ಉದ್ಯೋಗ ಖಾತರಿ: ರೂ. 171 ಕೋಟಿ ಬಾಕಿ!

7
ದುಡಿದ ಕೈಗಳಿಗೆ ಕೂಲಿ ನೀಡದ ಸರ್ಕಾರ

ಉದ್ಯೋಗ ಖಾತರಿ: ರೂ. 171 ಕೋಟಿ ಬಾಕಿ!

Published:
Updated:
ಉದ್ಯೋಗ ಖಾತರಿ: ರೂ. 171 ಕೋಟಿ ಬಾಕಿ!

ಮೈಸೂರು: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ರಾಜ್ಯ ಸರ್ಕಾರ ಕೂಲಿ ಕಾರ್ಮಿಕರಿಗೆ ನೀಡಬೇಕಾದ ಬಾಕಿ ಹಣ ಎಷ್ಟು ಗೊತ್ತೇ? ಬರೋಬ್ಬರಿ ರೂ.170.65 ಕೋಟಿ!ಮೂರು ತಿಂಗಳಿಂದ ಉದ್ಯೋಗ ಖಾತರಿ ಯೋಜನೆಗೆ ಸರ್ಕಾರ ಬಿಡಿಗಾಸನ್ನೂ ಮಂಜೂರು ಮಾಡಿಲ್ಲ.ಸರ್ಕಾರವನ್ನೇ ನಂಬಿ ದುಡಿದ ಲಕ್ಷಾಂತರ ಕೈಗಳು ಈಗ ಕೂಲಿಗಾಗಿ `ಕೈಚಾಚುವ' ಪರಿಸ್ಥಿತಿ ಬಂದಿದೆ. ಜನರ ವಲಸೆ ತಡೆಯಲು ಉದ್ಯೋಗ ಖಾತರಿ ಯೋಜನೆ ಜಾರಿ ಮಾಡಲಾಗಿದೆ. ಆದರೆ, ಮಣ್ಣುಹೊತ್ತ ಕೈಗಳಿಗೆ ಹಣ ಬಾರದಿದ್ದಾಗ ಜನ ಈಗ ಮತ್ತೆ ವಲಸೆ ದಾರಿ ಹಿಡಿದಿದ್ದಾರೆ.ಯೋಜನೆ ಅಡಿ ಈ ಹಿಂದೆ 100 ದಿನ ಕೆಲಸ ನೀಡಲಾಗುತ್ತಿತ್ತು. ಈ ಬಾರಿ ಬರಗಾಲ ಮತ್ತಷ್ಟು ಭೀಕರವಾದ್ದರಿಂದ ಕೆಲಸದ ದಿನಗಳನ್ನು 150ಕ್ಕೆ ಹೆಚ್ಚಿಸಲಾಗಿದೆ. ತಲಾ ರೂ. 150 ದಿನಗೂಲಿ. ಈಗಾಗಲೇ `ಜಾಬ್‌ಕಾರ್ಡ್' ಹೊಂದಿರುವ ಲಕ್ಷಾಂತರ ಜನ ಸರಿಸುಮಾರು 100 ದಿನ ಕೆಲಸ ಮಾಡಿದ್ದಾರೆ. ಆದರೆ, ಇವರಿಗೆ ಕೂಲಿ ಹಣ ನೀಡಲು ಗ್ರಾಮ ಪಂಚಾಯಿತಿಗಳಲ್ಲಿ ಅನುದಾನವೇ ಇಲ್ಲ. ಮತ್ತೆ ಕೆಲವು ಪಂಚಾಯಿತಿಗಳಲ್ಲಿ ಅನುದಾನವಿದ್ದೂ ಕೂಲಿ ಹಣ ಬಾಕಿ ಉಳಿಸಿಕೊಳ್ಳಲಾಗಿದೆ. ಕೆಲವು ಜಿಲ್ಲೆಗಳಲ್ಲಿ 100 ದಿನ ಕೆಲಸವನ್ನೂ ನೀಡಲಾಗಿಲ್ಲ. ಕೆಲಸ ಮಾಡಿದವರು ಪ್ರತಿ ದಿನ ಗ್ರಾಮ ಪಂಚಾಯಿತಿಗೆ ಅಲೆದಾಡಬೇಕಾಗಿದೆ. ಜನರಿಗೆ ಉತ್ತರ ನೀಡಲಾಗದೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) `ಮುಖ ತಪ್ಪಿಸು'ತ್ತಿದ್ದಾರೆ.ಅನುದಾನ ನಿಲ್ಲಿಸಲು ಕಾರಣವೇನು?: ಕಾರ್ಮಿಕರ ಹಣ ನೀಡಲು ಸರ್ಕಾರ ಇಎಫ್‌ಎಂಎಸ್ (ಎಲೆಕ್ಟ್ರಾನಿಕ್ ಫಂಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್) ಜಾರಿ ಮಾಡಿದೆ. ಕಾರ್ಮಿಕರ ಬ್ಯಾಂಕ್ ಖಾತೆಗೆ ನೇರವಾಗಿ (ಆನ್‌ಲೈನ್) ಹಣ ಸಂದಾಯ ಮಾಡುವುದು ಇದರ ಉದ್ದೇಶ. ಇದಕ್ಕಾಗಿ ಪ್ರತಿಯೊಬ್ಬ ಕಾರ್ಮಿಕ, ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಖಾತೆ ಹೊಂದುವುದು ಅನಿವಾರ್ಯ. ಅಲ್ಲಿಯವರೆಗೆ ಅನುದಾನ ನೀಡದಿರಲು ಅಧಿಕಾರಿಗಳು ನಿರ್ಧರಿಸಿದ್ದಾರೆ.ಸದ್ಯ ಕಾರ್ಮಿಕರು ಪೋಸ್ಟ್ ಆಫೀಸ್, ಗ್ರಾಮೀಣ ಸಹಕಾರ ಬ್ಯಾಂಕುಗಳಲ್ಲಿ ಖಾತೆ ತೆರೆದಿದ್ದಾರೆ. ಒಂದೊಂದು ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ 500 ರಿಂದ 1000 ಖಾತೆಗಳಿವೆ. ರಾಷ್ಟ್ರೀಕೃತ ಬ್ಯಾಂಕಿನಲ್ಲಿ ರಾಜ್ಯದ ಎಲ್ಲ ಖಾತೆಗಳನ್ನು ತೆರೆಯಲು ತಿಂಗಳುಗಳೇ ಬೇಕು. ಅಲ್ಲಿಯವರೆಗೆ ಕಾರ್ಮಿಕರಿಗೆ ಏನು ಹೇಳುವುದು. ಹಣ ನೀಡದಿದ್ದರೆ ಯಾರು ಕೆಲಸ ಮಾಡುತ್ತಾರೆ ಎಂದು `ಪಿಡಿಒ'ಗಳು ಪ್ರಶ್ನಿಸುತ್ತಾರೆ.ಯೋಜನೆಯ ಅಂಕಿ-ಅಂಶಗಳನ್ನು ಪ್ರತಿದಿನ `ಎಂಐಎಸ್' (ಮ್ಯಾನೇಜ್‌ಮೆಂಟ್ ಇನ್‌ಫರ್ಮೇಶನ್ ಸಿಸ್ಟಮ್) ನಲ್ಲಿ ಅಳವಡಿಸಲಾಗುತ್ತದೆ. ಮೇಲಧಿಕಾರಿಗಳು ಇದನ್ನು ತಪ್ಪದೇ ಪರಿಶೀಲನೆ ಮಾಡುತ್ತಾರೆ. ಕೂಲಿಕಾರರ ಸಂಖ್ಯೆ, ಮಾಡಿಸಿದ ಕೆಲಸ, ಕೊಡಬೇಕಾದ ಕೂಲಿ ಹಣ, ಇರುವ ಅನುದಾನ, ಬಾಕಿ ಬಗ್ಗೆ ಸಂಪೂರ್ಣ ಮಾಹಿತಿ ಅಧಿಕಾರಿಗಳಿಗೆ ಆಯಾ ದಿನವೇ ತಲುಪುತ್ತದೆ.ತಾಂತ್ರಿಕ ಗೊಂದಲಗಳು: ಮಾರ್ಚ್ 31ಕ್ಕೆ ಪ್ರಸಕ್ತ ಆರ್ಥಿಕ ವರ್ಷ ಮುಗಿಯುತ್ತದೆ. ಬಾಕಿ ಉಳಿದ ಬಿಲ್ಲುಗಳೆಲ್ಲ ಮುಂದಿನ ಆರ್ಥಿಕ ವರ್ಷಕ್ಕೆ ಪರಿಗಣಿಲಾಗುತ್ತದೆ. ಅಷ್ಟೊತ್ತಿಗೆ ಮಳೆಯಾದರೆ ಕೆರೆಯ ಬದು, ಹೊಲಗಳ ಒಡ್ಡು, ಕೃಷಿ ಹೊಂಡ ಎಲ್ಲವೂ ಒಡೆಯುವ ಸಾಧ್ಯತೆ ಇರುತ್ತದೆ. ಆಗ ಸ್ಥಳ ಪರಿಶೀಲನೆಗೆ ಬರುವ ಅಧಿಕಾರಿಗಳಿಗೆ ಏನು ತೋರಿಸುವುದು ಎಂದೂ ಅವರು ಕೇಳುತ್ತಾರೆ. `ಎಂಐಎಸ್'ನಲ್ಲಿ ಮಾಡಿದ ನೋಂದಣಿಗೂ ಪರಿಶೀಲನೆಯಲ್ಲಿ ಕಂಡುಬಂದ ಕೆಲಸಕ್ಕೂ ಹೊಂದಾಣಿಕೆ ಆಗುವುದಿಲ್ಲ.ಇದರಿಂದ `ಕೆಲಸ ಮಾಡಿಸದೇ ಬಿಲ್ ಕೇಳುತ್ತೀರಾ' ಎಂಬ ಆರೋಪವನ್ನೂ ಹೊರಬೇಕು. ಇದೇ ರೀತಿಯ ತಾಂತ್ರಿಕ ಗೊಂದಲಗಳಿಂದಾಗಿ ರಾಜ್ಯದ ಬಹುಪಾಲು ಗ್ರಾಮ ಪಂಚಾಯಿತಿಗಳಲ್ಲಿ 2009ನೇ ಸಾಲಿನಿಂದ ಇಲ್ಲಿವರೆಗೂ ಬಿಲ್‌ಗಳು ಕೂಡ ಬಾಕಿ ಉಳಿದಿವೆ. ಆದ್ದರಿಂದ ಆಯಾ ವರ್ಷದ ಅನುದಾನ ಪೂರ್ತಿಯಾಗಿ ಆಯಾ ವರ್ಷಕ್ಕೇ ಬಂದರೆ ಎಲ್ಲ ಗೊಂದಲಗಳ ನಿವಾರಣೆ ಸಾಧ್ಯ ಎಂಬುದು `ಪಿಡಿಒ'ಗಳ ಮಾತು.ಅಗತ್ಯ ಇದ್ದವರಿಗಾದರೂ ನೀಡಿ: ಬರಗಾಲದ ಹೊಡೆತ ಭೀಕರವಾಗಿರುವ ಜಿಲ್ಲೆಗಳಲ್ಲಿಯೇ ಹೆಚ್ಚು ಹಣ ಬಾಕಿ ಉಳಿದಿದೆ (ಕೋಷ್ಟಕ ನೋಡಿ). ಕೇಂದ್ರ ಸರ್ಕಾರದ ಪಾಲಿನ  ರೂ. 600 ಕೋಟಿ ಆಗಲೇ ಬಿಡುಗಡೆಯಾಗಿದೆ. ಗ್ರಾಮ ಪಂಚಾಯಿತಿ ಯಾವುದೇ ಅನುದಾನ ಬಾಕಿ ಇಟ್ಟುಕೊಳ್ಳಕೂಡದು. ಬಾಕಿ ಇದ್ದರೆ ಅದು ಖಾಲಿಯಾಗುವವರೆಗೂ ಹೊಸ ಅನುದಾನ ನೀಡುವುದಿಲ್ಲ ಎಂಬುದು ಮೇಲಧಿಕಾರಿಗಳ ತಾಕೀತು. ಆದರೆ, ಇದನ್ನು ಎಲ್ಲ ಪಂಚಾಯಿತಿಗಳಿಗೂ ಅನ್ವಯಿಸುವುದು ಸರಿಯಲ್ಲ. ಎಲ್ಲಿ ಹಣ ಇಲ್ಲವೋ ಆ ಪಂಚಾಯಿತಿಗಾದರೂ ಅನುದಾನ ನೀಡಬೇಕು ಎಂಬುದು ಪಂಚಾಯಿತಿಗಳ ಒತ್ತಾಯವಾಗಿದೆ.

  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry