ಭಾನುವಾರ, ಮೇ 9, 2021
19 °C

ಉದ್ಯೋಗ ಖಾತರಿ: ಜಿಲ್ಲೆಗೆ 6.65 ಕೋಟಿ ಬಾಕಿ

ಪ್ರಜಾವಾಣಿ ವಾರ್ತೆ ವೆಂಕಟೇಶ್ ಜಿ.ಎಚ್ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ಜಿಲ್ಲಾ ಪಂಚಾಯ್ತಿಯಲ್ಲಿ ಹಣವಿಲ್ಲದೆ ಯೋಜನೆ ಅನುಷ್ಠಾನಕ್ಕೆ ಅಡಚಣೆ ಉಂಟಾಗಿದೆ.ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ಎಂಎನ್‌ಆರ್‌ಇಜಿಎ) ಧಾರವಾಡ ಜಿಲ್ಲೆಗೆ 6.65 ಕೋಟಿ ರೂಪಾಯಿ ಬಾಕಿ ಬರಬೇಕಿದೆ.ತೀವ್ರ ಬರದ ಹಿನ್ನೆಲೆಯಲ್ಲಿ ವಿವಿಧ ಕಾಮಗಾರಿಗಳನ್ನು ಈ ಯೋಜನೆಯಡಿ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಕಳೆದ ಅಕ್ಟೋಬರ್‌ನಲ್ಲೇ ಸೂಚಿಸಿದ್ದರೂ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ಹಣ ಕೊಡಲು ದುಡ್ಡಿಲ್ಲ. ಹಾಗಾಗಿ ಹೊಸದಾಗಿ ಕಾಮಗಾರಿ ಕೈಗೆತ್ತಿಕೊಳ್ಳಲು ಗ್ರಾಮ ಪಂಚಾಯ್ತಿಗಳು ಮುಂದಾಗಿಲ್ಲ.ಕೇಂದ್ರದಿಂದ ರಾಜ್ಯಕ್ಕೆ ಹಣ ಬಿಡುಗಡೆಯಾಗಿದ್ದರೂ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ಹೇಳಲಾಗಿದೆ.ಹುಬ್ಬಳ್ಳಿ, ಧಾರವಾಡ, ನವಲಗುಂದ ಹಾಗೂ ಕುಂದಗೋಳ ತಾಲ್ಲೂಕುಗಳನ್ನು ಸರ್ಕಾರ ಬರಪೀಡಿತ ಎಂದು ಘೋಷಿಸಿದ್ದು, ಹುಬ್ಬಳ್ಳಿ ಹಾಗೂ ಕುಂದಗೋಳ ತಾಲ್ಲೂಕುಗಳು ಬರದಿಂದ ತೀವ್ರ ಬಾಧಿತವಾಗಿವೆ.ಅನಾವೃಷ್ಟಿಯಿಂದ ಜನತೆ ಗುಳೇ ಹೋಗದಂತೆ ತಡೆಯಲು ಉದ್ಯೋಗ ಖಾತರಿಯಡಿ ಕೆರೆ ಹೂಳೆತ್ತುವುದು, ಸಾಮಾಜಿಕ ಅರಣ್ಯ, ರಸ್ತೆ, ಚರಂಡಿ, ಕೃಷಿ ಹೊಂಡ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಮಾರ್ಚ್ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ 53 ಸಾವಿರ ಕುಟುಂಬಗಳ 1,52,852 ಮಂದಿ ಯೋಜನೆಯಡಿ ಉದ್ಯೋಗ ಪಡೆದಿದ್ದಾರೆ. ಫೆಬ್ರುವರಿ ಮಧ್ಯಭಾಗದಿಂದ ಏಪ್ರಿಲ್ 3ರವರೆಗೆ ಹುಬ್ಬಳ್ಳಿ ತಾಲ್ಲೂಕಿಗೆ 1.58 ಕೋಟಿ, ಧಾರವಾಡ ತಾಲ್ಲೂಕಿಗೆ 2.9 ಕೋಟಿ ರೂಪಾಯಿ ಹಾಗೂ ಕಲಘಟಗಿ ತಾಲ್ಲೂಕಿಗೆ 4.53 ಕೋಟಿ ರೂಪಾಯಿ ಬಾಕಿ ಬರಬೇಕಿದೆ. ಈ ಹಣದಲ್ಲಿ ಶೇ 60ರಷ್ಟು ಕೂಲಿ ಹಾಗೂ ಶೇ 40ರಷ್ಟು ಸಾಮಗ್ರಿಗಳ ಬಾಬ್ತು ನೀಡಬೇಕಾಗಿದೆ. ಇದರಿಂದ ಹುಬ್ಬಳ್ಳಿ ತಾಲ್ಲೂಕಿನಲ್ಲಿ 89 ಲಕ್ಷ ರೂಪಾಯಿ, ಧಾರವಾಡ ತಾಲ್ಲೂಕಿನಲ್ಲಿ 1.40 ಕೋಟಿ ರೂಪಾಯಿ ಹಾಗೂ ಕಲಘಟಗಿ ತಾಲ್ಲೂಕಿನಲ್ಲಿ 2.5 ಕೋಟಿ ರೂಪಾಯಿ ಕಾರ್ಮಿಕರ ಕೂಲಿ ಪಾವತಿ ಬಾಕಿ ಉಳಿದಿದೆ.ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ: ಸರ್ಕಾರ ಹಣ ಬಿಡುಗಡೆ ಮಾಡಿದಾಗ ಬಾಕಿ ಪಾವತಿಸಲಾಗುವುದು ತಡವಾಗಿ ಬಿಲ್ ಪಡೆಯುವ ಸಾಮರ್ಥ್ಯ ಇದ್ದವರು ಮಾತ್ರ ಉದ್ಯೋಗ ಖಾತರಿಯಡಿ ಕೆಲಸ ಕೈಗೆತ್ತಿಕೊಳ್ಳುವಂತೆ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡಿರುವುದಾಗಿ ಹೇಳುವ ಹುಬ್ಬಳ್ಳಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಎಚ್.ಡಿ.ಗಂಗಲ್, `ಕಾಯುವ ತಾಳ್ಮೆ ಇಲ್ಲದವರು ಕೆಲಸ ನಿಲ್ಲಿಸಿದ್ದಾರೆ. ಯೋಜನೆಯ ಅನುಷ್ಠಾನದ ಮೂಲ ಉದ್ದೇಶಕ್ಕೆ ಧಕ್ಕೆ ಬರಬಾರದು ಎಂಬುದು ನಮ್ಮ ಆಶಯ. ಆ ನಿಟ್ಟಿನಲ್ಲಿ ತಾ.ಪಂನ ಬೇರೆ ಬಾಬ್ತಿನಲ್ಲಿ ಹಣ ನೀಡಬಹುದಿತ್ತು. ಆದರೆ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಾಕಿ ಭರಿಸಲು ಸಾಧ್ಯವಿಲ್ಲ. ನಾವು ಅಸಹಾಯಕರು~ ಎನ್ನುತ್ತಾರೆ.ಸಮನ್ವಯದ ಕೊರತೆ: ಉದ್ಯೋಗ ಖಾತರಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಕಳೆದ ಮಾರ್ಚ್ 15ರಂದು ರಾಜ್ಯದ ಪಾಲು ಬಿಡುಗಡೆಯಾಗಿದೆ. ರಾಜ್ಯದಲ್ಲಿ ಯೋಜನೆಯ ಉಸ್ತುವಾರಿ ಘಟಕ ಹಾಗೂ ಪಂಚಾಯತ್‌ರಾಜ್ ಇಲಾಖೆಯ ನಡುವಿನ ಸಮನ್ವಯ ಕೊರತೆಯಿಂದ ಅನುದಾನ ಜಿಲ್ಲೆಗಳಿಗೆ ತಲುಪಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಜಿ.ಪಂ. ಅಧಿಕಾರಿಯೊಬ್ಬರು ಹೇಳುತ್ತಾರೆ.ಶೀಘ್ರ ಬಿಡುಗಡೆ: ಹಣ ಬಿಡುಗಡೆಯಾಗದೆ ಉದ್ಯೋಗ ಖಾತರಿ ಅನುಷ್ಠಾನಕ್ಕೆ ತೊಂದರೆಯಾಗಿದೆ ಎಂದು ಒಪ್ಪಿಕೊಳ್ಳುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಪಿ.ಎ.ಮೇಘಣ್ಣವರ್, `ಹೊಸದಾಗಿ ಯಾವುದೇ ಕೆಲಸ ಆರಂಭಿಸಿಲ್ಲ. ಹಳೆಯ ಕೆಲಸಗಳನ್ನೇ ಪೂರೈಸಲು ಸೂಚಿಸಿದ್ದೇವೆ. ಇದು ನಮ್ಮ ಜಿಲ್ಲೆಯೊಂದರ ಪ್ರಶ್ನೆಯಲ್ಲ. ಹಲವು ಜಿಲ್ಲೆಗಳಿಗೆ ರೂ 20 ಕೋಟಿಯಷ್ಟು ಬಾಕಿ ಬರಬೇಕಿದೆ. ತಾಂತ್ರಿಕ ಕಾರಣಗಳಿಂದಾಗಿ ಹಣ ಬಿಡುಗಡೆ ತಡವಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರ ಗಮನ ಸೆಳೆದಿದ್ದೇವೆ. ಅವರು ಆ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಇನ್ನೊಂದು ವಾರದೊಳಗೆ ಹಣ ಬಿಡುಗಡೆಯಾಗಲಿದೆ~ ಎನ್ನುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.