ಶುಕ್ರವಾರ, ನವೆಂಬರ್ 15, 2019
21 °C

ಉಪವಾಸಕ್ಕೆ ಬಾಬಾ ಬದ್ಧ

Published:
Updated:

ನವದೆಹಲಿ (ಪಿಟಿಐ/ಐಎಎನ್‌ಎಸ್): ಸರ್ಕಾರ ಮತ್ತು ಕಾಂಗ್ರೆಸ್ ನಾಯಕರ ಮನವೊಲಿಕೆಯ ನಡುವೆಯೂ ಕಪ್ಪುಹಣದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶನಿವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವ ತಮ್ಮ ಅಚಲ ನಿರ್ಧಾರಕ್ಕೆ ಯೋಗ ಗುರು ಬಾಬಾ ರಾಮ್‌ದೇವ್ ಈಗಲೂ ಬದ್ಧರಾಗಿದ್ದಾರೆ. ಆದರೆ ಈ ಬಗ್ಗೆ ಶುಕ್ರವಾರ ಅಂತಿಮ ತೀರ್ಮಾನ ಪ್ರಕಟಿಸಲು ಯೋಜಿಸಿದ್ದಾರೆ.ಯೋಗ ಮತ್ತು ಚಿಕಿತ್ಸಾ ಶಕ್ತಿ ಮೂಲಕ ಲಕ್ಷಾಂತರ  ಅನುಯಾಯಿಗಳನ್ನು ಹೊಂದಿರುವ ಈ ಕೇಸರಿ ವಸ್ತ್ರಧಾರಿ ಸನ್ಯಾಸಿಯನ್ನು ಉಪವಾಸ ಕೈಬಿಡುವಂತೆ ಮಾಡಲು ಪ್ರಧಾನಿ ಮನಮೋಹನ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಹಿರಿಯ ಸಚಿವರಾದಿಯಾಗಿ ಸರ್ಕಾರಿ ಪ್ರತಿನಿಧಿಗಳು ಪ್ರಯತ್ನಗಳನ್ನು ಮುಂದುವರಿಸಿದ್ದಾರೆ. ಕೇಂದ್ರ ಸಂಪುಟ ಸಭೆಯಲ್ಲಿ ರಾಮ್‌ದೇವ್ ವಿಷಯ ಚರ್ಚೆಗೆ ಬರದಿದ್ದರೂ, ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಉನ್ನತ ಮಟ್ಟಗಳಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸಿ, ಹಿಂಬಾಗಿಲಿನ ಮೂಲಕ ರಾಮ್‌ದೇವ್ ಅವರ ಮನವೊಲಿಸಲು ಪ್ರಕ್ರಿಯೆಗಳನ್ನು ನಡೆಸಿವೆ.ರಾಮ್‌ದೇವ್ ಅವರಿಗೆ ಮುಷ್ಕರ ಕೈಬಿಡಬೇಕೆಂಬ ಮನವಿಯ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಕಾಂಗ್ರೆಸ್ ಪ್ರಮುಖರೊಡನೆ ಗಂಭೀರ ಮಾತುಕತೆ ನಡೆದಿದ್ದು, ಇದರಿಂದಾಗಿ ಸಂಜೆ ನಡೆಸಬೇಕಿದ್ದ ಪತ್ರಿಕಾಗೋಷ್ಠಿಯನ್ನೂ ಯೋಗ ಗುರು ರದ್ದುಗೊಳಿಸಿದ್ದಾರೆ. ಮಾತುಕತೆಯ ಫಲಿತಾಂಶವನ್ನು ಶುಕ್ರವಾರ ಮಾಧ್ಯಮಗಳಿಗೆ ತಿಳಿಸಲು ಅವರು ಬಯಸಿದ್ದಾರೆ. 46 ವರ್ಷದ ರಾಮ್‌ದೇವ್ ಅವರಿಗೆ ರಾಜಕೀಯ ವಲಯದಿಂದ ಮಾತ್ರವಲ್ಲದೆ, ಧಾರ್ಮಿಕ ಗುರು ಶ್ರೀ ಶ್ರೀ ರವಿಶಂಕರ ಗುರೂಜಿ, ಗಾಂಧಿವಾದಿ ಅಣ್ಣಾ ಹಜಾರೆ, ಬಿಜೆಪಿ ಮತ್ತಿತರ ಪಕ್ಷಗಳ ಬೆಂಬಲವೂ ದೊರಕಿದೆ.ಆಪ್ತರೊಡನೆ ಚರ್ಚೆ: ತಮ್ಮ ಉಪವಾಸ ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ ಯೋಗ ಗುರು ಬಾಬಾ ರಾಮ್‌ದೇವ್ ತಮ್ಮ ಆಪ್ತರೊಡನೆಯೂ ಪ್ರತ್ಯೇಕ ಸಮಾಲೋಚನೆ ನಡೆಸಿದ್ದಾರೆ. ಮಧ್ಯಪ್ರದೇಶದ ಉಜ್ಜಯಿನಿಯಿಂದ ಜೆಟ್ ವಿಮಾನದಲ್ಲಿ ರಾಜಧಾನಿಗೆ ಆಗಮಿಸಿದ ಅವರು, ಸರ್ಕಾರದೊಂದಿಗಿನ ಮಾತುಕತೆಯಲ್ಲಿ ಯಾವ ರೀತಿಯ ಹೆಜ್ಜೆ ಇಡಬೇಕು ಮತ್ತು ಹೋರಾಟದ ರೂಪುರೇಷಗಳ ಕುರಿತು ಆಪ್ತರ ಜೊತೆ ಚರ್ಚಿಸಿದರು.ತಮ್ಮನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲು ಸರ್ಕಾರ ನಾಲ್ವರು ಹಿರಿಯ ಸಚಿವರನ್ನು ಕಳುಹಿಸುವ ಮೂಲಕ ತಮಗೆ ಕೆಂಪುಹಾಸು ಹಾಕಿರುವ ಬಗ್ಗೆ ತಕ್ಷಣಕ್ಕೆ ಪ್ರತಿಕ್ರಿಯಿಸಿದ ಅವರು.ರಾಮಲೀಲಾ ಮೈದಾನದಲ್ಲಿ ನಡೆಸಲು ಯೋಜಿಸಿರುವ ಉಪವಾಸ ನಿಗದಿಯಂತೆಯೇ ನಡೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.`ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಗಾಂಧಿವಾದಿ ಅಣ್ಣಾ ಹಜಾರೆ ಅವರೊಡನೆ ನನಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ~ ಎಂದು ಸ್ಪಷ್ಟಪಡಿಸಿದ ಅವರು, ಹಜಾರೆಯವರೇ ತಮ್ಮ ಕೊಚ್ಚಿ ಪ್ರವಾಸ ಚುಟುಕುಗೊಳಿಸಿ, ಭಾನುವಾರ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಲ್ದ್ದಿದಾರೆ ಎಂದೂ ತಿಳಿಸಿದ್ದಾರೆ.ತೃಣಮೂಲ ಕಾಂಗ್ರೆಸ್ ಟೀಕೆ: ಬಾಬಾ ರಾಮ್‌ದೇವ್ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ನಾಲ್ವರು ಹಿರಿಯ ಸಚಿವರು ತೆರಳಿದ ಘಟನೆಯನ್ನು ಆಡಳಿತಾರೂಢ ಯುಪಿಎನ ಅಂಗಪಕ್ಷ ತೃಣಮೂಲ ಕಾಂಗ್ರೆಸ್ ಗುರುವಾರ ಇಲ್ಲಿ ಟೀಕಿಸಿದೆ. ಪಕ್ಷದ ನಾಯಕ ಮತ್ತು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ದಿನೇಶ್ ತ್ರಿವೇದಿ, `ಯೋಗ ಗುರುವಿಗೆ ಅನಗತ್ಯ ಮಹತ್ವ ನೀಡಿರುವ ಮತ್ತು ಉಪವಾಸ ಸತ್ಯಾಗ್ರಹ ನಡೆಸುವ ಬಡವರನ್ನು ಕಡೆಗಣಿಸುವ ಸರ್ಕಾರಿ ಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡರು.ರಾಮದೇವ್ ವ್ಯಾಪಾರಿ- ದಿಗ್ವಿಜಯ ಸಿಂಗ್(ಮೊರಾದಾಬಾದ್/ ಉತ್ತರಪ್ರದೇಶ ವರದಿ): ಭ್ರಷ್ಟಾಚಾರದ ವಿರುದ್ಧ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿರುವ ಯೋಗ ಗುರು `ರಾಮ್‌ದೇವ್ ಸನ್ಯಾಸಿಗಿಂತಲೂ ಹೆಚ್ಚಾಗಿ ವ್ಯಾಪಾರಿ~ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಟೀಕಿಸಿದ್ದಾರೆ.ರಾಮ್‌ದೇವ್ ತಮ್ಮ ಯೋಗ ಶಿಬಿರದಲ್ಲಿ ಮುಂದೆ ಕುಳಿತವರಿಗೆ ರೂ 50 ಸಾವಿರ, ಹಿಂದೆ ಕುಳಿತವರಿಗೆ ರೂ 30 ಸಾವಿರ ಹಾಗೂ ಕೊನೆಯಲ್ಲಿ ಕುಳಿತವರಿಗೆ ರೂ 1,000 ಶುಲ್ಕ ವಿಧಿಸುತ್ತಿದ್ದು, ಇದು ವ್ಯಾಪಾರವಲ್ಲದೆ ಮತ್ತೇನು ಎಂದು ಸಿಂಗ್ ಸಭೆಯೊಂದರಲ್ಲಿ ಪ್ರಶ್ನಿಸಿದ್ದಾರೆ. `ರಾಮ್‌ದೇವ್ ಮುಷ್ಕರದ ಬಗ್ಗೆ ಪಕ್ಷಕ್ಕೆ ಯಾವುದೇ ಭಯವಿಲ್ಲ~ ಎಂದಿರುವ ಅವರು, ಪಕ್ಷವು ಉಪವಾಸ ನಡೆಸದಂತೆ ಅವರ ಮನವೊಲಿಸುವ ಪ್ರಯತ್ನ ನಡೆಸಿದೆ. ಅವರನ್ನು ಸ್ವಾಗತಿಸಲು ನಾಲ್ವರು ಹಿರಿಯ ಸಚಿವರನ್ನು ವಿಮಾನ ನಿಲ್ದಾಣಕ್ಕೆ ಕಳುಹಿಸಿರುವ ಸರ್ಕಾರದ ನಿಲುವಿಗೆ ಪಕ್ಷದ ಸಹಮತವಿಲ್ಲ ಎಂದು ಸಿಂಗ್ ಹೇಳಿದ್ದಾರೆ.

ಮುಷ್ಕರಕ್ಕೆ ಹಜಾರೆ ಬೆಂಬಲ

ರಾಳೇಗಣ ಸಿದ್ಧಿ, (ಮಹಾರಾಷ್ಟ್ರ) ವರದಿ: ಲೋಕಪಾಲ ಮಸೂದೆ ಅಂಗೀಕಾರಕ್ಕೆ ಹೋರಾಡುತ್ತಿರುವ ನಾಗರಿಕ ಹಕ್ಕುಗಳ ಕಾರ್ಯಕರ್ತರನ್ನು ಸರ್ಕಾರ ವಂಚಿಸುತ್ತಿದೆ ಎಂದು ಗುರುವಾರ ಇಲ್ಲಿ ಆರೋಪಿಸಿರುವ ಗಾಂಧಿವಾದಿ ಅಣ್ಣಾ ಹಜಾರೆ, ಕಪ್ಪುಹಣದ ವಿರುದ್ಧ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಯೋಗ ಗುರು ರಾಮ್‌ದೇವ್ ಅವರಿಗೆ ತಮ್ಮ ಸಂಪೂರ್ಣ ಬೆಂಬಲವಿದ್ದು, ತಾವೂ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.ಈಗಿನ ವ್ಯವಸ್ಥೆಯಿಂದ ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತೊಗೆಯಲು ಸರ್ಕಾರ ಅಷ್ಟೊಂದು ಆಸಕ್ತಿ ವಹಿಸದಿರುವ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.`ಸರ್ಕಾರವು ಮೊದಲು ಭ್ರಷ್ಟಾಚಾರ ನಿರ್ಮೂಲನಾ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಒಪ್ಪಿ, ನಂತರ ಹೋರಾಟವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದು, ಈ ಬಗ್ಗೆ ಬಾಬಾ ರಾಮದೇವ್ ಎಚ್ಚರ ವಹಿಸಬೇಕು~ ಎಂದು ಹಜಾರೆ ಕಿವಿಮಾತು ಹೇಳಿದ್ದಾರೆ.ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ನಾಗರಿಕ ಸಮಾಜ ಮತ್ತು ರಾಮ್‌ದೇವ್ ಗುಂಪುಗಳ ನಡುವೆ ಯಾವುದೇ ಒಡಕಿಲ್ಲ ಮತ್ತು ಎರಡೂ ಕಡೆಯ ಚಳವಳಿಗೆ ಪರಸ್ಪರ ಬೆಂಬಲವಿದೆ ಎಂದೂ ಅವರು ನುಡಿದಿದ್ದಾರೆ.

 

 

 

 

 

  

 

 

 

 

 

  

ಪ್ರತಿಕ್ರಿಯಿಸಿ (+)