ಉಪಲೋಕಾಯುಕ್ತ ಚಂದ್ರಶೇಖರಯ್ಯ ನೇಮಕ: ಸರ್ಕಾರದ್ದೇ ತಪ್ಪು ರಾಜ್ಯಪಾಲ ಕಿಡಿ

7

ಉಪಲೋಕಾಯುಕ್ತ ಚಂದ್ರಶೇಖರಯ್ಯ ನೇಮಕ: ಸರ್ಕಾರದ್ದೇ ತಪ್ಪು ರಾಜ್ಯಪಾಲ ಕಿಡಿ

Published:
Updated:

ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರನ್ನು ಎರಡನೇ ಉಪ ಲೋಕಾಯುಕ್ತರ ಹುದ್ದೆಗೆ ನೇಮಿಸುವ ಸಂದರ್ಭದಲ್ಲಿ ನಿಯಮಗಳನ್ನು ಪಾಲಿಸಿಲ್ಲ ಎಂಬ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅವರ ನಿಲುವನ್ನು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಬೆಂಬಲಿಸಿದ್ದಾರೆ. `ಲೋಪವನ್ನು ಸರಿಪಡಿಸಲು ಸರ್ಕಾರವೇ ಕ್ರಮ ಕೈಗೊಳ್ಳಬೇಕು~ ಎಂದು ಅವರು ಹೇಳಿದ್ದಾರೆ.ಈ ನಡುವೆ, ತಮ್ಮ ನೇಮಕಾತಿಯಲ್ಲಿ ಯಾವುದೇ ರೀತಿಯಲ್ಲೂ ಕಾನೂನು ಉಲ್ಲಂಘನೆ ಆಗಿಲ್ಲ. ಆದ್ದರಿಂದ ತಾವು ಹುದ್ದೆಗೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ನ್ಯಾ.ಚಂದ್ರಶೇಖರಯ್ಯ ಸ್ಪಷ್ಟವಾಗಿ ಹೇಳಿದ್ದಾರೆ. ಮುಖ್ಯ ನ್ಯಾಯಮೂರ್ತಿಯವರು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಬರೆದಿರುವ ಪತ್ರ ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.ಶನಿವಾರ ಸಂಜೆ ರಾಜಭವನದಲ್ಲಿ ನಡೆದ `ಡಾ.ಪಾದೂರು ಗುರುರಾಜ ಭಟ್ ಸ್ಮಾರಕ ಪ್ರಶಸ್ತಿ ಪ್ರದಾನ~ ಸಮಾರಂಭದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ರಾಜ್ಯಪಾಲರು, ಉಪ ಲೋಕಾಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿ ಮುಖ್ಯ ನ್ಯಾಯಮೂರ್ತಿಯವರು ಮುಖ್ಯಮಂತ್ರಿಯವರಿಗೆ ಬರೆದ ಪತ್ರದ ಪ್ರತಿ ತಮಗೆ ತಲುಪಿದೆ. `ಸಂವಿಧಾನಬದ್ಧವಾಗಿ ಈ ನೇಮಕಾತಿ ನಡೆದಿಲ್ಲ. ಆದ್ದರಿಂದ ಅದು ಕಾನೂನುಬದ್ಧವಲ್ಲ~ ಎಂಬ ಅಭಿಪ್ರಾಯವನ್ನು  ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ ಎಂದರು.`ಸರಿಯಾದ ರೀತಿಯ ಸಮಾಲೋಚನೆ ನಡೆದಿಲ್ಲ ಎಂಬ ಅಸಮಾಧಾನವನ್ನು ನ್ಯಾ.ಸೇನ್ ಅವರು ವ್ಯಕ್ತಪಡಿಸಿದ್ದಾರೆ. ಉದ್ದೇಶಪೂರ್ವಕವಾಗಿಯೇ ಕಾನೂನನ್ನು ತಪ್ಪಾಗಿ ಅರ್ಥೈಸಿರುವಂತೆ ಕಾಣುತ್ತಿದೆ. ಈ ಸಂದರ್ಭದಲ್ಲಿ ನನ್ನದು ಯಾವುದೇ ಪಾತ್ರವೂ ಇಲ್ಲ. ಆಗಿರುವ ಲೋಪವನ್ನು ಸರ್ಕಾರವೇ ಸರಿಪಡಿಸಬೇಕು. ಲೋಪ ಸರಿಪಡಿಸುವ ಸಂಬಂಧ ನಿರ್ಣಯವನ್ನು ಸರ್ಕಾರ ಕಳುಹಿಸಲಿ ಅದಕ್ಕೆ ನಾನು ಸಹಿ ಮಾಡುತ್ತೇನೆ~ ಎಂದು ಹೇಳಿದರು.ಲೋಕಾಯುಕ್ತರು ಮತ್ತು ಉಪಲೋಕಾಯುಕ್ತರ ನೇಮಕಾತಿ ಸಂದರ್ಭದಲ್ಲಿ ಅಧಿಕಾರದಿಂದ ನಿರ್ಗಮಿಸುವ ಲೋಕಾಯುಕ್ತರ ಸಲಹೆ ಪಡೆಯುವಂತೆ ಸರ್ಕಾರಕ್ಕೆ ಸಲಹೆ ನೀಡಲಾಗಿತ್ತು. ಆದರೆ, ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಸರ್ಕಾರದಲ್ಲೇ ಇರುವ ಕೆಲ ಪ್ರಭಾವಿ ಶಕ್ತಿಗಳು ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಸುತ್ತಿವೆ ಎಂದು ದೂರಿದರು.`ಲೋಕಾಯುಕ್ತ ಒಂದು ಸ್ವತಂತ್ರ ಸಂಸ್ಥೆ. ಅದನ್ನು ಮುನ್ನಡೆಸುವವರೂ ಸ್ವತಂತ್ರವಾಗಿಯೇ ನಿರ್ಧಾರ ತೆಗೆದುಕೊಳ್ಳುವಂತಹ  ವ್ಯಕ್ತಿತ್ವ ಹೊಂದಿದ್ದು, ಪ್ರಾಮಾಣಿಕರಾಗಿರಬೇಕು ಎಂಬುದು ನನ್ನ ನಿಲುವು. ಅದನ್ನೇ ಕಾಯ್ದುಕೊಳ್ಳುತ್ತೇನೆ~ ಎಂದರು.`ಶಾಸಕಾಂಗವೇ ನಿರ್ಧರಿಸಬೇಕು~: `ಬ್ಲೂ ಫಿಲಂ~ ವಿವಾದದಲ್ಲಿ ಭಾಗಿಯಾಗಿರುವ ಮೂವರು ಮಾಜಿ ಸಚಿವರನ್ನು ಶಾಸಕ ಸ್ಥಾನದಿಂದಲೂ ಅನರ್ಹಗೊಳಿಸಬೇಕೆಂಬ ವಿರೋಧ ಪಕ್ಷಗಳ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ರಾಜ್ಯಪಾಲರು, `ಭಾರತದಲ್ಲಿ ಶಾಸಕಾಂಗ ತನ್ನದೇ ಆದಂತಹ ಅಧಿಕಾರವನ್ನು ಹೊಂದಿದೆ. ಈ ವಿಷಯದಲ್ಲಿ ಶಾಸಕಾಂಗವೇ ನಿರ್ಧಾರ ಕೈಗೊಳ್ಳಬೇಕು~ ಎಂದರು.`ಸರ್ಕಾರದ ಆಡಳಿತದಲ್ಲಿ ಮೌಲ್ಯವನ್ನು ಅಳವಡಿಸಲು ನಾನು ಹಲವು ಬಾರಿ ಪ್ರಯತ್ನಿಸಿದೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ, ಶಾಸಕಾಂಗದ ಕಾರ್ಯನಿರ್ವಹಣೆ, ಲೋಕಾಯುಕ್ತ ಸಂಸ್ಥೆಯ ಘನತೆ ಕಾಪಾಡುವುದು ಸೇರಿದಂತೆ ಹಲವು ವಿಷಯಗಳಲ್ಲಿ ನಾನು ಈ ಪ್ರಯತ್ನ ಮಾಡಿದೆ. ಆದರೆ, ಸರ್ಕಾರದಲ್ಲಿ ಇರುವವರು ಅದನ್ನು ಸರಿಯಾಗಿ ತೆಗೆದುಕೊಳ್ಳಲಿಲ್ಲ~ ಎಂದು ಹೇಳಿದರು.ಮೊಕದ್ದಮೆ ಎದುರಿಸುತ್ತಿರುವ ಕೆಲವು ಸಚಿವರು ಅಧಿಕಾರದಲ್ಲಿ ಮುಂದುವರಿಯುತ್ತಿರುವ ಕುರಿತು ಕೇಳಿದಾಗ, `ಈ ವಿಷಯದ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಮಾತ್ರ ಮಾತನಾಡುತ್ತೇನೆ~ ಎಂದರು.`ರಾಜೀನಾಮೆ ಪ್ರಶ್ನೆಯೇ ಇಲ್ಲ~: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಪತ್ರದಿಂದ ಉದ್ಭವಿಸಿರುವ ವಿವಾದ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ನ್ಯಾ.ಚಂದ್ರಶೇಖರಯ್ಯ, `ಉಪ ಲೋಕಾಯುಕ್ತ ಹುದ್ದೆಗೆ ನನ್ನನ್ನು ನೇಮಕ ಮಾಡುವಂತೆ ಮುಖ್ಯಮಂತ್ರಿಯವರು ರಾಜ್ಯಪಾಲರಿಗೆ ಶಿಫಾರಸು ಮಾಡಿರುವ ಪೂರ್ಣ ಪ್ರಕ್ರಿಯೆ ಕಾನೂನಿನ ಪ್ರಕಾರವೇ ನಡೆದಿದೆ. ಆದ್ದರಿಂದ ಹುದ್ದೆಗೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ~ ಎಂದರು.ಕರ್ನಾಟಕ ಲೋಕಾಯುಕ್ತ ಕಾಯ್ದೆ ಪ್ರಕಾರ ನೇಮಕಾತಿಯ ಸಂದರ್ಭದಲ್ಲಿ ಸಮಾಲೋಚಿಸಬೇಕಾದ ಎಲ್ಲ ವ್ಯಕ್ತಿಗಳ ಜೊತೆಗೂ ಸಮಾಲೋಚನೆ ನಡೆದಿದೆ. ನಂತರವೇ ಮುಖ್ಯಮಂತ್ರಿಯವರು ರಾಜ್ಯಪಾಲರಿಗೆ ಶಿಫಾರಸು ಕಳುಹಿಸಿದ್ದರು ಎಂದು ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry