ಉದ್ಯೋಗ ನೀಡಿ: ನೌಕರರ ಆಗ್ರಹ

7

ಉದ್ಯೋಗ ನೀಡಿ: ನೌಕರರ ಆಗ್ರಹ

Published:
Updated:

ಹಾಸನ: `ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿದು ಉದ್ಯೋಗ ಕಳೆದುಕೊಂಡಿದ್ದ 281 ಮಂದಿಯನ್ನು ಶುಕ್ರವಾರದಿಂದ ಮರಳಿ ಉದ್ಯೋಗಕ್ಕೆ ತೆಗೆದುಕೊಂಡಿದ್ದು, ಅವರಂತೆ ನಮಗೂ ಉದ್ಯೋಗ ನೀಡಬೇಕು~ ಎಂದು ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿದು ಪುನಃ ನೇಮಕಾತಿಗೂ ಅವಕಾಶ ಲಭಿಸದ 29 ಮಂದಿ ನೌಕರರು ಒತ್ತಾಯಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಅವರು ಮಾತನಾಡಿದರು.`ಸಂಸ್ಥೆ ಕಾರ್ಯಾರಂಭ ಮಾಡಿದಾಗ ಗುತ್ತಿಗೆ ಆಧಾರದಲ್ಲಿ ನಮ್ಮೆಲ್ಲರನ್ನೂ ನೇಮಕ ಮಾಡಲಾಗಿತ್ತು. ಆದರೆ ಹೊಸ ನೇಮಕಾತಿ ಮಾಡುವಾಗ, ಮೊದಲಿನಿಂದಲೇ ಸಂಸ್ಥೆಯಲ್ಲಿ ದುಡಿಯುತ್ತಿದ್ದರು ಎಂಬ ಕಾರಣಕ್ಕೆ 281 ಜನರಿಗೆ ಮಾತ್ರ ಅವಕಾಶ ಕೊಟ್ಟು ನಮ್ಮನ್ನು ಹೊರಗಿಡಲಾಯಿತು.

 

ಹಿಂದಿನ ನಿರ್ದೇಶಕ ಗಂಗಾಧರ್ ಅವರು ನಮ್ಮನ್ನು ಕೆಲಸದಿಂದ ವಜಾ ಮಾಡಿದ್ದರೇ ವಿನಾ ಸರ್ಕಾರ ಮಾಡಿರಲಿಲ್ಲ. ನೇಮಕಾತಿಯಲ್ಲಿ ಅವಕಾಶ ಸಿಕ್ಕವರಲ್ಲಿ ಅನೇಕ ಮಂದಿ ನಮಗಿಂದ ವಯಸ್ಸಿನಲ್ಲಿ ಹಿರಿಯವರು ಮತ್ತು ಕಡಿಮೆ ಅಂಕ ಗಳಿಸಿದವರೂ ಇದ್ದಾರೆ. ಆದರೆ ಅವರು ಹೆಚ್ಚು ಲಂಚ ನೀಡಿದ್ದರಿಂದ ಉದ್ಯೋಗ     ಪಡೆದಿದ್ದಾರೆ ಎಂದು ಅವರು ಆರೋಪಿಸಿದರು.`ನಾವು ಸಂಸ್ಥೆಯಲ್ಲಿ ನಾಲ್ಕು ವರ್ಷ ಹತ್ತು ತಿಂಗಳ ಕಾಲ ಸೇವೆ ಸಲ್ಲಿಸಿದ್ದೇವೆ. ಕಾಯಂ ನೇಮಕಾತಿಯ ಸಂದರ್ಭಬಂದಾಗ ಉದ್ಯೋಗ ನೀಡುವ ಭರವಸೆ ಕೊಟ್ಟು ನಮ್ಮಿಂದ ಕೆಲವರು ಲಂಚ ಪಡೆದಿದ್ದರು. ಈ ಸಂಬಂಧ ಐದು ಮಂದಿಯ ವಿರುದ್ಧ ದೂರನ್ನೂ ದಾಖಲಿಸಿದ್ದೆವು.

 

ಆದರೆ ಅವರ ವಿರುದ್ಧ ಪೊಲೀಸರು ಈವರೆಗೆ ಕ್ರಮ ಕೈಗೊಂಡಿಲ್ಲ. ಅವರು ಮುಕ್ತವಾಗಿ ಓಡಾಡುತ್ತಿದ್ದರೂ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ. ನೇಮಕಾತಿ ಸಂದರ್ಭದಲ್ಲಿ ಸಂದರ್ಶನಕ್ಕೆ ಬಾರದಿದ್ದ 50 ಮಂದಿಗೂ ಉದ್ಯೋಗ ನೀಡಲಾಗಿತ್ತು. ಆದರೆ ನಮ್ಮನ್ನು ಕೈಬಿಟ್ಟಿದ್ದರು. ಅವರು ನಮಗಿಂತ ಹೆಚ್ಚು ಲಂಚ ಕೊಟ್ಟಿದ್ದಾರೆ ಎಂಬುದೊಂದೇ ಮಾನದಂಡವಾಗಿತ್ತು ಎಂದು ಆರೋಪಿಸಿದರು.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಜನತಾ ದರ್ಶನದ ಮೂಲಕ ಉದ್ಯೋಗ ಪಡೆದಿದ್ದ ಸಿದ್ದೇಶ್ ಹಾಗೂ ಉದ್ಯೋಗ ಕಳೆದುಕೊಂಡಿರುವ ಪುಷ್ಪಾವತಿ, ಎಂ, ಶೀಲಾ ಟಿ.ಆರ್, ಮೋಹನ್ ಕುಮಾರ್, ಪ್ರಭಾಕರ ಹಾಗೂ ದುಶ್ಯಂತ್ ಕುಮಾರ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.170 ಮಂದಿ ಹಾಜರು

ಉದ್ಯೋಗ ಕಳೆದುಕೊಂಡಿರುವ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ಮರು ನೇಮಕ ಮಾಡುವ ವಿಚಾರ ತಿಳಿಯುತ್ತಿದ್ದಂತೆ ಅನೇಕ ಸಿಬ್ಬಂದಿ ಬಂದು ಪುನಃ ಕೆಲಸಕ್ಕೆ ಹಾಜರಾಗಿದ್ದಾರೆ. ಶುಕ್ರವಾರ ಸಂಜೆ ವೇಳೆಗೆ 170ಕ್ಕೂ ಹೆಚ್ಚು ಮಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಪ್ರಸಾದ್ ತಿಳಿಸಿದ್ದಾರೆ.`ನೇಮಕಾತಿ ಅಸಿಂಧುತ್ವದ ಬಗ್ಗೆ ಆಯ್ಕೆಯಾದ ಅಭ್ಯರ್ಥಿಗಳು ಕಾರಣ ಕೇಳುವ ನೋಟಿಸ್‌ಗೆ ನೀಡಿರುವ ಉತ್ತರವನ್ನು ಪರಿಗಣಿಸಿ ರಾಜ್ಯ ಸರ್ಕಾರ ಕೈಗೊಳ್ಳುವ ಅಂತಿಮ ತೀರ್ಮಾನಕ್ಕೆ ಬದ್ಧರಾಗಬೇಕೆಂಬ ನಿಬಂಧನೆಯ ಮೇಲೆ ಎಲ್ಲ (281) ಸಿಬ್ಬಂದಿಯನ್ನು ಕೂಡಲೇ ನೇಮಕ ಮಾಡಬಹುದು ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಸೂಚನೆ  ನೀಡಿದ್ದಾರೆ.ಅದರಂತೆ ಅವರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದೇವೆ. ವೇತನ ಇನ್ನಿತರ ವಿಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ನಡುವೆ ಮೆರಿಟ್ ಪಟ್ಟಿಯೊಂದನ್ನೂ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ ಎಂದು ಅವರು ತಿಳಿಸಿದರು.ಕಳೆದ ಒಂದು ವರ್ಷದಿಂದ ಸಿಬ್ಬಂದಿ ಕೊರತೆಯಿಂದಾಗಿ ಆಸ್ಪತ್ರೆಯಲ್ಲಿ ಸಾಕಷ್ಟು ಸಂಕಷ್ಟ ಅನುಭವಿಸಿದ್ದೆವು. ವೈದ್ಯರೇ ಗುಮಾಸ್ತರ ಕೆಲಸವನ್ನೂ ಮಾಡಬೇಕಾದ ಸಂದರ್ಭ ಬಂದಿತ್ತು. ಈ ನಿರ್ಧಾರದಿಂದ ತಾತ್ಕಾಲಿಕ ಪರಿಹಾರ ಲಭಿಸಿದಂತಾಗಿದೆ. ಇನ್ನು ಹೊಸ ಆಸ್ಪತ್ರೆ ಕಟ್ಟಡದ ಅನುದಾನ ಬಿಡುಗಡೆಯಾದರೆ ಇನ್ನಷ್ಟು ಅನುಕೂಲವಾಗುತ್ತದೆ~ ಎಂದು ಪ್ರಸಾದ್  ನುಡಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry