ಗುರುವಾರ , ನವೆಂಬರ್ 21, 2019
21 °C

ಉಪನ್ಯಾಸಕಿ ಕೊಲೆ: ಪತಿ ಪರಾರಿ

Published:
Updated:

ಹುಬ್ಬಳ್ಳಿ: ಪತ್ನಿಯನ್ನು ಪತಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ಹೊರವಲಯದ ಉಣಕಲ್ ಬಳಿಯ ಶಿವಗಿರಿ ನಗರದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.`ಧಾರವಾಡ ಕರ್ನಾಟಕ ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕಿ ಸೀಮಾ ಕಾಂಬಳೆ (29) ಕೊಲೆಗೀಡಾಗಿದ್ದಾರೆ.

ಆರೋಪಿ ಪತಿ, ನಗರದ ಪಿ.ಸಿ.ಜಾಬಿನ್ ಕಾಲೇಜಿನ ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗದ ತಾತ್ಕಾಲಿಕ ಉಪನ್ಯಾಸಕ ಉದಯ ಕುಮಾರ್ ಕಾಂಬಳೆ ತಲೆಮರೆಸಿಕೊಂಡಿದ್ದಾರೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ' ಎಂದು ಪೊಲೀಸ್ ಕಮಿಷನರ್ ಬಿ.ಎ.ಪದ್ಮನಯನ ತಿಳಿಸಿದರು.ಪರಸ್ಪರ ಪ್ರೀತಿಸಿ ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಈ ಜೋಡಿ, ಶಿವಗಿರಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಗುರುವಾರ ಮಧ್ಯಾಹ್ನ ಈ ದಂಪತಿ ನೆಲೆಸಿದ್ದ ಮನೆಯಲ್ಲಿ ಚೀರಾಟ ಕೇಳಿಸಿದ್ದು, ಮೊದಲ ಮಹಡಿಯಲ್ಲಿರುವ ಮನೆ ಮಾಲೀಕರು ಕೆಳಗೆ ಬಂದಾಗ, ಉದಯಕುಮಾರ್ ಮನೆಗೆ ಬೀಗಹಾಕಿ ಅವಸರವಸರವಾಗಿ ಹೋಗುತ್ತಿರುವುದನ್ನು ಗಮನಿಸಿದ್ದರು.ಸಂದೇಹದಿಂದ ಕಿಡಕಿ ಮೂಲಕ ಮನೆಯೊಳಗೆ ಇಣುಕಿದಾಗ ಸೀಮಾ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಾಣಿಸಿತು ಎಂದು ಮನೆ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.`ಕಲಿಯುತ್ತಿರುವಾಗಲೇ ಪ್ರೀತಿಸಿ ಮದುವೆಯಾಗಿದ್ದರು (ಡಿ. 26, 2013). ಇಬ್ಬರೂ ಅನ್ಯೋನ್ಯವಾಗಿಯೇ ಇದ್ದರು. ಆದರೆ ಅವನು ಹೀಗೇಕೆ ಮಾಡಿದನೋ ಗೊತ್ತಾಗುತ್ತಿಲ್ಲ. ಮನೆಯ ಸುತ್ತಮುತ್ತಲಿನ ಎಲ್ಲರಿಗೂ ಆತ್ಮೀಯಳಾಗಿದ್ದಳು. ಮೊನ್ನೆಯಷ್ಟೇ ಪಿಯು ವಿದ್ಯಾರ್ಥಿಗಳ ಪ್ರಶ್ನೆಪತ್ರಿಕೆ ಮೌಲ್ಯಮಾಪನಕ್ಕೆಂದು ಆಕೆಯ ಮನೆಗೆ ಬಂದಿದ್ದಾಗ ಮಾಂಸಹಾರಿ ಅಡುಗೆ ಮಾಡಿ ಬಡಿಸಿದ್ದಳು. ಸುತ್ತಮುತ್ತಲಿನ ಎಲ್ಲರನ್ನೂ ಊಟಕ್ಕೆ ಕರೆದಿದ್ದಳು. ಆದರೆ ಪತಿಯಿಂದ ಇರಿತಕ್ಕೆ ಒಳಗಾಗಿ ಚೀರಾಡುತ್ತಿರುವುದನ್ನು ಕೇಳಿಯೂ ಯಾರೂ ಆಕೆಯ ರಕ್ಷಣೆ ಬಂದಿಲ್ಲ. ಯಾರಾದರೂ ರಕ್ಷಣೆಗೆ ಬರುತ್ತಿದ್ದರೆ ಆಕೆ ಬದುಕಿ ಉಳಿಯುತ್ತಿದ್ದಳು' ಎಂದು ಮೃತ ಸೀಮಾಳ ತಂದೆ ಕಣ್ಣೀರಿಟ್ಟರು.ಮಗಳು ಕೊಲೆಗೀಡಾಗಿರುವ ಮಾಹಿತಿ ಸಿಕ್ಕಿದ ತಕ್ಷಣ ರಾಯಚೂರು ಜಿಲ್ಲೆ ಕುಷ್ಠಗಿ ತಾಲ್ಲೂಕಿನ ತಾವರಗೇರದಿಂದ ನಗರಕ್ಕೆ ಧಾವಿಸಿ ಬಂದ್ದ್ದಿದ ಸೀಮಾಳ ತಂದೆ ಮತ್ತು ತಾಯಿ ಪೊಲೀಸರಿಗೆ ಮಾಹಿತಿ ನೀಡಿದರು.`ಒಬ್ಬ ಗಂಡು, ಮೂವರು ಹೆಣ್ಣು ಮಕ್ಕಳಲ್ಲಿ ಸೀಮಾ ಹಿರಿಯವಳು. ಇಬ್ಬರೂ ಮೂರು ವರ್ಷದಿಂದ ಪ್ರೀತಿಸುತ್ತಿದ್ದು, ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಉದಯಕುಮಾರ್ ಮೂಲತಃ ಗುಲ್ಬರ್ಗಾದ ಶಹಾಪುರ ನಿವಾಸಿ. ಅಪ್ಪ- ಅಮ್ಮನಿಗೆ ಒಬ್ಬನೇ ಮಗ. ಅವನ ತಾಯಿ ಈ ಹಿಂದೆಯೇ ತೀರಿಕೊಂಡಿದ್ದು, ತುಂಗಾ ಮೇಲ್ಡಂಡೆ ಯೋಜನೆಯಲ್ಲಿ ಉದ್ಯೋಗದಲ್ಲಿದ್ದ ತಂದೆ ಇತ್ತೀಚೆಗೆ ನಿಧನರಾಗಿದ್ದರು. ತಾತ್ಕಾಲಿಕ ನೌಕರಿಯಲ್ಲಿದ್ದ ಉದಯಕುಮಾರನ ಜೊತೆ ಮಗಳನ್ನು ಮದುವೆ ಮಾಡುವ ಇಷ್ಟ ಇರಲಿಲ್ಲ. ಆದರೂ `ನೀವು ನನಗೆ ತಂದೆ-ತಾಯಿಗೆ ಸಮಾನ ಎಂದು ಹೇಳಿ, ಒತ್ತಾಯ ಮಾಡಿ ಮದುವೆ ಮಾಡಿಕೊಂಡಿದ್ದಾನೆ. ಮೂರು ಬಾರಿ ಮದುವೆ ಮುಂದೂಡಲಾಗಿತ್ತು' ಎಂದೂ ದುಃಖಿಸಿದರು.`ಸೀಮಾಳ ನಂತರದವಳು ಎಂ.ಎ. ಬಿ.ಇಡಿ ಮುಗಿಸಿದ್ದು, ಇನ್ನೊಬ್ಬಳು ಎಂಜಿನಿಯರಿಂಗ್ ಓದಿದ್ದಾಳೆ. ಮಗ ಸಿಇಟಿ ಕೋಚಿಂಗ್ ಹೋಗುತ್ತಿದ್ದಾನೆ. ಮಗಳು ಯಾರ ತಂಟೆಗೂ ಹೋಗುವವಳಲ್ಲ. ಹಾಡಹಗಲೇ ಮಗಳ ಕೊಲೆಯಾಗಿದೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ' ಎಂದು ಬಿಕ್ಕಳಿಸಿದರು.ಮಧ್ಯಾಹ್ನ ಘಟನೆ ಸಂಭವಿಸಿದರೂ ರಾತ್ರಿ ಏಳು ಗಂಟೆಯವರೆಗೂ ಸೀಮಾಳ ಮೃತದೇಹವನ್ನು ಮನೆಯಿಂದ ಸ್ಥಳಾಂತರಿಸಿರಲಿಲ್ಲ. ನಂತರ ತಹಶೀಲ್ದಾರ್ ಬಂದು ಪರಿಶೀಲನೆ ನಡೆಸಿದ್ದು, ಬಳಿಕ ಮೃತದೇಹವನ್ನು ಕಿಮ್ಸಗೆ ಸಾಗಿಸಿ ಶವಮಹಜರು ನಡೆಸಲಾಯಿತು.

ಪ್ರತಿಕ್ರಿಯಿಸಿ (+)