ಉನ್ನತ ಶಿಕ್ಷಣ ಸುಧಾರಣೆಗೆ ಆದ್ಯತೆ

7

ಉನ್ನತ ಶಿಕ್ಷಣ ಸುಧಾರಣೆಗೆ ಆದ್ಯತೆ

Published:
Updated:

ಧಾರವಾಡ: “ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಿದ್ದರೂ ಕೆಲವು ಪ್ರಮುಖ ಸಮಸ್ಯೆಗಳು ಇದ್ದು, ಅವುಗಳನ್ನು ಆದ್ಯತೆ ಮೇರೆಗೆ ಬಗೆಹರಿಸುವಲ್ಲಿ 12ನೇ ಪಂಚವಾರ್ಷಿಕ ಯೋಜನೆಯಡಿ ವಿಶೇಷ ಪ್ರಯತ್ನ ಮಾಡುವ ಅಗತ್ಯವಿದೆ” ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಹಿಂದಿನ ಅಧ್ಯಕ್ಷ ಪ್ರೊ. ಸುಖದೇವ್ ಥೋರಟ್ ಹೇಳಿದರು. ಕರ್ನಾಟಕ ವಿಶ್ವವಿದ್ಯಾಲಯದ 61ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಕಡಿಮೆ ಪ್ರಮಾಣದಲ್ಲಿ ವಿದ್ಯಾರ್ಥಿಗಳ ಪ್ರವೇಶ, ಅಂತರ್‌ವಲಯ ಹಾಗೂ ಅಂತರ್‌ಘಟಕಗಳ ನಡುವಿನ ವ್ಯತ್ಯಾಸ, ವಿದೇಶಿ ಶಿಕ್ಷಣ ಸಂಸ್ಥೆಗಳೊಂದಿಗೆ ಸಂಬಂಧ ಸ್ಥಾಪನೆ ಸೇರಿದಂತೆ ಮುಂತಾದ ವಿಷಯಗಳಲ್ಲಿ ಇನ್ನೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂದಿನ ಪಂಚವಾರ್ಷಿಕ ಯೋಜನೆಯಲ್ಲಿ ಗಮನಹರಿಸುವ ಅಗತ್ಯವಿದೆ ಎಂದರು.ವಿದ್ಯಾ ಸಂಸ್ಥೆಗಳ ಸಂಖ್ಯೆ, ಶಿಕ್ಷಕರ ಸಂಖ್ಯೆ, ವಿದ್ಯಾರ್ಥಿಗಳ ಸಂಖ್ಯೆ, ಪ್ರಗತಿ ಹಾಗೂ ಅವರು ಪಡೆಯುತ್ತಿರುವ ಶಿಕ್ಷಣ ಮತ್ತು ಆಡಳಿತ- ಶೈಕ್ಷಣಿಕ ವ್ಯವಸ್ಥೆಯ ಗುಣಮಟ್ಟಗಳು ಉನ್ನತ ಶಿಕ್ಷಣದ ಪ್ರಗತಿಯ ಮುಖ್ಯ ಮಾಪಕಗಳಾಗಿವೆ. ಉನ್ನತ ಶಿಕ್ಷಣದ ಬೆಳವಣಿಗೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾತ್ರ ಹಾಗೂ ವಿಷಯಗಳ ವೈವಿಧ್ಯ, ಅವುಗಳ ಹರವು ಕೂಡ ಗಮನಾರ್ಹ ಸಂಗತಿಯಾಗಿದೆ ಎಂದು ಹೇಳಿದರು.ಹನ್ನೊಂದನೇ ಪಂಚವಾರ್ಷಿಕ ಯೋಜನೆ ಸಂದರ್ಭದಲ್ಲಿ ಉನ್ನತ ಶಿಕ್ಷಣಕ್ಕೆ ಇರುವ ಕಡಿಮೆ ಅವಕಾಶ, ಅದರಲ್ಲಿ ಕೂಡ ಪ್ರಾದೇಶಿಕ ಹಾಗೂ ವರ್ಗಗಳಿಗೆ ಇನ್ನೂ ಕಡಿಮೆ ಅವಕಾಶ, ವಿದ್ಯೆ ಒದಗಿಸುವ ಸಂಸ್ಥೆಗಳ ಗುಣಮಟ್ಟ, ಶ್ರೇಷ್ಟತೆ ವ್ಯತ್ಯಾಸ, ಸೂಕ್ತ ವಿದ್ಯೆಯ ಕೊರತೆ ಅಲ್ಲದೇ ಇವೆಲ್ಲವುಗಳ ನಿರ್ವಹಣೆಗೆ ನಿರ್ವಹಣಾ ಆಡಳಿತ ಮಂಡಳಿ, ಉತ್ತಮ ಶೈಕ್ಷಣಿಕ ಹಾಗೂ ಆಡಳಿತ ವ್ಯವಸ್ಥೆ ಕೊರತೆ ಗುರುತಿಸಲಾಗಿದೆ. ಅದಕ್ಕಾಗಿ ಉನ್ನತ ಶಿಕ್ಷಣ ವಿಸ್ತರಣೆ, ಎಲ್ಲ ಪ್ರದೇಶ ಹಾಗೂ ವರ್ಗಗಳ ಒಳಗೊಳ್ಳುವಿಕೆ, ಅಗತ್ಯದ ಶಿಕ್ಷಣ ಜೊತೆಗೆ ಶೈಕ್ಷಣಿಕ ಮತ್ತು ಆಡಳಿತದಲ್ಲಿ ಗುಣಮಟ್ಟ ಸುಧಾರಣೆಗೆ ಒತ್ತು ನೀಡಲಾಗಿದೆ. ಇದಕ್ಕಾಗಿ ಒಟ್ಟಾರೆ 48 ಸಾವಿರ ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ. ಈ ಹಿಂದಿನ ಯೋಜನೆಯಲ್ಲಿ ಈ ಮೊತ್ತ ಕೇವಲ 4 ಸಾವಿರ ಕೋಟಿ ರೂಪಾಯಿ ಆಗಿತ್ತು ಎಂದು ಹೇಳಿದರು.ಉನ್ನತ ಶಿಕ್ಷಣಕ್ಕೆ ದೇಶದಲ್ಲಿ ಶೇ. 10 ರಷ್ಟು ಯುವಕರು ಮಾತ್ರ ಪ್ರವೇಶ ಪಡೆಯುತ್ತಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಈ ಸಂಖ್ಯೆ ಶೇ. 54 ರಷ್ಟಿದ್ದು, ಜಗತ್ತಿನ ಸರಾಸರಿ ಶೇ. 23 ರಷ್ಟಿದೆ. ಭಾರತದ ನಗರ ಪ್ರದೇಶಗಳಲ್ಲಿ ಉನ್ನತ ಶಿಕ್ಷಣ ಪ್ರವೇಶ ಪಡೆಯುವವರ ಸಂಖ್ಯೆ ಶೇ. 20 ರಷ್ಟಿದ್ದರೆ, ಗ್ರಾಮೀಣ ಭಾಗದಲ್ಲಿ ಕೇವಲ ಶೇ. 7 ರಷ್ಟಿದೆ. ಇದಲ್ಲದೇ ಜಾತಿ, ಉಪಜಾತಿ, ಬಡವರು ಹಾಗೂ ಪುರುಷ- ಮಹಿಳೆಯರ ಉನ್ನತ ಶಿಕ್ಷಣ ಪ್ರವೇಶದಲ್ಲಿ ಅಸಮಾನತೆ ಇರುವುದನ್ನು ಕಾಣಬಹುದು. ಈ ಎಲ್ಲ ವರ್ಗಗಳಿಗೆ ಅವಕಾಶ ವಿಸ್ತರಿಸಲು, ಶಿಷ್ಯವೇತನ, ಸಹಾಯಧನ ಆಧಾರಿತ ಕಡಿಮೆ ಬಡ್ಡಿ ದರದ ಶಿಕ್ಷಣ ಸಾಲ, ಫೆಲೋಷಿಪ್ ಮುಂತಾದವುಗಳನ್ನು ನೀಡಲು ಯೋಜನಾಬದ್ಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.ದೇಶದಲ್ಲಿನ 16000 ಕಾಲೇಜುಗಳು ಯುಜಿಸಿ ವ್ಯಾಪ್ತಿಯಲ್ಲಿದ್ದು, ಅವುಗಳಲ್ಲಿ 5813 ಕಾಲೇಜುಗಳು ಮಾದರಿ ಗುಣಮಟ್ಟ ಪರೀಕ್ಷೆ ಮೂಲಕ ಯುಜಿಸಿ ಅನುದಾನ ಪಡೆಯುತ್ತಿವೆ. ಈ ಮೊದಲು ಗ್ರೂಪ್ ಸಿ ವರ್ಗಕ್ಕೆ ಯುಜಿಸಿ ಅನುದಾನವಿರಲಿಲ್ಲ. ಎಲ್ಲ ಕಾಲೇಜುಗಳು ಸಮನಾಗಿ ಬೆಳವಣಿಗೆ ಹೊಂದಲು ಒಂದು ಬಾರಿ ಕೇಂದ್ರ ಸರ್ಕಾರ ಅನುದಾನಿತ ಯೋಜನೆ ಜಾರಿಗೊಳಿಸಿದೆ. ಇದರಿಂದ ಹಲವು ರಾಜ್ಯಗಳಲ್ಲಿನ 71 ವಿವಿಗಳು, 6000 ಕಾಲೇಜುಗಳಿಗೆ ಅಭಿವೃದ್ಧಿ ಹೊಂದಲು ಒಂದು ಅವಕಾಶ ದೊರೆತಂತಾಗಿದೆ ಎಂದು ಪ್ರೊ. ಥೋರಟ್ ಹೇಳಿದರು.ಈಗಾಗಲೇ ಪ್ರಧಾನಮಂತ್ರಿಗಳು ಹಿಂದುಳಿದ ಪ್ರದೇಶದಲ್ಲಿ 30 ಕೇಂದ್ರ ವಿಶ್ವವಿದ್ಯಾಲಯಗಳನ್ನು, 372 ಕಾಲೇಜುಗಳನ್ನು ಸ್ಥಾಪಿಸಲು ಹಾಗೂ ಶೇ 2 ರಷ್ಟು ವಿದ್ಯಾರ್ಥಿ ವೇತನ ಸೌಲಭ್ಯ ಒದಗಿಸುವ ಕ್ರಮಗಳಿಗೆ ಚಾಲನೆ ನೀಡಿದ್ದಾರೆ. ಕೇಂದ್ರದ ಮಾನವ ಸಂಪನ್ಮೂಲ ಸಚಿವರು ದೇಶದ ಉನ್ನತ ಶಿಕ್ಷಣ ಪ್ರವೇಶವನ್ನು ಈಗಿರುವ ಶೇ. 10 ಅನ್ನು 2020 ಹೊತ್ತಿಗೆ ಶೇ. 30ಕ್ಕೆ ಹೆಚ್ಚಿಸಲು ಹೊಸ ಯೋಜನೆ ರೂಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉನ್ನತ ಶೀಕ್ಷಣ ನೀಡಲು ರಾಜ್ಯ ಸರ್ಕಾರಗಳು ಅದರಲ್ಲೂ ಮುಖ್ಯವಾಗಿ ಮುಂದುವರಿದಿರುವ ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರದ ಯೋಜನೆಗಳಿಗೆ ಪೂರಕವಾಗಿ 18 ರಿಂದ 23ರ ರೆಗಿನ ವಯೋಮಿತಿಯಲ್ಲಿರುವ ಅರ್ಹ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಒದಗಿಸಲು ಅಭೂತಪೂರ್ವವೆನ್ನುವ ಕ್ರಮ ಕೈಕೊಳ್ಳಬೇಕು ಎಂದು ಸಲಹೆ ನೀಡಿದರು. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಘಟಿಕೋತ್ಸವ ಉದ್ಘಾಟಿಸಿದರು. ಕುಲಪತಿ ಪ್ರೊ. ಎಚ್.ಬಿ.ವಾಲೀಕಾರ ಸ್ವಾಗತಿಸಿದರು. ಪ್ರೊ. ನ.ವಜ್ರಕುಮಾರ, ಬಿ.ಎಫ್. ದಂಡಿನ, ಫಾ. ಪಿ.ಜೆ.ಜೇಕಬ್, ಕುಂ.ವೀರಭದ್ರಪ್ಪ, ಕುಲಸಚಿವರಾದ ಪ್ರೊ. ಎಸ್.ಬಿ.ಹಿಂಚಿಗೇರಿ, ಪ್ರೊ. ಜೆ.ಎಸ್.ಭಟ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry