ಉಪಕಾರ ಮರೆಯುವ ಪರಿಪಾಠ ಹೆಚ್ಚುತ್ತಿದೆ

7

ಉಪಕಾರ ಮರೆಯುವ ಪರಿಪಾಠ ಹೆಚ್ಚುತ್ತಿದೆ

Published:
Updated:

ಕೃಷ್ಣರಾಜಪೇಟೆ : ಗುರುವಿನ ಸ್ಥಾನದಲ್ಲಿರುವವರು ನಿಂದನೆ ಮತ್ತು ವಂದನೆಗಳನ್ನು ಸಮಾನ ಭಾವನೆಯಿಂದ ಸ್ವೀಕರಿಸಬೇಕಾದ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕಾಪನಹಳ್ಳಿ ಗವಿಮಠದ ಸ್ವತಂತ್ರ ಬಸವಲಿಂಗ ಶಿವಯೋಗಿಗಳು ಸಲಹೆ ನೀಡಿದರು.ಪಟ್ಟಣದ ಎಂ.ಕೆ.ಬೊಮ್ಮೇಗೌಡ ಸಹಕಾರ ಭವನದಲ್ಲಿ ಶ್ರೀಮತಿ ನಂಜಮ್ಮ ಮರಿಸಿದ್ದೇಗೌಡ ಸೇವಾ ಪ್ರತಿಷ್ಠಾನದ ವತಿಯಿಂದ ಶನಿವಾರ ಸಂಜೆ ಏರ್ಪಡಿಸಿದ್ದ ಗುರುವಂದನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ, ಎಂಟು ಮಂದಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡಿದರು.ಆಧುನಿಕತೆ ಹೆಸರಿನಲ್ಲಿ ಸಾಗುತ್ತಿರುವ ನಮ್ಮ ಇಂದಿನ ಸಮಾಜದಲ್ಲಿ ಪಡೆದ ಉಪಕಾರವನ್ನೇ ಮರೆತುಬಿಡುವ ಪರಿಪಾಠ ಹೆಚ್ಚಾಗುತ್ತಿದ್ದು, ಸ್ವಾಸ್ಥ್ಯ ಸಮಾಜದ ನಿರ್ಮಾಣದ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ. ಇಂದಿನ ಸಮಾಜದಲ್ಲಿ ಜನ್ಮದಾತರನ್ನೇ ಮರೆತು ತಮ್ಮಷ್ಟಕ್ಕೆ ತಾವು ಇರುವ ಮಕ್ಕಳನ್ನು ನಾವು ಕಾಣಬಹುದಾಗಿದೆ.ಇನ್ನು ಪಾಠ ಹೇಳಿದ ಶಿಕ್ಷಕರನ್ನು ನೆನೆಯುವ ಕಾರ್ಯ ಕಷ್ಟಸಾಧ್ಯವಾದದ್ದು. ಇಂತಹ ಸಂದರ್ಭದಲ್ಲಿ ಪ್ರತಿಷ್ಠಾನದ ವತಿಯಿಂದ ಬಹಳ ವರ್ಷಗಳ ಹಿಂದೆ ತಮಗೆ ಪಾಠಮಾಡಿ, ನಿವೃತ್ತರಾಗಿ, ತಮ್ಮ ಪಾಡಿಗಿದ್ದ ಗುರುಗಳನ್ನು ನೆನಪಿಸಿಕೊಂಡು ಅವರನ್ನು ಕರೆದು ಗೌರವ ಸಮರ್ಪಣೆ  ನೀಡುತ್ತಿರುವುದು ಎಲ್ಲರಿಗೂ ಮಾದರಿಯೆನಿಸುವಂತಿದೆ.

 

ಇಡೀ ವಿಶ್ವಕ್ಕೆ ಮಾದರಿಯಾಗಿರುವ ಭಾರತೀಯ ಸಂಸ್ಕೃತಿಯಲ್ಲಿ ಗುರು ಮತ್ತು ಶಿಷ್ಯರ ಭವ್ಯ ಪರಂಪರೆ ಒಂದು ಪ್ರಮುಖ ಭಾಗವಾಗಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು ಎಂದರು.ಸಮಾರಂಭವನ್ನು ಉದ್ಘಾಟಿಸಿದ ತಾಲ್ಲೂಕು ದಂಡಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಗುರುಗಳ ಸ್ಥಾನ ಬಹಳ ಪವಿತ್ರವಾದುದಾಗಿದ್ದು, ತಂದೆಯ ನಂತರದ ಸ್ಥಾನದಲ್ಲಿರುವ ಅವರ ಋಣವನ್ನು ಸ್ಮರಿಸಿಕೊಳ್ಳುವಂತಹ ಪರಿಸ್ಥಿತಿ ನಮ್ಮ ಸಮಾಜದಲ್ಲಿ ನಿರ್ಮಾಣವಾಗಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

 

ಕ್ಷೇತ್ರ ಶಿಕ್ಷಣಾಧಿಕಾರಿ ಎ.ಬಿ.ಪುಟ್ಟಸ್ವಾಮಿಗೌಡ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಅಂ.ಚಿ.ಸಣ್ಣಸ್ವಾಮಿಗೌಡ, ಪ್ರತಿಷ್ಠಾನದ ಸಂಚಾಲಕ, ಮೈಸೂರು ಕಾಡಾದ ಉಪ ಆಡಳಿತಾಧಿಕಾರಿ ಎ.ಎಂ.ಯೋಗೇಶ್, ಪದಾಧಿಕಾರಿಗಳಾದ ಎಂ.ಸಿ.ಲೋಕೇಶ್, ಎಸ್.ಚಂದ್ರು, ಬಿ.ಕೆ.ರಮೇಶ್, ಕೆ.ಮಹೇಶ್, ಕೆ.ಜಿ.ನಾಗರಾಜು, ಪದ್ಮೇಶ್, ಸಿ.ಟಿ.ಚನ್ನೇಗೌಡ ಇದ್ದರು.

 

ಸಮಾರಂಭದಲ್ಲಿ ನಿವೃತ್ತ ಶಿಕ್ಷಕರಾದ ಬಿ.ಸಿ.ಚನ್ನೇಗೌಡ, ಎಸ್.ಸಿ.ಜಯಣ್ಣ, ಅಮಾಸೇಗೌಡ, ಸಿ.ಕೆ.ಸಿದ್ದಪ್ಪ, ಕೆ.ಸಣ್ಣೇಗೌಡ, ಕೆ.ನಂಜಪ್ಪ, ಕೆ.ಅಣ್ಣೇಗೌಡ ಮತ್ತು ಮರಿಸಿದ್ದೇಗೌಡರನ್ನು ಸನ್ಮಾನಿಸಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry