ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ

7

ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ

Published:
Updated:

ಮಂಡ್ಯ: ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಅವರ ನೇತೃತ್ವದಲ್ಲಿ ನಡೆದ ಸರದಿ ಉಪವಾಸ ಸತ್ಯಾಗ್ರಹ ಹೋರಾಟಕ್ಕೆ ಗುರುವಾರ ಹಲವಾರು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು.ಬೈಕ್ ರ‌್ಯಾಲಿ, ರಸ್ತೆ ತಡೆ, ಪ್ರತಿಕೃತಿ ದಹನ, ಆಟೊ ರ‌್ಯಾಲಿ, ಎತ್ತಿನ ಗಾಡಿ, ಟ್ರ್ಯಾಕ್ಟರ್‌ನಲ್ಲಿ ಆಗಮಿಸುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ನೀರು ಹರಿಸುತ್ತಿರುವ ರಾಜ್ಯ ಸರ್ಕಾರ ಹಾಗೂ ನೀರು ಹರಿಸಲು ಸೂಚಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಕೆಆರ್‌ಎಸ್ ಅಣೆಕಟ್ಟೆಯಿಂದ ಹೊರ ಹರಿವು ಹೆಚ್ಚಿಸಿರುವುದಕ್ಕೂ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ರಾಜ್ಯದ ಸರ್ಕಾರದ ನಿಲುವನ್ನು ಖಂಡಿಸಿದರು.ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಉಪನಾಯಕ ಟಿ.ಬಿ. ಜಯಚಂದ್ರ, ಸಂಸದ ಎಚ್.ವಿಶ್ವನಾಥ, ಶಾಸಕ ಶ್ರೀನಿವಾಸಪ್ರಸಾದ್, ಎಚ್.ಸಿ.ಮಹದೇವಪ್ಪ, ಎಚ್.ಸಿ. ಮಹದೇವಪ್ರಸಾದ, ಜಿಲ್ಲೆಯ ಶಾಸಕರಾದ ಕೆ. ಸುರೇಶಗೌಡ, ಪಿ.ಎಂ. ನರೇಂದ್ರಸ್ವಾಮಿ, ಕೆ.ಬಿ. ಚಂದ್ರಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಭಾಷಣಕ್ಕೆ ಅಡ್ಡಿ ಪಡಿಸಿದ ಘಟನೆ ನಡೆಯಿತು. ಹೋರಾಟಕ್ಕೆ ಆಗಮಿಸದೇ ಭಾಷಣಕ್ಕೆ ಮಾತ್ರ ಬರುತ್ತೀರಿ ಎಂದು ಪ್ರತಿಭಟನಾಕಾರರು ಆಕ್ಷೇಪಿಸಿದರು. ಅರ್ಧ ಗಂಟೆಯವರೆಗೂ ಭಾಷಣಕ್ಕೆ ಅವಕಾಶ ನೀಡಲಿಲ್ಲ. ಮಾದೇಗೌಡ ಅವರ ಮನವಿ ನಂತರ ಅವಕಾಶ ನೀಡಲಾಯಿತು. ಅವರು ಪ್ರತಿಭಟನೆ ಸ್ಥಳದಿಂದ ಹೋಗುವ ವೇಳೆ ಪೊಲೀಸರು ಪ್ರತಿಭಟನಕಾರರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು.

ಜೆಡಿಎಸ್ ಮುಖಂಡ ಎಂ.ಸಿ. ನಾಣಯ್ಯ ಅವರು ಬಂದಾಗಲೂ ಭಾಷಣ ಮಾಡಲು ಕೊಡಲಿಲ್ಲ.

ಕೆಲ ಪ್ರತಿಭಟನಾಕಾರರು ಸ್ಟೇಟ್ ಬ್ಯಾಂಕ್ ಮೈಸೂರು, ಜಲ ಮಂಡಳಿ ಹಾಗೂ ಸರ್ಕಾರಿ ಬಾಲಕರ ಕಾಲೇಜಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಬಿ. ಹೊಸೂರು: ಮಹಾವೀರ ವೃತ್ತದಿಂದ ಧರಣಿ ಸ್ಥಳಕ್ಕೆ ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು. ಎಚ್.ಜಿ. ಚಂದ್ರು, ಎಚ್.ಎಸ್.ರಾಘು, ಲೋಕೇಶಬಾಬು, ಸತೀಶ್, ಎಂ.ಜೆ. ಕೃಷ್ಣಪ್ಪ ಮತ್ತಿತರರು ಪಾಲ್ಗೊಂಡಿದ್ದರು. ಬಿ. ಹೊಸಳ್ಳಿ, ಗೋರವಾಲೆ, ಸಂಪಳ್ಳಿ ಗ್ರಾಮಸ್ಥರೂ ಇದ್ದರು.ಕೊತ್ತತ್ತಿ: ಪಾದಯಾತ್ರೆಯ ಮೂಲಕ ಆಗಮಿಸಿದ ಕೊತ್ತತ್ತಿ ಗ್ರಾಮಸ್ಥರು ಬೆಂಬಲ ವ್ಯಕ್ತಪಡಿಸಿದರು. ಪಟೇಲ್ ನಾಗರಾಜು, ಚಂದ್ರಕಲಾ, ನಂಜುಂಡಾಚಾರ, ಮೀನಾ ಪಟೇಲ್, ಗವಿಗೌಡ ಭಾಗವಹಿಸಿದ್ದರು.

ಬೆಂಗಳೂರಿನ ಜೈ ಮಾರುತಿ ಆಟೊ ಚಾಲಕರ ಸಂಘದ ವತಿಯಿಂದ 30 ಆಟೊಗಳಲ್ಲಿ ಮಂಡ್ಯಕ್ಕೆ ಬಂದು ಹಿತರಕ್ಷಣಾ ಸಮಿತಿಯ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ತುರುವೇಕೆರೆಯ ಕನ್ನಡ ರಕ್ಷಣಾ ವೇದಿಕೆಯ ಸದಸ್ಯರೂ ಪಾದಯಾತ್ರೆಯಲ್ಲಿ ಆಗಮಿಸಿ ಬೆಂಬಲಿಸಿದರು. ವಿಜಯಕುಮಾರ್, ಎಸ್.ಶಂಕರ್, ಸಾವಂತಕುಮಾರ್, ಶಶಿ, ಡ್ಯಾನಿಯಲ್‌ಇದ್ದರು.ಸಿದ್ದರಾಮಯ್ಯ ವಿರುದ್ಧದ ಪ್ರತಿಭಟನೆಗೆ: ಸುರೇಶಗೌಡ ಖಂಡನೆ

ಮಂಡ್ಯ:
ಪಕ್ಷಾತೀತವಾಗಿ ನಡೆಯುತ್ತಿದ್ದ ಚಳವಳಿಗೆ ಆಗಮಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಶಾಸಕ ಕೆ. ಸುರೇಶಗೌಡ ಖಂಡಿಸಿದ್ದಾರೆ.ಚಳವಳಿ ಶಾಂತಿಯುತವಾಗಿ ನಡೆಯಲು ಎಲ್ಲರಿಗೂ ಸಹಕರಿಸಬೇಕು. ಚಳವಳಿಗೆ ಆಗಮಿಸುವ ಎಲ್ಲರ ಬೆಂಬಲ ತೆಗೆದುಕೊಂಡು ಒತ್ತಡ ಹಾಕುವ ಕೆಲಸ ಮಾಡಬೇಕು ಎಂದು ಪ್ರತಿಭಟನಕಾರರಲ್ಲಿ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ನೀರು ಬಿಡಬಾರದು ಎಂದು ನಿರ್ಣಯ ತೆಗೆದುಕೊಂಡಿದೆ. ಕೇಂದ್ರದ ಮೇಲೆ ಒತ್ತಡ ಹಾಕುವ ಕೆಲಸವನ್ನೂ ಮಾಡುತ್ತಿದೆ. ಎಲ್ಲರೂ ಸೇರಿ ಒಗ್ಗಟ್ಟಿನಿಂದ ಹೋರಾಡಬೇಕಾದ ಸಮಯವಿದು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.`ಪಕ್ಷಗಳ ಬ್ಯಾನರ್ ಬೇಡ~

ಮಂಡ್ಯ:
ಪಕ್ಷಗಳ ಬ್ಯಾನರ್ ಹಿಡಿದುಕೊಂಡು ಪ್ರತಿಭಟನೆಗೆ ಬರಬೇಡಿ. ತಮಿಳುನಾಡಿಗೆ ನೀರು ಬಿಡುತ್ತಿರುವುದು ನೋಡಿದರೆ ರಾಜಕಾರಣಿಗಳಿಗೆ  ಮರ್ಯಾದೆ ಇದ್ದಂತೆ ಕಾಣುತ್ತಿಲ್ಲ ಎಂದು ಬೆಂಗಳೂರಿನ ಕಾಳಿಕಾ ಆಶ್ರಮದ ಋಷಿಕುಮಾರ್ ಸ್ವಾಮೀಜಿ ಟೀಕಿಸಿದರು. ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಹಿತರಕ್ಷಣಾ ಸಮಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸರದಿ ಉಪವಾಸ ಸತ್ಯಾಗ್ರಹ ಸಂದರ್ಭದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ತಾಲಿಬಾನ್ ಸರ್ಕಾರವಿದೆ. ಅವನಾರು, ಇವನಾರು ಎನ್ನದಿರಯ್ಯ ಸರದಿಯಲ್ಲಿ ಬರುವರೆಲ್ಲ ಕಳ್ಳರಯ್ಯ ಎಂದು ಪರೋಕ್ಷವಾಗಿ ರಾಜಕೀಯ ನಾಯಕರನ್ನು ತರಾಟೆಗೆ ತೆಗೆದುಕೊಂಡರು.ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಭಾಷಣಕ್ಕೆ ಅಡ್ಡಿ ಪಡಿಸಿದಾಗ, ರಾಜಕೀಯ ನಾಯಕರಿಗೆ ವೇದಿಕೆಯಿಂದ ಇಳಿಯುವಂತೆ ಅವರು ಮನವಿ ಮಾಡಿದರು. ಭಾಷಣಕ್ಕೆ ಅಡ್ಡಿಪಡಿಸಿದ ವಿಷಯಕ್ಕೆ ಸಂಬಂಧಿಸಿದಂತೆ ದೂರವಾಣಿ ಮೂಲಕ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಅವರು, ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry