ಶನಿವಾರ, ಏಪ್ರಿಲ್ 17, 2021
23 °C

ಉದ್ಯೋಗ ಖಾತ್ರಿ; ಹೀಗೂ ಬಳಸಬಹುದು..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಇಲ್ಲಿಗೆ ಸಮೀಪದ ಅಸುಂಡಿ ಗ್ರಾಮ ಪಂಚಾಯಿತಿಯು ಉದ್ಯೋಗ ಖಾತ್ರಿ ಯೋಜನೆಯ ಹಣವನ್ನು ಅರಣ್ಯೀಕರಣಕ್ಕೆ ಉಪಯೋಗಿಸುವ ಮೂಲಕ ಹೊಸತೊಂದು ಮಾದರಿಯನ್ನು ಅನುಸರಿಸಿದೆ.ಉದ್ಯೋಗ ಖಾತ್ರಿ ಎಂದರೆ ಅದೊಂದು ಅಕ್ರಮಗಳ ಗೂಡು ಎನ್ನುವ ಆರೋಪ ಕೇಳಿ ಬರುತ್ತಿದೆ. ಆದರೆ ಆಸುಂಡಿಯ ಗ್ರಾಮ ಪಂಚಾಯಿತಿಯು ಇದೇ ಹಣದಿಂದ ಈಗ ಗಿಡಗಳನ್ನು ಬೆಳೆಸುತ್ತಿದೆ. ಮುಂದಿನ ಜೂನ್ ತಿಂಗಳಲ್ಲಿ ಮಳೆಗಾಲ ಪ್ರಾರಂಭವಾದಾಗ ಊರ ಸುತ್ತಮುತ್ತ ಗಿಡ ನೆಡಲು ಯೋಜನೆಯನ್ನು ತಯಾರಿಸಿಕೊಂಡಿದೆ.ಗ್ರಾ.ಪಂ. ಗೆ ನೀಡಿರುವ ಉದ್ಯೋಗ ಖಾತ್ರಿ ಯೋಜನೆ ಅನುದಾನದಲ್ಲಿ 5 ಲಕ್ಷ ರೂಪಾಯಿಯನ್ನು ಅರಣ್ಯೀಕರಣಕ್ಕೆ ವಿನಿಯೋಗಿಸಲಾಗಿದೆ. ಗ್ರಾಮದ ಕುವೆಂಪು ಶತಮಾನೋತ್ಸವ ಮಾದರಿ ಸರ್ಕಾರಿ ಶಾಲೆಯ ಆವರಣದಲ್ಲಿ 55 ಸಾವಿರ ಸಸಿಗಳನ್ನು ಪ್ಲಾಸ್ಟಿಕ್ ಕುಂಡಗಳಲ್ಲಿ ಬೆಳೆಸಲಾಗುತ್ತಿದೆ. ಇದರಲ್ಲಿ 50 ಸಾವಿರ ಸಾಗುವಾನಿ, ಉಳಿದ 5 ಸಾವಿರ ಆಲ, ಹೊಂಗೆ, ಬೇವು, ಹುಣಸೆ ಸಸಿಗಳಾಗಿವೆ. ಅರಣ್ಯ ಇಲಾಖೆ ಸಸಿ ಬೆಳೆಸಲು ತಾಂತ್ರಿಕ ಸಹಾಯವನ್ನು ನೀಡಿದೆ.ಗಿಡಗಳನ್ನು ಬೆಳೆಸುವುದಕ್ಕೆ ಶಾಲೆಯ ಜಾಗ ಹಾಗೂ ಅಲ್ಲೇ ಇರುವ ಬಾವಿಯ ನೀರನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇಬ್ಬರು ಮಹಿಳೆಯರು ಕಳೆದ ಎರಡೂವರೆ ತಿಂಗಳಿನಿಂದ ಗಿಡಗಳಿಗೆ ನೀರು ಹಾಕಿ ಆರೈಕೆ ಮಾಡುತ್ತಿದ್ದಾರೆ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಅಸುಂಡಿ ಹಾಗೂ ಮಲ್ಲಸಮುದ್ರ ಎರಡು ಗ್ರಾಮಗಳಿವೆ. ಈ ಗ್ರಾಮಗಳ ರಸ್ತೆ ಬದಿ, ಸ್ಮಶಾನ, ಜಮೀನಿನ ಬದು ಹಾಗೂ ಲೇಔಟ್‌ಗಳಲ್ಲಿ ಉದ್ಯಾನಕ್ಕೆ ಮೀಸಲಾಗಿರಿಸಿರುವ ಜಾಗ, ಗೋಮಾಳ ಮತ್ತಿತರ ಕಡೆ ಗಿಡಗಳನ್ನು ನೆಡಲು ಯೋಜನೆ ಸಿದ್ಧವಾಗಿದ್ದು, ಅಲ್ಲಲ್ಲಿ ಗುಂಡಿ ತೆಗೆಯುವ ಕೆಲಸವೂ ನಡೆದಿದೆ.“ಪ್ರತಿ ವರ್ಷ ಗ್ರಾಮ ಪಂಚಾಯಿತಿಗೆ ಬರುವ ಅನುದಾನದಲ್ಲಿ ಶೇ.20ರಷ್ಟು ಭಾಗವನ್ನು ಅರಣ್ಯ ಇಲಾಖೆಗೆ ನೀಡಬೇಕು. ಆದರೆ ಅವರು ಅಲ್ಲಲ್ಲಿ ಗಿಡ ನೆಟ್ಟರೂ ಸರಿಯಾದ ಆರೈಕೆ ಇಲ್ಲದೆ ಬೆಳೆಯುತ್ತಿರಲಿಲ್ಲ. ಆದ್ದರಿಂದ ನಾವೆ ಏಕೆ ನರ್ಸರಿಯಲ್ಲಿ ಗಿಡ ಬೆಳೆಸಿ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಟ್ಟು ಬೆಳೆಸಬಾರದು ಎಂದು ತೀರ್ಮಾನಿಸಲಾಯಿತು. ಈ ಯೋಜನೆಗಾಗಿ ಉದ್ಯೋಗ ಖಾತ್ರಿಯ ಅನುದಾನವನ್ನು ಬಳಕೆ ಮಾಡಿಕೊಳ್ಳಲು ಪಂಚಾಯಿತಿ ಅಧ್ಯಕ್ಷ ಎಂ.ಎಂ. ಹೊಸಮನಿ, ಉಪಾಧ್ಯಕ್ಷೆ ಶಕುಂತಲಾ ಮುಳಗುಂದ ಹಾಗೂ ಸರ್ವ ಸದಸ್ಯರು ಸಮ್ಮತಿಸಿದರು. ಅದರ ಫಲವಾಗಿ ಈಗ ಗಿಡಗಳನ್ನು ಬೆಳೆಸಲಾಗಿದೆ” ಎಂದು ಕಳೆದ 25 ವರ್ಷದಿಂದಲೂ ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ಸೋಮರಡ್ಡಿ ರಾಮೇನಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.‘ನಮ್ಮ ಶಾಲೆಯ ಆವರಣದಲ್ಲಿ ಗಿಡಗಳು ಬೆಳೆದು ಹಸಿರಿನಿಂದ ಕಂಗೊಳಿಸುತ್ತಿರುವುದರಿಂದ ಸುತ್ತ ಪರಿಸರದಲ್ಲಿ ಕಾರ್ಬನ್ ಡೈ ಆಕ್ಸೈಡ್ ಕಡಿಮೆಯಾಗಿದೆ. ಸ್ವಚ್ಛ ಆಮ್ಲಜನಕ ಮಕ್ಕಳಿಗೆ ದೊರೆಯುತ್ತಿದೆ. ಇದು ಒಂದು ತರಹ ಲಾಭವೇ’ ಎಂಬುದು ಎಸ್‌ಡಿಎಂಸಿ ಅಧ್ಯಕ್ಷ ಫಕೀರಡ್ಡಿ ಗೋ.ಮಾಡಳ್ಳಿ ಅಭಿಪ್ರಾಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.