ಉದ್ಯೋಗ ಮೇಳ: ಆಕಾಂಕ್ಷಿಗಳಿಗೆ ಉತ್ತಮ ಅವಕಾಶ

7

ಉದ್ಯೋಗ ಮೇಳ: ಆಕಾಂಕ್ಷಿಗಳಿಗೆ ಉತ್ತಮ ಅವಕಾಶ

Published:
Updated:

ದಾವಣಗೆರೆ: ‘ಉದ್ಯೋಗ ಮೇಳಗಳು ಬಡ ಗ್ರಾಮೀಣ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಲು ಉತ್ತಮ ವೇದಿಕೆಯಾಗಿದ್ದು, ಆಕಾಂಕ್ಷಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಜಿಎಂಐಟಿ ಕಾಲೇಜಿನಅಧ್ಯಕ್ಷ ಜಿ.ಎಂ.ಲಿಂಗರಾಜ್ ಅಭಿಪ್ರಾಯಪಟ್ಟರು.ಜಿಎಂಐಟಿ ಕಾಲೇಜಿನಲ್ಲಿ ಭಾನುವಾರ ನಡೆದ ‘ಉದ್ಯೋಗ ಮೇಳ’ದಲ್ಲಿ ಮಾತನಾಡಿದ ಅವರು, ‘ತಾಂತ್ರಿಕ ಶಿಕ್ಷಣ ಪಡೆದು ಹೊರಬಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉದ್ಯೋಗ ಎಂಬುದು ಇಂದು ಗಗನಕುಸುಮವಾಗಿದೆ. ಉದ್ಯೋಗ ಮೇಳಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶನದ ಮೂಲಕ ಉದ್ಯೋಗ ಪಡೆದುಕೊಳ್ಳಬಹುದು’ ಎಂದು ಸಲಹೆ ನೀಡಿದರು.ಗ್ರಾಮೀಣ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಈ ಉದ್ಯೋಗ ಮೇಳವನ್ನು ಸಂಘಟಿಸಲಾಗುತ್ತಿದೆ. ಮೂರು ದಿನಗಳ ಕಾಲ ಮೇಳ ನಡೆಯಲಿದ್ದು, ಆಕಾಂಕ್ಷಿಗಳು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬಹುದು ಎಂದು ಹೇಳಿದರು.

ಉದ್ಯೋಗ ಮೇಳಕ್ಕೆ ಮೊದಲ ದಿನವೇ ಇಷ್ಟೊಂದು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಹುದು ಎಂಬ ನಿರೀಕ್ಷೆ ಇರಲಿಲ್ಲ. ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು ಸಂತೋಷವಾಗಿದೆ ಎಂದರು.ಪ್ರಾಂಶುಪಾಲ ಎಸ್.ಜಿ.ಹಿರೇಮಠ್ ಪ್ರಾಸ್ತಾವಿಕ ಮಾತನಾಡಿ, ಇದೇ ಮೊದಲ ಬಾರಿಗೆ ಕಾಲೇಜಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೂರು ದಿನಗಳ ಕಾಲ ನಡೆಯುವ ಉದ್ಯೋಗ ಮೇಳದ ಯಶಸ್ವಿಗೆ ಕಾಲೇಜಿನ 150 ವಿದ್ಯಾರ್ಥಿಗಳು, 50 ಉಪನ್ಯಾಸಕರು– ಸ್ವಯಂ ಸೇವಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.ಜಿಎಂಐಟಿ ಕಾಲೇಜಿನ ಸಿಇಒ ಬಿ.ವಿ.ಶ್ರೇಯಸ್ ಮಾತನಾಡಿ, ‘ತಾಂತ್ರಿಕ ಶಿಕ್ಷಣ ಪಡೆದ ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಿಕೊಡಬೇಕೆಂಬ ಉದ್ದೇಶದಿಂದ ಉದ್ಯೋಗ ಮೇಳ ಆಯೋಜಿಸಲಾಗಿದೆ. ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾಕಾಶ. ಇನ್ನು ಪ್ರತಿ ವರ್ಷ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗುವುದು. ಅರ್ಹತಾ ಪರೀಕ್ಷೆ ನಂತರ ಸಂದರ್ಶನ ನಡೆಸಿ, ಸೂಕ್ತ ಅಭ್ಯರ್ಥಿಗಳನ್ನು ಕಂಪೆನಿಗಳು ನೇಮಕ ಮಾಡಿಕೊಳ್ಳಲಿವೆ ಎಂದರು.ಉದ್ಯೋಗಾಧಿಕಾರಿ ಪ್ರೊ.ಎಂ. ಎನ್.ರಜನೀಶ್, ಕೊಂಡಜ್ಜಿ ಜಯಪ್ರಕಾಶ್ ಉಪಸ್ಥಿತರಿದ್ದರು.ಉತ್ಸಾಹದ ಬುಗ್ಗೆ..!

ಅಲ್ಲಿ ಹೊಸ ನಿರೀಕ್ಷೆ... ಹೊಸ ಕನಸಿಗಳು ಗರಿಬಿಚ್ಚುವ ಸಮಯ. ಜಿಎಂಐಟಿ ಕಾಲೇಜು ಆವರಣದ ತುಂಬೆಲ್ಲಾ ಭಾನುವಾರ ಉದ್ಯೋಗ ಆಕಾಂಕ್ಷಿಗಳದ್ದೇ ಕಲರವ... ಇದೇ ಮೊದಲ ಬಾರಿಗೆ ಕಾಲೇಜು ಹಮ್ಮಿಕೊಂಡಿದ್ದ ಉದ್ಯೋಗ ಮೇಳಕ್ಕೆ (ಜಾಬ್‌ ಅರೇನಾ) ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ದೊರೆಯಿತು.

ವಿವಿಧ ಕಾಲೇಜುಗಳಿಂದ ಆಗಮಿಸಿದ್ದ 1,800 ವಿದ್ಯಾರ್ಥಿಗಳು ತಮ್ಮ ಹೆಸರು ನೋಂದಣಿ ಮಾಡಿಕೊಂಡರು. ಅದಕ್ಕಾಗಿ ಆವರಣದಲ್ಲಿ ಕೌಂಟರ್‌ ವ್ಯವಸ್ಥೆ ಮಾಡಲಾಗಿತ್ತು.ಉದ್ಯೋಗ ಮೇಳದಲ್ಲಿ 15ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸಿದ್ದವು. ತಾಂತ್ರಿಕ ವಿದ್ಯಾರ್ಥಿಗಳು (ಬಿಇ) ಮತ್ತು ಮ್ಯಾನೇಜ್‌ಮೆಂಟ್ (ಎಂಬಿಎ) ವಿದ್ಯಾರ್ಥಿಗಳು ಮೊದಲ ದಿನವೇ ತಮ್ಮ ಹೆಸರು ನೋಂದಾಯಿಸುವುದರ ಮೂಲಕ ಉತ್ಸಾಹದಿಂದ ಭಾಗವಹಿಸಿದ್ದರು.

ಪ್ರತಿಷ್ಠಿತ ಕಂಪೆನಿಗಳಾದ ಎಚ್‌ಸಿಎಲ್, ಪ್ಯಾನಸೋನಿಕ್, ಜಿಂದಾಲ್, ಇಂಡಿಯಾ ಮಾರ್ಟ್, ಎಚ್‌ಡಿಎಫ್‌ಸಿ ಬ್ಯಾಂಕ್, ಒಕಾಯಾ, ವಿಡಿಯೊಕಾನ್ ಸೇರಿದಂತೆ ಹಲವು ಕಂಪೆನಿಗಳು ಭಾಗವಹಿಸಿದ್ದವು. ಈ ಮೇಳವು ಇನ್ನೂ ಎರಡು ದಿನಗಳ ಕಾಲ ನಡೆಯಲಿದ್ದು, ಜ.7ರ ಸಂಜೆ 6.00ಕ್ಕೆ ಮುಕ್ತಾಯಗೊಳ್ಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry