ಸೋಮವಾರ, ಆಗಸ್ಟ್ 19, 2019
22 °C

ಉಪಚುನಾವಣೆ ಅನಗತ್ಯ ವೆಚ್ಚಕ್ಕೆ ದಾರಿ: ಸಿ.ಎಂ.ಲಿಂಗಪ್ಪ

Published:
Updated:

ರಾಮನಗರ: ಅನಿಶ್ಚಿತ ಅವಧಿಗೆ ನಡೆಯುತ್ತಿರುವ ಲೋಕಸಭಾ ಉಪ ಚುನಾವಣೆಯಿಂದ ಅನಗತ್ಯ ದುಂದು ವೆಚ್ಚ ಉಂಟಾಗಲಿದೆ ಎಂದು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಕಳವಳ ವ್ಯಕ್ತಪಡಿಸಿದರು.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಅಲ್ಪಾವಧಿಗೆ ಎದುರಾಗಿರುವ ಉಪ ಚುನಾವಣೆಯಿಂದ ಸರ್ಕಾರದ ಬೊಕ್ಕಸದಿಂದ ಎಂಟು ಕೋಟಿ ಖರ್ಚಾದರೆ, ವಿವಿಧ ಪಕ್ಷಗಳ ಅಭ್ಯರ್ಥಿಗಳು ಮಾಡುವ ಖರ್ಚು ವೆಚ್ಚ ಸುಮಾರು 80 ಕೋಟಿ ರೂಪಾಯಿ ಆಗಬಹುದು ಎಂದು ಬೇಸರ ವ್ಯಕ್ತಪಡಿಸಿದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಲ್ಪಾವಧಿ ಅಥವಾ ಅನಿಶ್ಚಿತ ಅವಧಿಗೆ ಚುನಾವಣೆ ನಡೆಯುತ್ತಿರುವುದು ಬೇಸರ ಮೂಡಿಸಿದೆ. ಇದು ಚುನಾವಣಾ ಆಯೋಗದ ಮೂರ್ಖತನದ ನಿರ್ಧಾರ ಕೂಡ ಆಗಿದೆ ಎಂದು ಅವರು ಕಿಡಿಕಾರಿದರು.ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ವತಃ ನಾನು ಆಕಾಂಕ್ಷಿಯಾಗಿದ್ದೇನೆ ಎಂದ ಅವರು, ಶಾಸಕ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಕೂಡಾ ಆಕಾಂಕ್ಷಿಯಾಗಿದ್ದಾರೆ.ಮಾಜಿ ಸಂಸದರೆ ತೆರೆಮರೆಯಲ್ಲಿ ವ್ಯರ್ಥ ಪ್ರಯತ್ನ ನಡೆಸಿದ್ದಾರೆ ಎಂದ ಅವರು, ಪಕ್ಷದ ಹೈಕಮಾಂಡ್ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಇಷ್ಟು ದಿನ ತಡ ಮಾಡಿದ್ದು ಸರಿಯಲ್ಲ ಎಂದರು.

Post Comments (+)