ಶುಕ್ರವಾರ, ಜೂನ್ 5, 2020
27 °C

ಉದ್ಯೋಗ ಖಾತ್ರಿ ಅನುದಾನ ಬಳಕೆಗೆ ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಳಕಾಲ್ಮುರು:  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುದಾನವನ್ನು ಗ್ರಾ.ಪಂ.ಗಳು ನಿಗದಿತ ಅವಧಿ ಒಳಗಾಗಿ ಕಡ್ಡಾಯವಾಗಿ ಖರ್ಚು ಮಾಡಲೇಬೇಕು ಎಂದು ಜಿ.ಪಂ. ಉಪ ಕಾರ್ಯದರ್ಶಿ ರುದ್ರಪ್ಪ ತಾಕೀತು ಮಾಡಿದರು.ಇಲ್ಲಿನ ಸಾಮರ್ಥ್ಯಸೌಧದಲ್ಲಿ ಗುರುವಾರ ನಡೆದ ತಾಲ್ಲೂಕುಮಟ್ಟದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಮೊಳಕಾಲ್ಮುರು ಮತ್ತು ಹೊಸದುರ್ಗ ತಾಲ್ಲೂಕುಗಳಲ್ಲಿ ಖಾತ್ರಿ ಯೋಜನೆಯಲ್ಲಿ ಉತ್ತಮ ಕಾರ್ಯಗಳಾಗಿದೆ. ಆದರೂ ಸಹ ಕೆಲ ಗ್ರಾ.ಪಂ.ಗಳಲ್ಲಿ ಅನುದಾನ ನಿಧಾನಗತಿಯಲ್ಲಿ ಖರ್ಚಾಗುತ್ತಿದ್ದು, ಒಂದು ವೇಳೆ ಅನುದಾನ ವಾಪಸ್ ಹೋದಲ್ಲಿ ಮುಲಾಜಿಲ್ಲದೇ ಸಂಬಂಧಪಟ್ಟ ಗ್ರಾ.ಪಂ. ಪಿಡಿಒ ಮತ್ತು ಕಾರ್ಯದರ್ಶಿಯನ್ನು ಹೊಣೆ ಮಾಡಲಾಗುವುದು. ಮಾನವ ದಿನಗಳನ್ನು ಪೂರೈಸಲು ಸಮಯ ಉಳಿದಿಲ್ಲದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಬಾಕಿ ಕೆಲಸಗಳನ್ನು ಆರಂಭಿಸಿ ಕಾರ್ಮಿಕರಿಗೆ ಕೆಲಸ ನೀಡಬೇಕು ಎಂದು ಸೂಚಿಸಿದರು.ಕೆಲಸ ನಡೆದ ಪೂರ್ಣ ಮಾಹಿತಿ ಬಗ್ಗೆ ಆನ್‌ಲೈನ್‌ಗೆ ಸೇರ್ಪಡೆ ಮಾಡಿದ ನಂತರವೇ ಕಾಮಗಾರಿ ಹಣ ಬಿಡುಗಡೆ ಮಾಡಬೇಕು. ಕಳೆದ ವರ್ಷ ಈ ರೀತಿ ಮಾಡದ ಪರಿಣಾಮ ಜಿಲ್ಲೆಯಲ್ಲಿ ಒಟ್ಟು ್ಙ 33 ಕೋಟಿ ಅನುದಾನ ಸಮಸ್ಯೆಯಾಯಿತು. ಇದು ಮರುಕಳಿಸದಂತೆ ಎಚ್ಚರವಹಿಸಬೇಕು. ಗ್ರಾ.ಪಂ.ಗಳಲ್ಲಿ ಗಣಕಯಂತ್ರ ನಿರ್ವಾಹಕರು ಸರಿಯಾಗಿ ಕೆಲಸ ಮಾಡದೇ ಯೋಜನೆ ಹಿನ್ನಡೆಗೆ ಕಾರಣವಾಗಿದ್ದಾರೆ ಎಂಬ ದೂರು ಬಂದಿದ್ದು, ಅಂತವರನ್ನು ಕೆಲಸದಿಂದ ತೆಗೆದುಹಾಕಿ ಹೊಸಬರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.ಕುಡಿಯುವ ನೀರಿನ ಘಟಕಗಳಿಗೆ ಅನಧಿಕೃತ ಸಂಪರ್ಕ ಪಡೆದಲ್ಲಿ ಗ್ರಾ.ಪಂ.ಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲು ಮಾಡುವ ಬದಲು ಕೂಡಲೇ ಜಿ.ಪಂ. ಗಮನಕ್ಕೆ ತಂದಲ್ಲಿ ಹಣ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು. ಜಿ.ಪಂ.ನಲ್ಲಿ ಕುಡಿಯುವ ನೀರಿಗೆ ಸಂಬಂಧಪಟ್ಟ ಅನುದಾನಕ್ಕೆ ಕೊರತೆಯಿಲ್ಲ. ಇದನ್ನು ಬೆಸ್ಕಾಂ ಜಾಗೃತದಳ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಬೆಸ್ಕಾಂ ಎಇಇ ಸಂತೋಷ್‌ರೆಡ್ಡಿ ಅವರಿಗೆ ಸೂಚಿಸಿದರು.ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಬಿ.ಎಸ್. ಮಂಜುನಾಥ್, ಯೋಜನಾಧಿಕಾರಿ ಜಗದೀಶ್, ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾ.ಪಂ. ಪಿಡಿಒಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.