ಗುರುವಾರ , ಫೆಬ್ರವರಿ 25, 2021
20 °C
ಗ್ರಾಮಾಂತರಂಗ: ಮಾಲೂರು ತಾಲ್ಲೂಕು ಕೂರ್ನಹೊಸಹಳ್ಳಿ

ಉದ್ಯೋಗ ಖಾತ್ರಿಯಲ್ಲಿ ವಾರದ ಸಂತೆ ಎಂಬ ‘ಎಟಿಎಂ’

'ಪ್ರಜಾವಾಣಿ ವಾರ್ತೆ/ವಿ.ರಾಜಗೋಪಾಲ್ Updated:

ಅಕ್ಷರ ಗಾತ್ರ : | |

ಉದ್ಯೋಗ ಖಾತ್ರಿಯಲ್ಲಿ ವಾರದ ಸಂತೆ ಎಂಬ ‘ಎಟಿಎಂ’

ಉದ್ಯೋಗ ಖಾತ್ರಿ ಯೋಜನೆ ಪ್ರಯೋಜನವೂ ಅಕ್ಷರಶಃ ನಿಜವಾದ ಸನ್ನಿವೇಶವೊಂದು ಇಲ್ಲಿದೆ. ಆರ್ಥಿಕ ಸ್ವಾವಲಂಬನೆಗಾಗಿ ಸಂತೆ ನಡೆಸಲು ಅನುಕೂಲವಾಗುವಂತೆ ಈ ಗ್ರಾಮದ ಜನರು ಶ್ರಮವಹಿಸುತ್ತಿದ್ದಾರೆ. ಇದು ಆರಂಭದ ಹಂತದಲ್ಲಿದ್ದರೂ ಗಮನ ಸೆಳೆಯುವಂತಿದೆ.ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿ ಹುಳದೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂರ್ನಹೊಸಹಳ್ಳಿ ಗ್ರಾಮದಲ್ಲಿ 1 ಎಕರೆ 30 ಗುಂಟೆ ವಿಸ್ತೀರ್ಣದಲ್ಲಿ ಸಂತೆ ನಡೆಸಲು ಕಾಮಗಾರಿ ಆರಂಭವಾಗಿದೆ. ಇದಕ್ಕಾಗಿ ಅವರು ಬಳಸಿಕೊಂಡಿರುವುದು ಉದ್ಯೋಗ ಖಾತ್ರಿ ಯೋಜನೆಯನ್ನು ಎಂಬುದು ಇಲ್ಲಿನ ವಿಶೇಷ. ಕೂರ್ನ ಹೊಸಹಳ್ಳಿ ಗ್ರಾಮದಲ್ಲಿ 110 ಕುಟುಂಬಗಳಿದ್ದು, ಬಹುತೇಕ ಕೃಷಿಕರೇ ವಾಸವಾಗಿದ್ದಾರೆ. ಇವರು ಬೆಳೆದ ಕೃಷಿ ಉತ್ಪನ್ನಗಳಿಗೆ ಟೇಕಲ್ ಗ್ರಾಮದಲ್ಲಿ ನಡೆಯುವ ವಾರದ ಸಂತೆಯೇ ಮಾರುಕಟ್ಟೆ. ಇದೇ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಿನಗತಿಮ್ಮನಹಳ್ಳಿ, ವೆಂಕಟರಾಜನಹಳ್ಳಿ, ತಿಮ್ಮನಾಯಕನಹಳ್ಳಿ, ಹುಳದೇನಹಳ್ಳಿ, ತೊರಹಳ್ಳಿ, ಎ.ಜಿ.ಕಾಲೋನಿ, ಚಿಕ್ಕಮಲ್ಲೆ, ಕೂರ್ನಹೊಸಹಳ್ಳಿ, ಓಬಟ್ಟಿ, ದಿನ್ನೇರಿ, ಹಾರೋಹಳ್ಳಿ ಮತ್ತು ತಿರುಮಲಹಟ್ಟಿ ಸೇರಿದಂತೆ ಸುತ್ತ–ಮುತ್ತಲ ಗ್ರಾಮಗಳ ಸಣ್ಣ ರೈತರು ತರಕಾರಿ, ಹೂವು, ಹಣ್ಣು ಮಾರಾಟ ಮಾಡಲು 6 ಕಿ.ಮೀ ದೂರದಲ್ಲಿರುವ ಟೇಕಲ್ ಸಂತೆಗೆ  ಹೋಗಬೇಕಾಗಿದೆ.ಸಾರಿಗೆ ಸೌಲಭ್ಯವೂ ಅಷ್ಟಕ್ಕಷ್ಟೇ ಆದ್ದರಿಂದ ರೈತರು ತಾವು ಬೆಳೆದ ತರಕಾರಿ, ಹಣ್ಣು, ಹೂವುಗಳನ್ನು ಬೈಸಿಕಲ್‌ನಲ್ಲೋ ತಲೆ ಮೇಲೆ ಹೊತ್ತೋ ಕೊಂಡೊಯ್ಯಬೇಕು. ಇದರಿಂದ ಪರಿಹಾರ ಕಂಡುಕೊಳ್ಳಲು ತೀರ್ಮಾನಿಸಿದ ಗ್ರಾಮಸ್ಥರು ಉದ್ಯೋಗ ಖಾತ್ರಿಯಡಿ ಸಂತೆ ನಿರ್ಮಿಸಲು ನಿರ್ಧರಿಸಿದ್ದಾರೆ.

‘ಗ್ರಾಮೀಣ ಭಾಗದ ಸಂತೆಗಳು ರೈತರ ಪಾಲಿಗೆ ಎಟಿಎಂಗಳಿದ್ದಂತೆ. ಸಣ್ಣ ರೈತರು ತಮ್ಮ ತೋಟಗಳಲ್ಲಿ ಆಸಕ್ತಿಯಿಂದ ಬೆಳೆಯುವ ಸೊಪ್ಪು, ತರಕಾರಿ ಹೂವು ಮಾರಾಟಕ್ಕೆ ದೂರದ ಮಾರುಕಟ್ಟೆಗಳಿಗೆ ಸಾಗಿಸುವುದು ಕಷ್ಟ.ಆದ್ದರಿಂದ ಹತ್ತಿರದಲ್ಲೇ ನಡೆಯುವ ವಾರದ ಸಂತೆಗಳಲ್ಲಿ ಸಾಮಾನ್ಯ ಜನರಿಗೆ ಕೈಗೆಟಕುವ ಬೆಲೆಗೆ ಮಾರಾಟ ಮಾಡುತ್ತಾರೆ. ಈ ರೀತಿ ಗ್ರಾಮದಲ್ಲೇ ಸಂತೆಗೆ ವ್ಯವಸ್ಥೆ ಮಾಡುತ್ತಿರುವುದು ತುಂಬ ಅನುಕೂಲವಾಗುತ್ತದೆ’ ಎಂದು ರೈತ ವೆಂಕಟರಮಣಪ್ಪ ತಿಳಿಸಿದರು.‘ಹೊಲದ ಅಂಗಳದಲ್ಲಿ ಬೆಳೆದ ಟೊಮೆಟೊ ಮಕ್ಕರಿಯಲ್ಲಿ ತುಂಬಿಸಿಕೊಂಡು ತಲೆ ಮೇಲೆ ಹೊತ್ತು 6 ಕಿ.ಮೀ. ದೂರದ ಟೇಕಲ್ ಸಂತೆಯಲ್ಲಿ ಮಾರಾಟ ಮಾಡಬೇಕಾಗಿತ್ತು. ಈಗ ಸಂತೆ ಪ್ರಾರಂಭಿಸುವುದರಿಂದ ಕೂರ್ನಹೊಸಹಳ್ಳಿ ಸೇರಿದಂತೆ ಸುತ್ತ–ಮುತ್ತಲ ಗ್ರಾಮಗಳ ಸಣ್ಣ ರೈತರಿಗೆ ಅನುಕೂಲವಾಗಲಿದೆ’

ಎಂದು ಗ್ರಾಮದ ರೈತ ಚಂದ್ರೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.‘ಹುಳದೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ಸಂತೆ ನಡೆಯುತ್ತಿರಲಿಲ್ಲ. ಈ ಭಾಗದ ರೈತರು ಹಾಗೂ ಗ್ರಾಮಸ್ಥರ ಅನುಕೂಲಕ್ಕಾಗಿ ಕೂರ್ನಹೊಸಹಳ್ಳಿ ಗ್ರಾಮದಲ್ಲಿ ಎನ್ಆರ್ಇಜಿ ಯೋಜನೆಯಡಿ ₨ 4 ಲಕ್ಷ ವೆಚ್ಚದಲ್ಲಿ ಅಚ್ಚುಕಟ್ಟಾದ ಸಂತೆ ಮೈದಾನ ರೂಪಿಸಿ ತರಕಾರಿ ಮತ್ತು ದಿನಸಿ ವ್ಯಾಪಾರ ನಡೆಸಲು ಪ್ಲಾಟ್ ಫಾರಂ ನಿರ್ಮಿಸಲಾಗುತ್ತಿದೆ.ಜೊತೆಗೆ ರೈತರು ಕುರಿ, ಮೇಕೆ ಮತ್ತು ಕೋಳಿ ಸೇರಿದಂತೆ ರಾಸುಗಳ ಮಾರಾಟ ಮಾಡಲು ಅನುಕೂಲ ಕಲ್ಪಿಸಲಾಗುವುದು’ ಎಂದು ಹುಳದೇನಹಳ್ಳಿ 

ಗ್ರಾಮ ಪಂಚಾಯತಿ ಅಧ್ಯಕ್ಷ ರವೀಂದ್ರ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.