ಮಂಗಳವಾರ, ಅಕ್ಟೋಬರ್ 22, 2019
26 °C

ಉಪಚುನಾವಣೆ: ಮೂರೂ ಪಕ್ಷಗಳಲ್ಲೂ ಕುತೂಹಲ

Published:
Updated:

ಕಡೂರು: ಶುಕ್ರವಾರ ಬೆಳಗ್ಗೆ 8ಕ್ಕೆ ಆರಂಭವಾಗಲಿರುವ ಕಡೂರು ತಾಲ್ಲೂಕಿನ ಸರಸ್ವತಿಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಜಿಲ್ಲೆ ಯಾದ್ಯಂತ ಕುತೂಹಲ ಕೆರಳಿಸಿದ್ದು ಎಣಿಕೆ ಆರಂಭವಾದ ಕೆಲವೇ ಸಮಯದಲ್ಲಿ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ.ಕಾಂಗ್ರೆಸ್ ನಿಂದ ಶರತ್‌ಕೃಷ್ಣಮೂರ್ತಿ, ಬಿಜೆಪಿಯಿಂದ ಕೆ.ಎಚ್.ಎ.ಪ್ರಸನ್ನ, ಜೆಡಿಎಸ್‌ನಿಂದ ಬಿ.ಪಿ.ನಾಗರಾಜ್ ಮತ್ತು ಜೆಡಿಎಸ್ ಬಂಡಾಯ ಅಭ್ಯರ್ಥಿ ಕಂಸಾಗರ ಶೇಖರ್ ಕಣದಲ್ಲಿದ್ದರು. ಎಲ್ಲ ಪಕ್ಷಗಳಿಗಿಂತ ಕಾಂಗ್ರೆಸ್ ಹೆಚ್ಚಿನ ಒತ್ತಡದಲ್ಲಿರುವುದು ಕಂಡುಬರುತ್ತಿದೆ. ಕಳೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಖಾತೆ ತೆರೆಯಲು ವಿಫಲ ವಾಗಿದ್ದ ಕಾಂಗ್ರೆಸ್ ಅಸ್ತಿತ್ವ ಕಳೆದು ಕೊಳ್ಳು ವುದೋ ಎಂಬ ಭೀತಿ ಕಾರ್ಯಕರ್ತರಲ್ಲಿ ಉಂಟಾಗಿತ್ತು. ಆದರೆ ಈ ಬಾರಿ ಯಾವುದೇ ಭಿನ್ನಾಭಿ ಪ್ರಾಯವಿಲ್ಲದೆ  ಮಾಜಿ ಶಾಸಕ ಕೆ.ಎಂ.ಕೃಷ್ಣಮೂರ್ತಿ ಪುತ್ರ ಶರತ್ ಕಣಕ್ಕಿಳಿದಾಗ ಅಭ್ಯರ್ಥಿ ಆಯ್ಕೆಯಲ್ಲಿಯೇ ಅರ್ಧ ಯುದ್ಧ ಗೆದ್ದೆವು ಎಂಬ ಭರವಸೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮೂಡಿದ್ದರೆ ಆಶ್ಚರ್ಯವಿಲ್ಲ.ಇದಕ್ಕೆ ಪೂರಕವಾಗಿ ವಿಧಾನಪರಿಷತ್ ವಿರೋಧಪಕ್ಷದ ನಾಯಕಿ ಮೋಟಮ್ಮ, ಮುಖಂಡರಾದ ಬಿ.ಎಲ್.ಶಂಕರ್, ಕೆಂಪರಾಜ್ ಎಲ್ಲರೂ ಒಗ್ಗಟ್ಟಿ ನಿಂದ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿದ್ದು, ಮತ್ತು ಕಳೆದಬಾರಿ ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿ ಸತೀಶ್ ಕೈಹಿಡಿದಿದ್ದ ತೆಲುಗುಗೌಡ ಜನಾಂಗ ಈ ಬಾರಿ ಕಾಂಗ್ರೆಸ್ ಕೈಹಿಡಿದಿರುವ ನಿರೀಕ್ಷೆ ಫಲಿತಾಂಶಕ್ಕೆ ರೋಚಕತೆ ತರಲಿದೆ.ಇನ್ನು ಜೆಡಿಎಸ್ ಅಭ್ಯರ್ಥಿ ಬಿ.ಪಿ. ನಾಗರಾಜ್ ಕಣಕ್ಕಿಳಿದಿದ್ದು ಟಿಕೆಟ್ ಆಕಾಂಕ್ಷಿಗಳಾಗಿದ್ದ ಅನೇಕರ ಹುಬ್ಬೇರುವಂತೆ ಮಾಡಿತ್ತು. ಕಾರಣ ಜೆಡಿಎಸ್‌ನ ಮುಖವಾಣಿ ವೈ.ಎಸ್.ವಿ.ದತ್ತ ಅವರ ಅನೇಕ ಬೆಂಬಲಿಗರು ಮತ್ತು ದತ್ತರ ಪ್ರಮುಖ ಬೆಂಬಲಿಗ ಕಂಸಾಗರ ಶೇಖರ್‌ರನ್ನು ಬದಿಗೊತ್ತಿ ಬೀರೂರು ಮಾಜಿ ಶಾಸಕ ಧರ್ಮೇಗೌಡರ ಪ್ರೀತಿಪಾತ್ರ ನಾಗರಾಜ್ ಅವರನ್ನು ಕಣಕ್ಕಿಳಿಸಿದ್ದು ಎಮ್ಮೆದೊಡ್ಡಿ ಭಾಗದಲ್ಲಿ ಅಪೂರ್ವ ಸಹೋದರರ ಬಲಾಬಲ ಎಷ್ಟು ಎನ್ನುವುದನ್ನು ಪ್ರಕಟ ಪಡಿಸಿದೆ.ಜೆಡಿಎಸ್‌ಗೆ ಏನಾದರೂ ಹಿನ್ನಡೆ ಸಂಭವಿಸಿದರೆ ಎಚ್.ರಾಂಪುರದ ಮತದಾನ ಬಹಿಷ್ಕಾರ ಮತ್ತು ಬಂಡಾಯ ಸ್ಪರ್ಧೆ ಮಾಡಿರುವ ಏಕೈಕ ಗ್ರಾಮಾಂತರ ಅಭ್ಯರ್ಥಿ ಕಂಸಾಗರ ಶೇಖರ್ ಕಾರಣವಾಗಲಿರುವುದು ನಿಸ್ಸಂಶಯ.ಕಳೆದ ಸಾರಿ ದ್ವಿತೀಯ ಸ್ಥಾನ ಗಳಿಸಿದ್ದ ಬಿಜೆಪಿ ಈ ಸಾರಿ ಶತಾಯಗತಾಯ ಗೆಲ್ಲಲೇಬೇಕೆಂಬ ದೃಷ್ಟಿಯಿಂದ ಜಿಲ್ಲೆಯ ಶಾಸಕರಾದ ಸುರೇಶ್, ಸಿ.ಟಿ.ರವಿ ಮತ್ತು ಡಾ.ವಿಶ್ವನಾಥ್ ಪ್ರಚಾರದಲ್ಲಿ ಪಾಲ್ಗೊಂಡು ಕಾರ್ಯಕರ್ತರಿಗೆ ಹುರುಪು ತುಂಬಿದರು. ಅಲ್ಲದೆ ನಿಗಮ-ಮಂಡಳಿ ಅಧ್ಯಕ್ಷರಾದ ರೇಖಾ ಹುಲಿಯಪ್ಪ ಗೌಡ, ಎಂ.ಕೆ.ಪ್ರಾಣೇಶ್ ಸಹ ಸಾಥ್ ನೀಡಿದ್ದು, ಬಿಜೆಪಿಗೆ ಭರವಸೆ ಮೂಡಿಸಿತು. ಕಳೆದ ಸಾರಿ ಹುಮ್ಮಸ್ಸಿನಿಂದ ಚುನಾವಣೆ ಎದುರಿಸಿದ್ದ ಬಿಜೆಪಿ ಈ ಬಾರಿಯೂ ಗೆದ್ದೆ ಗೆಲ್ಲುವ ಛಲದಿಂದ ಕಣಕ್ಕಿಳಿದಿದ್ದು ಲಿಂಗಾಯತ ಪ್ರಾಬಲ್ಯದ ಬಿಸಲೇಹಳ್ಳಿ, ಹೊಗರೇಹಳ್ಳಿ, ಚನ್ನಾಪುರ, ಬಳ್ಳಿಗನೂರು ಮತ್ತು ಹಿಂದುಳಿದ ವರ್ಗಗಳು ಮತ್ತು ತೆಲುಗುಗೌಡರ ಮತಗಳ ಪ್ರಾಬಲ್ಯವಿರುವ ಹುಲ್ಲೇಹಳ್ಳಿ, ಗಾಳಿಹಳ್ಳಿ, ಜೋಡಿ ತಿಮ್ಮಾಪುರ ಮತ್ತು ಯರೇಹಳ್ಳಿಗಳಲ್ಲಿ ಇತರರ ಕೋಟೆಗೆ ಕನ್ನ ಹಾಕಿರುವ ಭರವಸೆ ಹೊಂದಿದ್ದು, ಕ್ಷೇತ್ರದಲ್ಲಿ ಇನ್ನೂ ತನ್ನ ಛಾಪು ಉಳಿಸಿಕೊಂಡಿರುವ ಮಾಜಿ ಶಾಸಕ ಕಾಂಗ್ರೆಸ್‌ನ ಕೆ.ಬಿ.ಮಲ್ಲಿಕಾರ್ಜುನರ ಚಾಣಾಕ್ಷ ನಡೆಗಳಿಗೆ ತನ್ನದೇ ಆದ ರೀತಿಯಲ್ಲಿ ಉತ್ತರಿಸುವ ನಿರೀಕ್ಷೆಯಲ್ಲಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)