ಉದ್ಯೋಗ ಕೊಡಿಸುವುದಾಗಿ ವಂಚನೆ: ದಂಪತಿ ಬಂಧನ

5

ಉದ್ಯೋಗ ಕೊಡಿಸುವುದಾಗಿ ವಂಚನೆ: ದಂಪತಿ ಬಂಧನ

Published:
Updated:

ಬೆಂಗಳೂರು: ಸಾಫ್ಟ್‌ವೇರ್‌ ಕಂಪೆನಿ­ಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಸಾರ್ವಜನಿಕರಿಗೆ ನಂಬಿಸಿ, ಲಕ್ಷಾಂತರ ರೂಪಾಯಿ ಹಣ  ಪಡೆದು ವಂಚಿಸಿದ್ದ ಮೂವರು ಆರೋಪಿಗಳನ್ನು ವಿದ್ಯಾ­ರಣ್ಯಪುರ ಪೊಲೀಸರು ಬಂಧಿಸಿದ್ದಾರೆ.ವಿದ್ಯಾರಣ್ಯಪುರ ಸಮೀಪದ ನಂಜಪ್ಪಲೇಔಟ್‌ನ ಗಾಯಿತ್ರಿ ರೆಡ್ಡಿ (35), ಆಕೆಯ ಪತಿ ಲಕ್ಷ್ಮೀಕಾಂತ್ (40) ಹಾಗೂ ಕೃಷ್ಣ (36) ಬಂಧಿತರು. ಆರೋಪಿಗಳು ‘ಡ್ರೀಮ್‌ ಅಟ್ ಜಾಬ್‌’ ಎಂಬ ಹೆಸರಿನ ಸಂಸ್ಥೆಯ ಮೂಲಕ ನಗರದ ಸಾಫ್ಟ್‌ವೇರ್‌ ಕಂಪೆನಿಗಳಲ್ಲಿ ಕೆಲಸ ಕೊಡಿಸುವುದಾಗಿ 15 ಮಂದಿ­ಯಿಂದ ತಲಾ ರಊ 90,000 ಹಣ ಪಡೆದು ವಂಚಿಸಿದ್ದರು. ಈ ಸಂಬಂಧ ವಂಚನೆಗೊಳಗಾದ ಮಧುಸೂದನ್‌ ದೂರು ಕೊಟ್ಟಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.‘ನಂಜಪ್ಪ ಲೇಔಟ್‌ನ ಡ್ರೀಮ್‌ ಅಟ್‌ ಜಾಬ್‌ ಸಂಸ್ಥೆಗೆ ಸ್ನೇಹಿತನೊಂದಿಗೆ ಹೋದಾಗ ಅಲ್ಲಿ ಗಾಯಿತ್ರಿ ರೆಡ್ಡಿ ಅವರ ಪರಿಚಯವಾಯಿತು. ತಮ್ಮನ್ನು ಸಂಸ್ಥೆಯ ವ್ಯವಸ್ಥಾಪಕಿ ಎಂದು ಪರಿ­ಚಯಿ­ಸಿ­­ಕೊಂಡ ಅವರು, ತನಗೆ ‘ಬ್ರಾಡ್‌ಕಾಂ’ ಸಾಫ್ಟ್‌ವೇರ್‌ ಕಂಪೆನಿ­ಯಲ್ಲಿ ಹಿರಿಯ ಅಧಿಕಾರಿಗಳು ಗೊತ್ತಿ­ದ್ದಾರೆ. ಅವರಿಗೆ ಹೇಳಿ ಹೆಚ್ಚು ವೇತನ ಸಿಗುವ ಕೆಲಸ ಕೊಡಿಸುತ್ತೇನೆ. ಇದಕ್ಕೆ ರೂ 90,000 ಹಣ ಕೊಡಬೇಕು ಎಂದರು. ಅದಕ್ಕೆ ಒಪ್ಪಿಕೊಂಡ ನಾನು, ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಅಧಿ­ಕಾರಿ ಎನ್ನಲಾದ ಕೃಷ್ಣ ಎಂಬಾತನ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಿದೆ’ ಎಂದು ಮಧು­ಸೂದನ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.ಹಣ ಪಾವತಿಸಿದ ಕೆಲ ದಿನಗಳ ನಂತರ ಬ್ರಾಡ್‌ಕಾಂ ಕಂಪೆನಿಯಲ್ಲಿ ಕೆಲಸ ಸಿಕ್ಕಿರುವುದಾಗಿ ಮನೆಗೆ ಪತ್ರ ರವಾನಿಸಿದರು. ಪತ್ರದಲ್ಲಿ 2013ರ ಜು.10ರಂದು ಕೆಲಸಕ್ಕೆ ಹಾಜರಾಗು­ವಂತೆ ತಿಳಿಸಲಾಗಿತ್ತು. ಆ ದಿನ ಬ್ರಾಡ್‌ಕಾಂ ಕಂಪೆನಿಗೆ ಹೋಗಿ ವಿಚಾ­ರಿಸಿ­ದಾಗ ವಂಚನೆ­ಗೊಳಗಾಗಿ­ರುವುದು ಗೊತ್ತಾಯಿತು. ಬಳಿಕ ಗಾಯಿತ್ರಿ ಅವರನ್ನು ಸಂಪರ್ಕಿಸಿದಾಗ ಸೆ. 10ರಂದು ನಮ್ಮ ಕಂಪೆನಿಯಲ್ಲೇ ಕೆಲಸ ಕೊಡಿಸುವುದಾಗಿ ನಂಬಿಸಿದರು. ಆ ದಿನ ಮುಗಿದರೂ ಕೆಲಸ ಸಿಗದ ಕಾರಣ ಈ ಬಗ್ಗೆ ವಿದ್ಯಾರಣ್ಯಪುರ ಠಾಣೆಗೆ ಮೌಖಿಕ ದೂರು ನೀಡಿದ್ದೆ’ ಎಂದು ವಿವರಿಸಿದರು.ನಂತರ ಪೊಲೀಸರು ಗಾಯಿತ್ರಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಆಗ ತಿಂಗಳೊಳಗೆ ಹಣ ಹಿಂದಿರು­ಗಿಸುವುದಾಗಿ  ಕಾಲಾ­ವ­ಕಾಶ ಕೇಳಿದ್ದರು. ಹೀಗಾಗಿ ಮತ್ತೊಮ್ಮೆ ಅವರ ಕೋರಿಕೆ­ಯಂತೆಯೇ ನಡೆದೆ. ಆದರೆ, ಅವರು ಮೇಲಿಂದ ಮೇಲೆ ಗಡುವನ್ನು ಮುಂದೂ­­ಡತ್ತಲೇ ಹೋದ ಕಾರಣ ವಂಚನೆ ಪ್ರಕರಣ ದಾಖಲಿಸಿದೆ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry