ಉದ್ಯೋಗ ಸೃಷ್ಟಿಸುವಲ್ಲಿ ಕೇಂದ್ರ ವಿಫಲ

7
ಸಮಾಜವಾದಿ ಪಕ್ಷದ ಸಮಾವೇಶದಲ್ಲಿ ಮುಲಾಯಂ ಸಿಂಗ್ ಆರೋಪ

ಉದ್ಯೋಗ ಸೃಷ್ಟಿಸುವಲ್ಲಿ ಕೇಂದ್ರ ವಿಫಲ

Published:
Updated:
ಉದ್ಯೋಗ ಸೃಷ್ಟಿಸುವಲ್ಲಿ ಕೇಂದ್ರ ವಿಫಲ

ಚಿತ್ರದುರ್ಗ: ದೇಶದ ನಿರುದ್ಯೋಗಿ ಯುವಸಮೂಹಕ್ಕೆ ಉದ್ಯೋಗ ಸೃಷ್ಟಿಸುವಲ್ಲಿ ಈಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವಿಫಲವಾಗಿದೆ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಟೀಕಿಸಿದರು.

ನಗರದ ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ಸೋಮವಾರ ಸಮಾಜವಾದಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ಕಳೆದ ಹಲವಾರು ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದೆ. ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಸಾಮಾನ್ಯ ಜನರು ಜೀವನ ನಡೆಸುವುದೇ ಕಷ್ಟವಾಗಿದೆ ಎಂದರು.ಕಾಂಗ್ರೆಸ್ ಹಾಗೂ ಬಿಜೆಪಿ ಆಡಳಿತದಿಂದ ರಾಷ್ಟ್ರದಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಆದ್ದರಿಂದ ದೇಶದ ಉತ್ತಮ ಭವಿಷ್ಯಕ್ಕೆ ಸಮಾಜವಾದಿ ಪಕ್ಷವನ್ನು ಬೆಂಬಲಿಸುವ ಮೂಲಕ ತೃತೀಯ ರಂಗ ಸರ್ಕಾರ ರಚನೆಗೆ ಮತದಾರರು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.ಉತ್ತರಪ್ರದೇಶದಲ್ಲಿ ಅಖಿಲೇಶ್ ಉತ್ತಮ ಆಡಳಿತ ನೀಡುತ್ತ್ದ್ದಿದ್ದರೂ ಕೂಡ ಕರ್ನಾಟಕ ರಾಜ್ಯದ ಜನರಲ್ಲಿ ತಪ್ಪು ಭಾವನೆ ಮೂಡಿಸುವ ಕೆಲಸವನ್ನು ಇಲ್ಲಿನ ಕೆಲವು ಜನಪ್ರತಿನಿಧಿಗಳು ಮಾಡುತ್ತಿದ್ದಾರೆ. ಅಲ್ಲಿನ ವಾಸ್ತವವೇ ಬೇರೆ. ನಿರುದ್ಯೋಗಿ ಯುವಕರಿಗೆ ನಮ್ಮ ಸರ್ಕಾರ ಹಲವು ಯಶಸ್ವಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅನುಮಾನವಿದ್ದರೆ ರಾಜ್ಯಕ್ಕೆ ಬಂದು ಪರೀಕ್ಷಿಸಬಹುದು ಎಂದು ಹೇಳಿದರು.ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮಾತನಾಡಿ, ದೇಶದ ಜನತೆಗೆ ನಿರಾಸೆ ಉಂಟು ಮಾಡುವ ರೀತಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಆಡಳಿತ ನಡೆಸಿವೆ. ಆರ್ಥಿಕ ಸಂಕಷ್ಟದಿಂದ ದೇಶದ ಅಭಿವೃದ್ಧಿ ಕುಂಠಿತವಾಗಿದೆ. ತೃತೀಯ ರಂಗ ರಚನೆಗೆ ನಾವು ಸಿದ್ಧರಾಗಿದ್ದೇವೆ ಎಂದರು.ತೃತೀಯ ರಂಗ ಆಡಳಿತಕ್ಕೆ ಬಂದರೆ ರೈತರು, ಬಡವರು, ಸಾಮಾನ್ಯರು ಸೇರಿದಂತೆ ನಿರುದ್ಯೋಗಿಗಳಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಈ ನಿಟ್ಟಿನಲ್ಲಿ ತೃತೀಯ ರಂಗವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕು ಎಂದು ತಿಳಿಸಿದರು.ಶಾಸಕ ಸಿ.ಪಿ.ಯೋಗೀಶ್ವರ್ ಹಾಗೂ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ರಾಜ್ಯದಲ್ಲಿ ಪಕ್ಷ ಬಲಪಡಿಸಲು ಮುಂದಾಗಿದ್ದಾರೆ. ಅವರಿಗೆ ಬೆಂಬಲ ನೀಡುವುದರ ಜತೆಗೆ ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿರುವ ಗೂಳಿಹಟ್ಟಿ ಶೇಖರ್ ಅವರನ್ನು ಈ ಜಿಲ್ಲೆಯಿಂದ ಚುನಾಯಿಸಿ ಕಳುಹಿಸಬೇಕು ಎಂದು ಮನವಿ ಮಾಡಿದರು.ರಾಜ್ಯಸಭಾ ಸದಸ್ಯ ಕಿರಣ್‌ಮಹಿನಂದ ಮಾತನಾಡಿ, ಮುಲಾಯಂಸಿಂಗ್ ಯಾದವ್ ರಾಷ್ಟ್ರದ ಪ್ರಶ್ನಾತೀತ ನಾಯಕರಾಗಿದ್ದು, ಅವರಿಗೆ ವಿರೋಧಿಗಳೇ ಇಲ್ಲ. ಇಂತಹ ಮುಖಂಡರು ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಸಿಗಲು ಸಾಧ್ಯವಿಲ್ಲ ಎಂದರು.ಉತ್ತರ ಭಾರತದಲ್ಲಿ ಧಾರ್ಮಿಕ ಭಾವನೆ ಕೆದಕಿ ಮತ ಕೀಳಲು ಕೆಲವು ಮುಖಂಡರು ಆಗಮಿಸಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ ಎಂದು ಹೇಳಿದರು.ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಮಾತನಾಡಿ, ಪಕ್ಷದ ತತ್ವ ಸಿದ್ಧಾಂತ ಒಪ್ಪಿಕೊಂಡು ಸಮಾಜವಾದಿ ಪಕ್ಷವನ್ನು ಸೇರಿದ್ದೇನೆ. ಮುಲಾಯಂ ಸಿಂಗ್ ಅವರನ್ನು ಪ್ರಧಾನಿಯಾಗಿ ಮಾಡಲು ಪಕ್ಷದ ಪ್ರತಿಯೊಬ್ಬರೂ ಪಣತೊಡಬೇಕಿದೆ ಎಂದರು.ಸಮಾಜವಾದಿ ಪಕ್ಷದ ಮುಖಂಡರಾದ ರಾಜೀವ್ ರಾಯ್, ರಾಜೇಶ್, ದೀಕ್ಷಿತ್, ಸುಧೀರ್ ಯಾದವ್, ರಾಮ್‌ಸಿಂಗ್, ಸಂತಲಪಾಂಡೆ, ಸಂಜಯ್ ರಾಥೋಡ್, ಅಮಿತಾ ಬಾಬ್‌ಜೀ, ಅನುಪ್ ಸಿಂಗ್, ಲಲಿತಾಹೆಗ್ಡೆ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry