ಉದ್ಯೋಗ ಖಾತರಿ ಯೋಜನೆ: ಬಂದಿದ್ದು 52 ಕೋಟಿ; ಖರ್ಚಾಗಿದ್ದು 12 ಕೋಟಿ

7

ಉದ್ಯೋಗ ಖಾತರಿ ಯೋಜನೆ: ಬಂದಿದ್ದು 52 ಕೋಟಿ; ಖರ್ಚಾಗಿದ್ದು 12 ಕೋಟಿ

Published:
Updated:

ಯಾದಗಿರಿ: ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಜಿಲ್ಲೆಯಲ್ಲಿ ಸಾಕಷ್ಟು ಸುದ್ದಿ ಮಾಡುತ್ತಲೇ ಇದೆ. ಕೆಲಸವನ್ನೇ ಮಾಡದೇ ಹಣ ಎತ್ತಿ ಹಾಕುವ ಪ್ರಯತ್ನ ಒಂದೆಡೆಯಾದರೆ, ಬೇರೆ ಯೋಜನೆಗಳ ಅಡಿಯಲ್ಲಿ ಆಗಿರುವ ಕಾಮಗಾರಿಗಳನ್ನೇ ಉದ್ಯೋಗ ಖಾತರಿಯಲ್ಲಿ ತೋರಿಸಿರುವ ಉದಾಹಣೆಗಳೂ ಸಾಕಷ್ಟಿವೆ.ಇದೆಲ್ಲದರ ಪರಿಣಾಮ ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಜನರಲ್ಲಿಯೂ ವಿಶ್ವಾಸ ಕಡಿಮೆ ಆಗುತ್ತಿದೆ. ಈ ವರ್ಷದ ಅಂಕಿ-ಅಂಶಗಳು ಇದಕ್ಕೆ ಪುಷ್ಠಿ ನೀಡುವಂತಿದೆ. ಈ ಬಾರಿ ಉದ್ಯೋಗ ಖಾತರಿ ಯೋಜನೆಯಡಿ ರೂ. 52 ಕೋಟಿ ಲಭ್ಯವಿದ್ದು, ಆರ್ಥಿಕ ವರ್ಷ ಅರ್ಧ ಮುಗಿದು ಹೋದರೂ ಕೇವಲ ರೂ. 12 ಕೋಟಿ ಮಾತ್ರ ಖರ್ಚಾಗಿದೆ.ಕಳೆದ ವರ್ಷವೂ ಸುಮಾರು ರೂ. 14.92 ಕೋಟಿ ಖರ್ಚಾಗದೇ ಉಳಿದಿದ್ದು, ಈ ವರ್ಷ 37.06 ಕೋಟಿ ಬಿಡುಗಡೆ ಆಗಿದೆ. ಒಟ್ಟಾರೆ 52.04 ಕೋಟಿ ಹಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಗೆ ಬಂದಿದೆ. ಇದರಲ್ಲಿ ರೂ. 11.74 ಕೋಟಿ ಮಾತ್ರ ಖರ್ಚಾಗಿದ್ದು, ಇನ್ನೂ ರೂ. 40.30 ಕೋಟಿ ಖರ್ಚಾಗಬೇಕಾಗಿದೆ. ಅರ್ಧದಷ್ಟೂ ಹಣ ಖರ್ಚಾಗದೇ ಇರುವುದು ಯೋಜನೆಯ ಬಗ್ಗೆ ಕಾರ್ಮಿಕರೂ ವಿಶ್ವಾಸ ಕಳೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಲಾಗುತ್ತಿದೆ.ಶಹಾಪುರ ತಾಲ್ಲೂಕಿಗೆ ಹಿಂದಿನ ಬಾಕಿ ರೂ.4.91 ಕೋಟಿ, ಈ ವರ್ಷ ರೂ.11.58 ಕೋಟಿ ಸೇರಿದಂತೆ ಒಟ್ಟು ರೂ.16.49 ಕೋಟಿ ಅನುದಾನವಿದೆ.ಸುರಪುರ ತಾಲ್ಲೂಕಿನಲ್ಲಿ ಕಳೆದ ವರ್ಷ 5.06 ಕೋಟಿ ಬಾಕಿ ಉಳಿದಿದ್ದು, ಈ ವರ್ಷ ರೂ.5.03 ಕೋಟಿ ಸೇರಿದಂತೆ ಒಟ್ಟು 10.15 ಕೋಟಿ ಅನುದಾನ ಒದಗಿಸಲಾಗಿದೆ. ಯಾದಗಿರಿ ತಾಲ್ಲೂಕಿನಲ್ಲಿ ಕಳೆದ ವರ್ಷದ ರೂ.4.95 ಕೋಟಿ ಹಾಗೂ ಈ ವರ್ಷದ ರೂ.20.45 ಕೋಟಿ ಸೇರಿದಂತೆ 25.40 ಕೋಟಿ ಅನುದಾನ ನೀಡಲಾಗಿದೆ.ಕೂಲಿ ಕಾರ್ಮಿಕರ ಕೊರತೆ:

ಕೆಲವೊಂದು ಪಂಚಾಯಿತಿಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಲು ಕಾರ್ಮಿಕರೇ ಮುಂದೆ ಬರುತ್ತಿಲ್ಲ ಎಂಬ ಗೋಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳದ್ದು. ಕಳೆದ ಎರಡು ವರ್ಷಗಳ ಹಿಂದಿನ ಕೂಲಿಯೇ ಇನ್ನೂ ಸಿಗದೇ ಇರುವುದರಿಂದ ಬಹುತೇಕ ಕೂಲಿ ಕಾರ್ಮಿಕರು, ಉದ್ಯೋಗ ಖಾತರಿ ಮೇಲಿನ ವಿಶ್ವಾಸ ಬಿಟ್ಟು, ನಗರ, ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ಹೀಗಾಗಿ ಉದ್ಯೋಗ ಖಾತರಿ ಯೋಜನೆಗೆ ಕಾರ್ಮಿಕರ ಕೊರತೆಯೂ ಕಾಡುತ್ತಿದೆ.ಸುರಪುರ ತಾಲ್ಲೂಕಿನಲ್ಲಿ ರೂ.16.49 ಕೋಟಿಯಲ್ಲಿ ಇದುವರೆಗೆ ರೂ. 1.53 ಕೋಟಿ ಖರ್ಚಾಗಿದ್ದು, ಇನ್ನೂ ರೂ.14.69 ಕೋಟಿ ಹಣ ಉಳಿದಿದೆ. ಸುರಪುರ ತಾಲ್ಲೂಕಿನಲ್ಲಿ ರೂ.10.15 ಕೋಟಿಯ ಪೈಕಿ, ರೂ. 3.83 ಕೋಟಿ ಖರ್ಚಾಗಿದ್ದು, ರೂ. 6.31 ಕೋಟಿ ಖರ್ಚಾಗದೇ ಉಳಿದಿದೆ.ಯಾದಗಿರಿ ತಾಲ್ಲೂಕಿನಲ್ಲಿ ರೂ.25.40 ಕೋಟಿ ಹಣವಿದ್ದು, ಅದರಲ್ಲಿ ರೂ.6.37 ಕೋಟಿ ಮಾತ್ರ ಖರ್ಚಾಗಿದ್ದು, ಇನ್ನೂ 19.02 ಕೋಟಿ ಹಣ ಉಳಿದಿದೆ.ಖಾತೆ ತೆರೆಯದ ಪಂಚಾಯಿತಿಗಳು: ಸುರಪುರ ತಾಲ್ಲೂಕಿನಲ್ಲಿ ಮಾತ್ರ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿಗಳು ಆರಂಭವಾಗಿದ್ದು, ಶಹಾಪುರ ಮತ್ತು ಯಾದಗಿರಿ ತಾಲ್ಲೂಕಿನ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಇದುವರೆಗೂ ಕಾಮಗಾರಿಯೇ ಆರಂಭಗೊಂಡಿಲ್ಲ.ಯಾದಗಿರಿ ತಾಲ್ಲೂಕಿನ ಅಲ್ಲಿಪೂರ, ಅರಕೇರಾ ಬಿ, ಬೆಳಗುಂದಿ, ಚಿನ್ನಾಕಾರ, ಹಳಗೇರಾ, ಕಡೇಚೂರು, ಕಾಕಲವಾರ, ಪುಟ್‌ಪಾಕ್, ರಾಮಸಮುದ್ರ, ಯಲ್ಹೇರಿ ಪಂಚಾಯಿತಿಗಳಲ್ಲಿ ಇದುವರೆಗೂ ಒಂದು ಪೈಸೆಯನ್ನು ಖರ್ಚು ಮಾಡಿಲ್ಲ. ಅದೇ ರೀತಿ ಶಹಾಪುರ ತಾಲ್ಲೂಕಿನ ಬೆಂಡೆಬೆಂಬಳಿ, ಚಟ್ನಳ್ಳಿ, ಗುಲಸರಂ, ಕಾಡಂಗೇರಾ, ಸಗರ ಬಿ, ತಡಿಬಿಡಿ, ವನದುರ್ಗ ಗ್ರಾಮ ಪಂಚಾಯಿತಿಗಳಲ್ಲೂ ಯಾವುದೇ ಹಣ ಖರ್ಚಾಗಿಲ್ಲ.ಜಿಲ್ಲೆಯಾದ್ಯಂತ ಅನೇಕ ಗ್ರಾಮಗಳು ಈಗಲೂ ಮೂಲಸೌಲಭ್ಯಗಳ ಕೊರತೆಯಿಂದ ನಲುಗುತ್ತಿವೆ.

ಉದ್ಯೋಗ ಖಾತರಿ ಯೋಜನೆಯಡಿ ಇಷ್ಟೊಂದು ಹಣ ಇದ್ದರೂ, ಅದರ ಪ್ರಯೋಜನ ಮಾತ್ರ ಗ್ರಾಮಗಳಿಗೆ ಸಿಗದೇ ಇರುವುದು ವಿಪರ್ಯಾಸ ಎಂದು ಹೇಳಲಾಗುತ್ತಿದೆ. ಇದೆಲ್ಲದರ ಮಧ್ಯೆ ಗ್ರಾಮಗಳ ಅಭಿವೃದ್ಧಿಗೆ ಹಣವೇ ಇಲ್ಲ ಎಂದು ಗೋಗರೆಯುವ ಜನಪ್ರತಿನಿಧಿಗಳು, ಯೋಜನೆಯ ಸಮರ್ಪಕ ಅನುಷ್ಠಾನ ಮಾಡುವ ಮೂಲಕ ಅನುದಾನವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಾರ್ವಜನಿಕರು ಸಲಹೆ ಮಾಡುತ್ತಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry