ಭಾನುವಾರ, ಏಪ್ರಿಲ್ 11, 2021
25 °C

ಉಪರಾಷ್ಟ್ರಪತಿ ಚುನಾವಣೆ : ಅನ್ಸಾರಿ ಯುಪಿಎ ಅಭ್ಯರ್ಥಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ನಿರೀಕ್ಷೆಯಂತೆ ಉಪ ರಾಷ್ಟ್ರಪತಿ ಸ್ಥಾನಕ್ಕೆ ಹಮೀದ್ ಅನ್ಸಾರಿ ಕಾಂಗ್ರೆಸ್ ನೇತೃತ್ವದ ಯುಪಿಎ ಅಭ್ಯರ್ಥಿ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಇವರ ಹೆಸರು ಪ್ರಕಟಿಸುವ ಮೂಲಕ ಅನ್ಸಾರಿ ಸತತ ಎರಡನೇ ಅವಧಿಗೆ ಮುಂದುವರಿಯಲು ವೇದಿಕೆ ಸಿದ್ಧವಾಗಿದೆ.ಪ್ರಧಾನಿ ಮನಮೋಹನ್‌ಸಿಂಗ್ ಅವರ ನಿವಾಸದಲ್ಲಿ ಸೇರಿದ್ದ ಯುಪಿಎ ಮಿತ್ರ ಪಕ್ಷಗಳ ಸಭೆಯಲ್ಲಿ 76 ವರ್ಷದ ಅನ್ಸಾರಿ ಹೆಸರನ್ನು ಯುಪಿಎ ಅಧ್ಯಕ್ಷರು ಪ್ರಕಟಿಸಿದರು. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪ್ರತಿನಿಧಿ ರೈಲ್ವೆ ಸಚಿವ ಮುಕುಲ್ ರಾಯ್ ಸಭೆಯಲ್ಲಿ ಭಾಗವಹಿಸಿದ್ದರು.ಟಿಎಂಸಿ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಮತ್ತು ಮಾಜಿ ಸಂಸದ ಕೃಷ್ಣ ಬೋಸ್ ಅವರ ಹೆಸರನ್ನು ಪ್ರಸ್ತಾಪಿಸಿತು. ತಮಿಳುನಾಡಿನ ವಿಸಿಕೆ ಪಕ್ಷ ಕ್ರೈಸ್ತ ಸಮುದಾಯದ ವ್ಯಕ್ತಿಯೊಬ್ಬರ ಹೆಸರನ್ನು ಸೂಚಿಸಿತು. ಆದರೆ, ಸೋನಿಯಾ ಮತ್ತು ಪ್ರಧಾನಿ ಮನಮೋಹನ್‌ಸಿಂಗ್ ಇದ್ಯಾವುದಕ್ಕೂ ಪ್ರತಿಕ್ರಿಯಿಸಲಿಲ್ಲ.ಅನ್ಸಾರಿ ಅವರನ್ನು ಯುಪಿಎ ಅವಿರೋಧವಾಗಿ ಆಯ್ಕೆ ಮಾಡಿದೆ ಎಂದು ಸಭೆ ಬಳಿಕ ಗೃಹ ಸಚಿವ ಪಿ. ಚಿದಂಬರಂ ಪತ್ರಕರ್ತರಿಗೆ ತಿಳಿಸಿದರು. `ಈ ಆಯ್ಕೆಗೆ ಟಿಎಂಸಿ ಒಪ್ಪಿಗೆ ಇದೆಯೇ~ ಎಂಬ ಪ್ರಶ್ನೆಗೆ ಅವರನ್ನೇ ಕೇಳಿ ಎಂದರು.ತೃಣಮೂಲ ಕಾಂಗ್ರೆಸ್ ಉಪ ರಾಷ್ಟ್ರಪತಿ ಸ್ಥಾನಕ್ಕೆ ಇಬ್ಬರ ಹೆಸರುಗಳನ್ನು ಪ್ರಸ್ತಾಪಿಸಿತು ಎಂದು ಮುಕುಲ್ ರಾಯ್ ಸ್ಪಷ್ಟಪಡಿಸಿದರು. ಅನ್ಸಾರಿ ಅವರನ್ನು ಎರಡನೇ ಅವಧಿಗೆ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಯುಪಿಎ ಹೆಮ್ಮೆ ಪಡುತ್ತದೆ ಎಂದು ಸೋನಿಯಾ  ತಿಳಿಸಿದ್ದಾರೆ. ಪ್ರಣವ್ ಜತೆ ಅನ್ಸಾರಿ ಹೆಸರೂ ರಾಷ್ಟ್ರಪತಿ ಸ್ಥಾನಕ್ಕೆ ಚಲಾವಣೆಯಲ್ಲಿತ್ತಾದರೂ ಸ್ವಲ್ಪದರಲ್ಲಿ ರಾಷ್ಟ್ರಪತಿ ಭವನ ಪ್ರವೇಶಿಸುವ ಅದೃಷ್ಟ ತಪ್ಪಿಹೋಯಿತು. ಆದರೆ, 50 ವರ್ಷಗಳಲ್ಲಿ ಎರಡನೇ ಅವಧಿಗೆ ಉಪ ರಾಷ್ಟ್ರಪತಿ ಹುದ್ದೆ ಅಲಂಕರಿಸುತ್ತಿರುವ ಮೊದಲಿಗ ಎಂಬ ದಾಖಲೆ ಬರೆಯುವ ನಿಟ್ಟಿನಲ್ಲಿ ಅನ್ಸಾರಿ ಹೆಜ್ಜೆ ಹಾಕಿದ್ದಾರೆ.1952ರಿಂದ 62ರವರೆಗೆ ಡಾ. ಎಸ್.ರಾಧಾಕೃಷ್ಣನ್ ಎರಡು ಅವಧಿಗೆ ಉಪ ರಾಷ್ಟ್ರಪತಿ ಸ್ಥಾನ ಅಲಂಕರಿಸಿದ್ದರು.ನಿವೃತ್ತ ಐಎಫ್‌ಎಸ್ ಅಧಿಕಾರಿಯಾದ ಅನ್ಸಾರಿ ಅಲಿಗಢ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಯೂ ಹೌದು. 2007ರಲ್ಲಿ ಯುಪಿಎ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡುತ್ತಿದ್ದ ಎಡ ಪಕ್ಷಗಳು ಅನ್ಸಾರಿ ಹೆಸರನ್ನು ಉಪ ರಾಷ್ಟ್ರಪತಿ ಸ್ಥಾನಕ್ಕೆ ಶಿಫಾರಸು ಮಾಡಿದ್ದವು. ಆಗ ಯುಪಿಎ ಇದನ್ನು ಒಪ್ಪಿಕೊಂಡಿತು.ಅನ್ಸಾರಿ 455 ಮತಗಳನ್ನು ಪಡೆದು ಬಿಜೆಪಿಯ ನಜ್ಮಾ ಹೆಫ್ತುಲ್ಲಾ ಅವರನ್ನು ಸೋಲಿಸಿದರು. ಯುಎನ್‌ಪಿಎ ಅಭ್ಯರ್ಥಿ ರಶೀದ್ ಮಸೂದ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.ಉಪರಾಷ್ಟ್ರಪತಿ ಸ್ಥಾನ ಅಲಂಕರಿಸುವವರೆಗೂ ಅನ್ಸಾರಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯಸಭೆ ಸಭಾಪತಿಯಾಗಿ ಅತ್ಯಂತ ಘನತೆಯಿಂದ ಕೆಲಸ ಮಾಡಿದ ಹೆಗ್ಗಳಿಕೆ ಅವರದು. ಆದರೆ, ಚಳಿಗಾಲ ಅಧಿವೇಶನದ ಕೊನೆಯ ದಿನ ವಿವಾದಿತ ಲೋಕಪಾಲ ಮಸೂದೆ ಮೇಲಿನ ಮತದಾನದ ವೇಳೆ ಸದನವನ್ನು ಹಠಾತ್ ಮುಂದೂಡುವ ವಿವಾದಾತ್ಮಕ ತೀರ್ಮಾನ ಮಾಡಿ ವ್ಯಾಪಕ ಟೀಕೆಗೊಳಗಾದರು.ಸರ್ಕಾರವನ್ನು ಸೋಲಿನ ಮುಜುಗರದಿಂದ ಪಾರು ಮಾಡಲು ಸಭಾಪತಿ ಸದನ ಮುಂದೂಡುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಬಿಜೆಪಿ ಕಟುವಾಗಿ ಟೀಕಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.