ಉದ್ಯೋಗದ ಹೆದ್ದಾರಿ ಕೆಜಿಟಿಟಿಐ ತರಬೇತಿ

7

ಉದ್ಯೋಗದ ಹೆದ್ದಾರಿ ಕೆಜಿಟಿಟಿಐ ತರಬೇತಿ

Published:
Updated:
ಉದ್ಯೋಗದ ಹೆದ್ದಾರಿ ಕೆಜಿಟಿಟಿಐ ತರಬೇತಿ

ನಿರುದ್ಯೋಗಕ್ಕೆ ಪರಿಹಾರವಾಗಿ ಸರ್ಕಾರ ಗುಲ್ಬರ್ಗದಲ್ಲಿ ಹೊಸದಾಗಿ ಆರಂಭಿಸಿರುವ ಕರ್ನಾಟಕ ಜರ್ಮನ್‌ ತಾಂತ್ರಿಕ ತರಬೇತಿ ಕೇಂದ್ರ (ಕೆಜಿಟಿಟಿಐ)ದ ಉದ್ದೇಶ ಸಫಲವಾಗುತ್ತಿದೆ.ಅತ್ಯಾಧುನಿಕ ಯಂತ್ರೋಪಕರಣ ಬಳಕೆ ಮತ್ತು ಸಾಫ್ಟ್‌ವೇರ್‌ ಬಗ್ಗೆ ಬಹಳಷ್ಟು ನಿರುದ್ಯೋಗಳಿಗೆ ತರಬೇತಿ ನೀಡುವುದಲ್ಲದೆ, ಉದ್ಯೋಗದಾತ ಕಂಪೆನಿಗಳಿಗೆ ಅವರನ್ನು ಸೇರ್ಪಡೆಗೊಳಿಸಿದೆ. ಈ ಮೂಲಕ ಕೆಜಿಟಿಟಿಐ ಉದ್ಯೋಗದಾತರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ.ಶಿಕ್ಷಣ ಮುಗಿಸಿ ಉದ್ಯೋಗ ಹುಡುಕಿ ಸೋತವರಿಗೆ ಉದ್ಯೋಗದ ಹಾದಿ ತೋರುವ ಬಹುಮುಖ್ಯ ಕೆಲಸವನ್ನು ಕೆಜಿಟಿಟಿಐ ಮಾಡುತ್ತಿದೆ. ಎಂಜಿನಿಯರಿಂಗ್‌, ಐಟಿಐ, ಪಿಯುಸಿ, ಪದವಿ ಮುಗಿಸಿಕೊಂಡು ಕಂಪೆನಿಗಳು ಕರೆಯುವ ಸಂದರ್ಶನಕ್ಕೆ ಹಾಜರಾದರೂ ಕೆಲಸ ಕೈಗೆಟುವುದಿಲ್ಲ. ಸಂದರ್ಶ­ನಕ್ಕೆ ಹಾಜರಾದವರಲ್ಲಿ ಕಂಪೆನಿ ಅಪೇಕ್ಷಿಸುವ ಅರ್ಹತೆ ಇರುವುದಿಲ್ಲ. ಅನೇಕ ಸಲ ಖಾಲಿ ಹುದ್ದೆಗಳು ಅರ್ಹರ ಹುಡುಕಾಟದಲ್ಲಿ ಉಳಿದು ಬಿಡುತ್ತವೆ. ಒಂದು ಕಡೆ ಉದ್ಯೋಗವಿಲ್ಲದವರು–ಇನ್ನೊಂದು ಕಡೆ ಅರ್ಹರಿಗಾಗಿ ಹುಡುಕುವ ಕಂಪೆನಿಗಳು.ಈ ಇಬ್ಬರ ನಡುವಿನ ಸೇತುವೆಯಾಗುವ ಕೆಲಸವನ್ನು ಕೆಜಿಟಿಟಿಐ ಮಾಡುತ್ತಿದೆ. ಇದು ಸಮಾಲೋಚನೆ (ಕನ್ಸ್‌ಲ್ಟಿಂಗ್‌) ಕೇಂದ್ರವಲ್ಲ. ಆದರೆ ಕಂಪೆನಿಗಳು ಅಪೇಕ್ಷಿಸುವ ಅರ್ಹತೆಯನ್ನು ಅಲ್ಪಾವಧಿ ತರಬೇತಿ ಮೂಲಕ ಕಲಿಸುವ, ಮೈಗೂಡಿಸುವ ಕೆಲಸ ಮಾಡುತ್ತದೆ. ಇಲ್ಲಿ  ಪಾಠ, ಪ್ರವಚನವಿಲ್ಲ. ಚಾಲ್ತಿಯಲ್ಲಿರುವ ಯಂತ್ರೋಪಕರಣ ಹಾಗೂ ಸಾಫ್ಟ್‌ವೇರ್‌ ಬಗ್ಗೆಯೇ ಕೆಜಿಟಿಟಿಐ ಪ್ರಾಯೋಗಿಕತೆಗೆ ಪ್ರಾಮುಖ್ಯತೆ ಕೊಟ್ಟು ಪಾಠ ಮಾಡುತ್ತಿದೆ.ಈ ತರಬೇತಿ ಕೇಂದ್ರದ ಇನ್ನೊಂದು ವಿಶೇಷವೆಂದರೆ, ವ್ಯಕ್ತಿತ್ವದಲ್ಲಿನ ಕೊರತೆಗಳನ್ನು ನೀಗಿಸುವುದು. ತರಬೇತಿ ಅವಧಿ ಕೊನೆಯಲ್ಲಿ ವ್ಯಕ್ತಿತ್ವ ವಿಕಸನಕ್ಕಾಗಿ 20 ದಿನಗಳನ್ನು ಮೀಸಲು­ಗೊಳಿಸಲಾಗಿದ್ದು, ಸಂದರ್ಶನ ಎದುರಿಸುವ ಬಗೆ, ಸಮಯಪ್ರಜ್ಞೆ, ವೃತ್ತಿಪರತೆ ಇತ್ಯಾದಿ ವಿಷಯಗಳನ್ನು ಮನಗಾಣಿಸಲಾಗುತ್ತದೆ. ತರಬೇತಿ ಪೂರ್ಣಗೊಂಡ ಬಳಿಕ ಉದ್ಯೋಗದಾತ ಕಂಪೆನಿಗಳು ಕೆಜಿಟಿಟಿಐ ಕ್ಯಾಂಪಸ್‌ ಸಂದರ್ಶನ ಏರ್ಪಡಿಸುತ್ತವೆ.ಇಂದಿನ ಶಿಕ್ಷಣದಲ್ಲಿ ಬರೀ ಸಿದ್ಧಾಂತಗಳಿವೆ. ಆದರೆ ಪ್ರಾಯೋಗಿಕ ಜ್ಞಾನವಿಲ್ಲ ಎಂದು ಉದ್ಯೋಗದಾತ ಅನೇಕ ಕಂಪೆನಿಗಳು ಸಾಮಾನ್ಯವಾಗಿ ಹೇಳುವ ಮಾತಿದು.

ಯಾವುದೇ ಕಂಪೆನಿಗಳಲ್ಲಿ ಹೊಸದಾಗಿ ಉದ್ಯೋಗಕ್ಕೆ ಸೇರ್ಪಡೆಯಾಗುವವರಿಗೆ ಸಂಬಳ ಕೊಟ್ಟು ಆರು ತಿಂಗಳು ವಿಶೇಷ ತರಬೇತಿಯನ್ನು ಏರ್ಪಡಿಸುತ್ತವೆ. ಆದರೆ ಕೆಜಿಟಿಟಿಐ ಮೂಲಕ ನೇಮಕ ಮಾಡಿಕೊಳ್ಳುವ ಅಭ್ಯರ್ಥಿಗಳಿಗೆ ಯಾವುದೇ ತರಬೇತಿಯ ಅಗತ್ಯ ಇರುವುದಿಲ್ಲ ಎಂದು ಅನೇಕ ಉದ್ಯೋಗದಾತ ಕಂಪೆನಿಗಳ ಶ್ಲಾಘನೆ.‘ಕೆಜಿಟಿಟಿಐ ತರಬೇತಿ ಕೇಂದ್ರವು ಕಂಪೆನಿಗಳ ಸಮಯ ಹಾಗೂ ಹಣ ಎರಡನ್ನು ಉಳಿಸುತ್ತಿದೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು, ಕಂಪೆನಿಯಲ್ಲಿರುವ ಯಂತ್ರೋಪಕರಣಗಳನ್ನು ಬಳಸುವಿಕೆ ಹಾಗೂ ಕಾರ್ಯ ವಿಧಾನದ ಬಗ್ಗೆ ಹೇಳಬೇಕಾಗುತ್ತದೆ’ ಎನ್ನುವ ಅಭಿಪ್ರಾಯ ಲಾಗ್‌ ಅಸ್‌ ಬಿಸಿನೆಸ್‌ ಸಿಸ್ಟಮ್ಸ್‌ ಪ್ರೈ.,ಲಿ. ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಎನ್‌.ವಿ.ಪ್ರಶಾಂತ್‌ ಅವರದ್ದು.ಕೆಜಿಟಿಟಿಐನಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಉದ್ಯೋಗ ನೀಡಲು 18 ಕಂಪೆನಿಗಳು ಮುಂದೆ ಬಂದಿವೆ. ಐಎಫ್‌ಬಿ, ವಿಪ್ರೊ, ವೊಲ್ವೊ, ಲಾಗ್‌ ಅಸ್‌ ಸೇರಿದಂತೆ ಅನೇಕ ಪ್ರಮುಖ ಕಂಪೆನಿಗಳು ಕ್ಯಾಂಪಸ್‌ ಸಂದರ್ಶನ ಏರ್ಪಡಿಸುತ್ತಿವೆ.ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮಪ್ರಮಾಣದ ಹಂಚಿಕೆಯಲ್ಲಿ ರೂ 50 ಕೋಟಿ ಅನುದಾನದಲ್ಲಿ ಈ ತರಬೇತಿ ಕೇಂದ್ರವನ್ನು 2011ರಲ್ಲಿ ಆರಂಭಿಸಿವೆ. ಸದ್ಯ ಬೆಂಗಳೂರು ಮತ್ತು ಗುಲ್ಬರ್ಗದಲ್ಲಿ ಮಾತ್ರ ಜರ್ಮನ್‌ ತಂತ್ರಜ್ಞಾನ ನೆರವಿನ ಕೇಂದ್ರಗಳಿವೆ. ನಿರುದ್ಯೋಗ ಸಮಸ್ಯೆ ಪರಿಹಾರದಲ್ಲಿ ಈ ಕೇಂದ್ರಗಳು ಯಶಸ್ವಿಯಾಗಿ ಮುನ್ನಡೆದಿದ್ದರಿಂದ ರಾಜ್ಯದಲ್ಲಿ ಇನ್ನೂ ಐದು ಕಡೆಗಳಲ್ಲಿ ಕೆಜಿಟಿಟಿಐ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಸಿದ್ಧತೆ ನಡೆಸಿದೆ.ಹೀಗಿದೆ ಕೆಜಿಟಿಟಿಐ

ಗುಲ್ಬರ್ಗದಲ್ಲಿ ಕೆಜಿಟಿಟಿಐ ಸದ್ಯ ತಾತ್ಕಾಲಿಕ ಕಟ್ಟಡದಲ್ಲಿ ತರಬೇತಿ ನಡೆಸುತ್ತಿದೆ. 20 ಎಕರೆ ಜಾಗದಲ್ಲಿ ಹೊಸ ಕ್ಯಾಂಪಸ್‌ ನಿರ್ಮಾಣ ಭರದಿಂದ ಸಾಗಿದ್ದು, 2015 ಆಗಸ್ಟ್‌ 15ರಂದು ಉದ್ಘಾಟನೆಗೊಳ್ಳಲಿದೆ. ತರಬೇತಿಗೆ ಬರುವ ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯ ಸಹ ಕಲ್ಪಿಸಲಾಗುತ್ತದೆ. ಪರಿಶಿಷ್ಟ ಜಾತಿ/ಪಂಗಡದವರಿಗೆ ಪ್ರವೇಶ ಶುಲ್ಕದಲ್ಲಿ ಶೇ 20ರಷ್ಟು ರಿಯಾಯ್ತಿ ನೀಡಲಾಗಿದೆ.

ಅತ್ಯಾಧುನಿಕ ಕಲಿಕೆ

ಪ್ರತಿ ದಿನದ ಕಲಿಕೆಯು ವಿದ್ಯಾರ್ಥಿಗಳು ತಾವು ಜೀವನ ರೂಪಿಸಿಕೊಳ್ಳುವುದಕ್ಕೆ ಮೆಟ್ಟಿಲಾಗುವ ರೀತಿಯಲ್ಲಿದೆ. ಶ್ರದ್ಧೆ, ಬದ್ಧತೆಯಿಂದ ತರಬೇತಿ ಪಡೆದವರಿಗೆ ಉದ್ಯೋಗ ಗ್ಯಾರಂಟಿ. ಇಲ್ಲಿಯವರೆಗೂ ತರಬೇತಿ ಪಡೆದವರಲ್ಲಿ ಶೇ 70ರಷ್ಟು ವಿದ್ಯಾರ್ಥಿಗಳು ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಬರೀ ಪ್ರಮಾಣಪತ್ರ ಪಡೆಯುವುದಾದರೆ ಏನೂ ಸಾಧನೆ ಮಾಡಲಾಗುವುದಿಲ್ಲ.

– ಎಂ. ಕೋಟಯ್ಯ, ನಿರ್ದೇಶಕರು ಕೆಜಿಟಿಟಿಐ, ಗುಲ್ಬರ್ಗ

ಕೆಜಿಟಿಟಿಐನಲ್ಲಿರುವ ಕೋರ್ಸ್‌ಗಳು

ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಎಂಟು ಅಲ್ಪಾವಧಿ ಕೋರ್ಸ್‌ಗಳಿವೆ. ಕಂಪ್ಯೂಟರ್‌ ಲಿಟರಸಿ, ಐಟಿ ಎಸೆನ್ಷಿಯಲ್‌, ಸಿಸಿಎನ್‌ಎ (ಎಕ್ಸ್‌ಪ್ಲೊರೇಷನ್‌), ಅಡ್ವಾನ್ಸ್‌ ಡಿಪ್ಲೋಮಾ ಇನ್‌ ಐಟಿ, ಸಿಸಿಎನ್‌ಎ, ಎಂಸಿಐಟಿಪಿ (ವಿಂಡೋಸ್‌ ಸರ್ವರ್‌ 2008), ಎಂಸಿಟಿಎಸ್‌ (ವಿಂಡೋಸ್‌ 7), ಪರ್ಸ್‌ನ್ಯಾಲಿಟಿ ಡೆವಲಪ್‌ಮೆಂಟ್‌.

ವೆಲ್ಡಿಂಗ್‌ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಐದು ಕೋರ್ಸ್‌ಗಳಿವೆ. ಬೇಸಿಕ್‌ ವೇಲ್ಡಿಂಗ್‌, ಅಡ್ವಾನ್ಸ್‌ ವೆಲ್ಡಿಂಗ್‌ (ಮಿಗ್‌), ಅಡ್ವಾನ್ಸ್‌ ವೆಲ್ಡಿಂಗ್‌ (ಟಿಗ್‌). ಇದರಲ್ಲಿ ಆರು ತಿಂಗಳು ಹಾಗೂ ಮೂರು ತಿಂಗಳು ಅವಧಿಯಲ್ಲಿ ಪ್ರತ್ಯೇಕವಾಗಿ ಕಲಿಯಬಹುದು.ಮ್ಯಾನುಫ್ಯಾಕ್ಚರಿಂಗ್‌ನಲ್ಲಿ 10 ಕೋರ್ಸ್‌ಗಳಿವೆ. ಕ್ಯಾಡ್‌ (ಅಟೋ ಕ್ಯಾಡ್‌)ನಲ್ಲಿ ನಾಲ್ಕು ಕೋರ್ಸ್‌, ಕ್ಯಾಮ್‌ (ಮಾಸ್ಟರ್‌ ಕ್ಯಾಮ್‌), ಸಿಎನ್‌ಸಿ ಪ್ರೋಗ್ರಾಂ ಆ್ಯಂಡ್‌ ಆನ್ಸರ್‌, ಮಾಸ್ಟರ್ಸ್‌ ಇನ್‌ ಕ್ಯಾಡ್‌/ಕ್ಯಾಮ್‌/ಸಿಎನ್‌ಸಿ, ಮೆಟ್ರೊಲಾಜಿಯಲ್ಲಿ ಎರಡು ಹಾಗೂ ಎಲೆಕ್ಟ್ರಿಕ್‌ ಮೆಂಟನನ್ಸ್‌ನಲ್ಲಿ ಎರಡು ಕೋರ್ಸ್‌ಗಳಿವೆ.ಯಾರಿಗೆ ಯಾವ ಕ್ಷೇತ್ರದಲ್ಲಿ ಉದ್ಯೋಗ ಕೈಗೊಳ್ಳಲು ಆಕಾಂಕ್ಷೆ ಇದೆಯೋ ಆ ಕೋರ್ಸ್‌ ಆಯ್ದುಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಯಾವುದೇ ವಯೋಮಿತಿಯ ನಿರ್ಬಂಧವಿಲ್ಲ. ಪ್ರಾದೇಶಿಕ ಗಡಿರೇಖೆಗಳಿಲ್ಲ. ಯಾವುದೇ ಜಿಲ್ಲೆಯವರು ಕೆಜಿಟಿಟಿಐ ಪ್ರವೇಶ ಪಡೆದುಕೊಳ್ಳಬಹುದಾಗಿದೆ. ಪ್ರತಿ ಕೋರ್ಸ್‌ಗೂ ಸರ್ಕಾರ ನಿಗದಿಗೊಳಿಸಿದ ಶುಲ್ಕ ಕಟ್ಟಬೇಕಾಗುತ್ತದೆ. ಇದೇ ಕೋರ್ಸ್‌ ಕಲಿಕೆಗೆ ಖಾಸಗಿ ಸಂಸ್ಥೆಗಳು ವಿಧಿಸುವ ಶುಲ್ಕಕ್ಕಿಂತಲೂ ಗಣನೀಯ ಪ್ರಮಾಣದಲ್ಲಿ ಕಡಿಮೆ ಶುಲ್ಕವನ್ನು ವಿಧಿಸಲಾಗುತ್ತದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry