ಶುಕ್ರವಾರ, ಮೇ 14, 2021
29 °C

ಉದ್ಯೋಗ ಬೇಕೆ, ಇಲ್ಲಿ ನೋಂದಣಿ ಮಾಡಿಸಿ

ಸಿದ್ದಯ್ಯ ಹಿರೇಮಠ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಈ ಕೇಂದ್ರದ ಆವರಣದಲ್ಲಿ ನಿತ್ಯವೂ ಒಂದಿಲ್ಲೊಂದು ತರಬೇತಿ ಕಾರ್ಯಕ್ರಮ ನಡೆದೇ ಇರುತ್ತದೆ. ಕೌಶಲಾಭಿವೃದ್ಧಿಗೆ ಒಂದಿಲ್ಲೊಂದು ರೀತಿಯ ತರಗತಿಗಳು ನಡೆಯುತ್ತಿರುತ್ತದೆ.ಕಂಪ್ಯೂಟರ್ ತರಬೇತಿ ಇರಬಹುದು, ಇಂಗ್ಲಿಷ್ ಮಾತನಾಡುವ ಕಲೆ ಇರಬಹುದು, ಕೌಶಲ ಅಭಿವೃದ್ಧಿಗಾಗಿನ ಪಾಠ ಇರಬಹುದು... ಹೀಗೆ ಎಲ್ಲದರ ಬಗ್ಗೆ ಇಲ್ಲಿ ಇದೀಗ ನಿತ್ಯವೂ ತರಗತಿಗಳು ನಡೆಯುತ್ತಿವೆ. ಪ್ರತಿ ತಿಂಗಳಿಗೊಮ್ಮೆ ಬೃಹತ್ ಉದ್ಯೋಗ ಮೇಳ, ವಾರಕ್ಕೊಮ್ಮೆ ಸಣ್ಣ ಪುಟ್ಟ ಪ್ರಮಾಣದ ಉದ್ಯೋಗ ಮೇಳಗಳು ನಡೆಯುವುದು ಈಗ ಸರ್ವೇ ಸಾಮಾನ್ಯ.ನಗರದ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯೇ ಈ ಚಟುವಟಿಕೆಗಳ ಕೇಂದ್ರ. ಈ ಕಚೇರಿ ಈಗ ಸಂಪೂರ್ಣ ಬದಲಾಗಿ, `ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ~ವಾಗಿದೆ. ಎಸ್ಸೆಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ ಶಿಕ್ಷಣ, ಐಟಿಐ, ಡಿಪ್ಲೊಮಾ, ನರ್ಸಿಂಗ್ ಹೀಗೆ ಯಾವುದೇ ವಿದ್ಯಾರ್ಹತೆ ಇರುವವರಿಗೂ ಇಲ್ಲಿ ಈಗ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದೆ.ಶಾಲೆಯ ಮುಖ ನೋಡದ ಅವಿದ್ಯಾವಂತರಿಗೂ, ಕೌಶಲರಹಿತ ಅಭ್ಯರ್ಥಿಗಳಿಗೂ ಉದ್ಯೋಗ ದೊರಕಿಸಿಕೊಡಲು ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಜಾಗತೀಕರಣ ಮತ್ತು ಉದಾರೀಕರಣದಿಂದಾಗಿ ಎಲ್ಲ ಕ್ಷೇತ್ರಗಳೂ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದ್ದು, ಉದ್ಯಮಿಗಳಿಗೆ ನುರಿತ ಮಾನವ ಸಂಪನ್ಮೂಲದ ಅಗತ್ಯವಿದೆ. ಇದನ್ನು ಮನಗಂಡು ಈ ಕೇಂದ್ರವು, ಟೀಮ್ ಲೀಸ್ ಸ್ಟಾಫ್ ಸೆಲೆಕ್ಷನ್ ಸಂಸ್ಥೆಯ ಸಹಕಾರದಿಂದ ಜಿಲ್ಲೆಯ ಅಭ್ಯರ್ಥಿಗಳ ಹೆಸರನ್ನು ನೋಂದಾಯಿಸಿಕೊಂಡು ಉದ್ಯೋಗದ ಅಗತ್ಯವಿರುವ ಅಭ್ಯರ್ಥಿಗಳಿಗೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಕ್ರಮ ಕೈಗೊಳ್ಳುತ್ತಿದೆ.ಉದ್ಯೋಗ ಲಭ್ಯತೆ, ಬೇಡಿಕೆ, ಉದ್ಯೋಗಾಕಾಂಕ್ಷಿಗಳ ಕೌಶಲ್ಯ ಮೌಲ್ಯಮಾಪನ, ಅವರಿಗೆ ಸೂಕ್ತ ಸಲಹೆ, ಕೌಶಲ ಕೊರತೆ ಗುರುತಿಸಿ, ಅಗತ್ಯ ಕೌಶಲ ತರಬೇತಿ ನೀಡಿ ವಿವಿಧ ಸಂಸ್ಥೆಗಳ ಉದ್ಯೋಗ ಮೇಳ ಆಯೋಜಿಸಿ ನೆರವಾಗುವುದೇ ಈ ಕೇಂದ್ರದ ಉದ್ದೇಶವಾಗಿದೆ.ರಾಜ್ಯದ 6ನೇ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರವಾಗಿ ಮಾರ್ಚ್ 1ರಂದು ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಅವರಿಂದ ಉದ್ಘಾಟನೆಗೊಂಡಿರುವ ಈ ಕೇಂದ್ರದಲ್ಲಿ ಈವರೆಗೆ ಒಟ್ಟು 1512 ಜನ ಅಭ್ಯರ್ಥಿಗಳು ನೋಂದಣಿ ಮಾಡಿಸಿದ್ದು, ಆಗಾಗ ನಡೆಯುತ್ತಿರುವ ಉದ್ಯೋಗ ಮೇಳಗಳಲ್ಲಿ, ಬೇಡಿಕೆಗೆ ಅನುಗುಣವಾಗಿ ಉದ್ಯೋಗಾವಕಾಶ ದೊರಕಿಸಲಾಗುತ್ತಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಪಿ.ಎಸ್. ಹಟ್ಟಪ್ಪ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಬಿಇಡಿ, ಡಿಇಡಿ, ಎಂ.ಎ ಓದಿರುವ ಅಭ್ಯರ್ಥಿಗಳಿಗೆ ಶಿಕ್ಷಕ ಹುದ್ದೆ, ಉಪನ್ಯಾಸಕ ಹುದ್ದೆ, ಐಟಿಐ, ಡಿಪ್ಲೊಮಾ ಕಲಿತವರಿಗೆ ಕಾರ್ಖಾನೆಗಳು ಮತ್ತಿತರ ಕಡೆ ಕೆಲಸ. ಏನನ್ನೂ ಓದದವರಿಗೆ ಹೌಸ್ ಕೀಪಿಂಗ್, ಜವಾನ ಹುದ್ದೆ, ಎಂಜಿನಿಯರಿಂಗ್ ಓದಿದವರಿಗೆ ವಿವಿಧ ಬಹುರಾಷ್ಟ್ರೀಯ ಹಾಗೂ ರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗ, ಬಿಎ, ಬಿಕಾಂ, ಬಿಎಸ್‌ಸಿ ಪದವೀಧರರಿಗೆ ವಿವಿಧ ಬ್ಯಾಂಕ್‌ಗಳಲ್ಲಿ ಅಕೌಂಟೆಂಟ್ ಮತ್ತಿತರ ಹುದ್ದೆ, ಎಸ್ಸೆಸ್ಸೆಲ್ಸಿ, ಪಿಯುಸಿ ಓದಿದವರಿಗೂ ಅರ್ಹತೆಗೆ ತಕ್ಕ ಹುದ್ದೆಗಳು ದೊರೆತಿವೆ. ಕೇಂದ್ರದಲ್ಲಿ ನೋಂದಣಿ ಮಾಡಿಸಿ, ಎಲ್ಲ ಯುವಕ/ ಯುವತಿಯರೂ ಉದ್ಯೋಗಾವಕಾಶ ಪಡೆಯಬಹುದಾಗಿದೆ ಎಂದೂ ಅವರು ಕೋರುತ್ತಾರೆ.ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ 2009ರಿಂದ ಈವರೆಗೆ ಒಟ್ಟು ಆರು ಬಾರಿ ಬೃಹತ್ ಉದ್ಯೋಗ ಮೇಳ ಆಯೋಜಿಸಿದ್ದು, ಭಾಗವಹಿಸಿದ್ದ ಒಟ್ಟು 16867 ಜನ ಅಭ್ಯರ್ಥಿಗಳ ಪೈಕಿ 4091 ಅಭ್ಯರ್ಥಿಗಳಿಗೆ ಉದ್ಯೋಗ ದೊರೆತಿದೆ. ಅಲ್ಲದೆ, 5880 ಜನ ಅಭ್ಯರ್ಥಿಗಳಿಗೆ ಕೌಶಲ ತರಬೇತಿ ನೀಡಲಾಗಿದೆ. ವಿವಿಧ ರೀತಿಯ 153 ಸಂಸ್ಥೆಗಳು ಭಾಗವಹಿಸಿದ್ದು, ಈಗಲೂ ಉದ್ಯೋಗಿಗಳಿಗೆ ಅತೀವ ಬೇಡಿಕೆ ಇದೆ ಎಂದು ಅವರು ಹೇಳುತ್ತಾರೆ.ಅಭ್ಯರ್ಥಿಗಳು ಕೇಂದ್ರದ ದೂರವಾಣಿ ಸಂಖ್ಯೆ (08392) 273988ಗೆ ಕರೆ ಮಾಡಿಯೂ ತಮ್ಮ ಹೆಸರು ನೋಂದಾಯಿಸಬಹುದಾಗಿದೆ. ಬೇಡಿಕೆಗೆ ಅನುಗುಣವಾಗಿ ಅಭ್ಯರ್ಥಿಗಳಿಗೆ ಕರೆ ಮಾಡಿ ಸಂದರ್ಶನದ ದಿನಾಂಕವನ್ನು ತಿಳಿಸುವ ವ್ಯವಸ್ಥೆಯೂ ಇಲ್ಲಿದೆ.ಯಾವುದಕ್ಕೂ ಶುಲ್ಕವೇ ಇಲ್ಲ. ಎಲ್ಲವೂ ಉಚಿತ ಸೇವೆ ಎಂಬುದೇ ಇಲ್ಲಿನ ವಿಶೇಷ. ಕಳೆದ ವಾರವಷ್ಟೇ ನಡೆದ ಮಿನಿ ಉದ್ಯೋಗ ಮೇಳದಲ್ಲಿ ಗುರುಕುಲ ಶಾಲೆ, ಐಎನ್‌ಜಿ ವೈಶ್ಯ ಬ್ಯಾಂಕ್, ಟೆಕ್ ಮೈಂಡ್ಸ್, ಶ್ರೀ ನಂದಿ ಶಾಲೆ, ಕರ್ಶಕ್ ಬಯೋ ಪ್ಲಾಂಟ್ಸ್, ನವಭಾರತ    ಫರ್ಟಿಲೈಜರ್ಸ್, ಕೆಪಿಎಫ್ ಮೋಟರ್ಸ್ ಸಂಸ್ಥೆಯವರು, ಈ ಮೇಳಕ್ಕೆ ಆಗಮಿಸಿದ್ದ 300 ಅಭ್ಯರ್ಥಿಗಳ ನೇರ ಸಂದರ್ಶನ ನಡೆಸಿ 50ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ.ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳು ಉದ್ಯೋಗ ಬಯಸುವ ಅಭ್ಯರ್ಥಿಗಳ ಪಟ್ಟಿಯನ್ನು ಪಡೆಯುತ್ತಿದ್ದು, ಇದೇ ಕೇಂದ್ರದ ಆವರಣದಲ್ಲೇ ಸಂದರ್ಶನ, ಲಿಖಿತ ಪರೀಕ್ಷೆಯನ್ನು ನಡೆಸಲು ಬಯಸುತ್ತಿವೆ. ಜಿಲ್ಲೆಯ ಯುವಕರು ಈ ಸೌಲಭ್ಯದ ಸದುಪಯೋಗ ಪಡೆಯಬೇಕಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.