ಶುಕ್ರವಾರ, ಡಿಸೆಂಬರ್ 6, 2019
18 °C

ಉನ್ನತ ಶಿಕ್ಷಣ: ದುಪ್ಪಟ್ಟು ಹಣ ಮೀಸಲಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉನ್ನತ ಶಿಕ್ಷಣ: ದುಪ್ಪಟ್ಟು ಹಣ ಮೀಸಲಿಡಿ

ಬೆಂಗಳೂರು: `ಕೇಂದ್ರ ಮತ್ತು ರಾಜ್ಯ ಸರ್ಕಾರ ಶಿಕ್ಷಣಕ್ಕೆ ಮೀಸಲಿಡುತ್ತಿರುವ ಹಣವನ್ನು ದುಪ್ಪಟ್ಟುಗೊಳಿಸುವ ಮೂಲಕ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು~ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) ರಾಷ್ಟ್ರೀಯ ಅಧ್ಯಕ್ಷ ಪ್ರೊ.ಮಿಳಿಂದ್ ಎಸ್ ಮರಾಠೆ ಅಭಿಪ್ರಾಯಪಟ್ಟರು.ನಗರದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪ್ರೊ. ಸತೀಶ್ ಧವನ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ `ಥಿಂಕ್ ಇಂಡಿಯಾ 2012~ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.ಒಟ್ಟು ವಿದ್ಯಾರ್ಥಿಗಳಲ್ಲಿ ಶೇ 12ರಷ್ಟು ಮಂದಿ ಮಾತ್ರ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ಈ ಪ್ರಮಾಣವನ್ನು 2020ರ ವೇಳೆಗೆ ಕನಿಷ್ಠ 15ರಿಂದ 18ಕ್ಕೆ ಏರಿಸಬೇಕು. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗ ಮೀಸಲಿಡುತ್ತಿರುವ ಹಣವನ್ನು ದ್ವಿಗುಣಗೊಳಿಸಬೇಕು ಎಂದು ಹೇಳಿದರು.ಸರ್ಕಾರ ಜಾಗತೀಕರಣದ ನಂತರ ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಿಲ್ಲ. ಖಾಸಗಿಯವರು ನೋಡಿಕೊಳ್ಳಲಿ ಎಂಬ ಭಾವನೆ ಸರ್ಕಾರದ್ದಾಗಿತ್ತು. ಆದರೆ ಈ ಮನೋಭಾವ ಬದಲಾಗಬೇಕು. ಶಿಕ್ಷಣಕ್ಕೆ ಮಾಡುವ ಖರ್ಚನ್ನು ವೆಚ್ಚ ಎಂದು ಪರಿಗಣಿಸದೆ ಹೂಡಿಕೆ ಎಂದು ಭಾವಿಸಬೇಕು. ವಿದೇಶಿ ವಿಶ್ವವಿದ್ಯಾಲಯಗಳು ದೇಶಕ್ಕೆ ಬಂದರೆ ತಪ್ಪಿಲ್ಲ. ಆದರೆ ವಿಶ್ವಮಟ್ಟದಲ್ಲಿ ಈಗಾಗಲೇ ಹೆಸರು ಮಾಡಿರುವ ಶ್ರೇಷ್ಠವಾದ ನೂರು ವಿ.ವಿ.ಗಳಿಗೆ ಮಾತ್ರ ಇಲ್ಲಿ ಅವಕಾಶ ನೀಡಬೇಕು. ವಿದೇಶಿ ವಿ.ವಿ.ಗಳಲ್ಲಿ ಸಹ ಬಡವರಿಗೆ ಮತ್ತು ಹಿಂದುಳಿದವರಿಗೆ ಅವಕಾಶ ನೀಡಬೇಕು ಎಂದರು.ಶಿಕ್ಷಣವನ್ನು ಮೂಲಭೂತ (ಆರ್‌ಟಿಇ) ಹಕ್ಕನ್ನಾಗಿ ಮಾಡಿದ 103ನೇ ರಾಷ್ಟ್ರ ಭಾರತವಾಗಿದೆ. ಆದರೆ ಕೇಂದ್ರ ಸರ್ಕಾರ ತಾನೇ ಮೊದಲು ಮಾಡಿರುವುದು ಎಂದು ಬಿಂಬಿಸುತ್ತಿದೆ. ಆರ್‌ಟಿಇಯನ್ನು ಪರಿಣಾಮಕಾರಿಯಾಗಿ ಜಾರಿ ತರದ ಹೊರತು ಅದರಿಂದ ಪ್ರಯೋಜನ ಇಲ್ಲ ಎಂದು ಮಿಳಿಂದ್ ಅಭಿಪ್ರಾಯಪಟ್ಟರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಐಐಎಸ್‌ಸಿಯ ಪ್ರೊ.ಪಿ.ಆರ್.ಮಹಾಪಾತ್ರ, `ವೈಯಕ್ತಿಕ ಸಾಧನೆಯ ಮೂಲಕ ರಾಷ್ಟ್ರ ನಿರ್ಮಾಣ ಕೆಲಸದಲ್ಲಿ ತೊಡಗಬೇಕು. ಹಣ ಗಳಿಕೆ ಇರಲಿ ಅಥವಾ ಯಾವುದೇ ಕೆಲಸ ಇರಲಿ ನ್ಯಾಯವಾದ ಮಾರ್ಗದಲ್ಲಿ ಮಾಡಬೇಕು~ ಎಂದು ಸಲಹೆ ನೀಡಿದರು.ಥಿಂಕ್ ಇಂಡಿಯಾ ಕಾರ್ಯಕ್ರಮದ ಸಂಚಾಲಕ ಶ್ರೀವಲ್ಸ ಕೊಲ್ಥಯಾರ್, ಸಹ ಸಂಚಾಲಕರಾದ ರೀಮಾ ಮುಖರ್ಜಿ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)