ಉನ್ನತ ಶಿಕ್ಷಣದಲ್ಲಿ ಪರಿಶಿಷ್ಟರ ಕೊರತೆ ಏಕೆ?

7

ಉನ್ನತ ಶಿಕ್ಷಣದಲ್ಲಿ ಪರಿಶಿಷ್ಟರ ಕೊರತೆ ಏಕೆ?

Published:
Updated:

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್ ಬಿಡುಗಡೆ ಮಾಡಿರುವ `ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ~ಯ ತಾತ್ಕಾಲಿಕ ವರದಿಯ ಪ್ರಕಾರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ಪ.ಜಾತಿ - ಪ.ಪಂಗಡ ವಿದ್ಯಾರ್ಥಿಗಳ ಪ್ರಮಾಣ, ಆ ವರ್ಗಗಳ ಜನಸಂಖ್ಯೆಯ ಶೇಕಡಾವಾರು ಪ್ರಮಾಣ 23 ರಷ್ಟಿರದೆ ಕೇವಲ ಅಂದಾಜು ಶೇ 15 ರಷ್ಟಿದ್ದು ಶೇ 8 ರಷ್ಟು ಕೊರತೆ ಇದೆ.ಸಮಾಜದಲ್ಲಿರುವ ಲಿಂಗ ತಾರತಮ್ಯವು ಈ ವರ್ಷಗಳಲ್ಲಿಯೂ ಆಚರಣೆಯಲ್ಲಿರುವುದರಿಂದ ಹೆಣ್ಣು ಮಕ್ಕಳ ಸಂಖ್ಯೆ ಗಂಡು ಮಕ್ಕಳಿಗಿಂತ ತುಂಬಾ ಕಡಿಮೆ ಇದೆ.ರಾಹುಲ್ ಸಾಂಕೃತಾಯನ, ಸ್ವಾಮಿ ರಾಮತೀರ್ಥ, ನೆಹರು, ಕೊಸಾಂಬಿ ಇತ್ಯಾದಿ ಇತಿಹಾಸಕಾರರ ಪ್ರಕಾರ ಪರಿಶಿಷ್ಟರ ಶಿಕ್ಷಣ ಹಿನ್ನೆಡೆಗೆ ಐತಿಹಾಸಿಕ ಕಾರಣಗಳಿವೆ.ಇವನ್ನು ಉಪೇಕ್ಷೆ ಮಾಡಿ ಸುಧಾರಣೆ ತರುವುದು ತಳಪಾಯವಿಲ್ಲದೆ ಕಟ್ಟಡ ಕಟ್ಟಿದಷ್ಟು ಅವೈಜ್ಞಾನಿಕ. ಸುಮಾರು 3800 ವರ್ಷಗಳ ಹಿಂದೆ ವಿದೇಶಿ ಆರ್ಯರು ಭಾರತಕ್ಕೆ ಲಗ್ಗೆ ಇಟ್ಟು ಇಲ್ಲಿ ಅವರು ರಚಿಸಿದ ಋಗ್ವೇದದ ಪುರುಷ ಸೂಕ್ತವೆಂಬ ಧಾರ್ಮಿಕ ಕಾನೂನಿನ ಮೂಲಕ ದೈಹಿಕ ಶ್ರಮಕ್ಕೆ ಮೀಸಲಾದ ಶೂದ್ರ ವರ್ಣಕ್ಕೆ ಪರಿಶಿಷ್ಟರ ಪೂರ್ವಜರಾದ ನಾಗ ಅಥವ ದ್ರಾವಿಡ ಜನಾಂಗವನ್ನು ಕೆಳಕ್ಕೆ ತಳ್ಳಲಾಯಿತು.ಆರ್ಯರ ವಿರುದ್ಧ ದೇಶದ ಮೊಟ್ಟಮೊದಲ ಸ್ವಾತಂತ್ರ್ಯ ಹೋರಾಟವನ್ನು ಆರಂಭಿಸಿದ ಮೂಲನಿವಾಸಿಗಳ `ಧರ್ಮಯುದ್ಧ~ವನ್ನು ದಮನಿಸಲು ಆರ್ಯ ರಾಜ ಪುಷ್ಯಮಿತ್ರ ಸುಂಗನು ಕ್ರಿ.ಪೂ. 185 ರಲ್ಲಿ ಜಾರಿಗೊಳಿಸಿದ ಮನುಸ್ಮೃತಿಯೆಂಬ ದೇಶದ ಮೊದಲನೆ ಸಂವಿಧಾನದಲ್ಲಿ ಮೂಲನಿವಾಸಿಗಳಾದ ದ್ರಾವಿಡರಿಗೆ ಶಿಕ್ಷಣ, ಅಸ್ತ್ರ, ಅಧಿಕಾರ, ಸಂಪತ್ತು, ಮಾನವ ಹಕ್ಕುಗಳನ್ನು ರದ್ದುಪಡಿಸಲಾಯಿತು.

 

ಸುಮಾರು 1800 ವರ್ಷಗಳಿಂದಲೂ ಎಲ್ಲ ಮಾನವ ಹಕ್ಕುಗಳಿಂದ ವಂಚಿತರಾದ ಈ ಪರಿಶಿಷ್ಟಜಾತಿ - ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಮಹಿಳೆಯರು ಶಿಕ್ಷಣದಲ್ಲಿ ಹಿನ್ನಡೆ ಕಂಡಿದ್ದು ಅಸಹಜ, ಸಹಜ.ಹೀಗೆ ರದ್ದಾಗಿದ್ದ ಮಾನವಹಕ್ಕುಗಳನ್ನು ಡಾ. ಬಾಬಾಸಾಹೇಬ ಅಂಬೇಡ್ಕರರು ರೂಪಿಸಿದ ಸಂವಿಧಾನದಲ್ಲಿ ಪುನರ್ ಸ್ಥಾಪಿಸಲಾಯಿತಾದರೂ ಆಳುವ ಸರ್ಕಾರಗಳು ಸಂವಿಧಾನದ 15 (4), 16 (4), 17, ಮತ್ತಿತರ ವಿಧಾನಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಲಾಗಲಿಲ್ಲವಾಗಿ ಇಂದಿನ ಶೈಕ್ಷಣಿಕ ಅಧಃಪತನಕ್ಕೆ ಕಾರಣವಾಯಿತು.

 

ನ್ಯಾಯಾಲಯಗಳಲ್ಲಿ ಮೀಸಲಾತಿ ನಿಯಮವಿಲ್ಲದ ಕಾರಣ ಶೋಷಿತ ಸಮುದಾಯಗಳು ನ್ಯಾಯಾಧೀಶರಾಗಿಲ್ಲವಾಗಿ ನ್ಯಾಯಾಲಯಗಳು ಸರ್ಕಾರವನ್ನು ಈ ಕುರಿತು ತರಾಟೆಗೆ ತೆಗೆದು ಕೊಂಡಿಲ್ಲ. ಬಡತನದಲ್ಲಿ ನಲುಗಿರುವ ಪರಿಶಿಷ್ಟ ಮಕ್ಕಳು ಪೌಷ್ಟಿಕಾಂಶವಿರುವ ಆಹಾರ ಹೊಂದಲು `ಆಹಾರ ಭದ್ರತೆ~ ಹಕ್ಕಿನ ಜಾರಿ ಅಗತ್ಯ. ಜೈಲು ಕೈದಿಗಳಿಗೆ ಪ್ರೋಟೀನ್, ಕ್ಯಾಲೊರಿ ಮಾನದಂಡದಂತೆ ಆಹಾರ ಪೂರೈಕೆ ಇದ್ದು, ಪರಿಶಿಷ್ಟ ಹಾಸ್ಟೆಲ್‌ಗಳಲ್ಲಿ ಇದೇ ಮಾನದಂಡ ಜಾರಿ ಅಗತ್ಯ.ಈ ವರ್ಗದ ಮಕ್ಕಳು `ಸಮಾನ ಶಿಕ್ಷಣ ನೀತಿ~ ಜಾರಿಯಾದಾಗ ಪ್ರಗತಿ ಕಾಣುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಸುಪ್ರಿಂಕೋರ್ಟಿನ ತೀರ್ಪಿನ ಪ್ರಕಾರ ಒದಗಿಸಬೇಕು. ದೇಶದಾದ್ಯಂತ `ಡ್ರಾಪ್ ಔಟ್~ ಗಳ ಪೈಕಿ ಮುಕ್ಕಾಲು ಭಾಗ ಈ ವರ್ಗಗಳಿಗೆ ಸೇರಲು ಕಾರಣ ವಿವಿಗಳು ಪ್ರವೇಶಾತಿ ಸಂದರ್ಭದಲ್ಲಿ ಶುಲ್ಕ ಭರಿಸುವಂತೆ ಒತ್ತಾಯಿಸುವುದು.

 

ಸಮಾಜ ಕಲ್ಯಾಣ ಇಲಾಖೆಯು ವಿದ್ಯಾರ್ಥಿ ವೇತನ ಮಂಜೂರು ಮಾಡಿದಾಗ ವಿ.ವಿ.ಗಳು ತಮಗೆ ಬರಬೇಕಾದ ಶುಲ್ಕಗಳನ್ನು ಪಡೆಯುವ ಸಹನೆ ಹೊಂದಿಲ್ಲ. ಇಲ್ಲವೇ ಒಂದು ಬಾರಿ ಸಮಾಜ ಕಲ್ಯಾಣ ಇಲಾಖೆಯು ಮುಂಗಡ ಹಣವನ್ನು ಎಲ್ಲ ವಿವಿಗಳಿಗೆ ನೀಡಿದರೆ ಆ ಹಣವೇ ಶಾಶ್ವತವಾಗಿ ಇಡುಗಂಟಾಗಿ ವಿವಿಗಳಲ್ಲಿ ಇದ್ದು ಪರಿಶಿಷ್ಟ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮುಂದುವರಿಸಲು ಆರ್ಥಿಕ ಚೈತನ್ಯ ನೀಡಬಲ್ಲದು.ಈ ಕುರಿತು ಸರ್ಕಾರಿ ಆದೇಶ ಹೊರಡಿಸಲಿ. ಬೌದ್ಧಿಕ ಸಾಮರ್ಥ್ಯ ವೃದ್ಧಿಗಾಗಿ `ಕಾಲೇಜು ಪುಸ್ತಕ ಭಂಡಾರ~ ಯೋಜನೆಗೆ ಹೆಚ್ಚು ಹಣ ನೀಡಿ ಮಾನವಿಕ, ಸಮಾಜ ವಿಜ್ಞಾನ, ಮೂಲಭೂತ ವಿಜ್ಞಾನ, ವಿಷಯಗಳಿಗೂ ಈ ಯೋಜನೆ ವಿಸ್ತರಿಸಿದಲ್ಲಿ ತೇರ್ಗಡೆ ಪ್ರಮಾಣ ಖಂಡಿತ ಹೆಚ್ಚಾಗುತ್ತದೆ.ವಿದ್ಯಾರ್ಥಿ ವೇತನ ಅಥವಾ ಸರ್ಕಾರಿ ಉದ್ಯೋಗಗಳಲ್ಲಿ ಕೆನೆಪದರ ಅನ್ವಯಿಸಬಾರದೆಂದು ಪರಿಶಿಷ್ಟರ ಕುರಿತು ಸುಪ್ರಿಂಕೋರ್ಟು ಇಂದಿರಾ ಸಾಹ್ನಿ ಕೇಂದ್ರ ಸರ್ಕಾರ ಪ್ರಕರಣದಲ್ಲಿ ಆದೇಶಿಸಿದ್ದರೂ ಈ ಆದೇಶವನ್ನು ಉಲ್ಲಂಘಿಸಿ ವಿದ್ಯಾರ್ಥಿ ವೇತನಕ್ಕೆ ರೂ. 2 ಲಕ್ಷ ವಾರ್ಷಿಕ ವರಮಾನ ನಿಗದಿ ಮಾಡಿರುವ ಕೇಂದ್ರವು ಸಂವಿಧಾನ ವಿರೋಧಿ ಮತ್ತು ಸುಪ್ರಿಂಕೋರ್ಟು ಆದೇಶವನ್ನು ಧಿಕ್ಕರಿಸಿ `ನ್ಯಾಯಾಂಗ ಉಲ್ಲಂಘನೆ~ ಅಪರಾಧಕ್ಕೆ ಗುರಿಯಾಗಿದೆ.

 

ಆದಾಯ ಮಿತಿಯನ್ನು ಕಿತ್ತುಹಾಕಿದಲ್ಲಿ ಉನ್ನತ ಶಿಕ್ಷಣದಲ್ಲಿ ಈ ವರ್ಗಗಳ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. ಇದರಿಂದ ಭಾರಿ ಹೊರೆಯೇನೂ ಖಜಾನೆ ಮೇಲೆ ಬೀಳದು. ಕೇಂದ್ರವು `ಕಮ್ಯುಟೆಡ್‌ಲಯಾಬಿಲಿಟಿ~ ಹೆಸರಿನಲ್ಲಿ ರಾಜ್ಯಕ್ಕೆ ತೊಂದರೆ ಕೊಡುವ ಬದಲು ಕೇಂದ್ರ, ರಾಜ್ಯಗಳ ಅನುಪಾತವನ್ನು ಕ್ರಮವಾಗಿ 90:10 ಮಾಡಿಕೊಂಡಲ್ಲಿ ವಿದ್ಯಾರ್ಥಿ ವೇತನವನ್ನು ಈ ವರ್ಗಗಳ ಎಲ್ಲ ವಿದ್ಯಾರ್ಥಿಗಳಿಗೂ ತಲುಪಿಸಬಹುದು.ವಯಸ್ಸಾದ ತಂದೆ ತಾಯಿಗಳನ್ನು ಸಾಕಲು, ತಮ್ಮ ತಂಗಿಯರನ್ನು ಓದಿಸಲು, ಅವಲಂಬಿತರಿಗೆ ಅನ್ನ, ಬಟ್ಟೆ, ವಸತಿ ನೀಡಲು ಬಡ ಪರಿಶಿಷ್ಟರು ಓದನ್ನು ಅರ್ಧಕ್ಕೆ ನಿಲ್ಲಿಸಿ ಬೇಸಾಯದ, ಕೃಷಿ ಕೂಲಿ, ಕೈಗಾರಿಕಾ ಕಾರ್ಮಿಕ, ಸಣ್ಣಪುಟ್ಟ ಖಾಸಗಿ ಉದ್ಯೋಗಸ್ಥರಾಗಿ ಮನದಲ್ಲಿ ಉನ್ನತ ಶಿಕ್ಷಣ ಹೊಂದಿಲ್ಲವೆಂದು ಕೊರಗುತ್ತಿರುವ ಲಕ್ಷಾಂತರ ಪರಿಶಿಷ್ಟರು ದೇಶದಲ್ಲಿದ್ದಾರೆ.ಹೇಗೆ ಶಿಕ್ಷಣ ಇಲಾಖೆ ಮಕ್ಕಳನ್ನು ಶಾಲೆಗೆ ನೊಂದಾಯಿಸಲು ಆಂದೋಲನವನ್ನೇ ಹಮ್ಮಿಕೊಂಡು ಬಹಳಷ್ಟು ಯಶಸ್ಸು ಕಂಡಿದೆಯೋ ಹಾಗೆ ಉನ್ನತ ಶಿಕ್ಷಣ ಇಲಾಖೆ ಹೊಸದೊಂದು ಆಂದೋಲನವನ್ನು ಆರಂಭಿಸಿದಲ್ಲಿ ಕಪಿಲ್ ಸಿಬಲ್‌ರ ಆಶಯ ನನಸಾಗಬಹುದು.

 

ಈ ರೀತಿ ಅರ್ಧಕ್ಕೆ ಓದು ನಿಲ್ಲಿಸಿರುವ ಪರಿಶಿಷ್ಟರನ್ನು ಸ್ನಾತಕ/ ಸ್ನಾತಕೋತ್ತರ ಪದವೀಧರರನ್ನಾಗಿ ಪರಿವರ್ತಿಸಲು ಇರುವ ಏಕೈಕ ಮಾರ್ಗವೆಂದರೆ `ದೂರ ಶಿಕ್ಷಣ~ ಕನ್ನಡ ಮಾಧ್ಯಮ ಲಭ್ಯವಿದ್ದು ಇದು ವರದಾನವಾಗಿದೆ.ದೇಶದ ಸುಮಾರು 567 ವಿ.ವಿ.ಗಳ ಪೈಕಿ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿ.ವಿ. ಮತ್ತು ಕರ್ನಾಟಕ ರಾಜ್ಯ ಮುಕ್ತ ವಿ.ವಿ. ಸೇರಿದಂತೆ ಹಲವಾರು ಸಾಂಪ್ರದಾಯಿಕ ವಿವಿಗಳಲ್ಲಿ ದೂರ ಶಿಕ್ಷಣ ಸೌಲಭ್ಯವಿದೆ. ವಿದೇಶದ ವಿವಿಗಳು ದೂರಶಿಕ್ಷಣ ನೀಡುತ್ತವೆ. ಕ.ರಾ.ಮು.ವಿ. 18 ವರ್ಷ ವಯಸ್ಸಾದ ಎಲ್ಲರಿಗೂ ಸ್ನಾತಕ ಪದವಿ ಪ್ರವೇಶಾತಿ ನೀಡುತ್ತದೆ.ಈ ವಿಧದ ವಿದ್ಯಾರ್ಥಿಗಳಿಗೆ ಬುಕ್‌ಗ್ರ್ಯಾಂಟ್ ನೀಡಬೇಕು. ಕೇಂದ್ರದ ಆದೇಶವನ್ನು ಸಮಾಜ ಕಲ್ಯಾಣ ಇಲಾಖೆ ಜಾರಿಗೊಳಿಸಿಲ್ಲ. ಹೀಗಿರುವಾಗ ಅವರು ಹೇಗೆ ತೇರ್ಗಡೆಯಾಗಲು ಸಾಧ್ಯ?ವಿ.ವಿ.ಗಳು, ಉನ್ನತ ಶಿಕ್ಷಣ ಇಲಾಖೆ, ಅಂಗನವಾಡಿ ಇಲಾಖೆ, ಗ್ರಾ.ಪಂ.ಗಳು ಜಂಟಿಯಾಗಿ ಪ್ರಚಾರಾಂದೋಲನವನ್ನು ಹೊಸದಾಗಿ ಆರಂಭಿಸಿದಲ್ಲಿ, ಪ್ರವೇಶಾತಿ ಸಮಯದಲ್ಲಿ ಈ ಮೊದಲು ಇದ್ದಂತಹ ಉಚಿತ ಪ್ರವೇಶಾತಿಯನ್ನು ಪುನಃ ಜಾರಿಗೆ ತಂದಲ್ಲಿ ಐದು ವರ್ಷಗಳಲ್ಲಿ ಪರಿಶಿಷ್ಟರಲ್ಲಿ ಶೇ 50 ರಷ್ಟು ಸ್ನಾತಕ/ ಸ್ನಾತಕೋತ್ತರ ಪದವೀಧರರನ್ನು ಸೃಷ್ಟಿಸಬಹುದು.

 

ಸಮಾಜ ಕಲ್ಯಾಣ ಸಚಿವರು/ಉನ್ನತ ಶಿಕ್ಷಣ ಸಚಿವರು ಹೊಸ ಯೋಜನೆ ಜಾರಿಗಾಗಿ ಮನಸ್ಸು ಮಾಡಲಿ. ಪ್ರಪಂಚದ ನಕ್ಷೆಯಲ್ಲಿ ಭಾರತ, ವಿದ್ಯಾವಂತರ ಸಂಖ್ಯೆಯಲ್ಲಿ ಮೊದಲ ಸ್ಥಾನ ಪಡೆಯಲಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry