ಉನ್ನತ ಶಿಕ್ಷಣಕ್ಕೆ ಆರ್ಥಿಕ ತೊಂದರೆ: ವಿಷಾದ

7

ಉನ್ನತ ಶಿಕ್ಷಣಕ್ಕೆ ಆರ್ಥಿಕ ತೊಂದರೆ: ವಿಷಾದ

Published:
Updated:
ಉನ್ನತ ಶಿಕ್ಷಣಕ್ಕೆ ಆರ್ಥಿಕ ತೊಂದರೆ: ವಿಷಾದ

ನಾಪೋಕ್ಲು: ನಮ್ಮ ದೇಶದಲ್ಲಿ 1 ರಿಂದ 20 ವಯಸ್ಸಿನ ವಿದ್ಯಾರ್ಥಿಗಳು 44 ರಿಂದ 50 ಕೋಟಿ ಇದ್ದು, ಪದವಿ ತರಗತಿಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಕೇವಲ ಶೇ 11. ಇನ್ನುಳಿದವರು ಆರ್ಥಿಕ ಹಿನ್ನಡೆಯಿಂದ ವಿದ್ಯಾಭ್ಯಾಸ ಮೊಟಕುಗೊಳಿಸುತ್ತಿದ್ದಾರೆ. ಇದರ ಬಗ್ಗೆ ಗಂಭೀರ ಚಿಂತನೆ ಅಗತ್ಯ ಎಂದು ವಿಧಾನ ಪರಿಷತ್ ಸದಸ್ಯ ಮೇರಿಯಂಡ ಸಿ. ನಾಣಯ್ಯ ಹೇಳಿದರು.ಸಮೀಪದ ಮೂರ್ನಾಡು ವಿದ್ಯಾ ಸಂಸ್ಥೆಯ ಕ್ರೀಡಾಂಗಣದಲ್ಲಿ ಈಚೆಗೆ ಏರ್ಪಡಿಸಲಾಗಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯ ಬಜೆಟ್‌ನಲ್ಲಿ ಹಿಂದೆ ಶಿಕ್ಷಣಕ್ಕೆ ಕೇವಲ 3 ಸಾವಿರ ಕೋಟಿ ಅನುದಾನ ಮೀಸಲಿಡಲಾಗುತ್ತಿತ್ತು. ಆದರೆ, ಪ್ರಸ್ತುತ ಬಜೆಟ್‌ನಲ್ಲಿ ರೂ. 13 ಸಾವಿರ ಕೋಟಿ ಮೀಸಲಿಡಲಾಗುತ್ತಿದೆ. ಆದರೂ ಪದವೀಧರರ ಸಂಖ್ಯೆ ಏರಿಲ್ಲ ಎಂದರು.ನಮ್ಮ ಪೂರ್ವಿಕರ ಪರೋಪಕಾರ ಮನೋಭಾವನೆಯಿಂದ ಜಿಲ್ಲೆಯ ಪ್ರತಿ ಹಳ್ಳಿಗಳಲ್ಲೂ ಸ್ಥಾಪಿಸಿದ ಶಾಲಾ ಕಾಲೇಜುಗಳಿಂದ ನಮಗೆಲ್ಲ ಶಿಕ್ಷಣ ದೊರೆತಿದೆ. ನಮ್ಮ ಹಿರಿಯರ ಈ ಸೇವೆ ಸ್ಮರಣಾರ್ಹ ಎಂದು ನಾಣಯ್ಯ ಅವರು ಹೇಳಿದರು. ಸ್ಥಳೀಯ ವಿದ್ಯಾ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಸೂಕ್ತ ವ್ಯವಸ್ಥೆಗಳನ್ನು ಒಟ್ಟುಗೂಡಿಸಿಕೊಳ್ಳುತ್ತಿವೆ. ರಾಜ್ಯದ 5 ಕೋಟಿ 6 ಲಕ್ಷ ಜನಸಂಖ್ಯೆಯಲ್ಲಿ 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳ ಸಂಖ್ಯೆ 96 ಲಕ್ಷ ಇದೆ. ಇದರಲ್ಲಿ 77 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದು, ಸರ್ಕಾರಿ ಶಾಲೆಗಳನ್ನು ಕಡೆಗಣಿಸುವಂತಿಲ್ಲ ಎಂದು ಅವರು ಹೇಳಿದರು.ಹಳ್ಳಿಗಳಲ್ಲಿ ಉತ್ತಮ ವಿದ್ಯಾ ಸಂಸ್ಥೆಗಳಿಗೆ ಸಾರ್ವಜನಿಕರು ಉತ್ತೇಜನ ನೀಡಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಸ್ಪರ್ಧಾತ್ಮಕ ಮನೋಭಾವ ಇದ್ದರೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದರು. ಮೂರ್ನಾಡು ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಾಚೆಟ್ಟೀರ ಜಿ. ಮಾದಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಪಳಂಗಂಡ ಎಸ್. ಮುದ್ದಪ್ಪ, ಕಾರ್ಯದರ್ಶಿ ಚೌರೀರ ಎಂ. ಪೆಮ್ಮಯ್ಯ, ನಿರ್ದೇಶಕರಾದ ಪುದಿಯೊಕ್ಕಡ ಸಿ.ಸುಬ್ರಮಣಿ, ಚೇನಂಡ ಬಿ.ಸೋಮಣ್ಣ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎ.ಎಂ. ಶೈಲಾ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಬಿ.ಎಂ. ಸರಸ್ವತಿ, ಮೂರ್ನಾಡು ವಿದ್ಯಾಸಂಸ್ಥೆಯ ಮಾಜಿ ಅಧ್ಯಕ್ಷ ಅವರೆಮಾದಂಡ ಮಂದಣ್ಣ, ಕಾಂತೂರುಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಪುದಿಯೊಕ್ಕಡ ಪೊನ್ನುಮುತ್ತಪ್ಪ, ವಿದ್ಯಾಸಂಸ್ಥೆಯ ಕಾರ್ಯದರ್ಶಿ ಚೌರೀರ ಎಂ. ಪೆಮ್ಮಯ್ಯ, ಶಿಕ್ಷಕ ಎಸ್.ಡಿ. ಪ್ರಶಾಂತ್ ಇದ್ದರು. ಬಳಿಕ ಕಿಡ್ಸ್ ಎಜುಕೇರ್, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry