ಉದ್ಯೋಗ ಖಾತರಿ: ಕ್ರಿಯಾಯೋಜನೆಗೆ ಸೂಚನೆ

7

ಉದ್ಯೋಗ ಖಾತರಿ: ಕ್ರಿಯಾಯೋಜನೆಗೆ ಸೂಚನೆ

Published:
Updated:

ಬೀದರ್: `ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಗ್ರಾಮ ಪಂಚಾಯಿತಿಗಳು 15 ದಿನದಲ್ಲಿ ಕ್ರಿಯಾಯೋಜನೆ ರೂಪಿಸಬೇಕು. ಫಲಾನುಭವಿಗಳಿಗೆ ನೆರವು ತಲುಪಿಸಬೇಕು~ ಎಂದು ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಬುಧವಾರ ಸೂಚಿಸಿದರು.ಜಿಲ್ಲೆಯಲ್ಲಿ ಕೇವಲ 97 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಾಮಗಾರಿ ಆರಂಭವಾಗಿದ್ದು, ಇನ್ನೂ 78 ಗ್ರಾಮ ಪಂಚಾಯಿತಿಗಳು ಕಾಮಗಾರಿ ಕೈಗೊಳ್ಳಬೇಕಾಗಿದೆ. ಜೊತೆಗೆ, ಖಾತರಿ ಯೋಜನೆಯ ಬಾಕಿ ಕೂಲಿಯನ್ನು ಆದಷ್ಟು ಶೀಘ್ರ ಪಾವತಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು ಈ ಸೂಚನೆ ನೀಡಿದರು. ಖಾತರಿ ಯೋಜನೆಯ ಫಲಾನುಭವಿಗಳಿಗೆ ಕೂಲಿ ಹಣ ಪಾವತಿಸುವಲ್ಲಿ ವಿಳಂಬವಾಗುತ್ತಿದೆ. ಅಂಚೆ ಇಲಾಖೆ ಖಾತೆಯ ಮೂಲಕ ಪಾವತಿ ಮಾಡುವಲ್ಲಿ ಅವ್ಯವಹಾರವೂ ಆಗುತ್ತಿದೆ ಎಂದು ಶಾಸಕ ಈಶ್ವರ ಖಂಡ್ರೆ ಗಮನಸೆಳೆದರು.ಕೊಳವೆಬಾವಿ ಕೊರೆಸಲು ಹಣದ ಕೊರತೆ: ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಆದರೂ, ಕೊಳವೆ ಬಾವಿ ಕೊರೆಸಲು ಹಣದ ಕೊರತೆ ಇದೆ ಎಂದೂ ಶಾಸಕರಾದ ಬಂಡೆಪ್ಪಾ ಕಾಶೆಂಪುರ, ಈಶ್ವರ ಖಂಡ್ರೆ, ರಾಜಶೇಖರ್ ಪಾಟೀಲ ಅವರು ಗಮನ ಸೆಳೆದರು.ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಇಲಾಖೆಯ ತುಷಾರ್ ಗಿರಿನಾಥ್ ಅವರು, ಕೇಂದ್ರ ಸರ್ಕಾರ ಕುಡಿಯುವ ನೀರು ಯೋಜನೆಯನ್ನು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ ಕೈಗೊಳ್ಳಬೇಕು ಎಂದು ಸೂಚಿಸಿದೆ. ಇದಕ್ಕೆ ಪೂರಕವಾಗಿ ಅಗತ್ಯ ಮತ್ತು ಆದ್ಯತೆಯನ್ನು ಆಧರಿಸಿ ಹೊಸದಾಗಿ ಕ್ರಿಯಾಯೋಜನೆ ರೂಪಿಸಿ ಕಳುಹಿಸಬೇಕು ಎಂದರು.ಕೊಹಿನೂರು ಹೋಬಳಿ ವ್ಯಾಪ್ತಿಯ 18 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಗಂಡೋರಿನಾಲಾದಿಂದ  ನೀರು ಪೂರೈಸಲು ರೂ. 15 ಕೋಟಿ ಅನುದಾನದ ಅವಶ್ಯಕತೆ ಇದ್ದು, ಈ ಬಗೆಗೆ ಶೀಘ್ರ ಗಮನಹರಿಸಬೇಕು ಎಂದು ಅಭಿಪ್ರಾಯಪಟ್ಟರು.ಜಲ ನಿರ್ಮಲ ಯೋಜನೆ: ಜಲ ನಿರ್ಮಲ ಯೋಜನೆಗೆ ಸಂಬಂಧಿಸಿದ ಜಿಲ್ಲಾ ಪಂಚಾಯಿತಿ ಕೈಗೊಂಡಿರುವ ನಿರ್ಣಯವು ಕಾನೂನಿಗೆ ವಿರುದ್ಧವಾಗಿದ್ದು, ಇದನ್ನು ಗಣನೆಗೆ ತೆಗೆದು ಕೊಳ್ಳದೇ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಉಪ ಮುಖ್ಯಮಂತ್ರಿ ಅವರು ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಅವರಿಗೆ ಆದೇಶಿಸಿದರು.ಇದಕ್ಕೂ ಮುನ್ನ ಯೋಜನೆಯು ಪೂರ್ಣವಾಗಿ ಗ್ರಾಮ ಪಂಚಾಯಿತಿ ವತಿಯಿಂದ ಜಾರಿಗೊಳ್ಳಬೇಕು. ಜಿಲ್ಲಾ ಪಂಚಾಯಿತಿಯ ಹಸ್ತಕ್ಷೇಪ ಮಾಡಲು ಬರುವುದಿಲ್ಲ. ಆದರೂ, ಈ ಸಂಬಂಧ ನಿರ್ಣಯ ಅಂಗೀಕರಿಸಿರುವುದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಜಿಲ್ಲಾಧಿಕಾರಿಗಳು ಸಭೆಯ ಗಮನಕ್ಕೆ ತಂದರು.ಸಕಾಲ, ಭೂಮಿ, ಭೂ ವಿವಾದ ಪ್ರಕರಣಗಳು ಸೇರಿದಂತೆ ವಿವಿಧ ಪ್ರಕರಣಗಳನ್ನು ಇತ್ಯರ್ಥ ಪಡಿಸುವಲ್ಲಿ ಕಳೆದ ಒಂದು ತಿಂಗಳಲ್ಲಿ ಉತ್ತಮ ಸಾಧನೆಯಾಗಿದೆ. ಸಕಾಲ ಯೋಜನೆಯಡಿ ಆದಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.ಶಾಸಕ ಪ್ರಭು ಚವ್ಹಾಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀಪಿಕಾ ಸಚಿನ ರಾಠೋಡ, ಉಪಾಧ್ಯಕ್ಷೆ ಲತಾ ಶಾಂತಕುಮಾರ, ಜಲ ನಿರ್ಮಲ ಯೋಜನಾ ನಿರ್ದೇಶಕ ರವಿಶಂಕರ, ಉದ್ಯೋಗ ಖಾತ್ರಿ ಯೋಜನೆಯ ನಿರ್ದೇಶಕ ಮುನಿಷ್ ಮೌದ್ಗಿಲ್, ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗೀತಾಂಜಲಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry