ಶನಿವಾರ, ಮೇ 28, 2022
27 °C

ಉದ್ಯೋಗ ಖಾತ್ರಿ ಯೋಜನೆ:ಕಾರ್ಮಿಕರಿಗೆ ಗ್ರಾ.ಪಂ ಅಧ್ಯಕ್ಷರಿಂದ ಬೆದರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಕಲಘಟಗಿ ತಾಲ್ಲೂಕಿಗೆ ಸಂಬಂಧಪಟ್ಟ ವಿವಿಧ ಗ್ರಾಮಗಳ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಂಬಂಧಿ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡುವಂತೆ ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಕಾರ್ಯಕರ್ತರು ಇಲ್ಲಿನ ಜಿಲ್ಲಾ ಪಂಚಾಯಿತಿಗೆ ಬುಧವಾರ ಮುತ್ತಿಗೆ ಹಾಕಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪಿ.ಎ.ಮೇಘಣ್ಣವರ ಅವರಿಗೆ ಮನವಿ ಸಲ್ಲಿಸಿದರು.ಬೇಗೂರು ಗ್ರಾಮ ಪಂಚಾಯಿತಿ, ಜಿನ್ನೂರು ಗ್ರಾ.ಪಂ. ವ್ಯಾಪ್ತಿಯ ಮಲಕನಕೊಪ್ಪ ಗ್ರಾಮ, ಮಡಕಿ ಹೊನ್ನಳ್ಳಿ ಗ್ರಾ.ಪಂ., ತಾವರಗೇರಿ ಗ್ರಾ.ಪಂ. ಹಾಗೂ ಮುಕ್ಕಲ ಗ್ರಾ.ಪಂ.ಗಳಿಗೆ ಸಂಬಂಧಪಟ್ಟಂತೆ ಅನೇಕ ಗ್ರಾಮಸ್ಥರು ಈ ಯೋಜನೆಯಡಿ ಕೆಲಸ ಮಾಡಿದ್ದಾರೆ. ಇದುವರೆಗೆ ಅವರಿಗೆ ವೇತನ ನೀಡಿಲ್ಲ. ಜಾಬ್ ಕಾರ್ಡ್‌ಗಳಿಗೆ ಅರ್ಜಿ ಕೊಟ್ಟರೂ ಅವುಗಳು ಇನ್ನೂ ಕೈ ಸೇರಿಲ್ಲ.ಮಡಕಿ ಹೊನ್ನಳ್ಳಿ ಗ್ರಾ.ಪಂ.ನಲ್ಲಿ ಮೇ 5ರಿಂದ ಜನರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಇದುವರೆಗೆ 8 ನಂಬರ್ ಅರ್ಜಿ ನಮೂನೆಗಳನ್ನು ನೀಡಿಲ್ಲ. ಎನ್‌ಎಂಆರ್ ಸಹಿತ ಹಾಕಿಲ್ಲ. ಅಲ್ಲದೇ ಸ್ವೀಕೃತ ಪ್ರತಿಗಳನ್ನು ಹಿಂದೆ ಪಡೆದಿದ್ದಾರೆ. ಇದರ ಬಗ್ಗೆ ವಿಚಾರಿಸಲು ಹೋದರೆ ಸಂಘಟಕರಿಗೆ ಗ್ರಾ.ಪಂ. ಅಧ್ಯಕ್ಷರು ಮತ್ತು ಕೆಲವು ಸದಸ್ಯರು ಧಮಕಿ ಹಾಕುತ್ತಿದ್ದಾರೆ.ಈ ಎಲ್ಲ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ನೀಡಬೇಕು. ದುಡಿಯುತ್ತಿರುವ ಕಾರ್ಮಿಕರಿಗೆ ವೇತನ ನೀಡಬೇಕು. ಕೆಲಸದ ಜಾಗಗಳಲ್ಲಿ ನೆರಳು, ನೀರಿನ ವ್ಯವಸ್ಥೆ ಕಲ್ಪಿಸಬೇಕು ಮತ್ತು ಸಾಮಗ್ರಿಗಳ ವೆಚ್ಚ ನೀಡಬೇಕು ಎಂದ ಪ್ರತಿಭಟನಾಕಾರರು ಆಗ್ರಹಿಸಿ ದರು.

 

ಹೆಚ್ಚಿನ ಭಾಗದಲ್ಲಿ ಹೆಣ್ಣು ಮಕ್ಕಳೇ ಕೆಲಸಕ್ಕೆ ಹೋಗುತ್ತಿದ್ದು, ಅವರಿಗೆ ಕಠಿಣ ಕೆಲಸಗಳನ್ನು ತೋರಿಸಿ ವಾಪಸ್ ಕಳುಹಿಸುತ್ತಿದ್ದಾರೆ. ಕೆಲಸಕ್ಕೆ ಹೋದವರಿಗೆ ಯಾವುದೇ ಗೌರವವನ್ನು ನೀಡುತ್ತಿಲ್ಲ. ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ್ತಿ ಶಾರದಾ ದಾಬಡೆ ನೇತೃತ್ವದ ಪ್ರತಿಭಟನಾಕಾರರ ತಂಡ ಆಗ್ರಹಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.