ಉದ್ಯಾನ ಸಾಹಿತಿಗಳು ನೋಡಲಷ್ಟೇ ಚಂದ, ಬೆಳವಣಿಗೆ ಮಂದ

7

ಉದ್ಯಾನ ಸಾಹಿತಿಗಳು ನೋಡಲಷ್ಟೇ ಚಂದ, ಬೆಳವಣಿಗೆ ಮಂದ

Published:
Updated:

* ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಘೋಷಿಸಿದಾಗ ನಿಮಗಾದ ಅನುಭವ?

ಪಾರದರ್ಶಕ ಆಯ್ಕೆಗೆ ಮತ್ತು ಸಾಮಾಜಿಕ ನ್ಯಾಯ ಕೊಟ್ಟಿದ್ದಕ್ಕೆ ಖುಷಿಯಾಯಿತು. ನಾನೊಬ್ಬ ಪ್ರಾಥಮಿಕ ಶಾಲೆಯ ಶಿಕ್ಷಕ. ಆಂಧ್ರಪ್ರದೇಶದಲ್ಲಿಯ ಒಂದವಾಗಿಲಿ, ಗುಳ್ಯಂ, ಹಿರೇಹಾಳ ಗ್ರಾಮಗಳಲ್ಲಿ ಪ್ರಾಥಮಿಕ ಶಿಕ್ಷಕನಾಗಿ ಕೆಲಸ ಮಾಡಿದೆ. ಕಳೆದ ವರ್ಷ ಸ್ವಯಂ ನಿವೃತ್ತಿ ಪಡೆದೆ. ಈಗಾಗಲೇ ನನ್ನ ಸಾಹಿತ್ಯದ ಕುರಿತು ಆರು ಪಿಎಚ್.ಡಿ ಹಾಗೂ ಎಂಟು ಎಂ.ಫಿಲ್ ಬಂದಿವೆ. ನಾನು ಓದಿದ್ದು ಎಸ್‌ಎಸ್‌ಎಲ್‌ಸಿ ಮಾತ್ರ. ಆಮೇಲೆ ಎಂ.ಎ ಮಾಡಿದೆ.ನಿರುಪದ್ರವಿ ಕುಂಬಾರ ಜನಾಂಗ. ಈ ಜನಾಂಗದವನು ನಾನು. ನಾಗರಿಕತೆಗೆ ಬುನಾದಿ ಹಾಕಿದ ಜನಾಂಗ ಕುಂಬಾರರು. ಅವರು ತಿಗರಿ ಕಂಡು ಹಿಡಿಯದಿದ್ದರೆ ನಾಗರಿಕತೆ ಇರುತ್ತಿರಲಿಲ್ಲ. ನನಗಷ್ಟೇ ಅಲ್ಲ, ಕುಂಬಾರ ಜನಾಂಗಕ್ಕೆ ಹಾಗೂ ಪ್ರಾಥಮಿಕ ಶಾಲೆ ಶಿಕ್ಷಕರಿಗೆ ಗೌರವ ಸಲ್ಲಬೇಕು. ಎಷ್ಟೇ ದೊಡ್ಡವನಾದರೂ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೆನಪಿಸಿಕೊಳ್ಳುತ್ತಾರೆ. ಇಂಥ ಶಿಕ್ಷಕ ಸಮುದಾಯದ ನನಗೆ ಸಹಜವಾಗಿ ಸಂತೋಷವಾಗಿದೆ.ನನ್ನಂಥವನನ್ನು ಗುರುತಿಸಿದ ಕುಲಪತಿ ಪ್ರೊ. ಎಚ್.ಬಿ. ವಾಲೀಕಾರ ಅವರಿಗೆ ಶೋಷಿತ ಜನಾಂಗದ ಬಗ್ಗೆ ಇರುವ ಪ್ರೀತಿ ದೊಡ್ಡದು.* ಹೊಸ ಕಾದಂಬರಿ ಬರೆಯುತ್ತಿದ್ದೀರಾ?

ಒಳಚರಂಡಿಗಳು ಎನ್ನುವ ಹೊಸ ಕಾದಂಬರಿ ಬರೆಯುತ್ತಿರುವೆ. ಭ್ರಷ್ಟ ರಾಜಕೀಯ, ಸಾಮಾಜಿಕ ವ್ಯವಸ್ಥೆಯ ಉಗ್ರ ಸ್ವರೂಪವನ್ನು ಅದು ಪರಿಚಯಿಸಲಿದೆ.  11 ವರ್ಷಗಳಿಂದ ಬರೆಯುತ್ತಿದ್ದ ಶಾಮಣ್ಣ ಕಾದಂಬರಿಯನ್ನು ಹಾಗೆ ಇಟ್ಟಿದ್ದೆ. ಅದನ್ನು 20 ದಿನಗಳಲ್ಲಿ ಬರೆದೆ. ಇದರ ಎರಡನೆಯ ಮುದ್ರಣಕ್ಕೆ ನಾಲ್ಕು ತಿಂಗಳಿಂದ ತಿದ್ದುಪಡಿ ಮಾಡುತ್ತಿರುವೆ. ಶಿಕ್ಷಕ ವೃತ್ತಿಯಿಂದ ನಿವೃತ್ತಿ ಯಾಗಿರುವುದರಿಂದ ವರ್ಷಕ್ಕೆ ಎರಡು ಕಾದಂಬರಿಗಳನ್ನು ಬರೆಯುವ ಯೋಜನೆಯಿದೆ.* ಸಿನಿಮಾ ನಿರ್ದೇಶಿಸುವ ಕನಸು ಏನಾಯಿತು?

15 ವರ್ಷಗಳ ಕನಸದು. ಸುಪಾರಿ ಕೊಲೆಗಾರನ ಕುರಿತ ‘ಬಂಟ’ ಎನ್ನುವ ಸಿನಿಮಾ ಮಾಡಬೇಕೆಂದು 1995-96ರಲ್ಲಿ ಚಿತ್ರಕಥೆ ಸಿದ್ಧಪಡಿಸಿಕೊಂಡು ಬೆಂಗಳೂರಿಗೆ ಹೋದೆ. ಆಗ 50-60 ಸಾವಿರ ರೂಪಾಯಿ ಕಳೆದುಕೊಂಡೆ. ಆಗಲಿಲ್ಲ. ಆದರೆ ನನ್ನ ಕಥೆ ಹಾಗೂ ಕಾದಂಬರಿಗಳಾದ ಮನ ಮೆಚ್ಚಿದ ಹುಡುಗಿ, ದೊರೆ, ಕೊಟ್ರೇಶಿ ಕನಸು, ಏಳು ಸುತ್ತಿನ ಕೋಟೆ, ಭಗವತಿ ಕಾಡು, ಬೇಲಿ ಮತ್ತು ಹೊಲ ಸಿನಿಮಾ ಆಗಿವೆ.* ಸದ್ಯದ ಕನ್ನಡ ಸಾಹಿತ್ಯ ಕುರಿತು ಏನನ್ನುತ್ತೀರಿ?

ಸಾಹಿತ್ಯದಲ್ಲಿ ಎರಡು ವಿಧ. ಒಂದು-ಶುದ್ಧ ಸಾಹಿತಿಗಳದು. ಹುಬ್ಬು ಮೇಲೇರಿಸದ ಹಾಗೆ ಬರೆಯುವವರು. ಅಂದರಕಿ ಮಂಚಿವಾಳ (ಎಲ್ಲರಿಗೂ ಒಳ್ಳೆಯವರಾಗಿರುವವರು)ದವರು. ಅವರೆಲ್ಲ ಉದ್ಯಾನ ಸಾಹಿತಿಗಳು. ಅಂದರೆ ಬೊನ್ಸಾಯಿ ಗಿಡಗಳ ಹಾಗೆ. ನೋಡಲು ಚೆಂದ. ಆದರೆ ಉದ್ದ ಬೆಳೆಯಲ್ಲ. ಇನ್ನೊಂದು ವಿಧ-ಕಾಡು ಸಾಹಿತಿಗಳು. ಈ ವರ್ಗಕ್ಕೆ ನಾನು ಸೇರುತ್ತೇನೆ. ಜನಪರ ವಾಗಿ ಇರುವವರು. ಅದರಲ್ಲೂ ಗ್ರಾಮೀಣ ಮೂಲದಿಂದ ಬಂದವರಿಂದ ಸಾಹಿತ್ಯಕ್ಕೆ ಕಸುವು ತುಂಬುತ್ತಿದ್ದಾರೆ.* ಉತ್ತರ ಕರ್ನಾಟಕ ಕುರಿತು ಹೇಳಿ?

ಉತ್ತರ ಕರ್ನಾಟಕದ ಭಾಷೆ, ಬದುಕು, ನಂಬಿಕೆಗಳು, ಜಾನಪದ ಆಚರಣೆಗಳು ಅದ್ಭುತ. ಕನ್ನಡ ಸಾಹಿತ್ಯಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ ಎಂದರೆ ಅದರಲ್ಲಿ ಉತ್ತರ ಕರ್ನಾಟಕದವರ ಪಾಲು ಹೆಚ್ಚಿನದು. ಪಂಪ, ರನ್ನ, ಕುಮಾರವ್ಯಾಸ ಇವರೆಲ್ಲರಿಂದ ಸಂಪದ್ಭರಿತವಾಗಿದೆ.* ಸಾಹಿತ್ಯದ ವಿದ್ಯಾರ್ಥಿಗಳಿಗೆ ನಿಮ್ಮ ಕಿವಿಮಾತು?

ನಾವೆಲ್ಲ ಹಳಗನ್ನಡ ಸಾಹಿತ್ಯ ಓದಿ ಬೆಳೆದವರು. ವಿಪುಲವಾದ ಅಧ್ಯಯನವಿತ್ತು. ಪಂಪ, ರನ್ನ, ಕುಮಾರವ್ಯಾಸರು ಬರೆದ ಕೃತಿಗಳನ್ನು ಓದಿ ಸಂಭ್ರಮಪಡುತ್ತಿದ್ದೆವು. ಇವರೆಲ್ಲ ಬರೆದುದನ್ನು ಓದದೇ ಬರೆಯುತ್ತೇವೆ ಎನ್ನುವವರು ನಮ್ಮ ನಡುವೆ ಇದ್ದಾರೆ. ಇಂದಿನ ಶಿಕ್ಷಣ ವ್ಯವಸ್ಥೆ ಹಾಗಿದೆ. ಇದಕ್ಕೆ ಕನ್ನಡ ಅಧ್ಯಾಪಕರು ಕಾರಣ. ಕನ್ನಡ ಅಧ್ಯಯನ ಪೀಠಗಳು ಕಾರಣ, ಕನ್ನಡ ವಿಶ್ವವಿದ್ಯಾಲಯ ಕಾರಣ. ಇದು ಕೇವಲ ಕನ್ನಡ ವಿಭಾಗಕ್ಕೆ ಅನ್ವಯಿಸುವ ಮಾತಲ್ಲ. ಎಲ್ಲ ಭಾಷೆಗಳ ವಿಭಾಗಗಳೂ ಸೊರಗಿವೆ. ಆಗ ಬಿಎಂಶ್ರೀ, ಕುವೆಂಪು, ತೀನಂಶ್ರೀ, ಧಾರವಾಡದಲ್ಲಿ ಆರ್.ಸಿ. ಹಿರೇಮಠ, ಎಂ.ಎಂ. ಕಲಬುರ್ಗಿ, ಎಂ.ಎಸ್. ಸುಂಕಾಪುರ ಹೀಗೆ ವಿದ್ವತ್ ಇದ್ದವರು ಇದ್ದರು. ಇದೀಗ ಕನ್ನಡ ಎಂ.ಎ. ಮಾಡುವವರೆಲ್ಲ ವಿದ್ವತ್ ಗಳಿಸಬೇಕು. ಜೊತೆಗೆ ಹಳಗನ್ನಡ ಕಾವ್ಯಗಳ ಬಗ್ಗೆ ಆಸಕ್ತಿ ಕೆರಳಿಸುವ ಅಧ್ಯಾಪಕರು ಬೇಕು. ಯಾರೋ ಹಳ್ಳಿ ಕಡೆ ಹೋಗಿದ್ದವರು ಮಕ್ಕಳನ್ನು ಮಾತನಾಡಿಸಿದರು. ಅವರೆಲ್ಲ ಆಹಾರ, ದುಡ್ಡು ಕೇಳುತ್ತಾರೆಂದರೆ ಒಳ್ಳೆ ಕನ್ನಡ ಮಾಸ್ತರರನ್ನು ಕೊಡಿ ಎಂದರಂತೆ!

ಇವತ್ತು ಹಳಗನ್ನಡ ಕಾವ್ಯ ಓದುವವರು ಕಡಿಮೆ. ಮುಖ್ಯವಾಗಿ ಕನ್ನಡದ ಬಗ್ಗೆ ಪ್ರೀತಿ ಇರಬೇಕು. ಇದಕ್ಕಾಗಿ ಅಧ್ಯಯನಶೀಲ ಪ್ರಾಧ್ಯಾಪಕರ ಅಗತ್ಯವಿದೆ. ಪ್ರಾಥಮಿಕ ಶಾಲೆಯಲ್ಲಿಯೇ ಸರಿಯಾಗಿ ಕಲಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry