ಉಪನ್ಯಾಸಕರ ಕಿರುಕುಳ: ವಿದ್ಯಾರ್ಥಿ ಆತ್ಮಹತ್ಯೆ ಯತ್ನ

7

ಉಪನ್ಯಾಸಕರ ಕಿರುಕುಳ: ವಿದ್ಯಾರ್ಥಿ ಆತ್ಮಹತ್ಯೆ ಯತ್ನ

Published:
Updated:

ಲಿಂಗಸುಗೂರ: ಸ್ಥಳೀಯ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ದಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿರುವ ಆರೋಪಗಳು ಕೇಳಿಬರುತ್ತಲೇ ಇದ್ದವು. ಹಲವು ಬಾರಿ ಸಂಬಂಧಿಸಿದ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಪ್ರಶ್ನಿಸುವ ಮಕ್ಕಳ ಭವಿಷ್ಯದೊಂದಿಗೆ ಆಟವಾಡುತ್ತಿರುವುದನ್ನು ಕೆ. ಪವನ ವೀರನಗೌಡ ಎಂಬ ವಿದ್ಯಾರ್ಥಿಯ ಆತ್ಮಹತ್ಯೆ ಯತ್ನ ಸಾಕ್ಷಿಕರಿಸುತ್ತಿದೆ ಎಂದು ವಿದ್ಯಾರ್ಥಿ ಸಮೂಹ ಆರೋಪಿಸಿದೆ.ಮಂಗಳವಾರ ಬೆಳಿಗ್ಗೆ 8.30ರ ಸುಮಾರಿಗೆ ಶಾಲಾ ಆವರಣದಲ್ಲಿ ಪವನ 75ಕ್ಕೂ ಹೆಚ್ಚು ವಿವಿಧ ನಮೂನೆ ಗುಳಿಗೆ ಮತ್ತು ಇಲಿಗೆ ಹಾಕುವ ವಿಷದ ಪುಡಿ ನುಂಗುವ ಮೂಲಕ ನೆರೆದಿದ್ದ ವಿದ್ಯಾರ್ಥಿ ಸಮೂಹವನ್ನು ಬೆಚ್ಚಿ ಬಿಳಿಸಿದ ಪ್ರಸಂಗ ನಡೆದಿದೆ. ಸಾವಿಗೆ ನೀವ್ಯಾರೂ ಕಾರಣರಲ್ಲ. ಉಪನ್ಯಾಸಕರು ಇದರಿಂದ ಪಾಠ ಕಲಿಯಲಿ. ಸಾವಿನ ಹೊಣೆ ನಾನೆ ಹೊರುತ್ತೇನೆ ಎಂದು ಹೇಳುತ್ತಲೆ ಮೂರ್ಛಾವಸ್ಥೆಗೆ ಹೋಗುತ್ತಿದ್ದಂತೆ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಸಾವು ಬದುಕಿನ ಮಧ್ಯೆ ನರಳುತ್ತಿರುವ ಪವನ್‌ಗೆ ರಾಯಚೂರು ಆಸ್ಪತ್ರೆಗಳಲ್ಲೂ ಚಿಕಿತ್ಸೆ ಸಾಧ್ಯವಾಗದೆ ಹೋಗಿದ್ದರಿಂದ ಹೈದರಾಬಾದ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ವಿದ್ಯಾರ್ಥಿ ಸಮೂಹ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಶೈಕ್ಷಣಿಕ ವರ್ಷ ಆರಂಭಗೊಂಡು 7 ತಿಂಗಳು ಮುಗಿದರೂ ಪಾಠಗಳು ಆಗಿಲ್ಲ. ವಾರದ ಕೆಲಸದ ದಿನಗಳಲ್ಲಿ ಪಾಠ ಹೇಳದ ಉಪನ್ಯಾಸಕರು ಶನಿವಾರ ಮತ್ತು ಭಾನುವಾರ ತಪ್ಪದೆ ಶಾಲೆಗೆ ಬರಲು ಹೇಳುತ್ತಾರೆ. ಅವರು ನೀಡುವ ಕಿರುಕುಳ ಹೇಳಲು ಆಗದಷ್ಟಿವೆ ಎಂದು ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ವಿದ್ಯಾರ್ಥಿಗಳು ಬವಣೆ ತೋಡಿಕೊಂಡರು.ಪ್ರಾಚಾರ್ಯರು ಮತ್ತು ಉಪನ್ಯಾಸಕ ವರ್ಗ ನೀಡುತ್ತಿರುವ ಕಿರುಕುಳಕ್ಕೆ ಬೇಸತ್ತ ಸಾಕಷ್ಟು ವಿದ್ಯಾರ್ಥಿಗಳು ಕಾಲೇಜಿನಿಂದ ಹೊರ ಹೋಗಿದ್ದಾರೆ. 110 ಮಕ್ಕಳಲ್ಲಿ ಸಧ್ಯ 84 ವಿದ್ಯಾರ್ಥಿಗಳು ಮಾತ್ರ ಉಳಿದುಕೊಂಡಿದ್ದೇವೆ. ಹಿರಿಯ ವಿದ್ಯಾರ್ಥಿಗಳೆ, ಕಿರಿಯ ವಿದ್ಯಾರ್ಥಿಗಳಿಗೆ ಪಾಠ ಹೇಳುವಂತಹ ದುಸ್ಥಿತಿ ನಿರ್ಮಾಣಗೊಂಡಿದೆ.ತೊಂದರೆಗಳ ಬಗ್ಗೆ ಧ್ವನಿ ಎತ್ತುವ ವಿದ್ಯಾರ್ಥಿಗಳಿಗೆ ಆಂತರಿಕ ಅಂಕಗಳ (ಇಂಟರ್‌ನಲ್ ಮಾರ್ಕ್ಸ್) ಅಳಕು ತೋರಿಸುತ್ತಾರೆ. ಯುವಕರ ಧ್ವನಿ ಮಂಕಾಗಿದೆ. ಈ ಎಲ್ಲ ಸಮಸ್ಯೆಗಳ ಮಧ್ಯೆ ಜೀತದ ಬದುಕು ನಡೆಸುತ್ತಿದ್ದೇವೆ ಎಂದು ಎಬಿವಿಪಿ ಹಿರಿಯ ಮುಖಂಡ ಚಂದ್ರಶೇಖರ ಪಾಟೀಲ ಅವರ ಮುಂದೆ ವಿದ್ಯಾರ್ಥಿಗಳು ಸಾಮೂಹಿಕವಾಗಿ ಅಳಲು ತೋಡಿಕೊಂಡರು.ಎಚ್ಚರಿಕೆ: ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಮುಕ್ತ ಅವಕಾಶಗಳನ್ನು ಕಲ್ಪಿಸಲಾಗಿದೆ. ತರಬೇತಿ ಕಾಲೇಜುಗಳಲ್ಲಿ ಇಂಟರ್‌ನಲ್ ಮಾರ್ಕ್ಸ್ ಎಂಬ ಅಸ್ತ್ರದಿಂದ ದಬ್ಬಾಳಿಕೆ, ಲೈಂಗಿಕ ಕಿರುಕುಳ, ವಿದ್ಯಾರ್ಥಿ ಹಕ್ಕುಗಳನ್ನು ಹತ್ತಿಕ್ಕುವ ಯತ್ನಗಳು ನಡೆದಿರುವುದು ವಿಷಾದನೀಯ ಸಂಗತಿ.ಜಿಟಿಟಿಸಿ ಕಾಲೇಜುಗಳ ಒಟ್ಟಾರೆ ಅಭಿಪ್ರಾಯ ನೋಡಿದರೆ ತಮಗೂ ಭಯ ಹುಟ್ಟಿಸಿದೆ. ಮಕ್ಕಳ ಕಲಿಕೆಗೆ ಶೈಕ್ಷಣಿಕ ವಾತಾವರಣ ಇಲ್ಲವಾಗಿದೆ. ಈ ನಿಟ್ಟಿನಲ್ಲಿ ಎಬಿವಿಪಿ ಹಂತ ಹಂತವಾಗಿ ಉಗ್ರ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಅವರು ಎಚ್ಚರಿಕೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry