ಗುರುವಾರ , ನವೆಂಬರ್ 14, 2019
22 °C

ಉನ್ನತ ಶಿಕ್ಷಣಕ್ಕೆ 4 ಕೋಟಿ ವಿದ್ಯಾರ್ಥಿಗಳು: ರಾವ್

Published:
Updated:

ತುಮಕೂರು: ಮುಂದಿನ ಕೆಲ ವರ್ಷಗಳಲ್ಲಿ ಮೂರರಿಂದ ನಾಲ್ಕು ಕೋಟಿ ಯುವ ಜನರು ಉನ್ನತ ಶಿಕ್ಷಣಕ್ಕೆ ಸೇರ್ಪಡೆಯಾಗಲಿದ್ದಾರೆ. ಇಷ್ಟೊಂದು ಅಗಾಧ ಸಂಖ್ಯೆಯ ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯ, ಗುಣಮಟ್ಟದ ಶಿಕ್ಷಣ ನೀಡುವ ಸವಾಲು ದೇಶ ಎದುರಿಸಬೇಕಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಪ್ರೊ.ಸಿ.ಎನ್.ಆರ್.ರಾವ್ ತಿಳಿಸಿದರು.ತುಮಕೂರು ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಪ್ರೊ.ಸಿ.ಎನ್.ಆರ್.ರಾವ್ ಸೆಂಟರ್ ಫಾರ್ ಅಡ್ವಾನ್ಸ್‌ಡ್ ಮೆಟೀರಿಯಲ್ಸ್‌ನ ಉದ್ಘಾಟನೆ ಹಾಗೂ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ವಿಜ್ಞಾನ ಸಂಶೋಧನಾ ನಿಯತಕಾಲಿಕೆ ಬಿಡುಗಡೆಗೊಳಿಸಿ ಮಾತನಾಡಿದರು.ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚಿದೆ. ಆದರೆ ಅವರಿಗೆ ಅವಕಾಶ ಸೃಷ್ಟಿಸುವ ಸವಾಲು ಕೂಡ ನಮ್ಮ ಮುಂದಿದೆ ಎಂದು ಹೇಳಿದರು.

ಪರೀಕ್ಷಾ ಪದ್ಧತಿಯನ್ನು ಮೌಲ್ಯಮಾಪನ ಮಾಡುವ ಕೆಲಸ ನಡೆಯುತ್ತಿಲ್ಲ. ಮಕ್ಕಳಿಗೆ ಪರೀಕ್ಷೆ ನಡೆಸುವ ಮೂಲಕ ಅವರಲ್ಲಿ ಒತ್ತಡ ಸೃಷ್ಟಿ ಮಾಡುತ್ತಿದ್ದೇವೆಯೇ ಹೊರತು ಗುಣಾತ್ಮಕವಾಗಿ ಬದಲಾಯಿಸುತ್ತಿಲ್ಲ. ಉನ್ನತ ಶಿಕ್ಷಣದ ಸಮಗ್ರ ಸುಧಾರಣೆ ಆಗಬೇಕಾದ ಅಗತ್ಯವಿದೆ ಎಂದರು.ಭಾರತ ಜಗತ್ತಿನ ಮೂರನೇ ಬಲಾಢ್ಯ ಆರ್ಥಿಕತೆ ಹೊಂದಿದ, ಯುವ ಸಮೂಹ ತುಂಬಿರುವ, ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ಕೈಗೊಂಡಿರುವ ದೇಶವೆಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಆದರೆ ದಕ್ಷಿಣ ಕೊರಿಯಾ ರೀತಿ ಬಲಾಢ್ಯವಾಗಿ ಬೆಳೆದಿಲ್ಲ. ಚೀನಾ ನಮಗೆ ಮಾದರಿಯಲ್ಲ, ದಕ್ಷಿಣ ಕೊರಿಯಾ ಮಾದರಿಯಾಗಬೇಕಿದೆ ಎಂದು ಸಲಹೆ ನೀಡಿದರು.ಯುವಕರು ಸಿನಿಕತನ, ಸೋಮಾರಿತನ ಬಿಟ್ಟು ಅವಕಾಶ ಬಳಸಿಕೊಂಡು ದೇಶದ ಅಭಿವೃದ್ಧಿಗಾಗಿ ದುಡಿಯಬೇಕು ಎಂದು ಕೋರಿದರು.

ಪ್ರೊ.ಸಿ.ಎನ್.ಆರ್.ರಾವ್ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ರಾಜ್ಯಪಾಲ  ಎಚ್.ಆರ್.ಭಾರದ್ವಾಜ್, ಯುವಕರು ಕೆಲಸ ಮಾಡದೆ ಯಾವುದೇ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.ಭಾರತ ಪ್ರಜಾತಂತ್ರಕ್ಕೆ ಅತ್ಯುತ್ತಮ ಉದಾಹರಣೆಯಾಗಿದ್ದು, ಜವಾಹರಲಾಲ್ ನೆಹರೂ ದೇಶದ ಆರ್ಥಿಕತೆಗೆ ಬಲಾಢ್ಯ ಬುನಾದಿ ಹಾಕಿದರು. ಮಹಾತ್ಮ ಗಾಂಧಿ ವಿಶ್ವದ ನಾಯಕರಾಗಿದ್ದು, ಅವರ ಅಹಿಂಸಾ, ಗಾಂಧಿವಾದ ಕುರಿತು ಕೆಲವರು ಸಿನಿಕತನ ತೋರುತ್ತಾರೆ. ಆದರೆ ಎಲ್ಲ ಜನರಿಗೂ ಸಮಾನ ಅವಕಾಶ ಕಲ್ಪಿಸಿಕೊಡಬೇಕು ಎಂಬುದು ಗಾಂಧಿ ಕನಸಾಗಿತ್ತು. ಇದು ನಮ್ಮ ದೇಶದ ಸಮಾಜವಾದ ಎಂದರು.ಪ್ರಫುಲ್ಲಾ ಭಾರದ್ವಾಜ್, ಇಂದುಮತಿರಾವ್, ಕುಲಪತಿ ಪ್ರೊ.ಎಸ್.ಸಿ.ಶರ್ಮಾ, ಕುಲಸಚಿವ ಪ್ರೊ.ಡಿ.ಶಿವಲಿಂಗಯ್ಯ, ರಾಮಕೃಷ್ಣ ಆಶ್ರಮದ ಡಾ.ವೀರೇಶಾನಂದ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)