ಉಪಚುನಾವಣೆ ಸೋಲಿನಿಂದ ಚೇತರಿಕೆ ಇಲ್ಲ

7

ಉಪಚುನಾವಣೆ ಸೋಲಿನಿಂದ ಚೇತರಿಕೆ ಇಲ್ಲ

Published:
Updated:

ಕೊಪ್ಪಳ: ಜಿಲ್ಲೆಯ ಜೆಡಿಎಸ್ ಪಾಳೆಯದಲ್ಲಿ ಸಹ ಮೂಲ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂಬ ಅಸಮಾಧಾನ ಇದೆ. ಇದಕ್ಕಿಂತ ಮಿಗಿಲಾಗಿ ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಅನುಭವಿಸಿದ ಸೋಲಿನಿಂದ ಚೇತರಿಸಿಕೊಳ್ಳುವಲ್ಲಿ ಪಕ್ಷ ವಿಫಲವಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.ಈ ಮಾತನ್ನು ಒಪ್ಪಿಕೊಳ್ಳುವ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು, ಇನ್ನಾದರೂ ನಮ್ಮ ಜಿಲ್ಲಾ ಮಟ್ಟದ ಮುಖಂಡರು ಗ್ರಾಮಾಂತರ ಪ್ರದೇಶಗಳಿಗೆ ತೆರಳಿ ಜನರ ಕಷ್ಟ-ಸುಖಗಳಿಗೆ ಸ್ಪಂದಿಸುವ ಮೂಲಕ ಪಕ್ಷದ ಸಂಘಟನೆಯನ್ನು ಬಲಪಡಿಸದಿದ್ದರೆ ಭವಿಷ್ಯ ಹೇಗೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ.ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಯಾರಿಗೆ ನೀಡಬೇಕು ಎಂಬುದು ಬೇಗ ಇತ್ಯರ್ಥವಾಗಬೇಕು ಎಂಬುದು ಎಲ್ಲ ಕಾರ್ಯಕರ್ತ ಅಪೇಕ್ಷೆ. ಆದರೆ, ಈ ವಿಷಯದಲ್ಲಿ ಸಹ ಕಾರ್ಯಕರ್ತರಲ್ಲಿ ಎರಡು ಗುಂಪುಗಳಾಗಿರುವುದು ಸ್ಪಷ್ಟ. ಒಂದು ಬಣ ಪ್ರದೀಪಗೌಡ ಮಾಲಿಪಾಟೀಲರಿಗೆ ಟಿಕೆಟ್ ನೀಡಬೇಕು ಎಂದು ಹೇಳುತ್ತಿದ್ದರೆ, ಮತ್ತೊಂದು ಗುಂಪು ಸುರೇಶ್ ಭೂಮರೆಡ್ಡಿ ಪರ ವಕಾಲತ್ತು ವಹಿಸುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ.ಈ ಸಮಸ್ಯೆ ಕೇವಲ ಕೊಪ್ಪಳ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಯಲಬುರ್ಗಾ ಕ್ಷೇತ್ರದಿಂದ ಜಿ.ಟಿ.ಪಂಪಾಪತಿ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಎಚ್.ಪೊಲೀಸ್‌ಪಾಟೀಲ ಸಹ ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಕೆಜಿಪಿ ಸ್ಪರ್ಧಿಸಲು ಪೊಲೀಸ್‌ಪಾಟೀಲ ಅವರು ನಿರ್ಧರಿಸಬಹುದು ಎಂಬ ವದಂತಿಗಳು ಸಹ ಕೇಳಿ ಬರುತ್ತಿವೆ.ಕುಷ್ಟಗಿ ಕ್ಷೇತ್ರದಿಂದ ನಿವೃತ್ತ ತಹಸೀಲ್ದಾರರೊಬ್ಬರು ಸ್ಪರ್ಧಿಸಲು ಒಲವು ವ್ತಕ್ತಪಡಿಸಿದ್ದಲ್ಲದೇ, ಕಳೆದ ಕೆಲ ದಿನಗಳಿಂದ `ಖರ್ಚು' ಮಾಡುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಕಾರ್ಯಕರ್ತರೊಬ್ಬರು ಹೇಳುತ್ತಾರೆ. ಈ ನಡುವೆ, ಮಾಜಿ ಶಾಸಕ ಕೆ.ಶರಣಪ್ಪ ಅವರ ಹೆಸರೂ ಕೇಳಿ ಬರುತ್ತಿದೆ.ಇನ್ನು, ಈಚೆಗಷ್ಟೇ ಜೆಡಿಎಸ್‌ಗೆ ಮರಳಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರಿಗೆ ಗಂಗಾವತಿಯಿಂದ ಟಿಕಟ್ ಖಾತರಿ. ಆದರೆ, ಗಂಗಾವತಿ ಕ್ಷೇತ್ರದ ಮೂಲ ಜೆಡಿಎಸ್ ಕಾರ್ಯಕರ್ತರು, ಕೆಲ ಆಕಾಂಕ್ಷಿಗಳಿಗೆ ಈಗ ಭ್ರಮನಿರಸನವಾಗಿದ್ದು, ಅವರು ಎಷ್ಟರ ಮಟ್ಟಿಗೆ ಅನ್ಸಾರಿ ಅವರಿಗೆ ಸಹಕಾರ ನೀಡುತ್ತಾರೆ ಎಂಬುದು ಮುಖ್ಯವಾಗುತ್ತದೆ ಎಂದು ಕಾರ್ಯಕರ್ತರು ಹೇಳುತ್ತಾರೆ. ಜೊತೆಗೆ, ಕೊಪ್ಪಳ ತಾಲ್ಲೂಕಿನ ಕೆಲ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತವೆ. ಈ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಶಾಸಕ ಸಂಗಣ್ಣ ಕರಡಿ ಅವರ ಪ್ರಭಾವ ಇದೆ. ಈ ಅಂಶವನ್ನು ಸಹ ಅನ್ಸಾರಿ ಅವರು ಕಡೆಗಣಿಸುವಂತಿಲ್ಲ ಎಂದು ಜೆಡಿಎಸ್ ಕಾರ್ಯಕರ್ತರು ಹೇಳುತ್ತಾರೆ. ಇನ್ನು, ಕನಕಗಿರಿ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿಯ ಹುಡುಕಾಟ ನಡೆದಿದೆ ಎಂದೂ ಹೇಳುತ್ತಾರೆ.ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಸರಿಯಾದ ಪ್ರಯತ್ನಗಳೇ ಜಿಲ್ಲೆಯಲ್ಲಿ ನಡೆದಿಲ್ಲ. ವಿವಿಧ ಘಟಕಗಳ ಪದಾಧಿಕಾರಿಗಳ ಸಂಖ್ಯೆ ಎರಡು ಸಾವಿರ ದಾಟುತ್ತದೆ. ಆದರೆ, ಇದುವರೆಗೂ ಈ ಘಟಕಗಳಿಗೆ ನೇಮಕಾತಿಯೇ ನಡೆದಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನವೂ ನಡೆಯುತ್ತಿಲ್ಲ ಎಂಬ ಕಾರ್ಯಕರ್ತರ ಅಳಲಿಗೆ ಡಿ.27ರಂದು ನಡೆಯಲಿರುವ ಸಭೆಯಲ್ಲಿ ಸಮಾಧಾನ ಸಿಗುವುದೇ ಕಾದು ನೋಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry