ಉಪಯುಕ್ತವಾದ ಮಾನಸಿಕ ಆರೋಗ್ಯ ಅರಿವು ಕಾರ್ಯಾಗಾರ

7

ಉಪಯುಕ್ತವಾದ ಮಾನಸಿಕ ಆರೋಗ್ಯ ಅರಿವು ಕಾರ್ಯಾಗಾರ

Published:
Updated:

ಶಹಾಪುರ: `ಅನಾವಶ್ಯಕ ವಿಷಯ ಮುಂದಿಟ್ಟುಕೊಂಡು ಇಲ್ಲದ ಆಸೆಗಳನ್ನು ಭ್ರಮಿಸುತ್ತಾ ನಮ್ಮ ಕೈಗೆ  ಎಟುಕದ ಸಂದರ್ಭದಲ್ಲಿ ಮಾನಸಿಕವಾಗಿ ಹಿಂಸೆ ಅನುಭವಿಸುವ ಒತ್ತಡದ ಜೀವನದಲ್ಲಿ ಪಾರಾಗುವ ಬಗೆಯ ಅರಿವಿನ ರೀತಿಯ~ ಬಗ್ಗೆ ಮನೋರೋಗ ತಜ್ಞರು ತಮ್ಮ ಅನುಭವ ಹಾಗೂ ವೈಜ್ಞಾನಿಕ ವಿಶ್ಲೇಷಣೆಯ ಮೂಲಕ ಮಾನಸಿಕ ಆರೋಗ್ಯ ಅರಿವು ಕಾರ್ಯಾಗಾರದಲ್ಲಿ ಮನ ವೇದನೆಯನ್ನು ಹೊತ್ತುಬಂದ ಜನತೆಗೆ ಒಂದಿಷ್ಟು ನೆಮ್ಮದಿಯ ಸಿಂಚನ ಮೂಡಿಸಿದರು. ಇನ್ನೂ ಹೆಚ್ಚು ಪ್ರಚಾರ ನೀಡಿ ಮತ್ತಷ್ಟು ಜನತೆಗೆ ಇದರ ಅರಿವಿನ ವಿಸ್ತಾರಗೊಳಿಸಬೇಕಾಗಿತ್ತು.ಇದು ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಮಾನಸಿಕ ಆರೋಗ್ಯ ಅರಿವು ಕಾರ್ಯಗಾರದಲ್ಲಿ ಭಾಗವಹಿಸಿ ಮನಸ್ಸಿಗೆ ನೆಮ್ಮದಿಯ ಮುಲಾಮ್ ಪಡೆದುಕೊಂಡು ತೆರಳಿದ ಜನತೆಯ ಮಾತುಗಳಿವು.ಯಾವುದೇ ಉನ್ನತ ಹುದ್ದೆಯ ಗಣ್ಯ ವ್ಯಕ್ತಿ ಅಥವಾ ಅಧಿಕಾರಿಯಿಂದ ಹಿಡಿದು ಬಡ ರೈತ, ವಿದ್ಯಾರ್ಥಿ ಹೀಗೆ  ಸಾಮಾನ್ಯ ಜನತೆಯೂ ಒಂದಿಲ್ಲ ಒಂದು ದಿನ ಬದುಕಿನಲ್ಲಿ ಮಾನಸಿಕವಾಗಿ ತಲ್ಲಣಕ್ಕೆ ಒಳಗಾಗುವ ಪರಿಯನ್ನು ವೈದ್ಯರು ಅನಾವರಣಗೊಳಿಸಿದರು ಎನ್ನುತ್ತಾರೆ ಕಾರ್ಯಾಗಾರದಲ್ಲಿ ಭಾಗವಹಿಸಿದ ನಾಗರಾಜ.ಅದರಲ್ಲಿ ನ್ಯಾಯಮೂರ್ತಿಗಳು ತಮ್ಮ ವಾಗ್ಜರಿಯ ಮೂಲಕ ಇಂದಿನ ವ್ಯವಸ್ಥೆಯ ಬದುಕಿನಲ್ಲಿ ಮಾನಸಿಕವಾಗಿ ತಲ್ಲಣ್ಣಕ್ಕೆ ಒಳಗಾಗಿದ್ದೇವೆ. ಇಲ್ಲದ್ದನ್ನು ಪಡೆಯಲು ಹೋಗಿ ಹತಾಶೆಯ ಮೊಗ ಹೊತ್ತು ಜೀವಿಸುವುದು.ವಿದ್ಯಾವಂತ ಜನತೆಯಲ್ಲಿ ಮಾನಸಿಕ ರೋಗ ಉಲ್ಬಣಗೊಳ್ಳುತ್ತಿದೆ. ನೆಮ್ಮದಿಯ ಜೀವನಕ್ಕಾಗಿ ಪ್ರೀತಿ, ವಿಶ್ವಾಸ ಹಾಗೂ ಸಂಶಯದ ಹುತ್ತದಿಂದ ದೂರವಿದ್ದು ಇರುವಷ್ಟು ದಿನ ಒಳ್ಳೆಯ ವಿಚಾರ ಹಾಗೂ ಕಾರ್ಯಗಳನ್ನು ಮಾಡುತ್ತಾ ಸಾಗಿ ಎನ್ನುವ ಉತ್ತಮ ಜೀವನ ಸಾಗಿಸಲು ನೀಡಿದ ಟಿಪ್ಸ್ ತುಂಬಾ ಮುದ ನೀಡಿತ್ತು ಎನ್ನುವುದು ಸಾಯಿಬಣ್ಣನ ಅನಿಸಿಕೆ.ಹೈದರಾಬಾದ್ ಕರ್ನಾಟಕದಲ್ಲಿ ಹೆಚ್ಚಾಗಿ ಯುವಕರ ಪಾಲಿಗೆ ಸಾವಿನ ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಿರುವ ಗುಟ್ಕಾದ ಹಾವಳಿ ಎಂಬ ಮೃತ್ಯಕೂಪದಿಂದ ಹೊರ ಬರುವ ಬಗೆಯನ್ನು ಡಾ.ಮಾಲಿಪಾಟೀಲ್ ವಿವರಿಸಿದ್ದು ತುಂಬಾ ಪರಿಣಾಮಕಾರಿಯಾಗಿತ್ತು. `ದುಶ್ಚಟವೆಂದರೆ ಒಂದು ನಿಗದಿತ ವಸ್ತುವಿನ ಮೇಲೆ ವ್ಯಕ್ತಿ ಅವಲಂಬಿತನಾಗಿ ನಂತರ ದೈಹಿಕ ಹಾಗೂ ಮಾನಸಿಕವಾಗಿ ತೊಂದರೆ ಅನುಭವಿಸುತ್ತಾ ವ್ಯಸನಿಯಾಗುತ್ತಾನೆ.ಗುಟ್ಕಾದಲ್ಲಿ ಮಾದಕ ವಸ್ತುಗಳ ಅಂಶವಿದೆ. ನಮ್ಮ ಪೋಷಕರು ಮಕ್ಕಳ ಮುಂದೆ ಇಷ್ಟಗಲ ಬಾಯಿ ತೆರೆದು ಹಾಕಿಕೊಳ್ಳುವ ಪರಿ ನಾಚಿಕೆಯನ್ನು ಬರಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಇದು ಸಾಂಕ್ರಾಮಿಕ ರೋಗವಾಗಿ ಪಸರಿಸುತ್ತಿದೆ~ ಎಂದೂ ಅವರು ಹೇಳಿದರು.ಮಾನಸಿಕ ಅನಾರೋಗ್ಯದ ಲಕ್ಷಣಗಳಾದ ದ್ವೇಷ, ಭಯ, ಮತ್ಸರ, ಅಸಹಕಾರ, ಅತೃಪ್ತಿ, ಅಶಿಸ್ತು, ಸ್ವಾರ್ಥ, ದುರಾಸೆ,  ಸಮಾಜ ವಿರೋಧಿ ಎಂಬ ವಿಷವರ್ತುಲದಿಂದ ಹೊರಬಂದು ಪ್ರೀತಿ, ವಿಶ್ವಾಸ, ಸಹನೆ, ನೆಮ್ಮದಿ, ಧೈರ್ಯ ಹಾಗೂ ಸಮಾಜಮುಖಿಯಾಗಿ ಒಂದಾಗಿ ಬಾಳೋಣ ಎನ್ನುವ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರದ ಸಲಹೆಯೂ ಕಾರ್ಯಾಗಾರದಲ್ಲಿ ಭಾಗವಹಿಸಿದ ಜನತೆಗೆ ತಣ್ಣನೆಯ ಗಾಳಿ ಬೀಸಿದ ಅನುಭವ ಉಂಟು ಮಾಡಿತು. ಪ್ರಾಧಿಕಾರ ಹಮ್ಮಿಕೊಂಡಿರುವ ಜನಪರ ಕಾಳಜಿಯ ಕಾರ್ಯಾಗಾರಕ್ಕೆ ಜನತೆ ಸಲಾಮ್ ಎಂದಿದ್ದಾರೆ.

            -

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry