ಮಂಗಳವಾರ, ಮೇ 11, 2021
19 °C

ಉನ್ನತ ಶಿಕ್ಷಣ ಪರಿಷತ್: ಆರೋಪ ತನಿಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರನ್ನಾಗಿ ಡಾ.ಎಸ್.ಸಿ.ಶರ್ಮಾ ಅವರನ್ನು ನೇಮಿಸಿರುವುದರಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಕುರಿತು ಪರಿಶೀಲನೆ ನಡೆಯುತ್ತಿದ್ದು, ತಪ್ಪು ಕಂಡುಬಂದಲ್ಲಿ ಒಂದು ವಾರದೊಳಗೆ ಕ್ರಮ ಜರುಗಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಭರವಸೆ ನೀಡಿದರು.ಗುರುವಾರ ವಿಧಾನ ಪರಿಷತ್‌ನಲ್ಲಿ ನಿಯಮ 330ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಬಿಜೆಪಿಯ ಪ್ರೊ.ಪಿ.ವಿ.ಕೃಷ್ಣ ಭಟ್, ಅರುಣ್ ಶಹಾಪುರ ಹಾಗೂ ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರು, `ಶರ್ಮಾ ಅವರ ಸೇವಾ ಅವಧಿಯನ್ನು ಎರಡು ಬಾರಿ ವಿಸ್ತರಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ' ಎಂದು ಆರೋಪಿಸಿದರು.2011ರಲ್ಲೇ ಶರ್ಮಾ ಅವರ ಅವಧಿ ಅಂತ್ಯಗೊಂಡಿತ್ತು. ಆಗ ಒಂದು ವರ್ಷದವರೆಗೆ ಅವಧಿ ವಿಸ್ತರಿಸಲಾಗಿತ್ತು. 2012ರ ಡಿಸೆಂಬರ್‌ಗೆ ಅವಧಿ ಕೊನೆಯಾಗಬೇಕಿತ್ತು. ಆದರೆ, ಹಿಂದಿನ ಮುಖ್ಯಮಂತ್ರಿಯವರು 2012ರ ನವೆಂಬರ್ 29ರಂದೇ ಕಡತ ತರಿಸಿಕೊಂಡು ಶರ್ಮಾ ಅವರ ಅವಧಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಿದ್ದಾರೆ. ಇದು ಕಾನೂನುಬಾಹಿರ ಎಂದು ದೂರಿದರು.ಈ ಸಂಬಂಧ ಪ್ರತಿಕ್ರಿಯೆ ನೀಡಿದ ಸಚಿವರು, `ಶರ್ಮಾ ಅವರ ನೇಮಕಾತಿಗೆ ಸಂಬಂಧಿಸಿದ ಕಡತ ತರಿಸಲು ಸೂಚನೆ ನೀಡಿದ್ದೇನೆ. ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಬಗ್ಗೆ ಒಂದು ವಾರದೊಳಗೆ ತನಿಖೆ ನಡೆಸಿ, ಸೂಕ್ತ ಕ್ರಮ ಜರುಗಿಸಲಾಗುವುದು' ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.