ಸೋಮವಾರ, ಮೇ 23, 2022
24 °C

ಉಪಚುನಾವಣೆಗೆ ಉತ್ಸಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಐಎಎನ್‌ಎಸ್):  ವಿವಿಧ ರಾಜ್ಯಗಳಲ್ಲಿಯ 26 ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಆಂಧ್ರಪ್ರದೇಶದ ನೆಲ್ಲೂರು ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ನಡೆದ ಉಪಚುನಾವಣೆಗೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಎಲ್ಲೆಡೆ ಶಾಂತಿಯುತವಾಗಿ ಕೊನೆಗೊಂಡಿದೆ. ಮತಗಳ ಎಣಿಕೆ ಕಾರ್ಯ ಇದೇ 15 ರಂದು ನಡೆಯಲಿದೆ.ಚುನಾವಣೆ ನಡೆದ 26 ವಿಧಾನಸಭಾ ಕ್ಷೇತ್ರಗಳ ಪೈಕಿ 18 ಸ್ಥಾನಗಳು ಆಂಧ್ರ ಒಂದರಲ್ಲೇ ಇದ್ದು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಮತದಾನ ಶಾಂತಿಯುತವಾಗಿತ್ತು. ಆಂಧ್ರದಲ್ಲಿ ಒಟ್ಟಾರೆ ಮತದಾನದ ಪ್ರಮಾಣ ಶೇ 80 ಆಗಿದ್ದು ಗರಿಷ್ಠ (ಶೇ 85) ರಾಮಚಂದ್ರಾಪುರಂ ಕ್ಷೇತ್ರದಲ್ಲಿ ದಾಖಲಾಗಿದೆ ಎಂದು ಆಂಧ್ರದ ಮುಖ್ಯ ಚುನಾವಣಾಧಿಕಾರಿ ಭನವರ್‌ಲಾಲ್ ತಿಳಿಸಿದರು.ಆಂಧ್ರದ 12 ಜಿಲ್ಲೆಗಳ 46 ಲಕ್ಷಕ್ಕಿಂತ ಅಧಿಕ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು ವಿವಿಧ ಪಕ್ಷಗಳ 255 ಅಭ್ಯರ್ಥಿಗಳ ಹಣೆಬರಹವನ್ನು ಬರೆದಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಆಡಳಿತಾರೂಢ ಕಾಂಗ್ರೆಸ್, ವೈಎಸ್‌ಆರ್ ಕಾಂಗ್ರೆಸ್ ಹಾಗೂ ತೆಲುಗು ದೇಶಂ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು.ಈ ಚುನಾವಣೆ, ಸದ್ಯ ಸಿಬಿಐ ಬಂಧನದಲ್ಲಿರುವ ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥ ವೈ.ಎಸ್. ಜಗನ್‌ಮೋಹನ್ ರೆಡ್ಡಿ ಅವರಿಗೆ  ಸತ್ವಪರೀಕ್ಷೆಯಾಗಿದೆ. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೂ ಈ ಉಪಚುನಾವಣೆ ಫಲಿತಾಂಶ ದಿಕ್ಸೂಚಿಯಾಗಲಿದೆ.ಜಗನ್ ಬಂಧನ, ಈ ಉಪಚುನಾವಣೆಯಲ್ಲಿ ಅನುಕಂಪದ ಅಲೆಯಾಗಿ ಹೊರಹೊಮ್ಮಲಿದೆಯೇ ಎಂಬ ಆತಂಕ, ಅನುಮಾನ ಆಡಳಿತಾರೂಢ ಕಾಂಗ್ರೆಸ್‌ಗಿದ್ದು ಎಲ್ಲ 18 ಸ್ಥಾನಗಳನ್ನು ಉಳಿಸಿಕೊಳ್ಳುವುದು ಮುಖ್ಯಮಂತ್ರಿ ಕಿರಣಕುಮಾರ ರೆಡ್ಡಿ ಅವರಿಗೆ ಅನಿವಾರ್ಯ ಎನಿಸಿದೆ.ಪಶ್ಚಿಮ ತ್ರಿಪುರಾದ ನಲ್‌ಚಾರ್ ವಿಧಾನಸಭಾ ಕ್ಷೇತ್ರದಲ್ಲಿ ನೆತ್ತಿ ಸುಡವ ಬಿಸಿಲಿನ ನಡುವೆಯೂ ದಾಖಲೆ ಮತದಾನ (ಶೇ 95)  ನಡೆದಿದ್ದು ಇಲ್ಲಿಯ ಮತದಾನ ಕೇಂದ್ರಗಳ ಮುಂದೆ ಬೆಳಿಗ್ಗೆ 8 ಗಂಟೆಗೆ ಮೊದಲೇ ಮತದಾರರ ಉದ್ದನೆಯ ಸಾಲು ಕಂಡುಬಂತು.ಆಡಳಿತಾರೂಢ ಎಐಎಡಿಎಂಕೆ ಹಾಗೂ ಡಿಎಂಡಿಕೆ ನೇರ ಹಣಾಹಣಿಯ ತಮಿಳುನಾಡಿನ ಪುದುಕೊಟ್ಟಾಯ ಕ್ಷೇತ್ರದ 224 ಮತಗಟ್ಟೆಗಳಲ್ಲಿ ಶೇ 73 ಮತದಾನವಾಗಿದೆ.ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಮಂತ್ ಕ್ಷೇತ್ರದಲ್ಲಿ ಶೇ 61.25 ಹಾಗೂ ಮಧ್ಯಪ್ರದೇಶದ ಮಹೇಶ್ವರ್ ಕ್ಷೇತ್ರದಲ್ಲಿ ಶೇ 80 ಮತದಾನ ನಡೆದಿದೆ.ಮತ ಚಲಾಯಿಸಿದ ಧೋನಿ

ರಾಂಚಿ (ಪಿಟಿಐ):
ಜಾರ್ಖಂಡ್‌ನ ಹತಿಯಾ ವಿಧಾನಸಭಾ ಕ್ಷೇತ್ರಕ್ಕೆ ಮಂಗಳವಾರ ನಡೆದ ಉಪ ಚುನಾವಣೆಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ ಚಲಾಯಿಸಿದರು.ತಾನು ಓದಿದ ಜವಾಹರ ವಿದ್ಯಾಮಂದಿರದಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಗೆ ತೆರಳಿದ ಧೋನಿ ಮತದಾನ ಮಾಡಿದರು. ಹತಿಯಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಸುಬೋಧ ಕಾಂತ ಸಹಾಯ್ ಅವರ ಸಹೋದರ ಸುನಿಲ್ ಕುಮಾರ್ ಸಹಾಯ್ ಸೇರಿದಂತೆ 29 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಶಾಸಕ ಗೋಪಾಲ ಶರಣ ನಾಥ ಶಹದೇವ್ ಮೃತಪಟ್ಟಿದ್ದರಿಂದ ಇಲ್ಲಿ ಉಪ ಚುನಾವಣೆ ನಡೆಯುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.