ಶುಕ್ರವಾರ, ಏಪ್ರಿಲ್ 16, 2021
31 °C

ಉಪಚುನಾವಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹಿಂದಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಂಗ್ರೆಸ್‌ನಿಂದ ಪಕ್ಷಾಂತರಗೊಂಡು ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಂಗಾರಪೇಟೆ, ಜಗಳೂರು ಹಾಗೂ ಚನ್ನಪಟ್ಟಣ ಕ್ಷೇತ್ರಗಳ ಅಭ್ಯರ್ಥಿಗಳ ಉಮೇದುವಾರಿಕೆಯನ್ನು ರದ್ದು ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ನಿರ್ದೇಶನದ ಮೇರೆಗೆ ಅರ್ಜಿದಾರರು ಹಿಂದಕ್ಕೆ ಪಡೆದುಕೊಂಡರು.‘ಇಂತಹ ವಿಷಯಗಳನ್ನು ನಿರ್ಧರಿಸುವುದು ಮತದಾರರ ಸಮುದಾಯವೇ ವಿನಾ ಕೋರ್ಟ್ ಅಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿತು.ಚನ್ನಪಟ್ಟಣದಿಂದ ಸ್ಪರ್ಧಿಸುತ್ತಿರುವ ಸಿ.ಪಿ.ಯೋಗೇಶ್ವರ, ಬಂಗಾರಪೇಟೆ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಹಾಗೂ ಜಗಳೂರಿನ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಅವರ ವಿರುದ್ಧ ಪ್ರವೀಣಕುಮಾರ್ ಹಾಗೂ ಧರ್ಮಪಾಲ್ ಎನ್ನುವ ವಕೀಲರು ಸಲ್ಲಿಸಿದ್ದ ಅರ್ಜಿ ಇದಾಗಿದೆ. ಅವರು ಒಂದು ಪಕ್ಷದಿಂದ ಇನ್ನೊಂದಕ್ಕೆ ಪಕ್ಷಾಂತರಗೊಂಡು, ಒಂದೇ ಕ್ಷೇತ್ರದಿಂದ ಸ್ಪರ್ಧಿಸಿ ಅನಗತ್ಯವಾಗಿ ಜನರ ಹಣವನ್ನು ವ್ಯಯ ಮಾಡುತ್ತಿದ್ದಾರೆ ಎನ್ನುವುದು ಅವರ ಆರೋಪವಾಗಿತ್ತು.ವಿಚಾರಣೆ ವೇಳೆ, ಅರ್ಜಿಯಲ್ಲಿ ಮಾಡಲಾದ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಒದಗಿಸಲು ಹಾಗೂ ಆರೋಪಗಳಿಗೆ ಪುಷ್ಟಿ ನೀಡುವ ಸಂಬಂಧದ ಕಾನೂನಿನ ನಿಬಂಧನೆಗಳನ್ನು ಕೋರ್ಟ್‌ಗೆ ಒದಗಿಸಲು ವಿಫಲವಾದ ಕಾರಣ ಅರ್ಜಿಯನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಪೀಠ ಸೂಚಿಸಿತು.ಅದೇ ರೀತಿ ಈ ಮೂವರು ಕಾನೂನು ಉಲ್ಲಂಘಿಸಿದ್ದಾರೆಯೇ ಎಂಬ ಬಗ್ಗೆ ಏನಾದರೂ ದಾಖಲೆಗಳನ್ನು ತೋರಿಸುವಿರಾ ಎಂದು ಅರ್ಜಿದಾರರ ಪರ ವಕೀಲರನ್ನು ಅವರು ಪ್ರಶ್ನಿಸಿದರು. ಆಗ ವಕೀಲರು, ‘ಇಂತಹ ಸನ್ನಿವೇಶದಲ್ಲಿ ಏನು ಮಾಡಬೇಕು ಎನ್ನುವ ಬಗ್ಗೆ ಕಾನೂನು ಮೌನವಾಗಿದೆ’ ಎಂದು ಹೇಳಿದರು. ಆದರೆ ಈ ವಾದವನ್ನು ಪೀಠ ಒಪ್ಪಲಿಲ್ಲ.ಅರ್ಜಿ ಹಿಂದಕ್ಕೆ ಪಡೆದ ಹಿನ್ನೆಲೆಯಲ್ಲಿ ಅದು ವಜಾಗೊಂಡಂತಾಗಿದೆ. ಶನಿವಾರ ಮತದಾನ ನಡೆಯಲಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.