ಗುರುವಾರ , ಆಗಸ್ಟ್ 22, 2019
25 °C

`ಉದ್ಯೋಗ ಖಾತರಿ'ಗೆ ಸುಧಾರಣೆ

Published:
Updated:

ಬೆಂಗಳೂರು: ಮಹಾಲೇಖಪಾಲರು (ಸಿಎಜಿ) ಸಲ್ಲಿಸಿರುವ ವರದಿಯಲ್ಲಿನ ಶಿಫಾರಸುಗಳನ್ನು ಆಧರಿಸಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ಎಂಎನ್‌ಆರ್‌ಇಜಿಎ) ಅನುಷ್ಠಾನದಲ್ಲಿ ಸಮಗ್ರ ಸುಧಾರಣೆಗಳನ್ನು ತರಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.ವಿಧಾನಸೌಧದಲ್ಲಿ ಗುರುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, `ಎಂಎನ್‌ಆರ್‌ಇಜಿಎ ಅನುಷ್ಠಾನಕ್ಕೆ ಅಗತ್ಯ ಮೂಲಸೌಕರ್ಯವೇ ಇಲ್ಲ. ಇಡೀ ಯೋಜನೆ ಅವ್ಯವಸ್ಥೆಯ ಆಗರವಾಗಿದೆ. ನಾನು ಅಧಿಕಾರ ಸ್ವೀಕರಿಸಿದ ದಿನದಿಂದಲೇ ಸುಧಾರಣಾ ಕ್ರಮ ಜಾರಿಗೆ ಗಮನ ಹರಿಸಿದ್ದೇನೆ' ಎಂದರು.`ಕಳೆದ ಐದು ವರ್ಷಗಳ ಅವಧಿಯಲ್ಲಿ ಯೋಜನೆಯಲ್ಲಿ 650 ಕೋಟಿ ರೂಪಾಯಿಯಷ್ಟು ಅವ್ಯವಹಾರ ನಡೆದಿರಬಹುದು ಎಂದು ಸಿಎಜಿ ವರದಿಯಲ್ಲಿ ಅಂದಾಜಿಸಲಾಗಿದೆ. ನಾನು ಸಚಿವನಾದ ತಕ್ಷಣ ಯೋಜನೆ ಕುರಿತು ಮಾಹಿತಿ ಕೇಳಿದ್ದೆ. ರಾಜ್ಯದಲ್ಲಿ ಎಂಎನ್‌ಆರ್‌ಇಜಿಎ ಅಡಿಯಲ್ಲಿ 3.5 ಲಕ್ಷ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಯೋಜನಾ ನಿರ್ದೇಶಕರು ತಿಳಿಸಿದ್ದರು. ಆದರೆ, ವಾಸ್ತವದಲ್ಲಿ ಶೇಕಡ 3ರಷ್ಟು ಕಾಮಗಾರಿಗಳು ಮಾತ್ರ ಚಾಲ್ತಿಯಲ್ಲಿದ್ದವು' ಎಂದು ತಿಳಿಸಿದರು. ಯೋಜನೆ ಅನುಷ್ಠಾನಕ್ಕೆ ನಿರ್ದೇಶಕರ ಬದಲಿಗೆ ಆಯುಕ್ತರನ್ನು ನೇಮಿಸಲಾಗುವುದು. ಹುದ್ದೆಯನ್ನು ಮೇಲ್ದರ್ಜೆಗೇರಿಸುವುದರಿಂದ ಹಿರಿಯ ಅಧಿಕಾರಿಗೆ ಹೊಣೆ ಒಪ್ಪಿಸಲು ಸಾಧ್ಯವಾಗುತ್ತದೆ. ಯೋಜನೆ ಅನುಷ್ಠಾನದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ವಾರದೊಳಗೆ ಸ್ಪಷ್ಟವಾದ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುವುದು ಎಂದರು.ಫಲಾನುಭವಿಗಳ ನೇರವಾಗಿ ವೇತನ ಪಾವತಿಸಲು ಎಲೆಕ್ಟ್ರಾನಿಕ್ ನಗದು ವರ್ಗಾವಣೆ ಕಡ್ಡಾಯಗೊಳಿಸಲಾಗುವುದು. ಮಧ್ಯವರ್ತಿಗಳ ಹಾವಳಿ ತಡೆಯಲು ಇದು ನೆರವಾಗಲಿದೆ. ಹಣ ದುರ್ಬಳಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಯೋಜನೆಯ ಅಡಿಯಲ್ಲಿ ಕಾಮಗಾರಿ ಕೈಗೊಳ್ಳುವ ಮುನ್ನ, ಕಾಮಗಾರಿ ನಡೆಯುವಾಗ ಮತ್ತು ನಂತರದ ವಿಡಿಯೊ ಚಿತ್ರೀಕರಣ ಮಾಡಲಾಗುವುದು ಎಂದು ಸಚಿವರು ವಿವರಿಸಿದರು.`ಬಡವರಿಗೆ ಶಕ್ತಿ ತುಂಬುವುದಕ್ಕಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ, ಅವ್ಯವಹಾರ ಮತ್ತು ಯೋಜನೆ ಅನುಷ್ಠಾನದಲ್ಲಿನ ಲೋಪಗಳಿಂದಾಗಿ ಮೂಲ ಆಶಯವೇ ಈಡೇರುತ್ತಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.ಯೋಜನೆ ಅನುಷ್ಠಾನದಲ್ಲಿ ಸುಧಾರಣೆ ತರುವ ಸಂಬಂಧ ಸಿಎಜಿ ಹಲವು ಶಿಫಾರಸುಗಳನ್ನು ನೀಡಿದೆ. ಅವುಗಳನ್ನು ಪೂರ್ಣವಾಗಿ ಅನುಷ್ಠಾನಕ್ಕೆ ತರಲು ಸರ್ಕಾರ ಬದ್ಧವಾಗಿದೆ. ಗುರುವಾರ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದು, ಸಿಎಜಿ ವರದಿಯಲ್ಲಿ ಉಲ್ಲೇಖಿಸಿರುವ ಪ್ರಕರಣಗಳು ಪುನರಾವರ್ತನೆ ಆಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದರು.`ಎಂಎನ್‌ಆರ್‌ಇಜಿಎ ಅಡಿಯಲ್ಲಿ ಎಲ್ಲಾ ರೈತರ ಜಮೀನುಗಳಲ್ಲೂ ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್ ಅವರಿಗೆ ಪತ್ರ ಬರೆದಿದ್ದೇನೆ. ದೊಡ್ಡ ಹಿಡುವಳಿದಾರರ ಜಮೀನಿನಲ್ಲೂ ಕಾಮಗಾರಿಗೆ ಅವಕಾಶ ನೀಡುವುದರಿಂದ ಹೆಚ್ಚಿನ ಪ್ರಯೋಜನ ಆಗುತ್ತದೆ' ಎಂದು ತಿಳಿಸಿದರು.

Post Comments (+)