ಗುರುವಾರ , ಅಕ್ಟೋಬರ್ 17, 2019
27 °C

ಉಪನ್ಯಾಸಕಿ ಅಪಹರಣ ಯತ್ನ: ನಾಲ್ವರ ಸೆರೆ

Published:
Updated:

ಭಾರತೀನಗರ: ಮದುವೆಯಾಗಲು ನಿರಾಕರಿಸಿದ ಉಪನ್ಯಾಸಕಿಯನ್ನು ಪ್ರಿಯತಮ ಮತ್ತು ಆತನ ಸ್ನೇಹಿತರು ಸಿನಿಮೀಯ ರೀತಿಯಲ್ಲಿ ಅಪಹರಣಕ್ಕೆ ಯತ್ನಿಸಿ ಪೊಲೀಸರ ದಿಢೀರ್ ಕಾರ್ಯಾಚರಣೆಯಿಂದ ಬಂಧನಕ್ಕೆ ಒಳಗಾದ ಘಟನೆ ಶನಿವಾರ ನಡೆದಿದೆ.ಸಮೀಪದ ಮೆಣಸಗೆರೆ ಗ್ರಾಮದ ಆಲೂರಯ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ನಿವಾಸಿಗಳಾದ ದೇವಿಪ್ರಕಾಶ್, ಆಕರ್ಷ, ಭಾನುಪ್ರಕಾಶ್ ಬಂಧಿತರು. ಇಲ್ಲಿಗೆ ಸಮೀಪದ ಕುರಿಕೆಂಪನದೊಡ್ಡಿ ಗ್ರಾಮದ ಅಶ್ವಿನಿ (24) ಅಪಹರಣಕ್ಕೆ ಒಳಗಾದವರು.ಹಿನ್ನೆಲೆ: ಮೆಣಸಗೆರೆ ಗ್ರಾಮದ ಆಲೂರಯ್ಯ ಸುಳ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಪಾಲ ಕರಾಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಈತ ನಗರದ ಭಾರತೀ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಅಶ್ವಿನಿ ಎಂಬುವವರನ್ನು ಕಳೆದ ಹಲವು ವರ್ಷಗಳಿಂದ ಪ್ರೀತಿ ಸುತ್ತಿದ್ದ. ಮದುವೆಯಾಗುವಂತೆ ಆಕೆಯನ್ನು ಪೀಡಿಸುತ್ತಿದ್ದ. ಆದರೆ ಇದಕ್ಕೆ ಅಶ್ವಿನಿ ವಿರೋಧ ವ್ಯಕ್ತಪಡಿಸಿದ್ದಳು. ಆದರೂ ಆಲೂರಯ್ಯ ಮದುವೆಗೆ ಒತ್ತಾಯಿಸುತ್ತಿದ್ದ. ಈತನ ಉಪಟಳ ತಾಳದೇ ಅಶ್ವಿನಿ ಕುಟುಂಬ 2 ತಿಂಗಳ ಹಿಂದೆ ಭಾರತೀನಗರ ಪೊಲೀಸರಿಗೆ ದೂರು ನೀಡಿದ್ದರು.ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನಕ್ಕೆ ಒಪ್ಪದ ಆಲೂರಯ್ಯ ಸ್ವಯಂ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ.

ಈ ಹಿನ್ನೆಲೆಯಲ್ಲಿ ಶನಿವಾರ ಅಶ್ವಿನಿಯನ್ನು ಅಪಹರಿಸಿ ಮದುವೆಯಾಗಲು ಆಲೂರಯ್ಯ ಯೋಜನೆ ರೂಪಿಸಿ, ಇದಕ್ಕಾಗಿ ತಾನು ಕೆಲಸ ನಿರ್ವಹಿಸುತ್ತಿದ್ದ ಸುಳ್ಯದ ನಿವಾಸಿಗಳಾದ ದೇವಿ ಪ್ರಕಾಶ್, ಆಕರ್ಷ, ಭಾನುಪ್ರಕಾಶ್ ಇತರರನ್ನು ಕರೆ ತಂದಿದ್ದ. ಶನಿವಾರ ಬೆಳಿಗ್ಗೆ 8.30ರ ಸಮಯದಲ್ಲಿ ಸ್ಕೂಟಿಯಲ್ಲಿ ಬರುತ್ತಿದ್ದ ಅಶ್ವಿನಿಯನ್ನು ಜಿ. ಮಾದೇಗೌಡ ಬಡಾವಣೆಯ ರಸ್ತೆ ಯೊಂದರಲ್ಲಿ ಅಡ್ಡ ಹಾಕಿ ಕಾರಿನೊಳಗೆ ಎಳೆದು ಕೊಂಡಿದ್ದಾರೆ. ಗಾಬರಿಗೊಂಡ ಅಶ್ವಿನಿ ಸಹಾಯಕ್ಕೆ ಕಿರುಚಿದ್ದಾಳೆ. ಅಪಹರಣ ಸ್ಥಳದ ಸನಿಹದಲ್ಲೇ ವಾಸವಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜಗದೀಶ್ ಕಿರುಚಾಟ ಕೇಳಿ ಮನೆಯಿಂದ ಹೊರಬಂದಿದ್ದಾರೆ. ಯುವತಿಯ ಅಪಹರಣ ಖಚಿತಪಡಿಸಿಕೊಂಡ ಅವರು ದಿಢೀರ್ ಕಾರ್ಯಾಚರಣೆ ನಡೆಸಿದರು.ವಾಹನ ಸಾಗಿದ ಮಾರ್ಗದ ಠಾಣೆಗಳಿಗೆ ವಿಷಯ ತಿಳಿಸಿ ಅಪಹರಣಕಾರರ ಬಂಧನಕ್ಕೆ ಜಾಲ ಬೀಸಿದರು. ಅಪಹರಣಕಾರರ ಕಾರು ಹಿಂಬಾಲಿಸಿ ಪೊಲೀಸ್ ಸಿಬ್ಬಂದಿ, ಬನ್ನೂರು ಪೊಲೀಸರ ನೆರವಿನಿಂದ ಆರೋಪಿಗಳನ್ನು ಬಂಧಿಸಿದರು. ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದು, ಭಾರತೀನಗರ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

Post Comments (+)