ಮಂಗಳವಾರ, ಜನವರಿ 21, 2020
27 °C
ಪ್ರತಿನಿತ್ಯ 25 ಲಕ್ಷ ಪ್ರಯಾಣಿಕರಿಗೆ ಅನುಕೂಲ

ಉಪನಗರ ರೈಲು ಅನುಷ್ಠಾನಕ್ಕೆ ಖರ್ಚು ಕಡಿಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಪನಗರ ರೈಲು ಅನುಷ್ಠಾನಕ್ಕೆ ಖರ್ಚು ಕಡಿಮೆ

ಬೆಂಗಳೂರು: ಉಪನಗರ ರೈಲು ಯೋಜನೆ   ಸಂಪೂರ್ಣ ಅನುಷ್ಠಾನ­ವಾದ ನಂತರ  ಪ್ರತಿದಿನ 25 ಲಕ್ಷ ಪ್ರಯಾಣಿಕರಿಗೆ ಅನು­ಕೂಲವಾಗಲಿದೆ ಎಂದು ಭಾರತೀಯ ನಿರ್ವಹಣೆ ಸಂಸ್ಥೆ (ಐಐಎಂಬಿ) ಪ್ರಾಧ್ಯಾಪಕ ಪ್ರೊ. ಎಂ.ವಿ. ರಾಜೀವಗೌಡ ಪ್ರತಿಪಾದಿಸಿದರು.

ವಿಧಾನಸೌಧದಲ್ಲಿ ಮಂಗಳವಾರ ಉಪನಗರ ರೈಲು ಸೇವೆ ಕುರಿತು ಜನ­ಪ್ರತಿನಿಧಿಗಳಿಗೆ ಆಯೋಜಿಸಿದ್ದ ಕಾರ್ಯಾ­ಗಾರದಲ್ಲಿ ಅವರು ಮಾತನಾಡಿದರು.ಪ್ರಯಾಣಿಕರಿಗೂ ಇದು ಹೊರೆ­ಯಾಗುವುದಿಲ್ಲ. 66 ಕಿ.ಮೀ. ದೂರದ ಪ್ರಯಾಣಕ್ಕೆ ಸುಮಾರು ರೂ. 14 ಮಾತ್ರ ಪಾವತಿಸಬೇಕಾಗುತ್ತದೆ ಎಂದರು.ಕಡಿಮೆ ವೆಚ್ಚದ ಉಪನಗರ ರೈಲು ಸೇವೆ ಉತ್ತಮ ಸಾರಿಗೆ ವ್ಯವಸ್ಥೆಯಾ­ಗಲಿದೆ. ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಉಪನಗರಗಳು ಹಾಗೂ ಪಟ್ಟಣಗಳನ್ನು ಸಂಪರ್ಕಿಸುವ ಈ ಸೇವೆ 440 ಕಿ.ಮೀ. ವ್ಯಾಪ್ತಿ ಹೊಂದಿದ್ದು, 70ಕಿ.ಮೀ. ದೂರವನ್ನು 1 ಗಂಟೆ­ಯಲ್ಲಿ ಕ್ರಮಿಸಬಹುದು ಎಂದು ವಿವರಿಸಿದರು.‘ನಮ್ಮ ಮೆಟ್ರೊ’ ನಿರ್ಮಾಣಕ್ಕೆ ಪ್ರತಿ ಕಿ.ಮೀ.ಗೆ ರೂ.250 ಕೋಟಿ ವೆಚ್ಚವಾಗಿದ್ದು, ಸುರಂಗ ಮಾರ್ಗದಲ್ಲಿ ರೂ.350ರಿಂದ 400 ಕೋಟಿ ತಗುಲಿದೆ. ಈ ಯೋಜನೆಗೆ ಹೋಲಿಸಿದಾಗ ಉಪನಗರ ರೈಲು ಸೇವೆಗೆ ಈಗಿರುವ ರೈಲು ವ್ಯವಸ್ಥೆಯನ್ನು ಮೇಲ್ದರ್ಜೆಗೆರಿಸಿದಾಗ ಪ್ರತಿ ಕಿ.ಮೀ. ರೂ.15ರಿಂದ 20 ಕೋಟಿ ಮಾತ್ರ ವೆಚ್ಚವಾಗಲಿದೆ ಎಂದು ತಿಳಿಸಿದರು.ಉಪನಗರ ರೈಲು ಸೇವೆಯಿಂದ ಕೃಷಿ ಉತ್ಪನ್ನಗಳನ್ನು ನಗರ ಮತ್ತು ಪಟ್ಟಣಗಳ ಮಾರುಕಟ್ಟೆಗೆ ನೇರವಾಗಿ ಸಾಗಿಸುವು­ದಕ್ಕೆ ಸುಲಭವಾಗುತ್ತದೆ ಎಂದರು.ಉಪನಗರ ರೈಲು ಸೇವೆ ಕುರಿತು ಅಧ್ಯ­ಯನ ಮಾಡಿರುವ ‘ಪ್ರಜಾ’ ಸಂಸ್ಥೆಯ ಸಂಜೀವ ದ್ಯಾಮಣ್ಣನವರ ಮಾತನಾಡಿ, ಈ ಯೋಜನೆಗೆ ಅಂದಾಜು ರೂ. 8,500 ಕೋಟಿ ವೆಚ್ಚವಾಗಲಿದೆ. ಬಿನ್ನಿ ಮಿಲ್‌ ಭೂಮಿ ಹೊರತುಪಡಿಸಿದರೆ ಇತರೆ ಭೂಸ್ವಾಧೀನದ ಅಗತ್ಯವಿಲ್ಲ. ಹೆಚ್ಚುವರಿ ಭೂಮಿ ಬೇಕಾದಲ್ಲಿ ರೈಲ್ವೆ ಒಡೆತನದ­ಲ್ಲಿರುವ ಭೂಮಿಯನ್ನು ಉಪಯೋಗಿಸಿ­ಕೊಳ್ಳಬಹುದು ಎಂದು ತಿಳಿಸಿದರು.ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿ ಈ ಯೋಜನೆ ಅನುಷ್ಠಾನವಾಗಲಿದೆ. ತುಮ­ಕೂರು, ನೆಲಮಂಗಲ, ದೊಡ್ಡಬಳ್ಳಾ­ಪುರ, ಚಿಕ್ಕಬಳ್ಳಾಪುರ, ದೇವನಹಳ್ಳಿ, ಮಾಲೂರು, ಬಂಗಾರಪೇಟೆ, ಆನೇ­ಕಲ್‌, ಹೊಸೂರು, ಬಿಡದಿ, ರಾಮ­ನಗರ, ಚನ್ನಪಟ್ಟಣ, ಮದ್ದೂರು ಹಾಗೂ ಮಂಡ್ಯ ನಗರಗಳು ಉಪನಗರ ರೈಲು ಸೇವೆಯ ಲಾಭ ಪಡೆದುಕೊಳ್ಳಲಿವೆ. ಜತೆಗೆ ಬೆಂಗಳೂರಿನ ಪೀಣ್ಯ, ಜಾಲಹಳ್ಳಿ, ಯಲಹಂಕ, ಹೆಬ್ಬಾಳ, ಕೃಷ್ಣರಾಜಪುರ, ವೈಟ್‌ಫೀಲ್ಡ್‌, ಸರ್ಜಾಪುರ, ಎಲೆ­ಕ್ಟ್ರಾನಿಕ್‌ ಸಿಟಿ, ನಾಯಂಡಹಳ್ಳಿ ಮತ್ತು ಕೆಂಗೇರಿಗೂ ರೈಲು ಸಂಪರ್ಕ ಲಭ್ಯವಾ­ಗಲಿದೆ ಎಂದು ವಿವರಿಸಿದರು.ಒಂದು ಉಪನಗರ ರೈಲು 300 ಕಾರುಗಳಿಗೆ ಅಥವಾ 20 ಬಸ್‌ಗಳಿಗೆ ಸಮವಾಗಿದೆ. ವರದಿಗಳ ಪ್ರಕಾರ 1.5 ಲಕ್ಷ ಪ್ರಯಾಣಿಕರನ್ನು ಕರೆದೊಯ್ಯುವ ಉಪನಗರ ರೈಲು ಸೇವೆಯಿಂದ ಸುಮಾರು 50 ಸಾವಿರ ಕಾರುಗಳ ಸಂಚಾರ ಕಡಿಮೆಯಾಗುತ್ತದೆ ಎಂದರು.ನಗರಾಭಿವೃದ್ಧಿ ಸಚಿವ ವಿನಯ­ಕುಮಾರ್ ಸೊರಕೆ, ವಿಧಾನಸಭೆ ಉಪಾ­ಧ್ಯಕ್ಷ ಎನ್‌.ಎಚ್‌. ಶಿವಶಂಕರ­ರೆಡ್ಡಿ, ವಿಧಾನಪರಿಷತ್‌ ಸದಸ್ಯ ವೀರಣ್ಣ ಮತ್ತಿ­ಕಟ್ಟಿ, ವಿಧಾನಪರಿಷತ್‌ ಸರ್ಕಾರಿ ಮುಖ್ಯ ಸಚೇತಕ ಆರ್‌.ವಿ. ವೆಂಕಟೇಶ್‌, ಶಾಸಕ­ರಾದ ಡಾ. ರಫೀಕ್‌ ಅಹ್ಮದ್‌, ರವಿ ಸುಬ್ರ­ಮಣ್ಯ, ಎನ್‌.ಎ. ಹ್ಯಾರಿಸ್‌, ಭಾರ­ತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ಸೀತಾರಾಮ್‌ ಹಾಜರಿದ್ದರು. ಜನಪ್ರತಿನಿಧಿಗಳ ಗೈರು: ಜನಪ್ರತಿನಿಧಿ­ಗಳಿ­ಗಾಗಿ ಆಯೋಜಿಸಿದ್ದ ಈ ಕಾರ್ಯಾ­ಗಾರ­ದಲ್ಲಿ ಕೆಲವರು ಮಾತ್ರ ಇದ್ದರು.ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಕೆ

ಬೆಂಗಳೂರಿನಿಂದ ತುಮಕೂರು, ಮಂಡ್ಯ, ಬಂಗಾರಪೇಟೆ, ದೊಡ್ಡಬಳ್ಳಾಪುರ ಮುಂತಾದ ಕಡೆ ವಿದ್ಯುತ್‌ ರೈಲು ಸಂಪರ್ಕ ಕಲ್ಪಿಸುವ ಉಪ ನಗರ ರೈಲು ಯೋಜನೆಯ ಪ್ರಸ್ತಾವವನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯಕುಮಾರ್‌ ಸೊರಕೆ ಹೇಳಿದರು.

ಮೂರು ಹಂತದ ಈ ಯೋಜನೆಯನ್ನು ರೂ. 8,500 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಮೊದಲ ಹಂತದಲ್ಲಿ ರೂ. 850 ಕೋಟಿ ವೆಚ್ಚದಲ್ಲಿ ಬೆಂಗಳೂರು – ಬಂಗಾರಪೇಟೆ, ಬೆಂಗಳೂರು – ಮಂಡ್ಯ, ಬೆಂಗಳೂರು – ತುಮಕೂರು ನಡುವೆ ರೈಲ್ವೆ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಎರಡನೇ ಹಂತದಲ್ಲಿ ಬೆಂಗಳೂರು – ದೊಡ್ಡಬಳ್ಳಾಪುರ ನಡುವೆ ರೈಲು ಸಂಪರ್ಕ ಕಲ್ಪಿಸಲಾಗುವುದು. ಮೂರನೇ ಹಂತದ ಯೋಜನೆ ಇನ್ನೂ ಅಂತಿಮ ವಾಗಿಲ್ಲ. ಒಟ್ಟಾರೆ ಉಪ ನಗರ ರೈಲು ಯೋಜನೆಯಿಂದ 25 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದರು.ಒಟ್ಟು ಯೋಜನಾ ವೆಚ್ಚದಲ್ಲಿ ಶೇ 50ರಷ್ಟನ್ನು ಕೇಂದ್ರ ಹಾಗೂ ಶೇ 50ರಷ್ಟನ್ನು ರಾಜ್ಯ ಸರ್ಕಾರ ಭರಿಸಲಿದೆ. ಮುಂಬರುವ ರೈಲ್ವೆ ಬಜೆಟ್‌ನಲ್ಲಿ ಈ ಯೋಜನೆ ಸೇರ್ಪಡೆಯಾಗುವ ವಿಶ್ವಾಸವಿದೆ. ಕೇಂದ್ರದ ಅನುಮತಿ ದೊರೆತ ಕೂಡಲೇ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರತಿಕ್ರಿಯಿಸಿ (+)