ಸೋಮವಾರ, ಏಪ್ರಿಲ್ 19, 2021
27 °C

ಉಪಜೀವನಕ್ಕೆ ಏನು ಮಾಡ್ತೀರಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: `ಸತತ ಬರದಿಂದ ಬೆಳೆ ಎಲ್ಲ ಹಾನಿಯಾಗಿದೆ ಎನ್ನುತ್ತಿದ್ದೀರಿ. ಹಾಗಿದ್ದರೆ ನಿಮ್ಮ ಉಪಜೀವನಕ್ಕೆ ಏನು ಆಧಾರ?~ ಬರ ಪರಿಸ್ಥಿತಿಯ ಅಧ್ಯಯನಕ್ಕೆ ಗುರುವಾರ ಜಿಲ್ಲೆಗೆ ಭೇಟಿ ನೀಡಿದ್ದ ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥ, ಕೇಂದ್ರ ಕೃಷಿ ಸಚಿವಾಲಯದ ಹಿರಿಯ ಅಧಿಕಾರಿ ಪರವೇಶ್ ಶರ್ಮಾ ಅವರು ವಿಜಾಪುರ ತಾಲ್ಲೂಕಿನ ಟಕ್ಕಳಕಿ ಗ್ರಾಮದ ರೈತರಿಗೆ ಕೇಳಿದ ಪ್ರಶ್ನೆ ಇದು.ರೈತರ ಸಂಪ್ರದಾಯಿಕ ಸ್ವಾಗತದ ನಂತರ ಶರ್ಮಾ ನೇತೃತ್ವದ ತಂಡದವರು, ಜಮೀನಿಗೆ ಭೇಟಿ ನೀಡಿ ಅಲ್ಲಿ ಕಮರುತ್ತಿರುವ ಬೆಳೆಯನ್ನು ವೀಕ್ಷಿಸಿದರು.`ಎರಡು ಎಕರೆ ಜಮೀನಿದೆ. ಬಿತ್ತನೆಗೆ ರೂ.2000 ಖರ್ಚು ಮಾಡಿದ್ದೇನೆ. ಮಳೆ ಇಲ್ಲದೆ ಬೆಳೆ ಒಣಗಿದೆ. ಬಿತ್ತಿದ ಹಣವೂ ಬರುವುದಿಲ್ಲ. ಎರಡು ವರ್ಷದಿಂದ ಇದೇ ಪರಿಸ್ಥಿತಿ ಇದೆ~ ಎಂದು ರೈತ ಪ್ರಕಾಶ ಝಂಡೆ ಅಳಲು ತೋಡಿಕೊಂಡರು.ಆಗ ಕನಿಕರಗೊಂಡಂತೆ ಕಂಡುಬಂದ ಪರವೇಶ್ ಶರ್ಮಾ, ಜಿಲ್ಲಾಧಿಕಾರಿಗಳ ಮೂಲಕ ರೈತರಿಗೆ ಈ ಪ್ರಶ್ನೆ ಕೇಳಿದರು.`ಹೈನುಗಾರಿಕೆಯೇ ನಮ್ಮ ಉಪಜೀವನಕ್ಕೆ ಮೂಲ ಆಧಾರ. ಸತತ ಬರ ಇದ್ದರೂ, ನಾವು ಪರಿಶ್ರಮದಿಂದ ಜಾನುವಾರುಗಳನ್ನು ಸಾಕಿಕೊಂಡಿದ್ದೇವೆ. ಈ ಒಂದೇ ಊರಿನಲ್ಲಿ ನಿತ್ಯ 2000 ರಿಂದ 2200 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಹಾಲು ಮಾರಿ ಜೀವನ ಸಾಗಿಸುತ್ತಿದ್ದೇವೆ~ ಎಂದು ಅಲ್ಲಿದ್ದ ರೈತರು ಹೇಳಿದರು.

`ಹಾಲನ್ನು ಯಾರಿಗೆ ಮಾರುತ್ತೀರಿ~ ಎಂಬ ಶರ್ಮಾ ಅವರ ಮತ್ತೊಂದು ಪ್ರಶ್ನೆಗೆ `ಕೆಎಂಎಫ್‌ಗೆ ಮಾರುತ್ತೇವೆ. ನಮ್ಮಲ್ಲಿಯೇ ಒಂದು ಸಂಘ ಇದೆ~ ಎಂಬ ಉತ್ತರ ರೈತರಿಂದ ಬಂತು.ಕೆಎಂಎಫ್ ಅಂದರೆ ಏನು? ಎಂಬ ಮಾಹಿತಿಯನ್ನು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ವಿವರಿಸಿದರು.

`ಹೌದಾ? ನಿಮ್ಮಲ್ಲಿಯೇ ಒಂದು ಹಾಲು ಉತ್ಪಾದಕರ ಸಂಘ ಇದೆಯಾ? ನಾನು ಆ ಸಂಘವನ್ನು ನೋಡಬೇಕಲ್ಲ~ ಎಂದ ಶರ್ಮಾ, `ಕೆಎಂಎಫ್‌ನವರು ಈ ರೈತರಿಗೆ ನೆರವು ನೀಡುತ್ತಿಲ್ಲವೇ~ ಎಂದು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರು.ನಂತರ ಅಲ್ಲಿಯ ಹಾಲು ಉತ್ಪಾದಕರ ಸಂಘಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. `ಹಾಲು ಉತ್ಪಾದಕರಿಗೆ ರಾಜ್ಯ ಸರ್ಕಾರ ಲೀಟರ್‌ಗೆ ರೂ.2 ಪ್ರೋತ್ಸಾಹ ಧನ ನೀಡುತ್ತಿದೆ. ಬರದ ಹಿನ್ನೆಲೆಯಲ್ಲಿ ಕೆಎಂಎಫ್‌ನಿಂದ ಪ್ರತಿ ಲೀಟರ್‌ಗೆ ರೂ.1.30 ಹೆಚ್ಚುವರಿ ದರ ಕೊಡುತ್ತಿದ್ದೇವೆ.ರೈತರಿಗೆ ತರಬೇತಿ, ಜಾನುವಾರುಗಳಿಗೆ ಪೌಷ್ಟಿಕಾಂಶ, ಔಷಧಿ ವಿತರಣೆ ಮಾಡಲಾಗುತ್ತಿದೆ. ಟಕ್ಕಳಕಿಯಲ್ಲಿ ನಿತ್ಯ 2000 ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಅದರಲ್ಲಿ ಇಲ್ಲಿಯ ಗೋಶಾಲೆ ಒಂದರಲ್ಲಿಯೇ 600 ಲೀಟರ್ ಹಾಲನ್ನು ಸಂಗ್ರಹಿಸಲಾಗುತ್ತಿದೆ~ ಎಂದು ವಿಜಾಪುರ-ಬಾಗಲಕೋಟೆ ಜಿಲ್ಲೆಗಳ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಅಬ್ದುಲ್ ಅಜೀಜ್ ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.