ಉದ್ಯೋಗ ಮಾತುಕತೆ

7

ಉದ್ಯೋಗ ಮಾತುಕತೆ

Published:
Updated:

ಕೇವಲ ಒಂದು ಬಟನ್ ಒತ್ತಿ, ಉದ್ಯೋಗ ಪಡೆಯಿರಿ. ಅದೂ ಉಚಿತವಾಗಿ.ಅನಕ್ಷರಸ್ಥರು, ಬಡವರು ಹಾಗೂ ನಿರುದ್ಯೋಗಿಗಳಿಗೆ ಉಪಯೋಗವಾಗಲೆಂದು ಬೆಂಗಳೂರಿನ ಉತ್ಸಾಹಿಯೊಬ್ಬರು `ಮಾತುಕತೆ~ ಹೆಸರಿನ ವಿಶಿಷ್ಟ ದೂರವಾಣಿ ಸಾಧನ ಕಂಡು ಹಿಡಿದಿದ್ದಾರೆ. ಕುಗ್ರಾಮದ ಜನರು, ಅಸಂಘಟಿತ ಕಾರ್ಮಿಕರು ಕೂಡ ಇದರ ಲಾಭ ಪಡೆಯಬಹುದು.ಈ ಪುಟ್ಟ ಸಾಧನ ಅಭಿವೃದ್ಧಿ ಪಡಿಸಿದವರು ಮಲ್ಲೇಶ್ವರ ನಿವಾಸಿಯಾಗಿರುವ ಸಾಫ್ಟ್‌ವೇರ್ ಎಂಜಿನಿಯರ್ ನಂದನ್ ರಾಜನ್.ಕಟ್ಟಡ ಕಾರ್ಮಿಕರು, ಕೃಷಿ ಕೆಲಸಗಾರರು, ಬಡಗಿ, ಕೊಳಾಯಿ ರಿಪೇರಿ ಮಾಡುವವರು, ಹೂಹಣ್ಣು ಮಾರುವವರು, ಕೈದೋಟದಲ್ಲಿ ಕೆಲಸ ಮಾಡಲು ಬಯಸುವವರು, ಮನೆಗೆಲಸ ಮಾಡುವವರು ಹೀಗೆ  ಅನೇಕರಿಗೆ   ಈ ಸಾಧನ ಉದ್ಯೋಗ ಮಾಹಿತಿ ಒದಗಿಸಲಿದೆ.ಅಲ್ಲದೆ ಉದ್ಯೋಗಾಕಾಂಕ್ಷಿಗಳು ಹಾಗೂ ಉದ್ಯೋಗದಾತರ ನಡುವೆ ಸಂಪರ್ಕ ಕೊಂಡಿಯಾಗಿ ಇದು ಕೆಲಸ ಮಾಡಲಿದೆ. ಮಧ್ಯವರ್ತಿಗಳ ಅಗತ್ಯವಿಲ್ಲದೇ ನೇರವಾಗಿ ಮಾಲೀಕರಿಂದಲೇ ಕೆಲಸ ಪಡೆಯಲು ಇದು ಅನುಕೂಲಕರ.ಗಾತ್ರದಲ್ಲಿ ಕಾಯಿನ್ ಬೂತ್‌ನಂತೆಯೇ ಇರುವ ಇದು ದೂರವಾಣಿ ಹಾಗೂ ಎಟಿಎಂ ಯಂತ್ರದ ಹೈಬ್ರಿಡ್ ಮಾದರಿಯಂತೆ ಕಾರ್ಯ ನಿರ್ವಹಿಸಲಿದೆ. ಅನಕ್ಷರಸ್ಥರಿಗೆ ಕೂಡ ಅನುಕೂಲವಾಗಲೆಂದೇ ದೂರವಾಣಿಗಿಂತಲೂ ಸರಳವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.ದೂರವಾಣಿಯಂತೆ ಸಂಖ್ಯೆಗಳು ಸಂಕೀರ್ಣವಾದ ಮೆನು ಇಲ್ಲಿರುವುದಿಲ್ಲ. ಇಲ್ಲಿರುವ ಹಸಿರು ಹಾಗೂ ಕೆಂಪು ಬಟನ್‌ಗಳ ಮೂಲಕವೇ ಸಂಪೂರ್ಣ ರೀತಿಯಲ್ಲಿ ಉದ್ಯೋಗ ಮಾಹಿತಿ ಪಡೆಯಬಹುದು.ಉದ್ಯೋಗಾಂಕಾಕ್ಷಿಗಳ ಹಾಗೂ ಮಾಲೀಕರ ಬಗೆಗಿನ ಮಾಹಿತಿ ಕೇಂದ್ರ ಸರ್ವರ್‌ನಲ್ಲಿ ದಾಖಲಾಗುತ್ತದೆ. ಅಲ್ಲದೆ ಕೆಲಸಗಾರರ ಬಗ್ಗೆ ಮಾಲೀಕರಿಂದ ಫೀಡ್‌ಬ್ಯಾಕ್ ಪಡೆಯಲಾಗುತ್ತದೆ.ವ್ಯಕ್ತಿಯ ಕಾರ್ಯವೈಖರಿ ಉತ್ತಮವಾಗಿದ್ದರೆ ಅವರ ಬಗ್ಗೆ ಹೊಸ ಉದ್ಯೋಗದಾತರಿಗೆ ವಿಶೇಷ ಮಾಹಿತಿ ನೀಡಲಾಗುತ್ತದೆ. ಇದರಿಂದ ಅಸಂಘಟಿತ ಕಾರ್ಮಿಕರು ಪದೇ ಪದೇ ನಿರುದ್ಯೋಗಿಗಳಾಗುವ ಭೀತಿ ಇರುವುದಿಲ್ಲ.`ಹೆಚ್ಚು ಜನರನ್ನು ತಲುಪುವ ನಿಟ್ಟಿನಲ್ಲಿ ಕನ್ನಡ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿ ಧ್ವನಿಮುದ್ರಿಕೆ ಒದಗಿಸಲಾಗುತ್ತಿದೆ. ಒಬ್ಬ ವ್ಯಕ್ತಿ ವೈವಿಧ್ಯಮಯವಾದ ಕೆಲಸಗಳನ್ನು ಆಯ್ದುಕೊಳ್ಳಲು ಸಾಧನ ಅವಕಾಶ ಕಲ್ಪಿಸುತ್ತದೆ.ಒಂದು ವೃತ್ತಿಯಿಂದ ಮತ್ತೊಂದು ವೃತ್ತಿಗೆ ಕೂಡ ಬದಲಾಗಲು ಕೂಡ ಇಲ್ಲಿ ಅವಕಾಶವಿದೆ~ ಎನ್ನುತ್ತಾರೆ ನಂದನ್.ಹೀಗೆ ಕೆಲಸ ಮಾಡುತ್ತದೆ:
ಉದ್ಯೋಗ ಬಯಸುವವರು ಮಾಡಬೇಕಿರುವುದು ಇಷ್ಟು: ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಸಲಹಾ ಕೇಂದ್ರದಲ್ಲಿ ಉಚಿತವಾಗಿ ದೊರೆಯುವ ಬಾರ್ ಕೋಡ್ ಇರುವ ಗುರುತಿನ ಚೀಟಿಯನ್ನು ಪಡೆಯಬೇಕು.

ಕಾಯಿನ್ ಬೂತ್ ಮಾದರಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲಾಗುವ ಈ ಸಾಧನದಲ್ಲಿ ಗುರುತಿನ ಚೀಟಿಯನ್ನು `ಸ್ವೈಪ್~ ಮಾಡಬೇಕು.ಯಂತ್ರವು ಸ್ವಯಂಚಾಲಿತವಾಗಿ  ವ್ಯಕ್ತಿಯನ್ನು ಗುರುತಿಸಿ ಮಾಹಿತಿ ನೀಡುತ್ತದೆ. ಯಾವುದಾದರೂ ಉದ್ಯೋಗ ಇಷ್ಟವಾದರೆ ಹಸಿರು ಬಟನ್ ಕ್ಲಿಕ್ಕಿಸಬಹುದು. ಇಲ್ಲದೆ ಹೋದರೆ ಕೆಂಪು ಬಟನ್ ಒತ್ತುವ ಮೂಲಕ ಬೇರೆ ಉದ್ಯೋಗಗಳ ಮಾಹಿತಿ ಪಡೆಯಬಹುದು.ಕೆಲಸ ಒಪ್ಪಿಗೆಯಾದರೆ  ಸಾಧನದಲ್ಲಿ ಅಳವಡಿಸಲಾಗಿರುವ ಧ್ವನಿ ಮುದ್ರಿಕೆಯು ದಿನದಲ್ಲಿ ಲಭ್ಯವಿರುವ ಉದ್ಯೋಗದ ವಿವರ, ಸಮಯ, ವಿಳಾಸ ಹಾಗೂ ಉದ್ಯೋಗದಾತರ ದೂರವಾಣಿ ಸಂಖ್ಯೆಯನ್ನು ಒದಗಿಸುತ್ತದೆ.

 ಒಂದು ಬಟನ್ ಒತ್ತುವ ಮೂಲಕ ಉದ್ಯೋಗದಾತರೊಂದಿಗೆ ನೇರವಾಗಿ ಮಾತನಾಡಿ ವೇತನ, ಕೆಲಸದ ಅವಧಿ ಇತರೆ ಸೌಲಭ್ಯಗಳ ಮಾಹಿತಿ ಪಡೆಯಬಹುದಾಗಿದೆ.ನಂದನ್ ಅವರ ಪ್ರಕಾರ ಗ್ರಾಮೀಣ ಜನರನ್ನು ಗಮನದಲ್ಲಿಟ್ಟುಕೊಂಡು ಸಾಧನವನ್ನು ಅಭಿವೃದ್ಧಿಪಡಿಸಲಾಗಿದೆ. ಮೊದಲು ನಗರದ ಆಯ್ದ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಸಾಧನವನ್ನು ಅಳವಡಿಸಲಾಗುವುದು.

 

ನಂತರ ಇದನ್ನು ರಾಜ್ಯದ ಹಳ್ಳಿಗಳಿಗೂ ವಿಸ್ತರಿಸಲಾಗುವುದು. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಕಾಲ್ ಸೆಂಟರ್ ಸ್ಥಾಪಿಸಲಾಗುತ್ತದೆ. ಉದ್ಯೋಗ ನೀಡುವವರು ಕಾಲ್ ಸೆಂಟರ್‌ಗೆ ಕರೆ ಮಾಡಿ ಅಥವಾ `ಇ-ಮೇಲ್~ ಮುಖಾಂತರ ಉದ್ಯೋಗದ ಬಗ್ಗೆ ಜಾಹೀರಾತು ನೀಡಬಹುದು.ಉದಾಹರಣೆಗೆ ಒಂದು ಕೆಲಸದ ಬಗ್ಗೆ ನಿಮಗೆ ತರಬೇತಿ ಅವಶ್ಯಕತೆ ಇದೆಯೇ ಎಂದು ಸಾಧನ ಧ್ವನಿ ಮುದ್ರಿಕೆ ಮೂಲಕ ಕೇಳುತ್ತದೆ. ಹೌದು ಎಂದು ಬಟನ್ ಒತ್ತಿದರೆ ತರಬೇತಿ ನೀಡುವ ಸ್ಥಳ, ಅಲ್ಲಿನ ಸೌಲಭ್ಯಗಳು, ಸಮಯ, ಸಂಘಟಕರ ಬಗೆಗಿನ ಮಾಹಿತಿಯನ್ನೂ ತಿಳಿಸುತ್ತದೆ. ಸಾಧನದ ಹಕ್ಕು ಸ್ವಾಮ್ಯಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ.ಪೇಟೆಂಟ್ ಪ್ರಕ್ರಿಯೆ ಮುಂದುವರಿದಿದ್ದು ನಂದನ್ ಸಾಧನವನ್ನು ಇನ್ನಷ್ಟು ಜನಸ್ನೇಹಿಯಾಗಿ ರೂಪಿಸುವತ್ತ ಗಮನ ಹರಿಸಿದ್ದಾರೆ. ಮಾಹಿತಿಗೆ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: 87628 01618 ಹಾಗೂಇ-ಮೇಲ್  mathukathe­@­yahoo.com

          

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry