆ ದನಿಗೂಡಿಸಿದ ಉಪೇಂದ್ರ ಲಾಲ್, `ಸಮೀಪದಲ್ಲಿಯೇ ಹೈಕೋರ್ಟ್ ನ್ಯಾಯಮೂರ್ತಿಗಳ ಬಂಗಲೆಗಳು ಇವೆ.ಅಂದಿನ ನ್ಯಾಯಮೂರ್ತಿಗಳಾಗಿದ್ದ ವಿ.ಗೋಪಾಲಗೌಡ (ಈಗ ಒಡಿಶಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ) ಹಾಗೂ ಹಾಲಿ ನ್ಯಾಯಮೂರ್ತಿ ಎನ್. ಕೆ.ಪಾಟೀಲ್ ಅವರು ಉದ್ಯಾನದ ನಿರ್ವಹಣೆಗಾಗಿ ಹಣ ಬಿಡುಗಡೆಗೊಳಿಸಲು ಪಾಲಿಕೆಗೆ ಸೂಚಿಸಿದ್ದರು.ಅಷ್ಟೇ ಅಲ್ಲದೇ ಖಾಸಗಿ ಗುತ್ತಿಗೆದಾರರಾಗಿರುವ ರಮೇಶ್ ಎನ್ನುವವರು ಕೂಡ ಸ್ವಂತ ಹಣದಲ್ಲಿ ಮಕ್ಕಳ ಆಟಿಕೆಗಳನ್ನು ರಿಪೇರಿ ಮಾಡಿಸಿದ್ದಾರೆ. ಇದರಿಂದ ಉದ್ಯಾನ ಇಷ್ಟೊಂದು ಸುಂದರ ರೂಪು ಪಡೆಯಲು ಸಾಧ್ಯವಾಗಿದೆ~ ಎಂದರು.`ಕೆರೆಯ ನೀರನ್ನು ಒಣಗಿಸಿ, ಪಕ್ಕದಲ್ಲಿಯೇ ಇರುವ ಬೋರ್‌ವೆಲ್‌ನಿಂದ ನೀರು ಹಾಯಿಸುವುದು ಕಷ್ಟದ ಕೆಲಸವೇನಲ್ಲ. ಆದರೆ ಪಾಲಿಕೆ ಮಾತ್ರ ಏಕಿಷ್ಟು ನಿರ್ಲಕ್ಷ್ಯ ತಾಳುತ್ತಿದೆ ಎನ್ನುವುದೇ ಅರ್ಥವಾಗುತ್ತಿಲ್ಲ.  ಇಲ್ಲಿ ಆಮೆ, ಹಲವು ಬಗೆಯ ಮೀನುಗಳು ಕೂಡ ಇವೆ. ಅವುಗಳು ಕೂಡ ಈ ಕಲುಷಿತ ನೀರಿನಿಂದಾಗಿ ಸಾಯುವ ಸ್ಥಿತಿಯಲ್ಲಿವೆ~ ಎಂದು ದಿನನಿತ್ಯ ಉದ್ಯಾನಕ್ಕೆ ಬರುವ ರಾಕೇಶ್ ಚಾವ್ಲಾ ಹಾಗೂ ವಿಠೋಬರಾವ್ ನಿಕಂ ವಿಷಾದ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry