ಉದ್ಯೋಗ ಖಾತ್ರಿಯಲ್ಲಿ ಭ್ರಷ್ಟಾಚಾರ: ಮತ್ತಿಹಳ್ಳಿ

7

ಉದ್ಯೋಗ ಖಾತ್ರಿಯಲ್ಲಿ ಭ್ರಷ್ಟಾಚಾರ: ಮತ್ತಿಹಳ್ಳಿ

Published:
Updated:

ಹಾವೇರಿ:  `ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಚಾರ ನಡೆಯುತ್ತಿದೆ ಎನ್ನುವುದಕ್ಕೆ ಬ್ಯಾಡಗಿ ತಾಲ್ಲೂಕಿನ ತಡಸ ಗ್ರಾಮ ಪಂಚಾಯಿತಿಯಲ್ಲಿ ನಡೆದ ಅವ್ಯವಹಾರಗಳೇ ಸಾಕ್ಷಿ~ ಎಂದು ಜಿಲ್ಲಾ ಒಂಬಡ್ಸ್‌ಮನ್ ಎಸ್.ಸಿ. ಮತ್ತಿಹಳ್ಳಿ ತಿಳಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಡಸ ಗ್ರಾ.ಪಂ.ನಲ್ಲಿ 2009-10ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಲ್ಲಿ 12,68,344 ರೂ. ದುರುಪಯೋಗವಾಗಿದ್ದು, ಅದನ್ನು ತಕ್ಷಣವೇ ವಸೂಲಿ ಮಾಡಬೇಕು ಹಾಗೂ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಸರ್ಕಾರಕ್ಕೆ ವರದಿ ಸಲ್ಲಿಸಿರುವುದಾಗಿ ತಿಳಿಸಿದರು.ತಡಸ ಗ್ರಾ.ಪಂ.ನಲ್ಲಿ ಕೈಗೊಂಡ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಣದ ದುರ್ಬಳಕೆಯಾಗಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ವಿಚಾರಣೆ ಕೈಗೊಂಡಾಗ ಕಾಮಗಾರಿ ಅನುಷ್ಠಾನದಲ್ಲಿ ಮಾರ್ಗಸೂಚಿ ನಿಯಮಗಳನ್ನು ಅನುಸರಿಸದೇ ಇರುವುದು, ಚೆಕ್ ಮೂಲಕ ಹಣ ನೀಡಿ ನಂತರದಲ್ಲಿ ದಾಖಲೆಗಳನ್ನು ಸೃಷ್ಠಿಸಿರುವುದು ಹಾಗೂ ಕೆಲಸ ಮಾಡಿರುವ ಕಾರ್ಮಿಕರ ಪಟ್ಟಿಗೆ ಹಣ ಸಂದಾಯವಾಗದೇ ಕೇವಲ ಕೆಲವೇ ಕೆಲವು ಜನರಿಗೆ ಹಣ ಪಾವತಿ ಮಾಡಿರುವುದು ಕಂಡು ಬಂದಿದೆ. ಹೀಗಾಗಿ ದುರುಪಯೋಗವಾದ ಒಟ್ಟು 12,68,344 ರೂ.ಗಳನ್ನು ವಸೂಲಿ ಮಾಡುವಂತೆ ಸರ್ಕಾ ರಕ್ಕೆ ಸಲ್ಲಿಸಿರುವ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ ಎಂದರು.20 ಪಟ್ಟು ಹೆಚ್ಚು ಕೂಲಿ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿಯಾಗಿ ಸೇರ್ಪಡೆಯಾದ ವ್ಯಕ್ತಿಗೆ ಒಂದು ವರ್ಷದಲ್ಲಿ ನೂರು ದಿನ ಮಾತ್ರ ಕೆಲಸ ನೀಡಲು ಹಾಗೂ ಅದಕ್ಕಾಗಿ ಪ್ರತಿ ದಿನ 125 ರೂ.ಗಳಂತೆ ಒಟ್ಟು 12,500 ರೂ. ಕೂಲಿ ನೀಡಲು ಯೋಜನೆಯಲ್ಲಿ ಅವಕಾಶವಿದೆ. ಆದರೆ, ತಡಸ ಗ್ರಾ.ಪಂ.ನಲ್ಲಿ ಒಬ್ಬ ಕೂಲಿಗೆ ಮೂಲ ಕೂಲಿಗಿಂತ 20 ಪಟ್ಟು ಹೆಚ್ಚಳ ಅಂದರೆ, 2,57,550 ರೂ.ಗಳನ್ನು ಕೂಲಿ ರೂಪದಲ್ಲಿ ನೀಡಲಾಗಿದೆ ಎಂದು ತಿಳಿಸಿದರು.ಹೀಗೆ ಮೂಲ ಕೂಲಿಗಿಂತ ಹೆಚ್ಚಿನ ಹಣವನ್ನು 11 ಕ್ಕೂ ಹೆಚ್ಚು ಜನ ಪಡೆದಿದೆ. ಅವರಲ್ಲಿ ಜೈನಾಬಿ ಎರೆಕುಪ್ಪಿ ಎಂಬುವವರು 2,57,550 ರೂ.ಹಣ ಪಡೆದಿದ್ದರೆ, ರಮೀಜಾ ಎರೆಕುಪ್ಪಿ 1,18,125 ರೂ., ನಾಗನಗೌಡ ನಾಗನಗೌಡ್ರ 2,17,900 ರೂ., ಪಾತೀಮಾ ದೇಸೂರ 2.35,050 ರೂ., ನೀಲವ್ವ ಲಮಾಣಿ 52,500 ರೂ., ಜರೀನಾ ಹಾವೇರಿ 56,000 ರೂ., ರೇಷ್ಮಾ ಹೆಡಿಯಾಲ 38,000 ರೂ., ಚಂದ್ರಪ್ಪ ಬಾರ್ಕಿ ಹಾಗೂ ಗಂಗವ್ವ ದೊಡ್ಡಮನಿ ತಲಾ 25,000 ರೂ. ಶಂಕ್ರಪ್ಪ ಬಾಕಿ 24,000, ಪೀರಾಂಬಿ ಸೂಡಂಬಿ 27,500 ರೂ.ಗಳನ್ನು ಕೂಲಿ ಪಡೆದಿದ್ದಾರೆ.

 

ವಿಚಿತ್ರವೆಂದರೆ, ಇವರ ಹೆಸರು ಕೆಲಸ ಮಾಡಿದ ಕೂಲಿಗಳ ಪಟ್ಟಿಯಲ್ಲಿ ಇಲ್ಲವೇ ಇಲ್ಲ ಎಂದು ಹೇಳಿದರು. ಫಲಾನುಭವಿಗಳ ಆಯ್ಕೆಯಲ್ಲಿ ಗೋಲ್‌ಮಾಲ್: ಕೇವಲ ಕೂಲಿ ನೀಡುವುದರಲ್ಲಿ ಅಷ್ಟೇ ಹಣದ ದುರುಪಯೋಗ ಆಗದೇ ಫಲಾನುಭವಿಗಳ ಆಯ್ಕೆಯಲ್ಲಿ ಸಹ ಗೋಲ್‌ಮಾಲ್ ಮಾಡಲಾಗಿದೆ.ಉದ್ಯೋಗ ಖಾತ್ರಿ ಯೋಜನೆಯ ಮಾರ್ಗ ಸೂಚಿಗಳ ಪ್ರಕಾರ ಸಣ್ಣ, ಅತಿಸಣ್ಣ, ಬಿಪಿಎಲ್ ಕಾರ್ಡ್‌ದಾರರು ಇಲ್ಲವೇ ಎಸ್‌ಸಿ,ಎಸ್‌ಟಿ ಸಮುದಾಯದ ಜನ ಫಲಾನುಭವಿ ಗಳಾಗಬಹುದು. ಆದರೆ, ತಡಸ ಗ್ರಾ.ಪಂ.ನಲ್ಲಿ ಏಳು ಜನ ದೊಡ್ಡ ಜಮೀನ್ದಾರರನ್ನು ಫಲಾನುಭವಿಗಳನ್ನಾಗಿ ಆಯ್ಕೆ ಮಾಡಲಾಗಿದೆ.24.05 ಎಕರೆ ಜಮೀನು ಹೊಂದಿದ ನಾಗನಗೌಡ ದಾನೆಗೊಂಡ್ರ, 23.9 ಎಕರೆ ಜಮೀನು ಇರುವರೇಣಕವ್ವ ಪರಮಣ್ಣನವರ, 23.09 ಎಕರೆ ಜಮೀನಿನ ಶಿವಪ್ಪ ಹೊಸಗೌಡ್ರ, 19.34 ಎಕರೆ ಜಮೀನಿನ ಕೃಷ್ಣಪ್ಪ ಬೇಗೂರ, 16.33 ಎಕರೆ ಜಮೀನಿನ ಚಂದ್ರಶೇಖ ಬೆಟಗೇರಿ, 16.21 ಎಕರೆ ಜಮೀನಿನ ಸೋಮಶೇಖರ ಬೆಟಗೇರಿ, 15.30 ಎಕರೆ ಜಮೀನು ಹೊಂದಿರುವ ತಮ್ಮನಗೌಡ ಪಾಟೀಲ ಇಲ್ಲಿ ಫಲಾನುಭವಿ ಗಳಾಗಿದ್ದಾರೆ ಅಷ್ಟೇ ಅಲ್ಲದೇ ಒಂದೇ ಕಾಮಗಾರಿಗೆ ಎರಡು ಬಾರಿ ಹಣವನ್ನು ಸಹ ನೀಡಲಾಗಿದೆ.

 

ತಡಸ ಗ್ರಾಮದ ಹನುಮಂತಪ್ಪ ಶಿರಗಂಬಿ ಅವರಿಗೆ ಬಾಳೆ ತೋಟ ನಿರ್ಮಿಸಲು 74,500 ಹಾಗೂ 48,750 ರೂ.ಗಳಂತೆ ಒಂದೇ ಕಾಮಗಾರಿಗೆ ಎರಡು ಬಾರಿ ಚೆಕ್‌ಗಳ ಮೂಲಕ 1,23,500 ನೀಡಲಾಗಿದೆ.ಮತ್ತೂರಿನ ನಾಗಪ್ಪ ಹಸಬಿ ಅವರಿಗೂ ಸಹ ಬಾಳೆ ತೋಟ ನಿರ್ಮಾಣಕ್ಕೆ  1,48,000 ರೂ.ಗಳನ್ನು ಎರಡು ಚೆಕ್‌ಗಳಲ್ಲಿ ಪಾವತಿಸಲಾಗಿದೆ ಎಂಬುದು ತನಿಖೆ ವೇಳೆ ಪತ್ತೆಯಾಗಿದೆ ಎಂದರು. ಇನ್ನೊಂದು ಕಾಮಗಾರಿಯಲ್ಲಿ 66 ಕೂಲಿಕಾರರನ್ನು ಬಳಸಲಾಗಿದೆ ಎಂದು ದಾಖಲೆಯಲ್ಲಿ ತೋರಿಸಲಾಗಿದೆ. ಆದರೆ, ಹಣವನ್ನು ದಾಖಲೆಯಲ್ಲಿ ಇರದ ಮೂವರಿಗೆ ಮಾತ್ರ ಹಣ ಸಂದಾಯ ಮಾಡಲಾಗಿದೆ.

 

ಪಂಚಾಯಿತಿ ಬಿಲ್ ಕಲೆಕ್ಟರ್‌ನೊಬ್ಬ ಕಾರ್ಯದರ್ಶಿ ಪರವಾಗಿ ತಾನೇ ಸಹಿ ಮಾಡಿ ಹಣ ದುರುಪಯೋಗ ಪಡಿಸಿಕೊಂಡಿರುವುದು ಹಾಗೂ ಒಂಬಡ್ಸ್ ಮನ್ ಸಾಕ್ಷಿ ವಿಚಾರಣೆಗೆ ಅಡ್ಡಿ ಪಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಮೇಲೆ ಕ್ರಮ ಕೈಗೊಳ್ಳುವಂತೆ ಬ್ಯಾಡಗಿ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿಗೆ ಸೂಚಿಸಲಾಗಿದೆ ಎಂದು ಹೇಳಿದರು.ತಡಸ ಗ್ರಾ.ಪಂ.ನಲ್ಲಿ ನಡೆದ ಹಣದ ದುರುಪಯೋಗದಲ್ಲಿ ಬಾಗಿಯಾದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇಲೆ ಮೇಲಾಧಿಕಾರಿಗಳ ಕ್ರಮ ಕೈಗೊಳ್ಳಬೇಕೆಂದು ವರದಿಯಲ್ಲಿ ಆದೇಶಿಸಿದ್ದಾಗಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry