ಮಂಗಳವಾರ, ಸೆಪ್ಟೆಂಬರ್ 17, 2019
21 °C

ಉದ್ರಿಕ್ತ ಮಹಿಳೆಯರು ಠಾಣೆಗೆ ದೌಡು

Published:
Updated:
ಉದ್ರಿಕ್ತ ಮಹಿಳೆಯರು ಠಾಣೆಗೆ ದೌಡು

ಸಿಂಧನೂರು: ನಗರದ ಧೋಬಿ ಗಲ್ಲಿಯಲ್ಲಿ ಮಹಿಳಾ ಶೌಚಾಲಯದ ಜಾಗದಲ್ಲಿ ಮರಂ ಹಾಕಿಸಿದ ಹಿನ್ನೆಲೆಯಲ್ಲಿ ಕಾಟಿಬೇಸ್, ವಳಕೋಟೆ ವೀರಭದ್ರೇಶ್ವರ ದೇವಸ್ಥಾನದ ಪಕ್ಕದ ಬಡಾವಣೆಯ ಮಹಿಳೆಯರು ರೊಚ್ಚಿಗೆದ್ದು ಪೊಲೀಸ್ ಠಾಣೆಗೆ ದೌಡಾಯಿಸಿದ ಘಟನೆ ಭಾನುವಾರ ಜರುಗಿತು.ಬಡಾವಣೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ತಡೆಯಾಜ್ಞೆ ತಂದಿದ್ದು ಅದೇ ಜಾಗದಲ್ಲಿ ಮರಿಯಪ್ಪ ಎನ್ನುವವರು ರಸ್ತೆ ಹಾಕುತ್ತಿದ್ದಾರೆ ಎನ್ನುವ ಸುದ್ದಿ ಹರಡಿದ ಹಿನ್ನೆಲೆಯಲ್ಲಿ ನೂರಾರು ಮಹಿಳೆಯರು ಶೌಚಾಲಯದ ಜಾಗಕ್ಕೆ ಬಂದು ಮರಂ ಹಾಕಿಸಿದ ಮರಿಯಪ್ಪ ಎನ್ನುವವರೊಂದಿಗೆ ವಾಗ್ವಾದಕ್ಕಿಳಿದರು.ತಾನು ರಸ್ತೆ ನಿರ್ಮಿಸಲು ಮರಂ ಹಾಕಿಸಿಲ್ಲ. ಮನೆಯ ಕೆಲಸಕ್ಕೊಸ್ಕರ ಹಾಕಿಸಿದ್ದೇನೆಂದು ಆತನು ಮಹಿಳೆಯರನ್ನು ಸಮುಜಾಯಿಸಲು ನಡೆಸಿದ ಪ್ರಯತ್ನ ಫಲಿಸಲಿಲ್ಲ. ಅದೇ ಜಾಗದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಮಹಿಳಾ ಶೌಚಾಲಯವಿದ್ದು ಅದು ತುಂಬಾ ಹಳೆಯದಾಗಿರುವುದರಿಂದ ಕೆಡವಿ ಹೊಸದಾಗಿ ಸುವ್ಯವಸ್ಥಿತ ಶೌಚಾಲಯ ಕಟ್ಟಲು ನಗರಸಭೆ ತೀರ್ಮಾನಿಸಿ ಕಾಮಗಾರಿ ಆರಂಭಿಸುವ ಸಮಯದಲ್ಲಿ ಮರಿಯಪ್ಪ ಸೇರಿದಂತೆ ಅಲ್ಲಿಯ ಕೆಲ ವ್ಯಕ್ತಿಗಳು ಶೌಚಾಲಯ ನಿರ್ಮಾಣಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಕಾರಣ ಶೌಚಾಲಯ ನಿರ್ಮಾಣ ಅಂದಿನಿಂದ ಸ್ಥಗಿತಗೊಂಡಿತ್ತು. ಭಾನುವಾರ ಏಕಾಏಕಿ ತಡೆಯಾಜ್ಞೆ ತರಲು ಕಾರಣನಾದ ವ್ಯಕ್ತಿಯೇ ಆ ಜಾಗದಲ್ಲಿ ರಸ್ತೆ ನಿರ್ಮಿಸುವ ಮೂಲಕ ಮಹಿಳಾ ಶೌಚಾಲಯವನ್ನೇ ಇಲ್ಲದಂತೆ ಮಾಡುತ್ತಾನೆ ಎನ್ನುವ ಸುದ್ದಿಯಿಂದ ಗಲಿಬಿಲಿಗೊಂಡ ಮಹಿಳೆಯರು ಮರಿಯಪ್ಪನ ಮೇಲೆ ಹರಿಹಾಯ್ದರು. ಶೌಚಾಲಯ ಪಕ್ಕದ ಮನೆಗಳ ಮಹಿಳೆಯರು ಮತ್ತು ಇತರ ಮಹಿಳೆಯರ ನಡುವೆ ನಡೆದ ಪರಸ್ಪರ ವಿವಾದ, ಗದ್ದಲ, ಕೂಗಾಟ ಸಮೀಪದಲ್ಲಿಯೇ ಇರುವ ಪೊಲೀಸ್ ಠಾಣೆಗೆ ತಲುಪಿ ಪಿಎಸ್‌ಐ ಲಿಂಗಪ್ಪ ಎನ್.ಆರ್, ಡಿವೈಎಸ್‌ಪಿ ಬಿ.ಡಿ.ಡಿಸೋಜಾ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು. ಈ ಮಧ್ಯೆ ಕೆಲವರು ನಗರಸಭೆಗೆ ತೆರಳಿ ಪೌರಾಯುಕ್ತ ಕೊಪ್ರೇಶಾಚಾರ ಅವರನ್ನು ಸಹ ಸ್ಥಳಕ್ಕೆ ಕರೆದುಕೊಂಡು ಬಂದರು.ನ್ಯಾಯಾಲಯದ ತಡೆಯಾಜ್ಞೆಯನ್ನು ಉಲ್ಲಂಘಿ ಸಿದ ಹಿನ್ನೆಲೆಯಲ್ಲಿ ಮರಿಯಪ್ಪನ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸುವುದಾಗಿ ಪೌರಾಯುಕ್ತರು ಭರವಸೆ ನೀಡಿದರು. ತದನಂತರ ನಗರಸಭೆ ಸದಸ್ಯ ಚಂದ್ರಶೇಖರ ಮೈಲಾರ ಮತ್ತಿತರ ಮುಖಂಡರು ಮರಿಯಪ್ಪ ಅವರೊಂದಿಗೆ ಚರ್ಚಿಸಿ ಹಾಕಲಾದ ಮರಂನ್ನು ಅಲ್ಲಿಂದ ತೆಗೆದುಹಾಕಿದ ನಂತರವೇ ಮಹಿಳೆಯರು ಗಲಾಟೆಗೆ ವಿರಾಮ ಹೇಳಿದರು.

Post Comments (+)