ಉದ್ಯೋಗ ಖಾತರಿ ಯೋಜನೆ ಜಾರಿಯಲ್ಲಿ ಅಕ್ರಮ...

ಶನಿವಾರ, ಜೂಲೈ 20, 2019
22 °C

ಉದ್ಯೋಗ ಖಾತರಿ ಯೋಜನೆ ಜಾರಿಯಲ್ಲಿ ಅಕ್ರಮ...

Published:
Updated:

ಬೆಂಗಳೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಎನ್‌ಆರ್‌ಇಜಿ) ಜಾರಿಯಲ್ಲಿ ಅಕ್ರಮ ಎಸಗಿದ ಮಂಡ್ಯ ಜಿಲ್ಲೆಯ ಎಲ್ಲ ಏಳು ತಾಲ್ಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು (ಇ.ಓ) ಸೇರಿದಂತೆ ಒಟ್ಟು ಒಂಬತ್ತು ಮಂದಿಯನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ.ಏಳು ಮಂದಿ ಪೈಕಿ ಕೆ.ಆರ್.ಪೇಟೆ ತಾಪಂ ಇ.ಓ ಎಚ್.ಆರ್.ನಾಗೇಗೌಡ ಅವರನ್ನು ಹೊರತುಪಡಿಸಿದರೆ ಉಳಿದ ಆರು ಮಂದಿಯೂ ಪ್ರಸ್ತುತ ಬೇರೆ ಜಾಗಗಳಿಗೆ ವರ್ಗವಾಗಿದ್ದು, ಅವರು ಈ ಹಿಂದಿನ ಹುದ್ದೆಯಲ್ಲಿದ್ದಾಗ ಅಕ್ರಮ ಎಸಗಿರುವುದು ಸಾಬೀತಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ್ ಬುಧವಾರ ಇಲ್ಲಿ ತಿಳಿಸಿದರು.ಮಂಡ್ಯ ತಾಪಂನ ಹಿಂದಿನ ಇ.ಓ ಡಾ.ಬಿ.ಎನ್.ಷಡಕ್ಷರಮೂರ್ತಿ, ಮದ್ದೂರು ತಾಪಂನ ಹಿಂದಿನ ಇ.ಓ. ಡಾ.ಎಸ್.ಪ್ರೇಮಕುಮಾರ್, ಮಳವಳ್ಳಿ ತಾಪಂನ ಹಿಂದಿನ ಇ.ಓ ಎಂ.ಪುಟ್ಟಸ್ವಾಮಿ, ಶ್ರೀರಂಗಪಟ್ಟಣದ ಹಿಂದಿನ ಇ.ಓ ಎಸ್.ವಿ.ಪದ್ಮನಾಭ, ಪಾಂಡವಪುರದ ಹಿಂದಿನ ಇ.ಓ ಕೆ.ಸಿ.ಕೃಷ್ಣ, ನಾಗಮಂಗಲ ತಾಪಂನ ಹಿಂದಿನ ಇ.ಓ ಬಿ.ಎಲ್.ಈಶ್ವರಪ್ರಸಾದ್, ಕೆ.ಆರ್.ಪೇಟೆ ತಾಪಂ ಇ.ಓ ಎಚ್.ಆರ್.ನಾಗೇಗೌಡ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ವಿವರಿಸಿದರು.ಈ ಅಧಿಕಾರಿಗಳು ಸೌರಶಕ್ತಿ ಯುಪಿಎಸ್, ಪ್ರಚಾರ ಸಾಮಗ್ರಿ ಸೇರಿದಂತೆ ಇತರ ವಸ್ತುಗಳ ಖರೀದಿಯಲ್ಲಿ ಅಕ್ರಮ ಎಸಗಿದ್ದಾರೆ. ಸುವರ್ಣ ಗ್ರಾಮೋದಯ ಯೋಜನೆಯಡಿಯಲ್ಲಿ ತ್ಯಾಜ್ಯ ವಸ್ತುಗಳ ವಿಲೇವಾರಿ ಸಲುವಾಗಿ ಭೂಮಿ ಖರೀದಿಸಲು ಮೀಸಲಿಟ್ಟಿದ್ದ ಅನುದಾನದಲ್ಲಿ ಅವ್ಯವಹಾರ ನಡೆಸಿರುವುದು ಕೂಡ ಪತ್ತೆಯಾಗಿದೆ.

 

ಒಟ್ಟಿನಲ್ಲಿ ಪಾರದರ್ಶಕ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ಎಸಗಲಾಗಿದೆ. ಈ ಕುರಿತು ಮಂಡ್ಯ ಜಿಲ್ಲಾ ಪಂಚಾಯಿತಿ ಸಿ.ಇ.ಓ ನೀಡಿದ ವರದಿ ಆಧಾರದ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.

ಇದೇ ರೀತಿ ಕೊಳ್ಳೇಗಾಲ ತಾಪಂ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೆಲಸ ಮಾಡಿದ್ದ ಸಿದ್ಧಲಿಂಗಮೂರ್ತಿ ಅವರನ್ನೂ ಅಮಾನತು ಮಾಡಲಾಗಿದೆ.ಇವರು ಪ್ರಸ್ತುತ ಮಂಡ್ಯ ಜಿಪಂನಲ್ಲಿ ಸಹಾಯಕ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಕರ್ತವ್ಯ ಲೋಪ ಮತ್ತು ಹಣ ದುರುಪಯೋಗದ ಆರೋಪ ಇದ್ದು, ಆ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ಹೇಳಿದರು.ಲೋಕಾಯುಕ್ತ ಬಲೆಗೆ ಬಿದ್ದಿದ್ದ ಬೆಂಗಳೂರು ದಕ್ಷಿಣ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಶ್ವತ್ಥರೆಡ್ಡಿ ಅವರನ್ನೂ ಅಮಾನತು ಮಾಡಲಾಗಿದೆ ಎಂದು ವಿವರಿಸಿದರು.`ಎಂಎನ್‌ಆರ್‌ಇಜಿ ಯೋಜನೆಯನ್ನು ಅಚ್ಚುಕಟ್ಟಾಗಿ ಜಾರಿ ಮಾಡಬೇಕು. ಯಾರು ಶ್ರದ್ಧೆ ವಹಿಸಿ ಕೆಲಸ ಮಾಡುವುದಿಲ್ಲವೊ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಈ ವಿಚಾರದಲ್ಲಿ ಇದುವರೆಗೂ 300 ಮಂದಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ~ ಎಂದು ಹೇಳಿದರು.ಪ್ರಗತಿ ಪರಿಶೀಲನೆ: ಗ್ರಾಮೀಣಾಭಿವೃದ್ಧಿ ಯೋಜನೆಗಳ ಅನುಷ್ಠಾನದ ಪ್ರಗತಿ ಕುರಿತು ಪರಿಶೀಲಿಸಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗುತ್ತಿದೆ. ಇದೇ 17ರಿಂದ 20ರವರೆಗೆ ಗುಲ್ಬರ್ಗ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗುವುದು ಎಂದರು.ಎಂಎನ್‌ಆರ್‌ಇಜಿ ಯೋಜನೆಯಡಿ ಕೆಲಸ ಮಾಡಿದವರಿಗೆ 15 ದಿನಗಳಲ್ಲಿ ಹಣ ನೀಡಬೇಕೆನ್ನುವ ಸೂಚನೆ ನೀಡಲಾಗಿದೆ. ಕೆಲವು ಕಡೆ ವಿಳಂಬವಾಗುತ್ತಿದ್ದು, ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿದರು.ಕರ್ತವ್ಯಕ್ಕೆ ಹಾಜರಾಗಿದ್ದ 2500 ಮಂದಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪೈಕಿ 100 ಮಂದಿ ರಾಜೀನಾಮೆ ನೀಡಿದ್ದಾರೆ. ಪಿಡಿಓ ಅಧಿಕಾರಿಗಳ ನೇಮಕದ ನಂತರ ಆಡಳಿತದಲ್ಲಿ ಬಹಳಷ್ಟು ಸುಧಾರಣೆಯಾಗಿದೆ. ಹೀಗಾಗಿ ಇನ್ನೂ 1400 ಪಿಡಿಓಗಳನ್ನು ಈ ವರ್ಷದಲ್ಲಿ ನೇಮಕ ಮಾಡಿಕೊಳ್ಳಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry